ಅಂಬೆಯ ಅಳಲು

-ಹದಿನಾರು ವರ್ಷ ವಯಸ್ಸಿನ ಮಗನಿದ್ದರೂ ಹೆಣ್ಣೂಬ್ಬಳ ಮೋಹದಲ್ಲಿ ಸಿಲುಕಿದ ಹಸ್ತಿನಾಪುರದರಸನಾದ ಶಂತನು ತನ್ನ ಒಲವಿನ ಮಡದಿ ಗಂಗೆಯಲ್ಲಿ ಪಡೆದ ದೇವವ್ರತನೆಂಬ ಮಗನ ಸುಂದರ ಬಾಳಿಗೆ ಮುಳ್ಳಾಗಿ ಸತ್ಯವತಿಯೆಂಬ ಬೆಸ್ತರ ಹುಡುಗಿಯನ್ನು ಪ್ರೀತಿಸಿದ. ತನ್ನ ತಂದೆಯ ಪ್ರೇಮಪ್ರಕರಣವನ್ನು ಯಶಸ್ವಿಗೊಳಿಸಲು ಭೀಷಣ ಪ್ರತಿಜ್ಞೆ ಮಾಡಿ ‘ಭೀಷ್ಮ’ನೆಂದು ಹೆಸರು ಪಡೆದ ದೇವವ್ರತನು ಬ್ರಹ್ಮಚಾರಿಯಾಗಿ ಜೀವನ ಸವೆಸುತ್ತಿರಲು, ಶಂತನು, ಸತ್ಯವತಿಯಲ್ಲಿ ಚಿತ್ರಾಂಗದ ಮತ್ತು ವಿಚಿತ್ರವೀರ್ಯರೆಂಬ ಇಬ್ಬರು ಗಂಡುಮಕ್ಕಳನ್ನು ಪಡೆದು, ಕೆಲಕಾಲದ ಬಳಿಕ ಅನಾರೋಗ್ಯಪೀಡಿತನಾಗಿ ಹಾಸಿಗೆ ಹಿಡಿದವನು, ಮತ್ತೆ ಎದ್ದೇಳಲೇ ಇಲ್ಲ-

ಭೀಷ್ಮನು ತಂದೆಯ ಪ್ರೀತಿಗೆ ಬದುಕಿನ ಸುಖವನು ತ್ಯಾಗವ ಮಾಡಿದ್ದ
ದಾಶರಾಜ ಸುತೆ ಸತ್ಯವತಿಯನ್ನು ತಂದೆಗೆ ಮದುವೆಯ ಮಾಡಿಸಿದ
ಇಬ್ಬರು ಮಕ್ಕಳು ಹುಟ್ಟಿದ ನಂತರ ಶಂತನು ತ್ಯಜಿಸಿದ ಲೋಕವನು
ಚಿತ್ರಾಂಗದ, ವಿಚಿತ್ರವೀರ್ಯರನು ಮಡದಿಯ ಮಡಿಲಿಗೆ ಹಾಕಿದನು
ಶಂತನು ಗತಿಸಿದ ನಂತರ ಭೀಷ್ಮನು, ಬಾಲಕ ಚಿತ್ರಾಂಗದನನ್ನು
ಸಿಂಹಾಸನದಲಿ ಕೂರಿಸಿ ತಾನೇ ಪಾಲಿಸಿದನು ಸಾಮ್ರಾಜ್ಯವನು
ಬಾಲಕರೊಟ್ಟಿಗೆ ಕಲಿಯುತ ಬೆಳೆಯಲು, ಯುವಕನಾದ ಚಿತ್ರಾಂಗದನು
ಗಂಧರ್ವನ ಜೊತೆ ಕದನವ ಮಾಡುತ ತನ್ನ ಪ್ರಾಣವನು ನೀಗಿದನು!
ತಂದೆತಾಯಿಯರ ಹಿಡಿತವು ಇಲ್ಲದೆ ಬೆಳೆದದ್ದರ ಪರಿಣಾಮವಿದು
ಸುಂದರ ಬದುಕಿಗೆ ಮಂಗಳ ಹಾಡಿದ ಯುವಕನ ದುರಂತ ಅಂತ್ಯವಿದು
ಭೀಷ್ಮನು ನೊಂದು, ವಿಚಿತ್ರವೀರ್ಯನನು ಸಿಂಹಾಸನದಲ್ಲಿ ಕೂರಿಸಿದ
ಕೂಡಲೆ ಅವನಿಗೆ ಮದುವೆಯ ಮಾಡಲು ತನ್ನಲ್ಲಿಯೆ ತೀರ್ಮಾನಿಸಿದ
ಬೇಗನೆ ಕಂಕಣ ಕೂಡಿಸಿಬಿಡುವನು ಕುರುಕುಲವನು ಸಂರಕ್ಷಿಸಲು
ಎನ್ನುತ ತಾಯಿಯ ಅಪ್ಪಣೆ ಪಡೆದನು ರಾಜಕುಮಾರನ ರಕ್ಷಿಸಲು!

ಅದೇ ಸಮಯದಲಿ ಕಾಶೀರಾಜನು ತನ್ನಯ ಮೂವರು ಸುತೆಯರಿಗೆ
ಸ್ವಯಂವರದ ಏರ್ಪಾಡನ್ನು ಮಾಡುತ ಕರೆಕಳಿಸಿದ್ದನು ರಾಜರಿಗೆ
ಅಂಬೆ, ಅಂಬಿಕೆ, ಅಂಬಾಲಿಕೆ ಹೆಸರಿನ ಮೂವರು ಕನ್ಯೆಯರು
ಅವರೇ ವರನನು ಆರಿಸಿಕೊಳ್ಳಲಿ ಸುಂದರ ರೂಪಿನ ಚೆನ್ನೆಯರು
ಮಕ್ಕಳ ಮನಸನು ಅರಿತಂಥವನು ಮಾಡಿದ ತೀರ್ಮನವಾಗಿತ್ತು
ನಾಡಿನ ನಾನಾ ಮೂಲೆಮೂಲೆಗೂ ಆಮಂತ್ರಣವು ಹೋಗಿತ್ತು
ಆದರೆ, ಭೀಷ್ಮನ ಕಡೆಗಣಿಸಿದ್ದನು ಬ್ರಹ್ಮಚಾರಿ ಗಂಡವನೆಂದು
ಅಷ್ಟೇ ಅಲ್ಲದೆ ವಿಚಿತ್ರವೀರ್ಯನು ಬೆಸ್ತರ ಹೆಣ್ಣಿನ ಮಗನೆಂದು!

ಅರೆರೆರೆ! ಅರೆರೆರೆ! ಉರಿದನು ಭೀಷ್ಮನು ಕೆರಳುತ ಉರಿಯನು ಉಗುಳಿದನು
ಅರಸನು ಕರೆಯದೆ ಮರೆತನೆ ತನ್ನನು, ಮರೆಯಲು ಸಾಧ್ಯವೆ? ತಾನದನು
ಕೆರಳಿದ ವೀರನು ಕೆರಳಿದ ಮನದಲಿ ರಥವನ್ನು ಏರುತ ಸಾಗಿದನು!
ಮರುಕವ ತೋರದೆ ಎರಗಿ ಸ್ವಯಂವರ ಮಂಟಪದೆಡೆ ಮುನ್ನುಗ್ಗಿದನು!!

ಕೆಂಡಾಮಂಡಲ ಕೋಪದಿ ಭೀಷ್ಮನು ನಡೆದು ಸ್ವಯಂವರ ಮಂಟಪಕೆ
ಕಂಡನು ಅಲ್ಲಿನ ರಾಜಕುಮಾರರ ಬಂದವರನ್ನು ಸ್ವಯಂವರಕೆ
ಕಂಡ ರಾಜಕುಮಾರರು ಅಂದರು- ‘ಬ್ರಹ್ಮಚಾರಿ ಏತಕೆ ಬಂದ?
ಸುಂದರ ರಾಜಕುಮಾರಿಯರೆಂದರೆ ಸೆಳೆಯದಿರುವುದೇ ಆ ಬಂಧ?’
ಭೀಷ್ಮನು ಗರ್ಜಿಸಿ ಹೇಳಿದ- “ಕೇಳಿರಿ, ವರಿಸಲಲ್ಲ ನಾ ಬಂದದ್ದು
ಕೋಪವೇನಿಲ್ಲ ನಿಮ್ಮ ಮೇಲೆನಗೆ, ಸರಿಯಾಗಿದೆ ನೀವಂದದ್ದು
ಕರೆದೊಯ್ಯುವೆ ಮೂವರನೂ ಈದಿನ ನನ್ನ ತಮ್ಮನಿಗೆ ಉಡುಗೊರೆಯು
ತಡೆಯುವಿರಾದರೆ ತಡೆಯಿರಿ ನೋಡುವ ಜೀವವಾಗುವುದು ಬಿಡುಗಡೆಯು!”
ಭೀಷ್ಮನು ನಡೆದನು ಕೂಡಲೆ ಅಲ್ಲಿನ ಸಿಂರಗೊಂಡಿಹ ಮಂಟಪಕೆ
ಕಂಡನು ಮೂವರು ಸುರಸುಂದರಿಯರ ಅಂಬೆ, ಅಂಬಿಕೆ, ಅಂಬಾಲಿಕೆ
ಅನಾಮತ್ತು ಆ ಮೂವರ ಹೊತ್ತು, ಹಾಕಿದ ತನ್ನಯ ರಥದಲ್ಲಿ
ಎದುರಿಸಲೆಳಸಿದ ರಾಜಕುಮಾರರ ಸೋಲಿಸಿದನು ಹೋರಾಡುತಲಿ!

ಅವರಲ್ಲೊಬ್ಬನು ಅಂಬೆಯ ಪ್ರಿಯಕರ ಅಟ್ಟಿಸಿ ಬಂದನು ಬೆನ್ನಟ್ಟಿ
ಸಾಳುವ ದೇಶದ ರಾಜಕುಮಾರನು ‘ಶಾಲ್ವ’ನೆಂಬುವವ ಜಗಜಟ್ಟಿ
ಆದರೆ ಭೀಷ್ಮನು ಅವನನು ಸೋಲಿಸಿ, ಬಂಧಿಸಿ ಹೆಡಮುರಿಯನು ಕಟ್ಟಿ
ಮಂಡೆಯ ಸಂಗಡ ಮೀಸೆಯ ಬೋಳಿಸಿ, ಒಮ್ಮೆಗೆ ಅವನನು ಮೇಲೆತ್ತಿ
ಅವನದೆ ಕುದುರೆಯ ಮೇಗಡೆ ಕೂರಿಸಿ ಸಾಳುವದೇಶಕ್ಕೆ ಓಡಿಸಿದ
ನಂತರ ಭೀಷ್ಮನು ರಾಜಪುತ್ರಿಯರ ಸಂಗಡ ನಗರಕೆ ಧಾವಿಸಿದ!

ಹಸ್ತಿನಪುರದಲಿ ಮದುವೆಯ ಸಿದ್ಧತೆ ನಡೆಯತೊಡಗಿತ್ತು ಭರದಲ್ಲಿ
ಮೂವರು ಒಟ್ಟಿಗೆ ಕುರುಯುವರಾಜನ ವರಿಸುವ ಸಡಗರ ನಗರದಲಿ
ಆದರೆ ಅವರಲಿ ‘ಅಂಬೆ’ ಎಂಬುವಳು ಮದುವೆಗೆ ಒಪ್ಪಿಗೆ ಕೊಡಲಿಲ್ಲ
ಪ್ರೀತಿಯ ಮಾಡಿದ ಸಾಳ್ವನ ಮರೆಯಲು ಅವಳ ಮನಸ್ಸನ್ನು ಬಿಡಲಿಲ್ಲ
ಒಲವೇ ಶಾಶ್ವತವೆಂದು ನಂಬಿದಳು ಪ್ರೀತಿಗೆ ಬೆಲೆಯನು ನೀಡಿದಳು
ಒಲವಿನ ಬಲದಲಿ ಗೆಲುವನು ಪಡೆಯಲು ತೀರ್ಮಾನವನ್ನು ಮಾಡಿದಳು
ವಿಷಯವ ಅರಿಯುತ ಭೀಷ್ಮನು ಅಂಬೆಯ ಕಳುಹಿಸಿಕೊಟ್ಟನು ಪಹರೆಯಲಿ
ಪ್ರೀತಿಯ ಮಾಡಿದ ಶಾಲ್ವನ ಸಂಗಡ ಬದುಕಲಿ ಎನ್ನುತ ಕರುಣೆಯಲಿ

ಒಲಿದ ಜೀವಗಳು ಅಗಲಿರಕೂಡದು ಎನ್ನುವ ಮಾತನು ನೆನೆದಿದ್ದ
ಬ್ರಹ್ಮಚಾರಿ ತಾನಾದರೂ ಭೀಷ್ಮ ಹೆಣ್ಣಿನ ಮನವನು ಅರಿತಿದ್ದ!
ಅಂಬೆಯು ಹೊರಟಳು ಸಂತಸದಿಂದಲಿ ಪ್ರಿಯಕರ ಶಾಲ್ವನ ಬಳಿಯಲ್ಲಿ
ಕನ್ಯೆಯು ತನ್ನನು ಸ್ವೀಕರಿಸೆನ್ನುತ ಕೇಳಿದಳವನನು ವಿನಯದಲಿ
ಮೀಸೆಯು ಇಲ್ಲದ ಬೋಳುತಲೆಯ ಆ ಶಾಲ್ವನು ನೋಡಿದ ತಲೆಯೆತ್ತಿ
ಆಸೆಯ ಬಿಟ್ಟಿದ್ದವನಲಿ ಕೂಡಲೆ ಮೂಡಲಿಲ್ಲ ಅವಳಲಿ ಪ್ರೀತಿ
ಗಂಡು ತಾನೆಂಬ ದರಹಂಕಾರವು ತುಂಬಿ ತುಳುಕಿತ್ತು ಅವನಲ್ಲಿ
ಗಂಡು ತಾನೇನು ಮಾಡಿದರೂ ಸೈ! ಎಂಬ ಮನಸ್ಥಿತಿ ಎದೆಯಲ್ಲಿ
ಅಲ್ಲದೆ ಭೀಷ್ಮನು ಹೊತ್ತೊಯ್ದಿದ್ದನು ತನ್ನನು ಸೋಲಿಸಿ ಕದನದಲಿ
ಅಂಬೆಯು ಅವನಿಗೆ ಸ್ವಂತವಾದವಳು ಎಂದು ಬಗೆದನವ ಮನದಲ್ಲಿ
ಶಾಲ್ವನು ಹೇಳಿದ- “ಭೀಷ್ಮನು ನಿನ್ನನು ನನ್ನೆದುರಲ್ಲೇ ಹೊತ್ತೊಯ್ದ
ಮೀಸೆಯ ಬೋಳಿಸಿ ಹೆಣ್ಣನು ಮಾಡಿದ ನನ್ನನು ಬಲು ಅಪಮಾನಿಸಿದ
ಹೆಣ್ಣಾಗಿರುವೆನು ಬೇರೆಯ ಹೆಣ್ಣನು ಹೇಗೆ ತಾನೆ ನಾವರಿಸುವುದು
ನನ್ನನು ಸೋಲಿಸಿದಂತಹ ಭೀಷ್ಮನ ಬಳಿಗೆ ಇನ್ನು ನೀ ತೆರಳುವುದು”

ಅಯ್ಯೋ ವಿಧಿಯೇ! ಕರುಣೆಯ ತೋರದೆ ವಂಚಿಸಿಬಿಟ್ಟೆಯ ಅಬಲೆಯನು
ಅಯ್ಯೋ! ಕಾರಣವಿಲ್ಲದೆ ಮಾಡಿದೆ ಕನ್ಯೆಯ ಬಾಳಿನ ಕೊಲೆಯನ್ನು
ಕಣ್ಣೀರಲಿ ಕೈತೊಳೆಸಿದೆಯಲ್ಲವೆ? ಹೆಣ್ಣಿನ ಮೇಲೆಯೆ ಕಣ್ಣೀಕೆ?
ತಣ್ಣನೆ ಮನದಲಿ ಸುಮ್ಮನೆ ನಿಲ್ಲುವೆ? ಹೆಣ್ಣಿನ ಜನ್ಮವು ಇನ್ನೇಕೆ?

ಅಂಬೆಯು ಶಾಲ್ವನ ನಂಬಿ ಬಂದವಳು ತುಂಬಾ ನೊಂದಳು ಮನದಲ್ಲಿ
ನಂಬಿದ ವ್ಯಕ್ತಿಯು ಕೊರಳನು ಕೊಯ್ದರೆ ಕಾಯುವವರುಂಟೆ ಜಗದಲ್ಲಿ?
ಪ್ರೀತಿಗೆ ಬೆಲೆಯೇ ಇಲ್ಲದೆ ಹೋಯಿತು ಏತಕೆ ಹೆಣ್ಣಿನ ಈ ಬದುಕು
ಮಾತಿನ ಮಂಟಪ ಕಟ್ಟುವ ಗಂಡಿನ ಎದೆಯಲಿ ಎಷ್ಟಿದೆಯೋ ಕೊಳಕು!
ಅಂಬೆಯು ನುಡಿದಳು- “ಶಾಲ್ವನೆ! ನೀನೂ ತೋರಿದೆ ಗಂಡಸುಬುದ್ಧಿಯನು
ನಂಬಿಕೆಯಿಲ್ಲದ ತಾಣದಿ ಅರೆಕ್ಷಣ ನಿಲ್ಲಲುಬಾರದು ನಾನಿನ್ನು
ಪ್ರೀತಿಯು ಶಾಶ್ವತ ಎಂದೇ ನಂಬಿದ ನನ್ನಂಥವಳಿಗೆ ಕ್ಷಮೆಯಿಲ್ಲ
ಪ್ರೀತಿಯ ಬೆಲೆಯೇ ಅರಿಯದ ನಿನ್ನಲಿ ಉಳಿದರೆ ನನಗೇ ಸುಖವಿಲ್ಲ
ನನಗನ್ಯಾಯವ ಮಾಡಿದ ಭೀಷ್ಮನ ಬಳಿಯೇ ನ್ಯಾಯವ ಕೇಳುವೆನು
ನಿನ್ನ ಎದುರಿನಲಿ ಈ ಕ್ಷಣ ನಿಲ್ಲದೆ ಈಗಿಂದೀಗಲೆ ಹೊರಡುವೆನು!”
ಶಾಲ್ವನು ತ್ಯಜಿಸಿದ ಅಂಬೆಯು ಕುದಿದಳು ಅಪಮಾನದ ಬಿರುಬೇಗೆಯಲಿ
ತನಗೀ ದುಸ್ಥಿತಿ ಒದಗಲು ಭೀಷ್ಮನೆ ಕಾರಣವೆಂದಳು ಮನದಲ್ಲಿ
ಕ್ಷತ್ರಿಯ ಕುಲದಲಿ ಗೆದ್ದಂಥವನಿಗೆ ಸಲ್ಲಬೇಕಲ್ಲವೇ ಹೆಣ್ಣು
ಮರದ ಮೇಲಿಂದ ಬಿಡಿಸಿ ತಂದವನು ಸವಿಯಬೇಕಲ್ಲವೇ ಹಣ್ಣು
ಕಾಶೀರಾಜನ ನಾಡಿನಿಂದಲಿ ಭೀಷ್ಮನೇ ಹೊತ್ತುತಂದವನು
ಅವನೇ ತನ್ನನು ವರಿಸಲಿ, ಅವನೇ ಶಾಲ್ವನ ಪ್ರೀತಿಯ ಕೊಂದವನು
ಒಂದೇ ದಾರಿಯು ಉಳಿದಿದೆ ತನಗಿಂದೆನ್ನುತ ಭಾವಿಸಿ ಮನದಲ್ಲಿ
ಅಂದೇ ಹೊರಟಳು ಹಸ್ತಿನಾಪುರಕೆ ಮತ್ತೆ ಭೀಷ್ಮನ ಬಳಿಯಲ್ಲಿ!

ಹಸ್ತಿನಪುರದೆಡೆ ಮತ್ತೆ ಬಂದವಳು ಕಂಡಳು ಸಂಜೆಗೆ ಭೀಷ್ಮನನು
ಕೋಪದಿ ಕೆರಳುತ ರೋಷದಿ ಕುದಿಯುತ ನುಡಿದಳು ಹಳಿಯುತ ಅವನನ್ನು-
“ಭೀಷ್ಮನೆ, ಆಲಿಸು ಶಾಲ್ವನು ಹೊರಗಡೆ ನೂಕಿದ ಈ ದಿನ ನನ್ನನ್ನು
ಅಪಹರಿಸೆನ್ನನು ಅವಮಾನಿಸುತಲಿ ಕೆಡಿಸಿದೆ ನನ್ನೀ ಬಾಳನ್ನು
ನನ್ನಪಮಾನಕೆ ನೀನೇ ಕಾರಣ, ಕೈಹಿಡಿದೆನ್ನನು ಸ್ವೀಕರಿಸು
ಕನ್ಯೆಯು ನಾನಾಗಿರುವೆನು ಇನ್ನೂ ಕರುಣಿಸಿ ನನ್ನನು ಉದ್ಧರಿಸು”
ಕೊರಗುತ ಭೀಷ್ಮನು ನುಡಿದನು- “ಅಮ್ಮಾ, ನನಗೋ ಸಂಸಾರವು ದೂರ
ಶಾಶ್ವತ ಶಪಥವ ಮಾಡಿರುವೆನು ನಾ, ತಪ್ಪಿದರದು ಬಲು ಅಪಚಾರ
ಅರಿಯದೆ ಮಾಡಿದ ತಪ್ಪನು ಮನ್ನಿಸು, ನಿಸ್ಸಹಾಯಕನು ನಾನೀಗ
ನಿನ್ನಯ ಬಾಳಿಗೆ ಬೇರೆಯ ದಾರಿಯ ಹುಡುಕಿಕೋ ಹೋಗು ಇನ್ನೀಗ”

ಅಂಬೆಯು ಮುನಿದಳು, ದೂರನು ಒಯ್ದಳು ಭೀಷ್ಮನ ಗುರುವಿನ ಬಳಿಯಲ್ಲಿ
ಶಸ್ತ್ರವಿದ್ಯೆಗಳನವನಿಗೆ ಕಲಿಸಿದ ಜಮದಗ್ನಿಯ ಸುತ ರಾಮನಲಿ
ಗುರುವಿನ ಮಾತಿಗೆ ಭೀಷ್ಮನು ಒಪ್ಪುವನೆಂಬುವ ಆಸೆಯು ಅವಳಲ್ಲಿ
ಅರಿಯದೆ ಮಾಡಿದ ತಪ್ಪಿಗೆ ಅವನೂ ಒಪ್ಪಲೆಂಬ ಹಠ ಮನದಲ್ಲಿ!
ವಿಷಯವನ್ನರಿತ ಭಾರ್ಗವರಾಮನು ಮನಸಿನಲ್ಲಿಯೇ ಬಲುನೊಂದು
ಅಂಬೆಗೆ ಅಭಯವ ನೀಡುತ ಅವಳಿಗೆ ಹಿತವನು ನುಡಿದನು ಹೀಗೆಂದು-

“ಮಗಳೇ ಆಲಿಸು, ಶಂತನು ಪುತ್ರನು ಬಲುಹಠಮಾರಿಯು ಮೊದಲಿಂದ
ಅವನ ಮನಸ್ಸನು ಬಲ್ಲೆನು, ಅವನನು ಗೆಲ್ಲಲು ಆಗದು ನನ್ನಿಂದ
ಭೀಷ್ಮನೆಂದರೇನೆಂದು ತಿಳಿದಿರುವೆ? ಭೀಷಣ ಪ್ರತಿಜ್ಞೆ ಮಾಡಿದವ
ತಂದೆಗಾಗಿ ತನ್ನೆಲ್ಲ ಸುಖವನ್ನು ತ್ಯಾಗವ ಮಾಡುತ ಬಾಳಿದವ
ಮಾತಿಗೆ ತಪ್ಪುವ ಮಾನವನಾಗನು ಗಂಗಾತನಯನು ಬಲು ಧೀರ
ಆತುರ ಮಾಡದೆ ಯೋಚಿಸಿ ನಡೆದುಕೊ, ನಿನಗವನಂತೂ ಬಲುದೂರ
ತನ್ನ ಪ್ರತಿಜ್ಞೆಗೆ ಬದ್ಧನು ಭೀಷ್ಮನು ಬೆಲೆಯನು ಕೊಡುವನು ಬಹುವಾಗಿ
ಆದರೂ ಯತ್ನ ಮಾಡುವೆ, ಈ ದಿನ ನೀನು ಬೇಡಿರುವ ಸಲುವಾಗಿ”
ಭಾರ್ಗವರಾಮನು ಭೀಷ್ಮನ ಕರೆಯಿಸಿ ಹೇಳಿದನವನಿಗೆ ಹಿತವನ್ನು
ಆಶ್ರಯ ಕೋರಿದ ಅಬಲೆಯ ವರಿಸಲು ಹೇಳಿದ ತನ್ನಭಿಮತವನ್ನು-
“ಭೀಷ್ಮಾ, ಹೆಣ್ಣಿಗೆ ಬಾಳನು ನೀ ಕೊಡು, ಅಬಲೆಯು ಅವಳಲಿ ಕರುಣೆಯಿಡು
ನಿನ್ನ ಪ್ರತಿಜ್ಞೆಯ ಹಿಂದಕೆ ಪಡೆದುಕೊ ವಿವಾಹವಾಗಲು ಮನವನಿಡು”
ಭೀಷ್ಮನು ಹೇಳಿದ- “ಗುರುವೇ, ಮನ್ನಿಸು ನನ್ನ ಪ್ರತಿಜ್ಞೆಯ ಬಿಡಲಾರೆ
ಮಾತಿಗೆ ತಪ್ಪಿದ ಮಾನವನೆಂಬುವ ಅಪವಾದವನ್ನು ಹೊರಲಾರೆ”
ಭೀಷ್ಮನು ಗುರುವಿನ ಮಾತನು ಮೀರಲು, ಇಬ್ಬರಿಗಾಯಿತು ವಾಗ್ವಾದ
ಶಿಷ್ಯನ ನಿಶ್ಚಲ ನಿರ್ಣಯ ಕೇಳಿದ ಭಾರ್ಗವರಾಮನು ಕಿಡಿಯಾದ!
ವೀರ ಗುರುವಿಗೂ ಧೀರ ಶಿಷ್ಯನಿಗೆ ಯುದ್ಧರಂಗದಲಿ ಕಾದಾಟ
ಗುರು-ಶಿಷ್ಯರ ಈ ಸೆಣಸಾಟದಲಿ ಭೀಷ್ಮನು ನಡೆಸಿದ ಹೋರಾಟ
ಗುರುವನು ಮೀರಿಸಿ ಹೋರಾಡಿದ್ದನು ಶಿಷ್ಯನು ಆ ದಿನ ಕಣದಲ್ಲಿ
ಪರಶುರಾಮ ಹೋರಾಟವ ನಿಲಿಸಿದ, ನಿಲ್ಲಲಾಗದವನೆದುರಲ್ಲಿ!
ಭೀಷ್ಮನು ಗುರುವಿನ ಸನಿಹಕ್ಕೆ ಬಂದನು ತನ್ನಯ ಕೃತ್ಯಕೆ ಮರುಗಿದನು
‘ಎನ್ನಪರಾಧವ ಮನ್ನಿಸು’ ಎನ್ನುತ ಗುರುವಿನ ಚರಣಕೆ ಎರಗಿದನು
ಶಿಷ್ಯನ ವಿನಯ ವಿಧೇಯತೆ ಮೆಚ್ಚಿದ ಭಾರ್ಗವರಾಮನು ಬಹುವಾಗಿ
ಹೊಗಳುತ ಅವನನು ಆಲಿಂಗಿಸಿದನು ಬಾಹುಬಂಧನದಿ ಹಿತವಾಗಿ
ಮಾತಿಗೆ ನಿಲುಕದ ಭಾವನೆ ಮೊಗದಲಿ ಮೂಡುತಲಿದ್ದಿತು ಅವರಲ್ಲಿ
ಇಬ್ಬರ ನಡುವಲಿ ಮೌನವು ನೆಲೆಸಿತು ಉತ್ತರವಿರಲಿಲ್ಲವರಲ್ಲಿ
ನೋಡಿದ ಅಂಬೆಯು ನಿಂತಳು ಸುಮ್ಮನೆ ದಿಕ್ಕೇ ತೋಚದೆ ಆ ಘಳಿಗೆ
ಬೇಡಿದೆನಾದರೆ ಇನ್ನೂ ಇವರನು, ಫಲವಿಲ್ಲೆಂದರಿತಳು ಮನದೊಳಗೆ!

ಭೀಷ್ಮನನ್ನು ತಾನೊಪ್ಪಿಸಲಾಗದೆ ಪರಶರಾಮ ಚಡಪಡಿಸಿರಲು
ಅಂಬೆಗೆ ತನ್ನಯ ಅಸಮರ್ಥತೆಯನ್ನು ಅವನೆದುರಲ್ಲಿಯೆ ತಿಳಿಸಿರಲು
ಅವಳಿಗೆ ಮುಂದಿನ ದಾರಿಯು ಕಾಣದೆ ಬದುಕೇ ದುಸ್ತರವೆನಿಸಿತ್ತು
ದುರದೃಷ್ಟವದು ಬೆನ್ನಿಗೆ ಬೀಳುತ ಅವಳನ್ನು ಕಾಡಲು ತೊಡಗಿತ್ತು
ಭೀಷ್ಮನ ಒಲಿಸಲು ಸಾಧ್ಯವಿಲ್ಲೆನುತ ನಿರಾಶೆ ಮನದಲಿ ಕೊರಗಿದಳು
ಬೇರೆಯ ಮಾರ್ಗವು ತೋರದಾಗಿರಲು ಮನಸಿನಲ್ಲಿಯೇ ಮರುಗಿದಳು
ಅಯ್ಯೋ! ವಿಧಿಯೇ.. ಎನ್ನುತ ನೊಂದಳು ಮುಂದೆ ತಾನೇನು ಮಾಡುವುದು?
ತನಗಾಗಿರುವ ಅಪಮಾನವನು ಹೇಗೆ ತಾನೆ ಸರಿದೂಗುವುದು?

ನಾರಿಯ ಬಾಳಿನ ನರಕಕೆ ಕೊನೆಯೇ ಇಲ್ಲವೆ ನಮ್ಮಿ ಜಗದಲ್ಲಿ?
ದಾರಿಯು ಕಾಣದೆ ಗೋಳಿಡುತಿರುವುದು ಕಾಣದೆಹೋಯಿತೆ ನಿನಗಿಲ್ಲಿ?
ನಾರಿಯು ಮುನಿದರೆ ಮಾರಿಯು ಎಂಬುದು ಅರಿವಿರದಾಯಿತೆ ನಿನಗಿಂದು?
ದಾರಿಯ ತೋರಿಸಿ ದೀನಳ ಮೊರೆಯನು ಆಲಿಸಬಾರದೆ ಮಮಬಂಧು!

ಮರಳಿ ಬಂದಂಥ ಕನ್ಯೆಯು ಕೆರಳುತ ಭೀಷ್ಮನ ದಿಟ್ಟಿಸಿ ನೋಡಿದಳು
ಉರಿಯುವ ಕಣ್ಣಲಿ ಬೆಂಕಿಯ ಉಗುಳುತ ಕೋಪದಿ ಅವನಿಗೆ ಹೇಳಿದಳು-
“ಭೀಷ್ಮನೆ, ಹೆಣ್ಣಿನ ಬಾಳೊಳಗಾಡಿದೆ ನಿನ್ನೀ ಕೃತ್ಯಕೆ ಕ್ಷಮೆಯಿಲ್ಲ
ಹೆಣ್ಣಿನ ಗೋಳದು ಸುಮ್ಮನೆ ಹೋಗದು ನನ್ನೀ ಶಾಪವು ಹುಸಿಯಲ್ಲ
ಮುಂದಿನ ಜನ್ಮದೊಳಾದರು ಇಂದಿನ ಸೇಡನು ತೀರಿಸಿಕೊಳ್ಳುವೆನು
ಇಂದಿಗೆ ಈ ನರಜನ್ಮವ ಮುಗಿಸುತ ಮುಂದಿನ ಲೋಕಕೆ ನಡೆಯುವೆನು”
ಎನ್ನುತ ದೇಹಕೆ ಕಿಚ್ಚನು ತಾಗಿಸಿ ತನ್ನ ಪ್ರಾಣವನು ನೀಗಿದಳು
ಕೋಪದಿ ಕುದಿಯುವ ಸೇಡಿನ ದೇಹಕೆ ಅವಳೇ ಅಂತ್ಯವ ಹಾಡಿದಳು!
—–
ಅಂಬೆಯು ಷಣ್ಮುಖನನ್ನು ಪ್ರಾರ್ಥಿಸಿ ಭೀಷ್ಮನನ್ನು ಕೊಲ್ಲುವ ಶಕ್ತಿ ನೀಡೆಂದು ಪ್ರಾಥಿಸಿದಳಂತೆ. ಷಣ್ಮುಖ ಅವಳಿಗೆ ಒಂದು ಬಾಡದ ಕಮಲಪುಷ್ಪ ಮಾಲೆ ಕೊಟ್ಟು, ಇದನ್ನು ಧರಿಸುವವರು ಭೀಷ್ಮನನ್ನು ಕೊಲ್ಲುತ್ತಾರೆ ಎಂದನಂತೆ. ಅವಳು ಮಾಲೆ ಹಿಡಿದು ಲೋಕವೆಲ್ಲ ಸುತ್ತಿದರೂ ಯಾರೂ ಧರಿಸದಿದ್ದಾಗ ದ್ರುಪದನ ಆಸ್ಥಾನದ ಕಂಬಕ್ಕೆ ಕಟ್ಟಿದಳಂತೆ. ಬಳಿಕ ಶಂಕರನನ್ನು ಕುರಿತು ತಪಸ್ಸು ಮಾಡಿ ಅವನಿಂದ ಭೀಷ್ಮನನ್ನು ಕೊಲ್ಲುವ ವರ ಪಡೆದು ಜೀವನವನ್ನು ಕೊನೆಗಾಣಿಸಿ, ಮುಂದಿನ ಜನ್ಮದಲ್ಲಿ ದ್ರುಪದನಿಗೆ ಮಗಳಾಗಿ ಹುಟ್ಟಿ ಪೂರ್ವಜನ್ಮದ ವಾಸನೆಯಿಂದ ಭೀಷ್ಮನನ್ನು ಕೊಲ್ಲುವ ಸಲುವಾಗಿ ಆ ಮಾಲೆಯನ್ನು ಧರಿಸಿದಳಂತೆ.
—–

ಭೀಷ್ಮನು ಅಂಬೆಯ ಅಂತ್ಯವ ಕಾಣುತ ‘ಅಯ್ಯೋ..!’ ಎನ್ನುತ ಮರುಗಿದನು
ಅರಿಯದೆ ಮಾಡಿದ ತನ್ನಪರಾಧಕ್ಕೆ ಕ್ಷಮೆಯೇ ಇಲ್ಲವೆ? ಕೊರಗಿದನು
ಆದದ್ದಾಗಲಿ ಮಾತಿಗೆ ತಪ್ಪದೆ ಉಳಿದೆನು ಅನ್ನಿಸಿತಾ ಕ್ಷಣವು
ಆದರೆ ತಪ್ಪನು ಮಾಡಿದೆನೇನೋ ಅನ್ನಿಸತೊಡಗಿತು ಮರುಕ್ಷಣವು
ತನ್ನಯ ದುಡುಕಿನ ಕಾರಣದಿಂದ ಹೆಣ್ಣಿನ ಜೀವವು ಬಲಿಯಾಯ್ತು
ಹೆಣ್ಣಿನ ಶಾಪವು ಫಲಿಸದೆ ಹೋಗದು ಕಾಡುವುದೆನ್ನನು ಯಾವೊತ್ತೂ
ವಿಧಿಯ ಆಟವನು ನಿಲ್ಲಿಸಲಾಗದು ತಪ್ಪದು ಮುಂದೆನಗಾಪತ್ತು
ಎನ್ನುತ ಭೀಷ್ಮನು ಮನದಲಿ ನೊಂದನು, ಮನಸಿನ ನೆಮ್ಮದಿ ಹಾಳಾಯ್ತು!

ವಿಚಿತ್ರವೀರ್ಯನ ವಿವಾಹ ಅಂಬಿಕೆ, ಅಂಬಾಲಿಕೆ ಎಂಬುವರೊಡನೆ
ಕಾಶೀರಾಜನ ಕಿರಿಯ ಪುತ್ರಿಯರು ಬಾಳಬಯಸಿದರು ಅವನೊಡನೆ
ಇಬ್ಬರು ಹೆಂಡಿರ ಮುದ್ದಿನ ಗಂಡನು ಶಂತನುತನಯನು ಮುದದಲ್ಲಿ
ಸ್ವೀಕರಿಸಿದ್ದನು ಕುರುಕುಲ ಬೆಳೆಸಲು ದೀಕ್ಷೆಯ ಹಿರಿಯರ ಸಾಕ್ಷಿಯಲಿ
ಆದರೆ, ಮದುವೆಯ ಮರುದಿನದಿಂದಲೆ ಹಾಸಿಗೆ ಹಿಡಿದನು ಸುಕುಮಾರ
ದೇಹ ನೋವಿನಲಿ ನಲುಗುತಲಿದ್ದಿತು, ಜೀವನವಾಯಿತು ಬಲುಭಾರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಃಖ
Next post ವಚನ ವಿಚಾರ – ನಲ್ಲನ ಕೂಟ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…