ಹಾರಿಬಂತೋಂದು ಹಕ್ಕಿ
ಸಂಜೆಯಲಿ ಮೈದಪ್ಪಿ ಒಳಗೆ
ಹಾರಿಬಂತೊಂದು ಹಕ್ಕಿ.
ಹೊರ ಹೋಗಲರಿಯದೆ
ತನ್ನವರ ಕಾಣದೆ
ಬಂದ ಬಗಯರಿಯದೆ
ಅತ್ತಿತ್ತ ನೋಡುತಿದೆ
ಭಯದಿಂದ ನಡುಗುತಿದೆ.
ಇವರಾರೊ ಹೊಸಬರು
ತನ್ನನಿವರರಿಯರು
ಮೊದಲಿವರು ಕಾಣರು
ಬಂಧನದಿ ಬದುಕುವರು
ತನ್ನ ಸೆರೆಗೊಯ್ಯುವರು.
ಎಂದೊ ಬಂದಂತಿಹುದು
ನೆನಪಾಗಲೊಲ್ಲದು
ಎಂದೊ ಕಂಡಂತಿಹುದು
ಕುರುಪಾಗಲೊಲ್ಲದು
ಎಂದೊ ಇದ್ದಂತಿಹುದು.
ಪಂಜರದೊಳಿರಿಸಿದರು
ಮಾತುಗಳ ಕಲಿಸಿದರು
ಹಿಂದಿನದ ಮರೆಸಿದರು
ಇವರೆ ನನ್ನವರೆಂಬ-
ಕಕ್ಕುಲಿತೆ ತೋರಿದರು.
ಇಂತು ದಿನ ಕಳೆಯುತಿರೆ
ತನ್ನಂಥ ಹಕ್ಕಿಗಳು
ಬಂದಿರದೆ ಸಾರುತಿರೆ
ಏನಿದೇತೆರನೆಂಬ
ಗೊಂದಲವು ಮೂಡುತಿರೆ-
ಒಳಗೊಳಗೆ ದನಿಯೊಂದು
ಹೇಳುತಿದೆ ನೋಡೆಂದು
ಎಲ್ಲಿಂದಲೋ ಬಂದು
ಇಂದಿಲ್ಲಿ ನೀ ನಿಂದು
ಕಳೆದಾಯ್ತು ದಿನಮೆಂದು.
ಅನಾದಿ ಪುರುಷನ ಕಿಡಿ
ಈ ರೂಪ ತಾಳಿಹುದು
ದೇವನಾಡಿದ ನುಡಿ
ಈ ಕಾರ್ಯವೆಸಗಿಹುದು
ನಡೆ ಮುಂದೆ ಇಡುತಲಡಿ.
*****