ಅಮ್ಮನು ಇಲ್ಲದ ಹೊತ್ತು
ಮೊದಲ ಮಳೆ ಹನಿ ಬಿತ್ತು
ಆಡಲು ಬಾ ಎಂದಿತ್ತು
ಅಂಗಳಕೆ ಕರೆದಿತ್ತು
ತಟಪಟ ತಟಪಟ ಹನಿ
ಚಟಪಟ ಚಟಪಟ ದನಿ
ಯಾರೂ ಇಲ್ಲದ ಹೊತ್ತು
ಮೊದಲ ಮಳೆ ಹನಿ ಮುತ್ತು
ದಪ್ಪನೆ ಆಲಿಕಲ್ಲು
ಕರಗ್ಹೋಯ್ತು ಬಾಯಿಯ ಹಲ್ಲು
ಕುಣಿ ಕುಣಿದು ನಲಿದು ಬಿಟ್ಟೆ
ನೆಂದ್ಹೋಯ್ತು ಪೂರಾಬಟ್ಟೆ
ಘಮ್ಮೆಂದಿತು ಈ ಮಣ್ಣು
ನಕ್ಕಿತು ಮರ, ಗಿಡ, ಹಣ್ಣು
ಸಿಕ್ಕಿತು ನನಗೆ ಸ್ವರ್ಗ
ಏನೀ ಸುಂದರ ನಿಸರ್ಗ
ಮುಗಿಲು ತೊಟ್ಟ ಮಾಲೆ
ಮುತ್ತುಗಳ ಮಣಿಸಾಲೆ
ಭುವಿಗಾಯ್ತು ವರ್ಷಧಾರೆ
ನನಗೆ ಹರ್ಷಸೂರೆ.
*****