ಶಿಲೆಗಳಾಗಬೇಡಿ ಮನುಜರೇ|
ಸುಂದರ ಶಿಲ್ಪಕಲೆಯಾಗಿ ಕೂರಬೇಡಿ|
ಬರಿಯ ಹೊಟ್ಟೆಪಾಡ ಓದ ಕಲಿತು
ಗೋಡೆಯ ಚಿತ್ರಪಟವಾಗಿ ನಿಲ್ಲಬೇಡಿ|
ಜೀವಂತ ಮನುಜರಾಗಿ
ಮನೆ, ಸಮಾಜಕ್ಕೆ ಉಪಯೋಗವಾಗುವ
ನಡೆದಾಡುವ ಮಾನವರಾಗಿ ||
ಎಷ್ಟು ಸೌಂದರ್ಯವಿದ್ದರೇನು
ಸಹನೆ ಸೌಹಾರ್ದವಿಲ್ಲದ ಬಳಿಕ|
ಎಷ್ಟು ಓದಿ ಪಂಡಿತನಾದರೇನು
ವಿನಯ ಗೌರವವಿಲ್ಲದ ಬಳಿಕ|
ಎಷ್ಟು ಧನ ಸಂಪತ್ತಿದ್ದರೇನು
ಕಷ್ಟಕಾಗದ ಕನಕ|
ಬಂಧ ಸಂಬಂಧ ವಿಲ್ಲದಲೇ
ಎಷ್ಟೆತ್ತರ ಬೆಳೆದರೇನು||
ಒಂಟಿಯಾಗಿ ಎತ್ತರೆತ್ತರ
ಹಾರಾಡುವ ಬದಲು|
ಜೊತೆ ಜೊತೆಯಾಗಿ
ಒಂದೊಂದೇ ಮೆಟ್ಟಿಲೇರುತಿರು|
ಹೂವಿನೊಂದಿಗೆ
ನಾರು ಸ್ವರ್ಗ ಸೇರುವಂತೆ
ಎಲ್ಲರನೂ ಸ್ಪಂದಿಸು ಎಲ್ಲರನು ಬೆಳೆಸು
ಕಲಿಸುತ ಕಲಿಯವುದೇ ಜೀವನಧರ್‍ಮ||
ಸ್ನೇಹಿತ, ಬಂಧು ಬಾಂದವರಿಗೆಟುಕದ
ನಿನ್ನ ಎತ್ತರದ ಜೀವನಕ್ಕೇನು ಬೆಲೆ|
ನಿನ್ನ ಬೆನ್ನಲಿ ಬಿದ್ದವರಿಗಾಗದೆ
ನೀನು ಎಷ್ಟೆತ್ತರ ಬೆಳೆದರೇನು?|
ಹೆತ್ತ ತಂದೆತಾಯ ಋಣತೀರಿಸದ
ಮಕ್ಕಳಾದರೇನು ಬಂತು ಭಾಗ್ಯ|
ಹಾಳುಬಾವಿಯ ನಿಂತ ನೀರಾಗದೆ
ಹರಿವ ಮಹಾನದಿಯಾಗಿ ಹಳ್ಳ
ತೊರೆಗಳ ಸೆಳೆದು ಕಡಲಸೇರು||
*****