ನಮ್ಮ ಕೇರಿಯ ಚಂದ ನೋಡಿ
ಅದರ ಚೆಲುವ ಪರಿಯ ನೋಡಿ
ಮುಂದೊಂದು ಹೆಜ್ಜಾಲ
ಅದರ ತುಂಬ ಹಕ್ಕಿಗಳು
ಕೆಳಗೊಬ್ಬ ಋಷಿಮುನಿ
ಅಥವ ಅಂಥ ವೇಷ
ಪಕ್ಕದಲ್ಲೆ ಬಾವಿಕಟ್ಟೆ
ನೀರು ಸೇದೋ ನೀರೆಯರು
ರಟ್ಟೆ ನೋಡಿ ಮೀನಖಂಡ ನೋಡಿ
ಬಳುಕುವವರ ಸೊಂಟ ನೋಡಿ
ಬಾವಿಯಾಳಕೆ ಇಣುಕಿದಿರೋ
ಬೀದಿಯುದ್ದಕೆ ಸುತ್ತಿದಿರೋ
ಜನರ ಜತೆ ಮಾತಾಡಿದಿರೋ
ಅವರ ಕುಶಲವ ಕೇಳಿದಿರೋ
ಕೇರಿಯ ಜಗಳ ನೋಡಿದಿರೋ
ಮಾತಿನ ವೈಖರಿ ಆಲಿಸಿದಿರೋ
ಅಗಮೆಮ್ನನೊ ಎಖಿಲಸ್ ನೊ
ಕರ್ಣನೊ ಅರ್ಜುನನೊ
ಅವರು ಭೀಷ್ಮರೋ ಇವರು ಕುರುಡರೋ
ತ್ರಿಕಾಲಜ್ಞರೋ ಕೇವಲ ಅಜ್ಞರೊ
ಯಾರೀ ಮೋಹಿನಿ ಯಾರೀ ಹೆಲೆನ
ಯಾರೀ ಮೇನಕೆ ಯಾರೀ ಊರ್‍ವಶಿ
ಈ ಕುಂತಿಗು ಎಂಥ ಅಶಾಂತಿಯೊ
ಕಣ್ಣು ಪ್ರತಿಫಲಿಸುವುದು ಸೂರ್ಯ ಕಾಂತಿಯೊ
ಎಂದಚ್ಚರಿಪಟ್ಟಿರೊ ಮುಂದಕೆ ನಡೆಯದೆ
ಎದ್ದು ಬಿಟ್ಟಿರೋ
ಇಲ್ಲಿದ್ದುಬಿಟ್ಟಿರೊ
ನಮ್ಮಲಿ ನಾವಾಗಿ ನಮ್ಮೊಳಗಾಗಿ
ನಾವೇ ಆದಿರೊ
ನಾವಿನ್ಯಾರು ನೀವಿನ್ಯಾರು
ನಮ್ಮವರೇ ಆಗಿ
*****