ಎಮ್ಮ ನಲ್ಲನ ಕೂಡಿದ ಕೂಟ
ಇದಿರಿಗೆ ಹೇಳಬಾರದವ್ವಾ
ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ
ಉರಿಲಿಂಗದೇವ ಬಂದು
ನಿರಿಗೆಯ ಸೆರಗ ಸಡಿಲಿಸಲೊಡನೆ
ನಾನೋ ತಾನೋ ಏನೆಂದರಿಯೆನು
ಉರಿಲಿಂಗದೇವನ ವಚನ. ತಾನೇ ಹೆಣ್ಣಾಗಿ, ದೈವ ತನ್ನ ಪ್ರಿಯನಾಗಿ ತನಗೆ ಆದ, ಆದರೆ ಹೇಳಿಕೊಳ್ಳಲಾಗದ ಅನುಭವ ಕುರಿತದ್ದು. ನಿಮ್ಮ ನಲ್ಲರನ್ನು ಕೂಡಿದ ಸುಖ ಹೇಗಿತ್ತೆಂದು ನಿಮಗೆ ಸಾಧ್ಯವಾದಂತೆ ಹೇಳಿಕೊಳ್ಳಿ. ಆದರೆ ನನ್ನ ನಲ್ಲ ನಿರಿಗೆ, ಸೆರಗು ಸಡಿಲಿಸಿದ ಕೂಡಲೆ ನಾನೊ, ಅವನೋ ಏನೂ ನನ್ನ ಅರಿವಿನಲ್ಲಿ ಉಳಿಯಲಿಲ್ಲ ಅನ್ನುತ್ತಾಳೆ ಇಲ್ಲಿನ ಹೆಣ್ಣು.
ಅನುಭವ ಎಂದರೆ ಅದೇ ಅಲ್ಲವೇ! ಅನುಭವಿಸುತ್ತಿರುವ ನಾನು ಅನ್ನುವುದು ಇಲ್ಲವಾಗುವುದು, ಅನುಭವ ಮಾತ್ರ ಇರುವುದು. ಅನುಭವ ಆಗುತ್ತಿದೆ ಎಂದು ಗೊತ್ತೂ ಆಗುತ್ತಿದ್ದರೆ ಅನುಭವಿಸಿದ್ದೇ ಸುಳ್ಳು! ಹೇಳಲಾಗದ್ದನ್ನು ಹೇಳಲು ಹೊರಡುವುದೇ ತಪ್ಪು, ಹಾಗಂದರೂ ಹೇಳಲಾಗದ್ದನ್ನು ಹೇಗಾದರೂ ಹೇಳಿಕೊಳ್ಳಬೇಕೆಂಬ ಹಂಬಲಕ್ಕೇ ಅಲ್ಲವೇ ಎಲ್ಲ ಮಾತು, ಕಲೆ, ಸಾಹಿತ್ಯ, ಇತ್ಯಾದಿ. ಹೇಳಲಾಗದು ಅನ್ನುವುದನ್ನಾದರೂ ಹೇಳಲೇಬೇಕಲ್ಲ!
*****