ಪಾಂಡವರ ರಾಜಸೂಯ ಯಾಗ

-ಪ್ರಜಾಕಂಟಕನಾಗಿದ್ದ ಜರಾಸಂಧನನ್ನು ಪಾಂಡವರ ಸಹಾಯದಿಂದ ಸಂಹರಿಸಿ, ಅವನು
ಬಲಿಕೊಡಲೆಂದು ಸೆರೆಯಲ್ಲಿಟ್ಟಿದ್ದ ಅನೇಕ ಮಂದಿ ರಾಜರನ್ನು ಸ್ವತಂತ್ರಗೊಳಿಸಿದ ಬಳಿಕ
ಕೃಷ್ಣನು, ಪಾಂಡವರಿಗೆ ರಾಜಸೂಯ ಯಾಗವನ್ನು ಕೈಗೊಳ್ಳಲು ಸೂಚಿಸಿದನು. ಧರ್ಮಜನ
ನಾಲ್ವರು ಸೋದರರಾದ ಭೀಮಾರ್ಜುನ ನಕುಲ ಸಹದೇವರುಗಳು ನಾಲ್ಕೂ ದಿಕ್ಕುಗಳಿಗೆ ಚತುರಂಗಬಲ ಸಮೇತರಾಗಿ ತೆರಳಿ, ಸಕಲ ರಾಜರುಗಳನ್ನು ಜಯಿಸಿ, ವಿಜಯಶಾಲಿಗಳಾಗಿ, ಸಂಪತ್ತಿನ ರೂಪದಲ್ಲಿ ಅಪಾರ ಧನಕನಕಗಳನ್ನು ಕಪ್ಪಕಾಣಿಕೆಗಳಾಗಿ ತಂದು ಅಣ್ಣನಾದ ಧರ್ಮನಿಗೆ ಒಪ್ಪಿಸಿದರು. ಬಳಿಕ ಶ್ರೀಕೃಷ್ಣನ ಸಲಹೆಯಂತೆ ಯಮುನಾನದಿಯ ತೀರದಲ್ಲಿ ವೈಭವದ ರಾಜಸೂಯಯಾಗಕ್ಕೆ ಅಗತ್ಯವಾದ ಯಾಗಶಾಲೆಯ ನಿರ್ಮಾಣವಾಯಿತು-

ಇಂದ್ರಪ್ರಸ್ಥದ ಹೊರವಲಯದಲಿ ಹರಿಯುವ ಯಮುನೆಯ ತೀರದಲಿ
ವಿಶಾಲ ಬಯಲಿನ ಅಂಗಳದೊಡಲಲಿ ಮುಂದಿನ ಕೆಲವೇ ದಿನಗಳಲಿ
ಮಯಶಿಲ್ಪಿಯು ತಿಳಿಸಿದ ರೀತಿಯಲಿ ವಿಶ್ವಕರ್ಮ ಕೈಚಳಕದಲಿ
ನೋಡುವ ಕಣ್ಣಿಗೆ ಬೆರಗನು ಮೂಡಿಸಿ ಕಣ್ಮನ ಸೆಳೆಯುವ ತೆರದಲ್ಲಿ
ರಾಜಸೂಯವನು ಮಾಡಲು ಸುಂದರ ಯಾಗಶಾಲೆ ನಿರ್ಮಿತವಾಯ್ತು
ಯಾಗದ ವಿಧವಿಧ ವಿಧಿಗಳ ಕಾರ್ಯಕೆ ಅನುಕೂಲದ ವೇದಿಕೆಯಾಯ್ತು
ಬರುವ ಅತಿಥಿಗಳ ಆತಿಥ್ಯಕ್ಕೂ ಬಹಳ ಭವನ ತಲೆಯೆತ್ತಿದವು
ಒಂದೊಂದೂ ಬಲು ವೈಭವ ಮೆರೆಯುತ ರಂಗೇರುತ ಕಂಗೊಳಿಸಿದವು
ವಿಧವಿಧ ಭವನವು ತಲೆಯೆತ್ತಿದ್ದವು ರಾಜಸೂಯದ ಹೆಸರಿನಲಿ
ವೈಭವೋಪೇತವೆನ್ನುವ ಸಕಲ ವ್ಯವಸ್ಥೆಯು ಇದ್ದಿತು ಅವುಗಳಲಿ
ಅದರೊಳು ಮಯಸಭೆ ಎನ್ನುವ ಭವನವು ಎಲ್ಲರ ಮನವನ್ನು ಸೆಳೆದಿತ್ತು
ಚಿತ್ರವಿಚಿತ್ರದ ಚಮತ್ಕಾರಗಳ ಒಡಲಲಿ ಅಡಗಿಸಿಕೊಂಡಿತ್ತು!

ಕೃಷ್ಣನು ಅಣ್ಣನ ಸಂಗಡ ಬಂದನು ಯಾದವ ಸಂಪತ್ತಿನ ಜೊತೆಗೆ
ತಂಗಿ ಸುಭದ್ರೆಯ ಮನಸಿಗೆ ತಂದನು ಸಂತಸ ಸಡಗರದಲಿ ಒಸಗೆ
ಪಾಂಚಾಲರ ದೊರೆ ದ್ರುಪದನು ತಾನೂ ಬಂದನು ಅಳಿಯಂದಿರ ಮನೆಗೆ
ಎಲ್ಲ ರಾಜರಿಗೆ ಕೊಡುವ ಉಡುಗೊರೆಯ ತಂದನು ಸಂಗಡ ಅರಮನೆಗೆ
ಒಂದೆಡೆಯಿಂದಲಿ ಬಂಧುತ್ವದ ಕರೆ ಮತ್ತೊಂದೆಡೆಯಲಿ ಸಂಪತ್ತು
ಕುಂತಿಯ ಸುತರಿಗೆ ಎಲ್ಲ ಕಡೆಯಿಂದ ಧನಕನಕವು ಬಂದೊದಗಿತ್ತು!

ನಾಡಿನ ನಾನಾ ಭಾಗದ ರಾಜರಿಗಾಮಂತ್ರಣ ಪಾಂಡವರಿಂದ
ವಿನಯ ವಿಧೇಯದ ಆಮಂತ್ರಣಗಳು ಆತ್ಮೀಯತೆ ಆದರದಿಂದ
ರಾಜರು ಸಹಜ ಕುತೂಹಲದಿಂದಲಿ ಬಂದರು ಕಾಣಲು ಪಾಂಡವರ
ಅಲ್ಪಕಾಲದಲಿ ಅಪೂರ್ವ ಸಾಧನೆ ಮಾಡಿತೋರಿಸಿದ ಸಾಧಕರ
ಕಾಡಿದ ಕೌರವ ಸಮುದಾಯಕ್ಕೂ ತಲುಪಿತು ಯಾಗದ ಕರೆಯೋಲೆ
ನಕುಲನು ತಾನೇ ಅಲ್ಲಿಗೆ ಹೋದವ ನಗುತಲಿ ಕರೆದನು ನಲವಿನಲೆ!
ಭೀಷ್ಮನು ಹಿರಿಯರ ಸಂಗಡ ಬಂದನು ಮೊಮ್ಮಕ್ಕಳ ಆ ಯಾಗಕ್ಕೆ
ದ್ರೋಣನು ಪುತ್ರನ ಜೊತೆಯಲಿ ಬಂದನು ಶಿಷ್ಯ ಸಮಾಗಮ ಯೋಗಕ್ಕೆ

ವಿದುರಾದಿಗಳೂ ಆಗಮಿಸಿದ್ದರು ಪಾಂಡವರನು ಅಭಿನಂದಿಸಲು
ಪುಟಿದೆದ್ದಂತಹ ಕುಂತಿಯ ಸುತರನು ಪ್ರೀತಿಯ ಎದೆಯಲಿ ಬಂಧಿಸಲು
ದುರ್ಯೋಧನನೂ ದರ್ಪದಿ ಬಂದನು ಕಾಣಲು ಆ ವೈಭವವನ್ನು
ಕರ್ಣಾದಿಗಳೂ ಕಾಣಲು ಬಂದರು ವೈರಿಯ ಬಲ ವಿಸ್ತಾರವನು
ದಾಯಾದಿಗಳೆಲ್ಲರು ಬಂದಿದ್ದರು ಸಂತಸಗೊಂಡರು ಪಾಂಡವರು
ಅವರನು ಸ್ವಾಗತ ಮಾಡುವ ಕಾರ್ಯಕೆ ಎಲ್ಲ ಸಿದ್ಧತೆಯ ನಡೆಸಿದರು
ಶತ್ರುಗಳಾದರೂ ಮಿತ್ರರ ತೆರದಲಿ ಕೋರಲು ಸುಸ್ವಾಗತವನ್ನು
ಮರೆತರು ಉಭಯರು ಆ ಕ್ಷಣದಲ್ಲಿ ನೋವನುಭವಿಸಿದ ಗತವನ್ನು!

ಮಾನವ ಮನವನು ಮಡಗಿದನೆಂದರೆ ಮಹಾಮಹಿಮ ತಾನಾಗುವನು
ಮಾನವ ಪ್ರಯತ್ನ ಸತತ ಪರಿಶ್ರಮದಲ್ಲಿಯೆ ಸಾಧನೆಗೈಯುವನು
ಮಾನವಯತ್ನಕೆ ದೈವಾನುಗ್ರಹ ದೊರೆತರೆ ಅಜೇಯನಾಗುವನು
ಮಾನವತ್ವವನು ಕಳೆದುಕೊಳ್ಳದಿರೆ ಮಾನವ ಮಹನೀಯನಾಗುವನು

ಕೌರವಪಕ್ಷವು ಇಂದ್ರಪ್ರಸ್ಥದ ಮಯಸಭೆ ಭವನದಿ ಇಳಿದಿತ್ತು
ಸಿರಿಯ ಪ್ರದರ್ಶನ ಸಲುವಾಗಿಯೆ ಅದು ನಗರದಿ ಜನ್ಮವ ತಳೆದಿತ್ತು
ಬಗೆಬಗೆ ಬಣ್ಣದ ಗಾಜಿನ ಹೊರಮೈ ಹೊಂದಿದ ಇಟ್ಟಿಗೆ ನಿಲಯವದು
ಪಾರದರ್ಶಕತೆ ಭ್ರಮೆಯನು ತರಿಸುವ ಗೋಡೆಯ ಹೊಂದಿದ ಭವನವದು
ನೀಲಿಯ ಬಣ್ಣದ ಇಟ್ಟಿಗೆ ನೆಲದಲ್ಲಿ ನೀರಿನ ಭ್ರಮೆಯನು ತರುತಿತ್ತು
ಮಯಶಿಲ್ಪಿಯ ಕೈಚಳಕವು ಕಟ್ಟಡದೆಲ್ಲೆಡೆಯಲ್ಲೂ ಮೆರೆದಿತ್ತು
ಮಯಸಭೆ ಮಂದಿರ ಬಿಂಬಿಸುತಿದ್ದಿತು ಕುಂತೀಪುತ್ರರ ವೈಭವವ
ಕೌರವಪಕ್ಷವು ಕರುಬಿತು ಮನದಲಿ ಕಂಡು ಇಂಥ ಮಹದದ್ಭುತವ
ಮಾತೇ ಹೊರಡದೆ ಮೂಕವಾಗಿತ್ತು ಕಂಡು ಎಲ್ಲವನು ಬೆರಗಿನಲಿ
ಮೂಕರಾಗಿ ಮರುಮಾತನ್ನಾಡದೆ ಮೌನ ಧರಿಸಿದರು ಕೊರಗಿನಲಿ!
ದುರ್ಯೋಧನನೋ ಮಯಸಭೆಯಲ್ಲಿನ ಸೊಬಗನು ನೋಡುತ ದಂಗಾದ
ವೈಭವ ಬೆರೆಸಿದ ಅಂದಕೆ ಚೆಂದಕೆ ಮರುಳಾಗದೆ ತಾನಿರದಾದ
ಏನೇನಿದೆಯೋ ನೋಡಬೇಕೆಂದು ಭವನವೆಲ್ಲ ಸುತ್ತಾಡಿದನು
ನೋಡುವುದಿನ್ನೂ ಉಳಿದುಕೊಂಡಿರಲು ಮನದಲ್ಲಿಯೆ ಪೇಚಾಡಿದನು

ಒಬ್ಬನೆ ನಡೆಯುತ ಮಂದಿರದೊಳಗಡೆ ಚೆಲುವಿನ ಸೊಬಗನು ವೀಕ್ಷಿಸಿದ
ಒಂದೊಂದನ್ನೂ ನೇವರಿಸುತ್ತಲಿ ಈರ್ಷೆಯಲವನು ಪರೀಕ್ಷಿಸಿದ
ಪಾರದರ್ಶಕದ ಗೋಡೆಯನರಿಯದೆ ನಡೆಯುತ ಗೋಡೆಗೆ ಹಣೆಯೊಡೆದ
ನೆಲದಲಿ ನೀರಿನ ಕೊಳವನ್ನು ನೋಡುತ ತಡವಲು, ಕಾಣದೆ ಮುನ್ನಡೆದ
ನೆಲವೇ ಎನ್ನುವ ಭ್ರಮೆಯಲಿ ನೀರಿನ ಕೊಳದಲ್ಲಿ ಹೆಜ್ಜೆಯನಿಕ್ಕಿದನು
ಮುಗ್ಗರಿಸುತ್ತಲಿ ನೀರಲಿ ಉರುಳುತ ತೀರದ ಪೇಚಿಗೆ ಸಿಲುಕಿದನು
ಯಾರೂ ತನ್ನನು ನೋಡಿಲ್ಲೆನ್ನುತ ಸುತ್ತಮುತ್ತ ಪರೀಕ್ಷಿಸಿದ
ಪಾಂಚಾಲಿಯು ಒಳಮಹಡಿಯಲಿದ್ದಳು ಪೇಚಾಡುತ್ತಲಿ ವೀಕ್ಷಿಸಿದ
ಕುರುಪತಿ ಫಜೀತಿ ನೋಡಿದ ದ್ರೌಪದಿ ಕಿಲಕಿಲ ನಕ್ಕಳು ಆಗಲ್ಲಿ
ಭೀಮನು ಕೂಡ ಗಹಗಹಿಸಿದ್ದನು ನಗುತಿಹ ದ್ರೌಪದಿ ಜೊತೆಯಲ್ಲಿ!
ಅಲ್ಲಿಗೆ ಬಂದಿಹ ಧರ್ಮನು ಕೂಡಲೆ ನಗುತಿಹ ಅವರನು ಗದರಿದನು
ದುರ್ಯೋಧನನನ್ನು ಕೈಹಿಡಿದೆತ್ತು ನೋಯದಿರೆನ್ನುತ ರಮಿಸಿದನು
ಒದ್ದೆಯ ಬಟ್ಟೆಯ ಬದಲಿಸು ಎನ್ನುತ ನೂತನ ವಸ್ತ್ರವ ನೀಡಿದನು
ನಡೆದಿಹ ಘಟನೆಯ ಮರೆತುಬಿಡೆನ್ನುತ ಕೈಹಿಡಿದವನನು ಬೇಡಿದನು
ಬೇಕೆಂತಲೆ ಇವರಾಡಿದರೆನ್ನುತ ಕುರುಪತಿ ಮನದಲಿ ಕೆರಳಿದನು
ಅಪಮಾನದ ಬೆಂಕಿಯು ಧಗಧಗಿಸಿರೆ ತನ್ನ ಬಿಡಾರಕೆ ತೆರಳಿದನು!

ಪಾಂಚಾಲಿಯ ನಗು ಪಾಷಾಣದ ತೆರದಲ್ಲಿ ಅವನನ್ನು ಬಾಧಿಸಿತು
ಸಂಚಿನ ಬಲೆಯಲಿ ಸಿಲುಕಿದೆನೆನ್ನುತ ಅವನ ಮನಸ್ಸನು ಭೇದಿಸಿತು
ಹೆಣ್ಣೂಬ್ಬಳು ಅವಹೇಳನ ಮಾಡಿದಳೆನ್ನುತ ಮನದಲಿ ಕೊರಗಿದನು
ಮುಂದಿನ ಕೇಡಿಗೆ ಮುನ್ನುಡಿ ಬರೆಯುತ ಮಂಚದ ಮೇಗಡೆ ಒರಗಿದನು!

ನಿದ್ದೆಯು ಬಂದೂ ಬರದಂತಿದ್ದಿತು ಏನೇನೋ ದುಸ್ವಪ್ನಗಳು
ಸದ್ದು ಮಾಡದೇ ಕೊಲ್ಲುತಲಿದ್ದವು ಬಿಡದೇ ಅವನನು ಆ ಇರುಳು
ಅರೆಬರೆ ಕನಸಲಿ ಪಾಂಚಾಲಿಯ ನಗು ಅಣಕಿಸುತಿದ್ದಿತು ಅವನನ್ನು
ಮರುಳಿನ ತೆರದಲಿ ಕಾಡುತಲಿದ್ದಿತು ಕುದಿಯುವ ಅಪಮಾನಿತನನ್ನು
ನಿದ್ದೆಯು ಬಾರದೆ ಕುದಿಯುತ ಮನದಲಿ ಅಂದಿನ ಇರುಳನು ಮುಗಿಸಿದನು
ಕೈಕೈ ಹಿಚುಕುತ ಚಡಪಡಿಸುತ್ತಿರೆ ಬೆಳಗಿನ ಸೂರ್ಯನು ಉದಿಸಿದನು!

ಕಾಲ ಕೂಡಿದರೆ ಹಾಲಾಹಲವೂ ಅಮೃತವೇ ತಾನಾಗುವುದು
ಕಾಲವು ಮುನಿದರೆ ಅಮೃತವೂ ಸಹ ಹಾಲಾಹಲವೇ ಆಗುವುದು
ಕಾಲದ ಮಹಿಮೆಯ ಅರಿತವನಾದರೆ ಎಲ್ಲವನ್ನು ತಾ ಜಯಿಸುವನು
ಕಾಲದ ಮಹಿಮೆಯ ಅರಿಯದೆ ಹೋದರೆ ಕಸಕ್ಕಿಂತ ಕಡೆಯಾಗುವನು

ಬೆಳಗಿನ ಸೂರ್ಯನ ಹೊನ್ನಿನ ಕಿರಣವು ಚುಂಬಿಸಿ ಇಂದ್ರಪ್ರಸ್ಥವನು
ಚಾಚುತಲಿದ್ದಿತು ಅಂದಿನ ಯಾಗಕೆ ತನ್ನ ಸಹಾಯದ ಹಸ್ತವನು
ಧರ್ಮನು ಭೀಷ್ಮನ ಪಾದಕೆ ನಮಿಸುತ ಹೇಳಿದನವನಿಗೆ ಹೀಗೆಂದು-
“ತಾತಾ, ನಿನ್ನಯ ಆಶೀರ್ವಾದವ ಕೋರುತಲಿರುವೆವು ಬಳಿಬಂದು
ಮಹಾಯಜ್ಞವನು ಮಾಡುವ ಕಾರ್ಯಕೆ ಕೈಹಾಕಿರುವೆವು ನಾವಿಲ್ಲಿ
ಮಹಾಮಹೀಶ್ವರರೆಲ್ಲರು ಬಂದರು ನೆಲೆಗೊಂಡಿರುವರು ಈಗಿಲ್ಲಿ
ಲೋಪಗಳೇನೂ ಆಗದ ತೆರದಲಿ ಹೇಗಾದರಿಸಲಿ ಅವರನ್ನು
ಹೆಚ್ಚು ಕುಂದುಗಳು ಬಂದರೆ, ಎಲ್ಲರು ಮನ್ನಿಸಬೇಕಿದೆ ನನ್ನನ್ನು”
ಭೀಷ್ಮನು ನುಡಿದನು- “ಧರ್ಮಜ, ಈ ದಿನ ಮನಸಿನ ಚಿಂತೆಯ ಬಿಟ್ಟುಬಿಡು
ಶಂಕೆಯು ಮನದಲಿ ಕಿಂಚಿತ್ತಿಲ್ಲದೆ ಯಜ್ಞದ ದೀಕ್ಷೆಯ ತೊಟ್ಟುಬಿಡು
ಯದುಕುಲತಿಲಕನು ಕೃಷ್ಣನು ಇರುವನು ಅವನೇ ಎಲ್ಲವ ನೋಡುವನು
ನಾವುಗಳೆಲ್ಲರು ಅವನೊಡನಿರುವೆವು ಅವನೆಲ್ಲವ ಸರಿಮಾಡುವನು”
ನೆಮ್ಮದಿಯಿಂದಲಿ ಯಾಗಶಾಲೆಯಲಿ ಧರ್ಮರಾಯ ದೀಕ್ಷಿತನಾದ
ವೇದವ್ಯಾಸ ಮುನಿಯಾಜ್ಞೆಯ ಮೇರೆಗೆ ಯಾಜ್ಞವಲ್ಕ್ಯ ಅಧ್ವರಿಯಾದ
ಜೈಮಿನಿ ಕಣ್ವರ ನೇತೃತ್ವದಲ್ಲಿ ಬಂದಿತು ಅಲ್ಲಿಗೆ ಮುನಿಯ ಕುಲ
ಸಾವಿರ ಸಾವಿರ ಚಿನ್ನದ ಕಲಶದಿ ಶೇಖರವಾಯಿತು ಪುಣ್ಯಜಲ!

ವೈಶಾಖಮಾಸದ ಚತುರ್ದಶಿಯ ದಿನ ಯಾಗವು ಉದಯದಿ ಶುರುವಾಯ್ತು
ಚತುರ್ವೇದಗಳ ಮಹಾಘೋಷಗಳು ಮಾರ್ಧನಿಸುವ ವೇದಿಕೆಯಾಯ್ತು
ಯಜ್ಞಕುಂಡದಲಿ ಅಗ್ನಿ ಪ್ರಜ್ವಲಿಸಿ ಪಾವನವಾಯಿತು ಪರಿಸರವು
ಯಜ್ಞಕಾರ್ಯಗಳ ಋತ್ವಿಜರೆಲ್ಲರ ಮಂತ್ರಾಕ್ಷರಗಳ ಕಲರವವು
ಯಜ್ಞಕುಂಡದೆದುರಲ್ಲಿ ಕುಳಿತವರು ಮಂತ್ರಘೋಷಗಳ ಪಠಿಸಿದರು
ನಭೂತೋ ನ ಭವಿಷ್ಯತಿ ಎನ್ನುವ ಯಾಗಕೆ ನಾಂದಿಯ ಹಾಡಿದರು!

ಮಹಾಚಪ್ಪರದ ಅಡಿಯಲಿ ಕುಳಿತರು ಉಚಿತಾಸನದಲಿ ಭೂಭುಜರು
ಮಂತ್ರಾಕ್ಷತೆಗಳ ನೀಡಿದರವರಿಗೆ ಮಂತ್ರವ ಪಠಿಸುತ ಭೂಸುರರು
ಭೂಸುರರೆರಚಲು ಮಂತ್ರಾಕ್ಷತೆಯನ್ನು ಯಜ್ಞದೀಕ್ಷಿತರ ತಲೆ ಮೇಲೆ
ಮಂತ್ರಘೋಷಗಳು ಮೊಳಗಿದುವಾಗಲೆ ಎಲ್ಲೆಡೆಯಿಂದ ಅದೇ ವೇಳೆ
ಮಂಗಳವಾದ್ಯವು ಮೊಳಗುತಲಿದ್ದವು ನಾಲ್ಕೂ ದಿಕ್ಕುಗಳೆಡೆಯಿಂದ
ಏಳು ದಿನದ ಪರ್ಯಂತ ನಡೆದಿತ್ತು ಯಾಗವು ಅತಿ ವೈಭವದಿಂದ
ಯಜ್ಞಕಾರ್ಯ ಯಶಸ್ವಿಯಾಗಿಯೇ ಮುಗಿಯತೊಡಗಿತ್ತು ಸರಿಯಾಗಿ
ಯಜ್ಞದಂತ್ಯವನ್ನು ಹಾಡಲು ಋತ್ವಿಜರೆಲ್ಲರು ಹರಸಲು ದಿವಿನಾಗಿ
ಭೂಸುರವರ್ಗವು ದಾನದಕ್ಷಿಣೆಗೆ ಕಾದುಕುಳಿತಿತ್ತು ತವಕದಲಿ
ಧರ್ಮರಾಯ ಸಾಕಷ್ಟು ದಾನವನು ಮಾಡುವನೆನ್ನುತ ಯಾಗದಲಿ
ದಾನ ದಕ್ಷಿಣೆಯು ಭೂರಿ ಭೋಜನವು ಎಲ್ಲ ದಿನಗಳಲಿ ನಡೆದಿತ್ತು
ಘಳಿಗೆ ಘಳಿಗೆಯೂ ಯಜ್ಞದ ಸಿರಿಯಲಿ ನೆರೆದ ಮಂದಿ ಮನ ತಣಿದಿತ್ತು
ನೆರೆದಿಹ ರಾಜರು ಹೊಗಳಿದರೆಲ್ಲರು ಕುಂತೀಸುತರ ವೈಭವವನ್ನು
ಎಂದೂ ಮರೆಯುವುದಿಲ್ಲವಿದೆಂದರು ಇಂತಹ ಸುಖದನುಭವವನ್ನು!

ಯಜ್ಞದ ಕಾರ್ಯವ ನಡೆಸಿದ ಮಂದಿಗೆ ಮನ್ನಿಸಿ ಕೊಟ್ಟರು ದಾನವನು
ಪ್ರೇಕ್ಷಕ ವರ್ಗವು ಸ್ವೀಕರಿಸಿದ್ದಿತು ತುಂಬುಹೃದಯ ಸನ್ಮಾನವನು
ಎಷ್ಟೋ ಮಂದಿಯು ಪಡೆದರು ಮುದದಲ್ಲಿ ಸಾವಿರ ಸಾವಿರ ಗೋದಾನ
ಅದೆಷ್ಟೋ ಮಂದಿಗೆ ಕರೆದು ನೀಡಿದರು ಫಲವತ್ತಾಗಿಹ ಭೂದಾನ
ಬಂದಿಹ ಭೂಸುರರೆಲ್ಲರು ಪಡೆದರು ದಕ್ಷಿಣೆಯೆನ್ನುತ ಧನಕನಕ
ಹೊರಲಾಗದ ಮಂದಿಗೆ ಹೊರೆಯಾಗದೆ ಕಳುಹಿಸಿಕೊಟ್ಟರು ಮನೆತನಕ
ರಾಜಸೂಯದೀ ಮಹಾಯಾಗವನು ಮರೆಯಲು ಸಾಧ್ಯವೆ ನಮ್ಮಿಂದ
ಎನ್ನುತ ತುಂಬಿದ ಹೃದಯಗಳಿಂದಲಿ ಹೊಗಳಿದರೆಲ್ಲರು ಮುದದಿಂದ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧
Next post ಹಾರಿಬಂತೊಂದು ಹಕ್ಕಿ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…