ನಾದನಾಮಕ್ರಿಯಾ
೧
ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!
ಭಾವಿಸುತ ಬಾಯ್ದೆರೆದು ಕುಳಿತರೆ
ಸಾವೆ ಸರಿ! ಎಂಬಾ ವಿಚಾರದಿ
ಜೀವದರಸನದಲ್ಲಿರುವನಾ
ಠಾವನರಸುತ ತೆರಳಲಿರುವೆ;
ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು.
೨
ದೇಶವಲೆದವನೆಂದು ನಾ ಸಂ-
ನ್ಯಾಸಿಯೊಬ್ಬನನಿಂದು
ಹಾರಯಿಸಿ ಕೇಳಿದರೆ ಆತನು
ತೋರಿಸುತ ತೆಂಕಣವ ಬೆರಳಲಿ:
`ಸಾರು ಈ ದಾರಿಯೊಳು ನಿನ್ನವ-
ನೂರ ಸೇರುವೆ ನೇರ’ ಎಂದನು.
ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!
೩
ಕೇಳಿದರೆ ಯಾಜಿಗಳನಾಗಲೆ
ಹೇಳಿದರು ಬಲಿ ಕೊಡುತಲೆ:
“ಬೋಳುಮರಗಳ ಸಾಲುದಾರಿಯ
ಕೇಳಿ ಬಲ್ಲೆಯೆ? ಹಾಗೆ ಹೋದರೆ
ನಾಳೆಯೇ ನೋಡುವೆಯೆ ನಿನ್ನ –
ನ್ನಾಳುವವನಾಳಿಯನು” ಎಂದರು.
ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!
೪
ಯೋಗಿರಾಜಯ್ಯನಿಗೆ ನಾ ತಲೆ-
ಬಾಗಿ ವಿನಯದಿ ಕೇಳಿದೆ.
ಮುಗಿದ ಕಂಗಳನಗಲಿಸದೆ, ತುಟಿ-
ಬಿಗಿದ ಬಾಯನು ಬಿಚ್ಚದೆಯೆ, ಕೈ-
ಮುಗಿಲ ಕಡೆ ನೀಡಿದನು; ತಿಳಿಯದೆ
ವಿಗಡತನವದು ನಗುತ ಮರಳಿದೆ.
ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !
೫
ಭಾಗವತದಾ ದಾಸರಲ್ಲಿಗೆ
ಹೋಗಿ ಕೇಳಿದೆ ಮೆಲ್ಲಗೆ.
‘ವಿಟ್ಠಲನ ಗುಡಿಯೆದುರ ಬೀದಿಯೊ-
‘ಳಿಟ್ಟು ಅಡಿಯನು ಮುಂದೆ ಸಾಗಲು
‘ನೆಟ್ಟನೆಯದಾ ಬಟ್ಟೆ, ಸೇರುವೆ
‘ತಟ್ಟನೆಯೆ ನಿನ್ನವನ’ ನೆಂದರು.
ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!
೬
ಬುದ್ದಿಶಾಲಿಗಳೆನಿಸಿ ಕೊಂಬರ
ಹೊದ್ದಿ ಹಾದಿಯ ಕೇಳಿದೆ;
ಇದ್ದ ಊರನ್ನುಳಿದು ಬೇರೆಯ
ಸುದ್ದಿಯನೆ ನಾವರಿಯೆವೆಂದರು;
ಮೊದ್ದುತನವೇನೆಯ್ದ ಬೇಕವ-
ನಿದ್ದೆಡೆಯ ನಾನೆಂಬುದಿದುವೇ!
ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!
೭
ಜೋಯಿಸರ ಕೇಳಿದೆನು ಬಗೆಬಗೆ-
ಕಾಯಕಿಗಳನ್ನು ಕೇಳಿದೆ.
ಬೇರೆ ಬೇರೊಂದೊಂದು ದಾರಿಯ
ತೋರಿಸಿದರೊಬ್ಬೊಬ್ಬರೂ ಎನೆ
ಗಾರುಗೊಂಡಿತು ಮನವು; ಯಾವುದು
ತೋರದೆಯೆ ತೊಳಲುತ್ತಲಿಹೆನು.
ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!
೮
ಎಲ್ಲರೂ ಅರಿತಿರಲು ಬಹುದೇ
ನಲ್ಲನೆಡೆಯನು….! ಅಲ್ಲದೆ-
ಎಲ್ಲರೂ ಬಳಸಿರಲು ಬಹುದೇ-
ಸುಳ್ಳನೇ ಬರಿ..! ತಿಳಿಯದೊಂದೂ,
ನಲ್ಲನೊಡನಿದ್ದೆನ್ನ ನೆನಹದೆ
ಟೊಳ್ಳು ಕನಸಾಗಿರಲು ಬಹುದೇ…!
ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !
*****