ನಿಸರ್‍ಗವೆಂದರೆ ನನಗೆ ತುಂಬಾ ಇಷ್ಟ.
ಆದರೆ ನಾನು ಹಿಗ್ಗುತಿಲ್ಲ-
ಮೊಗ್ಗು ಮೌನಕ್ಕೆ, ಮಾತು ಹೂವಿಗೆ
ಹಸಿರು ಹೃದಯಕ್ಕೆ, ಸೂರ್‍ಯ ಉದಯಕ್ಕೆ.
ನಾನು ಹಿಗ್ಗುತ್ತೇನೆ-
ಮಾವು ಮಾವಾಗಿ ಬೇವು ಬೇವಾಗಿ
ಹಸಿರು ಹಸಿರಾಗಿ ಬೋಳು ಬೋಳಾಗಿ
ಕಾಣುವ ಸಹಜ ಸಾಚಾತನಕ್ಕೆ.
ನಾನು ಆತಂಕಿಸುತ್ತೇನೆ-
ಹಸಿರು ಮುತ್ತೈದೆ ಮರ ನೋಡುತ್ತ
ವಿಧವೆ ಬೋಳು ಮರ ನೆನೆದು.
ನಾನು ಭಯ ಪಡುತ್ತೇನೆ-
ಮೂರ್‍ತ ಪೊದೆಯ ಸರಸರ ಸದ್ದಿನಲ್ಲಿ
ಅಮೂರ್‍ತ ಹಾವು ನೆನೆದು.
ನಾನು ಬೆವರೊಡೆಯುತ್ತೇನೆ-
ಮರಗಿಡಗಳ ತಂಪು ತಂಗಾಳಿಯಲ್ಲಿ
ಕಾದ ನೆಲದ ನಿಟ್ಟುಸಿರ ನೆನೆದು.
ಹಿಗ್ಗು, ಆತಂಕ, ಭಯ, ಬೆವರು, ನೆರೆದು
ನನ್ನೊಳಗೆ ಮರುಹುಟ್ಟಿನ ಕಷ್ಟ-
ಆದ್ದರಿಂದ ಈ ನಿಸರ್‍ಗ, ನನಗೆ ತುಂಬಾ ಇಷ್ಟ.
*****