ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ
ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ
ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ
ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ
ಬೆನ್ನಹತ್ತಿ ತಿರುಗುವ ನಾಯಿಗಳು.
ಬಾಗಿಲಿಗೆ ಬಿದ್ದ ವರ್ತಮಾನ ಪತ್ರಿಕೆಯ ತುಂಬ
ಕೆಂಪು ನೆತ್ತರಿನ ಸುದ್ದಿ, ಒಳಗೆ ಒಲೆ ಹಿಡಿಯದೇ
ಅವ್ವ ಉಸಿರುಗಟ್ಟಿ ಊದುತ್ತಿದ್ದಾಳೆ, ಶ್ಲೋಕಗಳ
ವೃತ್ತಗಳ ನಡುವೆ ಅವರಿವರ ಹೆಜ್ಜೆ ಗುರುತುಗಳು,
ರಾತ್ರಿಯ ಕನಸೋ ಚಿಟ್ಟೆಯ ಹಾರಾಟದ ಭ್ರಮೆ.
ಮೆಟ್ಟಲುಗಳ ಸವೆಸುತ್ತ ಬಾರಿಸುವ ಗುಡಿ ಗಂಟೆ,
ಅವಸರದ ಕೈಗಳಲ್ಲಿ ಅವರ ಕಾಣದ ಒಳಸುಳಿ,
ಚಕ್ರಬಿಂಬದ ಸುತ್ತ ಸುಳಿದ ದೇವರು ಒಕ್ಕಲೆಬ್ಬಿಸಿದ್ದಾನೆ.
ಅವಳ ಆಟ, ಅವನ ನೋಟ, ಎಲ್ಲರ ಬೇಟಿಯಾಟ,
ಬೇಸರ ಬೆಳೆದಿದೆ ಒಂದೂ ಮಾತನಾಡದೇ ಮೌನ.
ಒಂದೂ ಮಾತನಾಡದ ಕಲ್ಲು, ಮಣ್ಣು, ಮರ
ಒಳಗೊಂಡಿದೆ ನಿಮ್ಮೊಳಗೆ ನನ್ನೊಳಗೆ, ಮತ್ತೆ
ತರಲೆ ತಾಕಲಾಟದ ಊರು ಸಂದಿಗೊಂದಿಗಳು,
ತಂತಿ ಬಲೆಯಲಿ ಸಿಕ್ಕಿ ಹಾಕಿಕೊಂಡು ನರಳಾಟ ರಾತ್ರಿ,
ನಮ್ಮೊಳಗೆ ನಾವೇ ಸುಟ್ಟುಕೊಳ್ಳುವ ಕೊನೆ ಇರದ ಕೊರಗು.
*****