ಹತ್ತವತಾರಗಳು ಆಗಿಹೋದರೂ
ಅವತಾರಗಳಿನ್ನೂ ಕೊನೆಗೊಂಡಿಲ್ಲ
ಶತಕೋಟಿ ದೇವರುಗಳು ಬಂದು ಹೋದರೂ
ದೇವರುಗಳಿನ್ನೂ ಮುಗಿದಿಲ್ಲ
ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ
ಯಾವ ಯಾವುದೋ ವರಾತ
ಆರಂಭಿಸಿದ ಸ್ವಯಂಚಾಲಿತ ಲೀಲೆಯ
ನಿಲ್ಲಿಸಲು ತಾನೆ ಮರೆತ
ಯುಗದ ಗಾಲಿಗಳ ಮೇಲೆ ಉರುಳುತ್ತ
ತೇರು ಬರುವುದೇನು
ಕಳೆಗಿಡ ಬೆಳೆಗಿಡ ಎಂದಿಲ್ಲದೆ ಸವರುತ್ತ
ಯಂತ್ರ ಹರಿವುದೇನು
ತೋರಣ ಕಮಾನುಗಳ
ನಿಲ್ಲಿಸುವುದೇನು
ಗಜಗಾತ್ರದ ಪಟಗಳು
ಹೂಮಾಲೆ ಕಾಮಾಲೆ
ಅಲಂಕರಿಸುವುದೇನು
ಒಂದೊಂದೂ ಕಾಮಧೇನು
ಕೆಲವೊಮ್ಮೆ ಕೆಲ ವೇಷ
ಕೆಲವೊಮ್ಮೆ ಕೆಲ ಪವಾಡ
ಕೆಲವೊಮ್ಮೆ ಸಾಮಾನ್ಯತೆಯೆ ವಿಶೇಷ
ಮುಗಿದರೂ ಮುಗಿಯದ ಯಾತರದೊ ಶೇಷ
ಗತವ ಹೊಸದಾಗಿಸುವ ಸ್ವಗತ
ತೊಟ್ಟ ಬಾಣವ ತೊಡದ ಶಪಥ
ಮುರಿದು ಕಟ್ಟುವ ಛಲ
ಕಟ್ಟಿದ್ದ ಮುರಿಯುವ ಬಲ
ನಳನಳಿಸುವೆಲೆಗಳೇ ಗಲಗಲಿಸಿ ಬೀಳುವುವೆ
ಇಂದು ಕೇಳಿದಾಕ್ರಂದನವೆ ಹಿಂದೆಯೂ ಕೇಳಿಸಿತೆ
ಅದು ಮುಂದೆಯೂ ಕೇಳುವುದೆ
ಅಥವ ಮುಂದಿನದು ಬೇರೆಯೆ
ಮುಂದಿನ ತಿರುವೇ ನಮ್ಮ ತಿರುವು
ಅಲ್ಲಿ ನಾವು ಮರೆಯಾಗುವೆವು
ಉಳಿದವರಿಗೇನು ಅರಿವು ನಮ್ಮ ಭಯವು
ಕತೆಯೊಂದೆ ಉಳಿಯುವುದು ಹೋದವರ ನೆರಳಂತೆ
ಆಮೇಲೆ ಅದುವೂ ಮಾಯವಾಗುವುದು
ಎಷ್ಟವತಾರಗಳು ಕೊನೆಗೊಂಡರೂ
ಮತ್ತವತಾರಗಳು ಬಂದೆ ಬರುವುವು
*****