ಓ ನನ್ನ ಸೌಭಾಗ್ಯ!
ಇಲ್ಲಿಹುದು ನೋಡು ನಮ್ಮ ನಿಜ ಭಾಗ್ಯ
ನೋಡು! ಆಡು ಹಾಡು
ನೀನು ನೀನೇ ಆಗು.
ಆಗಸವ ತುಂಬಿವೆ
ಮದದಾನೆ ಹಿಂಡಂತೆ
ಗಾಂಭೀರ್‍ಯ, ಚೆಲುವಿನ ಬಿಳಿ ಮೋಡ ದಂಡು.
ಬೆಳಗುತಿಹವು
ಸುಮಂಗಲಿಯ ಕೊರಳ ಸರದ ಮುತ್ತು ಹವಳದಂತೆ
ಬೆಟ್ಟ ಗುಡ್ಡ ಸಾಲು
ವಾತ್ಸಲ್ಯ ತಾಯ ನೇವರಿಕೆಯಾಗಿ
ಪುಳಕವನು ತರುತಿಹುದು
ಅಪರೂಪ ಹೂ ಗಂಧ ಗಾಳಿ.
ಮಾನವನ ಬೆವರಿಗೆ
ಧರೆ ಪುಷ್ಪವತಿಯಾಗಿ
ಉದ್ದಕ್ಕೂ ನೆರೆದಿದೆ
ಹುಚ್ಚುಚ್ಚು ಹಸುರಿನ ಫಲಪೈರು.
ಸಂತಸದಿ ವಿಹರಿಸಲು ಬಂದ ಸುರಲೋಕ ಸುಂದರರು
ಈ ಪಕ್ಷಿ ಸಂಕುಲ
ಅದೆಷ್ಟು ರಮ್ಯ!
ಕೇಳುತಿರೆ, ಇವುಗಳ ಗಾನ, ಕೇಳಿಗಳ ಮಧುರ ಕಲರವ.
ತಾಯ ಮಡಿಲ ಚಿಣ್ಣರಾಟದಂತೆ
ಕಣ್ಣು ಕಟ್ಟುತಿಹುದು, ಈ ನೋಟ
ಈ ಪ್ರಾಣಿಗಳೆಲ್ಲದರ ಆಟ, ಚೆಲ್ಲಾಟ, ನಲಿದಾಟ
ಬಾ! ಬಾ! ಬೆಡಗಿ
ಇಲ್ಲಿವೆ ನೋಡು
ತರ ತರದ ಹೂವು
ಆರಿಸಿ ಕೊಡುವೆ
ಮುಡಿ ಬಾರೆ ನೀನು
ನಿನಗೆ ಬೇಕಾದ ಹೂವು
ಇದು ತಾರಲಿಲ್ಲವೆ ನಿನಗೆ ಸಂತಸ ಹಿಗ್ಗ
ಈಗ್ಹೇಳು
ಎಲ್ಲಿದೆ ಆ ನಿನ್ನ ಸ್ವರ್ಗ?
ನೋಡು! ನೋಡು!
ಇದು ನಮ್ಮ ಭಾಗ್ಯ! ಇದುವೆ ನಮ್ಮ ನಿಜ ಸೌಭಾಗ್ಯ!
*****