“ನೋಡಯ್ಯ ಡೆಂಬಣ್ಣ ಅಲ್ಲಿ ಕಾಣಿಸುತ್ತಿದೆಯಲ್ಲ ಅದೇ ಸೀರೆ ಹೊಳೆ. ಅದರ ಮುಂದೆ ಕುಂಬಳೆ ಹೊಳೆ ಏನೇನೂ ಅಲ್ಲ. ಕುಂಬಳೆ ಹೊಳೆಯನ್ನು ನಾವು ಸಂಕದ ಮೇಲಿಂದ ದಾಟಿದೆವು. ಆದರೆ ಸೀರೆ ಹೊಳೆಯನ್ನು ಹಾಗೆ ದಾಟಲಾರೆವು. ಒಂದು ವೇಳೆ ಹಾಗೆ ದಾಟಲು ಯತ್ನಿಸಿದರೆ ಅರ್ಧದಲ್ಲಿ ಕೈಕಾಲು ತತ್ತರ ನಡುಗಿ ಸ್ಲೀಪರುಗಳ ಮಧ್ಯೆ ಕೆಳಗೆ ಬಿದ್ದು ಹೊಳೆಯಲ್ಲಿ ಮುಳುಗುವುದು ಖಂಡಿತ. ಸೀರೆ ಹೊಳೆ ಕುಂಬಳೆ ಹೊಳೆಗಿಂತ ಅಗಲವೂ ಆಳವೂ ಇದೆ. ನಿನಗೆ ಈಜಲು ಮೊದಲೇ ಬರುವುದಿಲ್ಲವಲ್ಲ! ಈಜಲು ಬರದ, ಸೈಕಲು ನಡೆಸಲು ಬರದ, ಸಿಳ್ಳು ಹಾಕಲು ಕೂಡ ಬರದ ನಾಲಾಯಕು ವ್ಯಕ್ತಿ ನೀನು- ಕೇವಲ ಪುಳ್ಚಾರು! ಡೆಂಬಣ್ಣ ಎನ್ನೋ ಬದಲಿಗೆ ನಿನ್ನನ್ನು ಬರದಣ್ಣ ಎಂದು ಕರೆದರೆ ಚೆನ್ನಾಗಿರುತ್ತಿತ್ತು. ಆದರೆ ಈಗ ಬೇಜಾರು ಮಾಡಿಕೊಳ್ಳಬೇಡ. ಹೊಳೆಗೆ ಬಿದ್ದರೂ ನಿನ್ನನ್ನು ಮುಳುಗಲು ಬಿಡಲಾರೆ ಡೆಂಬಣ್ಣ ನನ್ನ ನಂಬು! ನನ್ನ ಜತೆ ಇದ್ದ ಮೇಲೆ ನಿನಗೇನು ಭಯ? ಕುಂಬಳೆಯ ರೈಲು ಸಂಕವನ್ನು ನಾನು ದಾಟಿಸಲಿಲ್ಲವೆ? ಅಷ್ಟಕ್ಕೂ ಸೀರೆ ಹೊಳೆಯನ್ನು ನಾವು ದಾಟುವುದು ದೋಣಿಯಲ್ಲಿ. ಅಂದಮೇಲೆ ಹೆದರಬೇಕಾದ್ದೇನೂ ಇಲ್ಲ. ನನಗೆ ದೋಣಿಯವರ ಪರಿಚಯವಿದೆ. ಹೊಳೆಯಲ್ಲಿ ನೆರೆ ಬಂದಾಗ ಕೂಡ ದೋಣಿ ನಡೆಸಬಲ್ಲ ಪ್ರಚಂಡರು ಅವರು. ಈ ಊರ ಆಸುಪಾಸಿನಲ್ಲಿ ಇನ್ನು ಇಂಥ ಅಂಬಿಗರೇ ಇಲ್ಲ ಎಂದು ಬೇಕಾದರೂ ಹೇಳಬಹುದು. ಇಗೋ ಒಂದು ಸಿಗರೇಟು ಸೇದು-”
ನನ್ನ ಮಿತ್ರನಾದ ದಾಮು-ದಾಮೋದರನ-ಮಾತು ಅವ್ಯಾಹತವಾಗಿ ಸಾಗುತ್ತಿತ್ತು. ಅವನ ಕರ್ಣಕಠೋರವಾದ ಮಾತಿಗೆ ತಾಳ ಹಾಕುವವನಂತೆ ನಾನು ಅವನ ಪಕ್ಕದಲ್ಲಿ ನಡೆಯುತ್ತಿದ್ದೆ. ದಾಮುವಿನ ಪಕ್ಕದಲ್ಲಿ ನಡೆಯುವುದು ಅಷ್ಟೇನೂ ಸುಲಭವಾದ ಕೆಲಸವಲ್ಲ. ಪಕ್ಕದಲ್ಲಿ ನಡೆಯುವವರನ್ನು ತಳ್ಳುತ್ತ ತಳ್ಳುತ್ತ ಮಾತನಾಡುವುದು ಅವನ ಅಭ್ಯಾಸವಾಗಿತ್ತು ಆದ್ದರಿಂದ ದಾರಿಯ ಅಂಚಿಗೆ ತಳ್ಳಲ್ಪಡುತ್ತಿದ್ದ ನಾನು ಅವನ ಹಿಂದೆ ಬೀಳುತ್ತಿದ್ದೆ; ಮಗ್ಗುಲು ಬದಲಿಸುತ್ತಿದ್ದೆ; ಅಥವಾ ಮುಂದೆ ಹೋಗುತ್ತಿದ್ದೆ. ಆದರೆ ನನ್ನ ಎಲ್ಲಾ ಯತ್ನಗಳನ್ನೂ ವಿಫಲ ಗೊಳಿಸುವವನಂತೆ ದಾಮು ಮತ್ತೆ ನನ್ನ ಪಕ್ಕದಲ್ಲಿ ಬಂದು ಸೇರುತ್ತಿದ್ದ. ಹೇಗೇ ತಿರುಗಿಸಿಟ್ಟರೂ ಉತ್ತರಮುಖಿ ಯಾಗಿ ನಿಲ್ಲುವ ಅಯಸ್ಕಾಂತದ ಹಾಗೆ! ಪ್ರತಿಯೊಂದು ಪದವನ್ನೂ ಯಾವ ವ್ಯತ್ಯಾಸವೂ ಇಲ್ಲದೆ ಗಟ್ಟಿಯಾಗಿ ಉಚ್ಚರಿಸುತ್ತಿದ್ದನಾದ್ದರಿಂದ ಅವು ನನ್ನ ಕಿವಿಗೆ ರಪರಪನೆ ಬಂದು ಬಡಿಯುತ್ತಿದ್ದವು. ಚಿಕ್ಕಂದಿನಲ್ಲೆ ಯಕ್ಷಗಾನ ತಾಳಮದ್ದಳೆಗಳನ್ನು ಕೇಳಿ ನೋಡಿ, ಅವುಗಳಲ್ಲಿ ತಾನೇ ಭಾಗವಹಿಸಿ ಅಭ್ಯಾಸವಿದ್ದುದರಿಂದ ದಾಮುವಿಗೆ ಎಡೆಬಿಡದೆ ಮಾತನಾಡುವುದೊಂದು ಚಾಳಿಯಾಗಿತ್ತು.
ಅವನು ಕೊಟ್ಟ ಸಿಗರೇಟನ್ನು ತೆಗೆದುಕೊಂಡೆ. ಅವನೇ ಕಡ್ಡಿಗೀರಿ, ಕೈಯನ್ನು ಗೂಡುಮಾಡಿ, ಬೆಂಕಿ ಹಚ್ಚಿದ. ಅದೇ ಬೆಂಕಿಯಿಂದ ತಾನೂ ಒಂದನ್ನು ಹಚ್ಚಿಕೊಂಡು ನನಗಿಂತ ತುಂಬ ಭಿನ್ನವಾದ ಪ್ರಬುದ್ಧ ಶೈಲಿಯಲ್ಲಿ ಹೊಗೆಯನ್ನು ಒಳಕ್ಕೆಳೆದು ಹೊರಕ್ಕೆ ಬಿಟ್ಟ. ನನಗೆ ಸಿಗರೇಟಿನ ಕೆಟ್ಟ ಚಟವನ್ನು ಅಭ್ಯಾಸ ಮಾಡಿಸಿದವನೂ ಅವನೇ. ಶಾಲೆಯ ವಿರಾಮ ಸಮಯದಲ್ಲಿ ನಾವು ಪಕ್ಕದ ಅಂಗಡಿಯಿಂದ ಸಿಗರೇಟು ಕೊಂಡುಕೊಂಡು ಗೇರು ಮರವೊಂದನ್ನು ಏರಿ ಅದರ ಅನುಕೂಲವಾದ ಕೊಂಬೆಗಳಲ್ಲಿ ಕುಳಿತು ಹೊಗೆ ಸೇದುತ್ತ ಹರಟುವುದಿತ್ತು. ಹೀಗ್ ಹೊಗೆ ಸೇದುವುದರಲ್ಲಿ ನನಗೆ ಯಾವ ಖುಷಿ ಕಾಣಿಸದಿದ್ದರೂ ದಾಮು “ಸೇದು ಡೆಂಬಣ್ಣ ಸೇದು!”ಎನ್ನುವ ಒತ್ತಾಯಕ್ಕೆ ನಾನು ಮಣಿಯುತ್ತಿದ್ದೆ. ದಾಮುವಿನ ಕೆಟ್ಟ ಪ್ರಭಾವಕ್ಕೆ ಸಿಲುಕಿದ್ದಕ್ಕೆ ನನ್ನ ಮೇಲೆ ನನಗೇ ಸಿಟ್ಟು ಬಂದು, ಪ್ರತಿದಿನ ಬೆಳಗ್ಗೆ ಅದರ ವಿರುದ್ಧ ನಿರ್ಣಯ ತೆಗೆದುಕೊಂಡರೂ, “ಬಾ ಡೆಂಬಣ್ಣ ಬಾ” ಎಂದು ಆತ ಕರೆದಾಗ ಒಲ್ಲೆ ಎನ್ನುವ ಧೈರ್ಯ ನನಗಿರಲಿಲ್ಲ. ಗೇರು ಮರದ ಕೆಳಗಿನಿಂದ ಸಾಗುವ ದಾರಿಯಲ್ಲಿ ಕೆಲವೊಮ್ಮೆ ನಮ್ಮ ಗಣಿತದ ಮೇಷ್ಟ್ರು ಮನೆ ಕಡೆಗೆ ಹೋಗುವುದು ನಮಗೆ ಕಾಣಿಸುತ್ತಿತ್ತು. ಉತ್ತರದ ಸುರಕ್ಷಿತತೆಯಲ್ಲಿ ನಾವು ಸದ್ದಾಗದಂತೆ ಅವರನ್ನು ಗೇಲಿ ಮಾಡುತ್ತಿದ್ದೆವು. ಗೇಲಿ ಮಾಡುತ್ತಿದ್ದವನು ನಿಜಕ್ಕೂ ನಾನಲ್ಲ; ದಾಮು, ಆತ ಮಾಡುತ್ತಿದ್ದ ಗೇಲಿಗೆ ನಾನು ಸುಮ್ಮನೆ ಹಲ್ಕಿರಿಯುತ್ತಿದ್ದೆ.
ಮುಖ್ಯವಾಗಿ ಯಾರೂ ನನ್ನನ್ನು ಡೆಂಬಣ್ಣ ಎಂದು ಕರೆಯುವುದು ನನಗೆ ಇಷ್ಟವಿಲ್ಲ. ಅದು ನನ್ನ ತಾಯಿ ನನಗೆ ಪ್ರೀತಿಯಿಂದ ಇಟ್ಟ ಅಡ್ಡ ಹೆಸರು; ಆದ್ದರಿಂದ ಹಾಗೆ ಕರೆಯುವ ಅಧಿಕಾರ ಆಕೆಗೆ ಮಾತ್ರ. ಇನ್ನು ಯಾರೂ ನನ್ನ ತಂದೆ ಕೂಡ ನನ್ನನ್ನು ಡೆಂಬಣ್ಣ ಎಂದು ಕರೆಯುತ್ತಿರಲಿಲ್ಲ. ಆದರೆ ಸ್ನೇಹದ ನೆಪದಲ್ಲಿ ಮನೆಗೆ ಭೇಟಿ ಕೊಡುತ್ತಿದ್ದ ದಾಮು ಮಾತ್ರ ಈ ಗುಟ್ಟನ್ನು ಅರಿತುಕೊಂಡು ಹಟದಿಂದ ಎಂಬಂತೆ ನನ್ನನ್ನು ಡೆಂಬಣ್ಣ ಎಂದು ಕರೆಯಲು ಸುರುಮಾಡಿದ. ಆ ಮೂಲಕ ನನ್ನ ಖಾಸಗಿ ಬದುಕನ್ನು ಅವನು ಪ್ರವೇಶಿಸಿದ್ದಲ್ಲದೆ ನನ್ನ ಮೇಲೆ ಅದಾವುದೊ ಅಧಿಕಾರವನ್ನು ಚಲಾಯಿಸತೊಡಗಿದ. ಖಾಸಗಿ ಖೇದದ ಸಂಗತಿಯೆಂದರೆ ಕೆಲವೊಮ್ಮೆ ಶಾಲೆಯಲ್ಲಿ ಎಲ್ಲರೆದುರಿಗೆ “ಡೆಂಬಣ್ಣ! ಡೆಂಬಣ್ಣ!” ಎಂದು ನನ್ನನ್ನು ಕೂಗಿ ಅವಮರ್ಯಾದೆ ಮಾಡುತ್ತಿದ್ದ ನಾನು ಒಂದೆರಡು ಬಾರಿ ಅವನಿಗೆ ತಿಳಿಹೇಳಿ ನೋಡಿದೆ. “ಅಯ್ಯೋ ನೀನೊಬ್ಬ ಡೆಂಬಣ್ಣ ಅನ್ನೋದೇ ಕೇಶವ ಅನ್ನೋದಕ್ಕಿಂತ ಚೆನ್ನಾಗಿಲ್ಲವೆ? ಕೇಶವ ಕೇಶವ ಅಂತ ಕರೆದರೆ ನೀನು ಶವವೇ ಆಗಿಬಿಡುತ್ತೀಯಾ!” ಎಂದು ನನ್ನನ್ನು ಛೇಡಿಸಿ ಸುಮ್ಮನಾಗಿಸಿದ. ವಾಸ್ತವವಾಗಿ ನನಗೆ ಕೇಶವ ಅನ್ನುವ ಹೆಸರೂ ಇಷ್ಟವಿಲ್ಲ ಆದರೇನು ಮಾಡಲಿ? ಅದು ತಂದೆ ತಾಯಿ ಇಟ್ಟ ಹೆಸರು.
“ಹೊಳೆ ದಾಟಿದ ಮೇಲೆ ಒಂದೆರಡು ಪ್ಯಾಕು ಸಿಗರೇಟು ಕೊಂಡುಕೊಳ್ಳಬೇಕು. ಒಂದು ಬೆಂಕಿ ಪೊಟ್ಟಣ ಕೂಡ. ಈ ಊರಲ್ಲಿ ಸಿಗೋದು ಬರ್ಕಲಿ ಮಾತ್ರ. ಮಂಗಳೂರಲ್ಲಿ ವಿಲ್ಸ್ ಸಿಗುತ್ತದೆ. ನೀನೆಂದಾದರೂ ವಿಲ್ಸ್ ನೋಡಿದ್ದೀಯಾ? ಚುರೂಟು ಸೇದಿದ್ದೀಯಾ? ದೊಡ್ಡ ಹೋಟೆಲುಗಳಲ್ಲಿ ಕಾಫ಼ಿ ಕುಡಿದಿದ್ದೀಯಾ? ಸಿನಿಮ ನೋಡಿದ್ದೀಯಾ? ಮಂಗಳೂರು ಸೇರಿದ ಮೇಲೆ ತೋರಿಸ್ತೇನೆ. ನನಗೆ ಮಂಗಳೂರೆಲ್ಲ ಪರಿಚಯ. ಅಲ್ಲಿ ನನ್ನ ಚಿಕ್ಕಪ್ಪನ ಮನೆಯಿದೆ. ಕಳೆದ ಬೇಸಿಗೆಯಲ್ಲಿ ಅವರ ಮನೆಯಲ್ಲಿ ಇದ್ದು ಬಂದಿದ್ದೆನಲ್ಲ. ಹಂಪನಕಟ್ಟೆಗೆ ದಿನಾ ಬರುತ್ತಿದ್ದೆ ಅಹಾ! ಅಲ್ಲಿಯ ಮಲ್ಲಿಗೆ ಹೂವುಗಳೋ! ಅವನ್ನು ಮಾರುವ ಹೆಣ್ಣುಗಳೋ! ಆದರೆ ಈ ಸಲ ಮಾತ್ರ ನಾವು ನನ್ನ ಚಿಕ್ಕಪ್ಪನ ಮನೆಗೆ ಹೋಗುವ ಹಾಗಿಲ್ಲ. ಯಾವ ಪರಿಚಯದವರನ್ನೂ ನೋಡುವ ಹಾಗಿಲ್ಲ. ಹಿಡಿದು ವಾಪಸ್ಸು ಮನೆಗೆ ತಂದುಬಿಡ್ತಾರೆ. ಮಂಗಳೂರಿನಿಂದ ಉಡುಪಿ, ಉಡುಪಿಯಿಂದ ಕುಂದಾಪುರ. ಕುಂದಾಪುರದಿಂದ ಕಾರವಾರ. ಕಾರವಾರದಿಂದ ಗೋವ. ಗೋವದಿಂದ ಮುಂಬಯಿ, ಮುಂಬಯಿ ಯಿಂದ-”
ಮುಂಬಯಿಯಿಂದ ಇನ್ನೆಲ್ಲಿಗೋ. ದಾಮು ತನ್ನ ಮಾತಿನ ಧಾಟಿಯನ್ನು ತಾನೇ ಚಪ್ಪರಿಸುವವನಂತೆ ಹೇಳುತ್ತಲೇ ಇದ್ದ. ನಾನು ಕೇಳುತ್ತಲೇ ಇದ್ದೆನೆಂದರೆ ಸರಿಯಾದೀತು. ಅವನ ಮಾತುಗಳೇನೋ ಕೇಳಿಸುತ್ತಿದ್ದುವು. ಆದರೆ ನನ್ನ ತಲೆಯೊಳಗಿನ ವಿಚಾರಗಳೇ ಬೇರೆ. ಮನೆಬಿಟ್ಟು ಇಬ್ಬರೂ ಓಡಿಹೋಗುವ ಮೂರ್ಖ ನಿರ್ಣಯವನ್ನು ತೆಗೆದುಕೊಂಡಾಗಿತ್ತು. ಈ ನಿರ್ಣಯವೀಗ ಹೆಜ್ಜೆ ಹೆಜ್ಜೆಗೂ ಕಾರ್ಯಗತವಾಗುತ್ತ ಹೋಗುತ್ತಿತ್ತು ಎಂದರೆ ನಾವಿಡುವ ಪ್ರತಿಯೊಂದು ಹೆಜ್ಜೆಯೂ ನಮ್ಮನು ನಮ್ಮ ಮನೆಗಳಿಂದ ದೂರದೂರಕ್ಕೆ ಒಯ್ಯುತ್ತಿತ್ತು. ಇದೀಗ ಊರಿನಲ್ಲಿ ಶಾಲೆಯಿಂದ ನಾನು ಮನೆಗೆ ಬರಬೇಕಾಗಿದ್ದ ಸಮಯ, ಮನೆಗೆ ಬಂದವನೇ ನಾನು ಪುಸ್ತಕಗಳ ಸಂಚಿಯನ್ನು ಒಂದೆಡೆ ಒಗೆದು ಕೈಕಾಲು ಮುಖತೊಳೆದು ಒಂದು ಅಡಿಗೆಮನೆ ನುಗ್ಗಿ ತಾಯಿ ಮಾಡಿಟ್ಟ ತಿಂಡಿತಿನಿಸುಗಳ ಕೊಳ್ಳೆಹೊಡೆಯುವವನು. ನಂತರ ದನಗಳನ್ನ ಹೊಡೆದುಕೊಂಡು ಬಂದು ಹಟ್ಟಿ ಸೇರಿಸುವುದು ನನ್ನ ಕೆಲಸ. ಇದಕ್ಕಾಗಿ ಕೆಲವೊಮ್ಮೆ ಕಾಡುಗುಡ್ಡ ಅಲೆಯಬೇಕಾಗಿತ್ತು. ಆದರೆ ಶಾಲೆಯ ಶಿಸ್ತಿಗಿಂತ ಈ ಸ್ವಾತಂತ್ರ್ಯ ಅಪ್ಯಾಯಮಾನವಾಗಿದ್ದರಿಂದ ನನಗಿದು ಇಷ್ಟದ ಸಂಗತಿ. ನಂತರ ನಾನು ತುಸು ಹೊತ್ತು ಓದಿನ ನಟನೆ ಮಾಡಿ ತಂದೆಗಿಂತ ಮೊದಲೇ ಊಟಕ್ಕೆ ಕುಳಿತುಕೊಳ್ಳುವವನು. ಊಟವಾದ ತಕ್ಷಣ ಕಣ್ಣುತುಂಬಿ ಬರುವ ನಿದ್ದೆಯನ್ನು ನಾನು ತಡೆದುಕೊಳ್ಳಲಾರೆ. ಆದರೆ ಇನ್ನು ಇದೆಲ್ಲ ದೂರದ ಮಾತು. ಈ ಹೊತ್ತಿಗೆ ನಾನಿನ್ನೂ ಮನೆಗೆ ಯಾಕೆ ಮರಳಿಲ್ಲ ಎಂದು ತಾಯಿ ಗಾಬರಿಯಾಗುತ್ತಾರೆ. ತಂದೆಗೆ ಜನ ಹೋಗುತ್ತದೆ. ಅವರು ಅಂಗಡಿಯಿಂದ ಕೂಡಲೆ ಮನೆಗೆ ಬರುತ್ತ ” ಎಲ್ಲಿ ಹೋಯಿತು ಆ ನಾಯಿ! ನೋಡಿಯೇ ಬಿಡ್ತೇನೆ! ಚರ್ಮ ಸುಲಿದು ಕೈಯಲ್ಲಿ ಕೊಡ್ತೇನೆ! ಇನ್ನು ಹುಟ್ಟಿಲ್ಲ ಅಂತ ಅನ್ನಿಸಿಬಿಡ್ತೇನೆ!” ಎಂದು ಹರಿಹಾಯ್ದು ಹುಡುಕುವುದಕ್ಕೆ ಶುರುಮಾಡುತ್ತಾರೆ. ಇದೇ ತರದ ಒಂದು ದೃಶ್ಯ ದಾಮುವಿನ ಮನೆಯಲ್ಲೂ ನಡೆಯುತ್ತಿರಬಹುದೆ? ಒಂದು ವೇಳೆ ನಡೆಯುತ್ತಿದ್ದರೆ ಅವನ ಮುಖದಲ್ಲಿ ಮಾತ್ರ ಅದರ ಯಾವ ಚಿಹ್ನೆಯೂ ಕಾಣಿಸುತ್ತಿರಲಿಲ್ಲ. ಅವನು ನನ್ನನ್ನು ದಾರಿಯ ಬದಿಗೆ ತಳ್ಳುತ್ತ ತಳ್ಳುತ್ತ ನಡೆಯುತ್ತಲೇ ಇದ್ದ.
ನಾವು ಹೊಳೆಯ ಕಡವು ಸೇರಿದಾಗ ದೋಣಿ ಜನರನ್ನು ಹೇರಿಕೊಂಡು ಆಚೆಕಡೆಯಿಂದ ನಮ್ಮೆಡೆಗಾಗಿ ಬರುತ್ತಿತ್ತು. ಜನ ಎಷ್ಟು ತುಂಬಿದ್ದರೆಂದರೆ ದೋಣಿ ಈಗ ಮುಳುಗುತ್ತದೋ ಆಗ ಮುಳುಗುತ್ತದೋ ಎಂಬಂತೆ ತೊನೆಯುತ್ತಿತ್ತು. ಜನಮಾತ್ರವಲ್ಲ, ಅವರ ಸರಕುಗಳು, ಮೀನು ತರಕಾರಿಗಳು, ಆಡುಕೋಳಿಗಳು ದೋಣಿಯಲ್ಲಿದ್ದುವು. ನಾವು ನೋಡುತ್ತಿದ್ದಂತೆ ದೋಣಿಯ ಅಂಬಿಗನು ದೋಣಿ ಯನ್ನು ದಂಡೆಗೆ ತಂದು ಒಂದು ಗೂಟಕ್ಕೆ ಬಿಗಿದ. ಒಬ್ಬೊಬ್ಬರಿಂದಲೂ ಹಣ ವಸೂಲು ಮಾಡಿ ಜೇಬಿಗೆ ಸೇರಿಸಿದ. ಆಚೆ ದಂಡೆಗೆ ಹೋಗಲು ಕಾಯುತ್ತಿದ್ದವರು ನಾವಿಬ್ಬರೇ. ಖಾಲಿಯಾದ ದೋಣಿಯನ್ನೇರಿ ಅದರಲ್ಲಿ ಹಾಕಿದ್ದ ಹಲಗೆಯೊಂದರ ಮೇಲೆ ಕುಳಿತೆವು. ನಾವು ಏರಿದ ರಭಸಕ್ಕೆ ದೋಣಿ ಅತ್ತಿಂದತ್ತ ತೊನೆಯತೊಡಗಿತು. ನನಗೆ ದೋಣಿಯ ಪ್ರಯಾಣ ಹೊಸತಲ್ಲವಾದರೂ ಇಂದು ಮಾತ್ರ ಎಂದಿಲ್ಲದ ಭಯ. ಭಯಕ್ಕಿಂತಲೂ ಹೆಚ್ಚಿನ ಮಂಕು ನನ್ನ ಮನಸ್ಸನ್ನ ಆಕ್ರಮಿಸಿಕೊಂಡಿತ್ತು. “ನಾವು ಆಚೆ ದಂಡೆಗೆ ಹೋಗಬೇಕು ಅರ್ಜೆಂಟು ಕೆಲಸ.” ಎಂದ ದಾಮು ಅಂಬಿಗನನ್ನು ಉದ್ದೇಶಿಸಿ. ಅಂಬಿಗ ಈ ಮಾತ್ರನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ತುಸು ತಡೆದು ದಾಮು ಮತ್ತೆ ಇದೇ ಮಾತನ್ನು ಹೇಳಿದ. ಇವನ ಒತ್ತಾಯಕ್ಕೆ ಸಿಟ್ಟಿಗೆದ್ದ ಅಂಬಿಗ “ಜನ ಬಾರದೆ ದೋಣಿ ಬಿಡೋ ಹಂಗಿಲ್ಲ; ಇಬ್ಬರೇ ಹೋಗೋದಕ್ಕೆ ಇದೇನು ನಿಮ್ಮ ಹಂತದ್ದೆ? ಯಾವೂರಿಂದ ಬಂದವರು ನೀವು?” ಎಂದು ಗದ್ದರಿಸಿದ ಮೇಲೆ ದಾಮು ಸುಮ್ಮುಗಾದ. ಅವನು ಸೇದುತ್ತಿದ್ದ ಸಿಗರೇಟು ಇನ್ನೂ ಅರ್ಧಕೂಡಾ ಮುಗಿಯುದಿದ್ದರೂ ತಾನು ಯಾರಿಗೂ ಕೇರು ಮಾಡುವುದಿಲ್ಲವೆಂಬ ಠೀವಿಯಲ್ಲಿ ಅದನ್ನು ಹೊಳೆಗೆಸೆದು ಹೊಸದೊಂದನ್ನು ಹಚ್ಚಿಕೊಂಡ. ಹೊಳೆಗೆ ಬಿದ್ದ ಆ ತುಂಡನ್ನು ಒಂದು ಮೀನು ಫಳ್ಳನೆ ಹಾರಿ ಕಚ್ಚಿಕೊಂಡು ಹೋಯಿತು. ದಾಮುವಿನ ಮುಖಭಂಗದಿಂದ ನನಗೆ ಒಂದು ರೀತಿಯ ಆನಂದವಾದರೂ, ಅವನಿಗೆ ಅನಿಸದಂಥ ಅವಮಾನ ನನಗನಿಸಿ ನನ್ನ ಎಡಗೈಯನ್ನು ಎಲ್ಲಿಡಬೇಕು. ಬಲಗೈಯನ್ನು ಎಲ್ಲಿಡಬೇಕು ಎಂದು ತಿಳಿಯದೆ, ಎರಡೂ ಕೈಗಳಿಂದ ನನ್ನ ಚೀಲವನ್ನು ತಬ್ಬಿಕೊಂಡು ಕುಳಿತುಬಿಟ್ಟೆ. ತನಗೆ ಇಲ್ಲಿನ ಅಂಬಿಗರೆಲ್ಲರೂ ಗೊತ್ತೆಂಬ ದಾಮುವಿನ ಹೇಳಿಕೆ ಎಂಥ ಸುಳ್ಳಾಗಿತ್ತು! ದಾಮು ಸುಳ್ಳು ಹೇಳುತ್ತಾ ನೆಂಬುದರಲ್ಲಿ ಅಚ್ಚರಿಯ ಸಂಗತಿಯೇನೂ ಇರಲಿಲ್ಲ. ಸುಳ್ಳನ್ನೂ, ಸತ್ಯವನ್ನೂ ಹದವಾಗಿ ಬೆರೆಸುವ ವ್ಯಕ್ತಿ ದಾಮು. ಇದಕ್ಕೆ ಅತಿಶಯೋಕ್ತಿ ಎಂದು ಕೆಲವರು ಕರೆಯುತ್ತಾರೆಂದು ಕಾಣುತ್ತದೆ. ಅತಿಶಯೋಕ್ತಿಯ ತೊಂದರೆಯೆಂದರೆ ಇದರಲ್ಲಿ ಉಕ್ತಿ ಯಾವುದು ಅತಿಶಯ ಯಾವುದು ಎಂದು ಮೊದಲೇ ಗೊತ್ತಾಗದೆ ಇರೋದು. ಹೀಗಿದ್ದೂ ನಾನು ಈತನ ಪ್ರಭಾವಲಯದಲ್ಲಿ ಸಿಕ್ಕಿಕೊಂಡು ಮೇಣಕ್ಕೆ ಅಂಟಿದ ನೋಣದಂತೆ ಒದ್ದಾಡುತ್ತಿದ್ದುದು ಯಾಕೆಂದು ನನಗೇ ಗೊತ್ತಿರಲಿಲ್ಲ.
ಸಾಕಷ್ಟು ಜನ ಬಂದು ಸೇರಿದ ಮೇಲೆಯೇ ಅಂಬಿಗ ದೋಣಿಯನ್ನು ನಡೆಸತೊಡಗಿದುದು. ಬಿದಿರ ಗಣೆಕೋಲನ್ನು ಎಡಕ್ಕೊಮ್ಮೆ ಬಲಕ್ಕೊಮ್ಮೆ ಹಾಕಿ ತಳ್ಳುತ್ತಿದ್ದಂತೆ ದೋಣಿ ಆಚೆ ದಂಡೆಗೆ ತನ್ನ ಅತಿ ನಿಧಾನದ ಪ್ರಯಾಣ ಕೈಗೊಂಡಿತು. ಜನರ ಭಾರದಿಂದ ದೋಣಿ ಅಂಚಿನ ತನಕ ನೀರಲ್ಲಿ ಮುಳುಗಿತ್ತು. ಇದಾವುದನ್ನೂ ಗಮನಿಸದ ಠೀವಿಯಲ್ಲಿ ದಾಮು ಪಶ್ಚಿಮ ದಿಗಂತವನ್ನು ನೋಡುತ್ತ ಕುಳಿತಿದ್ದ. ವರ್ಷವೂ ವರ್ಷವೂ ಫ಼ೇಲಾಗಿ ಇನ್ನೂ ಸ್ಕೂಲು ಫ಼ೈನಲ್ಲಿನಲ್ಲೆ ಇದ್ದ ದಾಮು ನನ್ನ ಕ್ಲಾಸ್ ಮೇಟ್ ಆಗುವ ವಿಧಿ ನನ್ನ ಹಣೆಯಲ್ಲಿ ಬರೆದಿತ್ತೆಂದು ಕಾಣುತ್ತದೆ. ನನಗಿಂತ ನಾಲ್ಕಾರು ವರ್ಷ ದೊಡ್ಡವನಿದ್ದ ಆತನ ಮುಖದ ಮೇಲೆ ಮೀಸೆಯಂಥ ಗಡ್ಡದಂಥ ರೋಮಗಳು ಈಗಾಗಲೆ ಮೂಡಿದ್ದುವು. ಮುಳುಗಲಿರುವ ಸೂರ್ಯಕಿರಣಗಳು ಈ ಮೂಲಕ ಹಾದು ವಿಚಿತ್ರ ಕಳೆಗಟ್ಟಿ ಹೊಸ ಜಗತ್ತಿನ ಪ್ರವಾದಿಯಂತೆ ಆತ ಕಾಣಿಸುತ್ತಿದ್ದ. ಆಕಾಶದ ಕಡೆ ನೋಡುತ್ತಿದ್ದ ಅವನ ಮನಸ್ಸಿನಲ್ಲಿ ಯಾವ ವಿಚಾರಗಳಿರಬಹುದು ಎಂದು ಯೋಚಿಸಿದಷ್ಟೂ ನನಗೆ ಬಗೆಹರಿಯಲಿಲ್ಲ. ಊರು ಬಿಟ್ಟು ಓಡಿಹೋಗುತ್ತಿರುವುದಕ್ಕೆ ಆತ ಪಶ್ಚಾತ್ತಾಪ ಪಡುತ್ತಿರಬಹುದೆ? ಮಂಗಳೂರೋ ಉಡುಪಿಯೋ ತಲುಪಿ ಯಾರಿಗಾದರೂ ಆತ ನನ್ನನ್ನು ಮಾರಿಬಿಡಬಹುದೆ? ರಾತ್ರಿಯ ಊಟ, ನಿದ್ರೆಗಳ ಕುರಿತು ಅವನ ಯೋಚಿಸುತ್ತಿರಬಹುದೆ? ದಾಮುವಿನ ನಿಜವಾದ ಆಂತರ್ಯವನ್ನು ತಿಳಿಯದೆ ನಾನು ಕಳವಳಗೊಂಡೆ. ಮಾತಿನಿಂದಲೂ ಅವನನ್ನು ತಿಳಿಯುವಂತಿಲ್ಲ ಮೌನದಿಂದಲೂ ಅವನನ್ನು ತಿಳಿಯುವಂತಿಲ್ಲ ಎಂದ ಮೇಲೆ ಈ ನಿಗೂಢ ಮಾನವನೊಂದಿಗೆ ವ್ಯವಹರಿಸುವುದಾದರೂ ಹೇಗೆ ಕತ್ತಲೆಗೆ ಮೊದಲೆ ಮನಸ್ಸು ಬದಲಿಸಿ ಮನೆಗೆ ಮರಳುವ ತೀರ್ಮಾನವನ್ನು ಅವನು ಕೈಗೊಳ್ಳಬಹುದು ಎಂಬ ಒಂದು ಕ್ಷೀಣವಾದ ಆಸೆ ನನ್ನೊಳಗೆ ಇತ್ತು.
ಆದರೆ ಈ ಆಸೆಯ ಕುತ್ತಿಗೆ ಹಿಚುಕುವವನಂತೆ ದಾಮು ದೋಣಿಯಿಂದಿಳಿದು, ಅಂಬಿಗನ ಕೂಲಿ ಸಂದಾಯಿಸಿ ಬೇಗ ಬೇಗ ನಡೆಯುವಂತೆ ನನ್ನನ್ನು ಒತ್ತಾಯಿಸತೊಡಗಿದ. ನಮ್ಮನ್ನು ತಕ್ಷಣವೆ ಹೊಳೆ ಹಾಯಿಸದಿದ್ದ ಅಂಬಿಗ ಈ ನಾಟಕದ ಖಳನಾಯಕನಾಗಿದ್ದ. ಅದರ ಸಿಟ್ಟನ್ನು ನನ್ನ ಮೇಲೆ ತೀರಿಸಿಕೊಳ್ಳಬೇಕು. ಆದರೆ ಪೂರ್ತಿಯಾಗಿ ನನ್ನನ್ನು ದೂರೀಕರಿಸಲೂಬಾರದು ಎಂಬ ಮಧ್ಯದ ನಿಲುವಿನಿಂದ ದಾಮು ರೇಗಿ ಮಾತಾಡತೊಡಗಿದ. “ಇಷ್ಟು ಹೊತ್ತು ನಾವು ಆಚೆಯ ದಡದಲ್ಲಿ ಕಾಯದೆ ಇದ್ದರೆ ಈಗಾಗಲೆ ಎರಡು ಮೈಲಿ ಕ್ರಮಿಸಬಹುದಾಗಿತ್ತು. ಆ ದೋಣಿ ನಡೆಸುವವನಿಗೆ ತಲೆ ಸರಿಯಿಲ್ಲ, ಅವನ ದೋಣಿಯಂತೆ ಅವನ ತಲೆ ಕೂಡ ತೂತೆಂದು ಕಾಣಿಸುತ್ತದೆ. ಒಂದು ದಿನ ಖಂಡಿತವಾಗಿಯೂ ಆತ ದೋಣಿಯನ್ನು ನಡುನೀರಿ ನಲ್ಲಿ ಮುಳುಗಿಸದೆ ಇರೋದಿಲ್ಲ. ನೀನಿದ್ದುದರಿಂದ ನಾನು ದೋಣಿಗೆ ಕಾದೆ. ಇಲ್ಲದಿದ್ದರೆ ರೈಲುಸಂಕದಲ್ಲೆ ನಡೆದುಬಿಡಬಹುದಾಗಿತ್ತು. ಆದರೆ ಸಂಕ ಎಂದರೇ ನೀನು ಗಡಗಡ ನಡುಗುತ್ತೀಯಾ? ನಿನ್ನನ್ನು ಒಮ್ಮೆ ದಾಟಿಸಬೇಕಾದರೇ ನನಗೆ ಸಾಕು ಸಾಕಾಯಿತು. ಇನ್ನಾದರೂ ನಡೆ; ರಾತ್ರಿಗೆ ಮೊದಲು ಪೇಟೆ ಸೇರಬಹುದು. ನೀನೇನು ಪುಳ್ಚಾರು ತಿಂದು ಕಾಲಿನ ಮೂಳೆಗೆ ತ್ರಾಣವಿಲ್ಲದವನು. ನೋಡು, ನಾನು ಕಾಲು ಹಾಕುವ ಹಾಗೆ ಹಾಕು. ಎಂದಾದರೂ ಪುಟ್ ಬಾಲ್ ಆಡಿದ್ದೀಯಾ? ಪುಟ್ ಬಾಲ್ ಆಡಿದರೆ ಕಾಲಿನ ಸ್ನಾಯುಗಳು ಗಟ್ಟಿ ಯಾಗುತ್ತವೆ. ಲಂಗ್ಸ್ ದೊಡ್ಡದಾಗುತ್ತವೆ. ಕೋಣೆಯೊಳಗೆ ಕುಳಿತು ಪಾಠ ಉರು ಹೊಡೆದದ್ದರಿಂದ ಏನು ಬಂತು? ಬದುಕು ಮುಖ್ಯ ಕಣೋ ಡೆಂಬಣ್ಣ! ಬದುಕು ಮುಖ್ಯ ಈಗಲಾದರೂ ಬದುಕೋದು ಹೇಗೆ ಎಂಬುದನ್ನು ನಿನಗೆ ಕಲಿಸ್ತೇನೆ. ಏನೂ ಬೇಜಾರುಪಟ್ಟುಕೋಬೇಡ. ಸ್ವಲ್ಪ ಈ ಚೀಲ ಹಿಡಕೊ ನೋಡೋಣ” ಎಂದು ದಾಮು ಅವನ ಚೀಲವನ್ನು ನನಗೆ ರವಾನಿಸಿದ – ಚಡ್ಡಿಯನ್ನು ಮೇಲಕ್ಕೆ ಎಳೆದು ಕಟ್ಟುವ ನೆಪದಲ್ಲಿ. ದೋಣಿಯಿಂದ ನಮ್ಮ ಜತೆ ಇಳಿದವರೊಬ್ಬರು ಹಿಂದಿನಿಂದ ಬಂದು ನಮ್ಮನ್ನು ಕೂಡಿಕೊಂಡರು. “ಎಲ್ಲಿಗೆ ಹೋಗುವವರು ನೀವು?” ಎಂದು ವಿಚಾರಿಸಿದರು. ನಾನು ದಾಮುವಿನ ಮುಖ ನೋಡಿದೆ ಅವನು ” ಇಲ್ಲೇ ಪಕ್ಕದ ಊರಿಗೆ ಒಂದು ಎಮ್ಮೆ ನೋಡಿಕೊಂಡು ಬರೋದಕ್ಕೆ” ಎಂದು ಉತ್ತರಿಸಿದ. ನಮ್ಮ ಜತೆ ಯಾರೂ ಬರುವುದು ನಮಗೆ ಬೇಕಿರಲಿಲ್ಲ. ಅದ್ದರಿಂದ ಇಬ್ಬರೂ ಮೂತ್ರ ಮಾಡಲೆಂದು ದಾರಿಯ ಪಕ್ಕದಲ್ಲಿ ಕುಳಿತೆವು. ನಮ್ಮ ಜತೆ ಇದ್ದವರು ಮುಂದೆ ನಡೆದು ಹೋದರು. ಅವರೂ ನಮ್ಮ ಹಾಗೆಯೆ ಕುಳಿತುಬಿಟ್ಟಿದ್ದರೆ ಏನು ಮಾಡುತ್ತಿದ್ದೆವೋ ತಿಳಿಯದು!
ಬೆಳಗಿನಿಂದಲೂ ನಾವು ಎಷ್ಟು ದೂರವನ್ನು ಕ್ರಮಿಸಿದ್ದವೋ ತಿಳಿಯದು. ದಾರಿಯಲ್ಲಿ ಒಂದು ಹೊಟೇಲಿನಲ್ಲಿ ದೋಸೆ, ಕಾಫ಼ಿ ಸೇವಿಸಿದ್ದೊಂದೇ ಅಂದು ಹೊಟ್ಟೆಗೆ ಹೋದ ಆಹಾರ. ನಾನೆಂದೂ ಒಂದು ದಿನದಲ್ಲಿ ಇಷ್ಟು ದೂರ ನಡೆದವನಲ್ಲ. ಊರ ಸಮಗಾರನಿಂದ ಕೊಂದ ನನ್ನ ಹಳೆಯ ಚಪ್ಪಲಿಗಳ ಹಿಮ್ಮಡಿ ಸವೆದು ಕಾಲಿನ ಚರ್ಮವೇ ಚಪ್ಪಲಿಯಾಗಿತ್ತು! ದಾರಿಯ ಕೆಂಪು ಧೂಳು ಮೊಣ ಕಾಲ ತನಕ ತುಂಬಿ ಅದರೆಡೆಯಿಂಡ ಸೂಸುತ್ತಿದ್ದ ಬೆವರಿಗೆ ವಿಚಿತ್ರವಾದ ವಿನ್ಯಾಸವೊಂದು ರೂಪಿತವಾಗಿತ್ತು. ನಾನು ಮಣ್ಣಿನ ಮಗನಾಗಿ ಹುಟ್ಟಿದ್ದರೂ ಮಣ್ಣಿನೊಂದೊಗೆ ಇಂಥ ನಿಕಟತಮ ಸಂಬಂಧ ನನಗೆ ಇದು ತನಕ ಅನುಭವವಾಗಿರಲಿಲ್ಲವೆಂದೇ ಹೇಳಬೇಕು. ಅಪರೂಪಕ್ಕೆ ಸಂಚರಿಸುವ ಮೋಟಾರುಗಳೆಬ್ಬಿಸಿದ ಧೂಳು ತಲೆಗೂದಲ ಮೇಲೆ ಹರಡಿತ್ತು. ನಮ್ಮ ಮಾರ್ಗದಲ್ಲಿ ಹೋಗುತ್ತಿದ್ದ ಎತ್ತಿನ ಗಾಡಿ ಯವರನ್ನು ನಮ್ಮನ್ನು ಗಾಡಿಯಲ್ಲಿ ತುಸುದೂರ ಒಯ್ಯಬಹುದೇ ಎಂದು ವಿನಂತಿಸಿಕೊಂಡವು. ಯಾರೂ ನಮ್ಮ ವಿನಂತಿಯನ್ನು ಮನ್ನಿಸಲಿಲ್ಲ. ಆಗಾಗ ನಮ್ಮ ಮಾರ್ಗ ರೈಲು ಹಾದಿಗೆ ಸಮಾನಾಂತರವಾಗಿ ಸಾಗುತ್ತಿತ್ತು. ಕೆಲವೊಮ್ಮೆ ಪಡುವಣ ಸಮುದ್ರ ಕಣ್ಣಿಗೆ ಬೀಳುತ್ತಿತ್ತು. ಹೀಗೆ ಕಾಲೆಳೆಯುತ್ತ ನನಗೆ ತಟ್ಟನೆ, ” ನಾವೆಲ್ಲಿಂದ ಬಂದೆವು? ಎಲ್ಲಿಗೆ ಹೋಗುತ್ತಿದ್ದೇವೆ? ಯಾಕೆ ಹೋಗುತ್ತಿದ್ದೇವೆ? ” ಎಂಬ ಪ್ರಶ್ನೆಗಳು ಹೊಳೆದುವು. ಅವು ಪ್ರಶ್ನೆಗಳಾಗಿರದೆ ಕೈ ಮೈ ತುಂಬಿಕೊಂಡು ಗಾಢವಾದ ರೂಪುಗಳಂತೆ ತೋರಿದುವು. ಉತ್ತರಕ್ಕಾಗಿ ಅವು ಪೀಡಿಸುತ್ತಿದ್ದುವು.
ಮೊದಲು ನಾನು ಸಿಗರಎಟು ಸೇದುತ್ತಿರುವುದನ್ನು ತಂದೆ ಪತ್ತೆ ಹಚ್ಚಿದರು. ನಂತರ ಸಂತೆಯ ಖರ್ಚಿಗೆಂದು ನೂರು ರೂಪಾಯಿಯ ನೋಟನ್ನು ಹತ್ತರದೆಂದು ಭ್ರಮಿಸಿ , ಪೆಟ್ಟಿಗೆ ಯಿಂದ ನಾನು ಕದ್ದುದನ್ನು ಪತ್ತೆ ಹಚ್ಚಿದರು. ಇದೆಲ್ಲಕ್ಕಿಂತ ಗಂಭೀರವಾದ ಸಂಗತಿಯೇ ಮೂರನೆಯದು. ಮಡಿವಾಳ ಸಂಜೀವನ ಪುತ್ರಿ ಸೇವಂತಿಯೆಂಬವಳು ಮೀಯುವ ತಾವನ್ನು ಕಂಡು ಹುಡುಕಿದ ದಾಮು ಒಂದು ರಹಸ್ಯವನ್ನು ತೋರಿಸುತ್ತೇನೆಂದು ನನ್ನನ್ನು ಅಲ್ಲಿಗೆ ಕರೆದೊಯ್ದ. ಇಬ್ಬರೂ ಮರವೊಂದನ್ನು ಹತ್ತಿ ಗುಪ್ತವಾಗಿ ಸೇವಂತಿಯ ಮಜ್ಜನವನ್ನು ನೋಡಿ ಆನಂದಿಸಿದೆವು. ನಮಗೇನಾದರೂ ಕಾಣುತ್ತಿತ್ತೆಂದಲ್ಲ. ಕಣ್ಣಿನ ನೋಟಕ್ಕಿಂತ ಕಲ್ಪನೆಯ ನೋಟವೇ ಪ್ರಬಲವಾಗಿತ್ತು ಎನ್ನಬಹುದು. ಈ ನಮ್ಮ ಹವ್ಯಾಸ ಸೇವಂತಿಯ ಹಿರಿಯರಿಗೆ ಹೇಗೆ ತಿಳಿಯಿತೆಂಬುದು ಇನ್ನೂ ನನಗೆ ಬಿಡಿಸಲಾರದ ಒಗಟಾಗಿಯೇ ಇದೆ – ಗೂಢಚಾರರ ಹಿಂದೆ ಗೂಢಚಾರರಿರುವಂತೆ ನಮಗಾಗದವರು ಯಾರೋ ನಮ್ಮ ಬೆನ್ನ ಹಿಂದೆ ಇದ್ದಿರಲೇಬೇಕು ಸಿಗರೇಟಿನ ಅವಮಾನವನ್ನಾಗಲಿ, ಹಣ ಕದ್ದ ಅವಮಾನವನ್ನಾಗಲಿ ಸಹಿಸಬಹುದು. ಆದರೆ ಈ ಮೂರನೆ ಅವಮಾನವನ್ನು ಹೇಗೆ ಸಹಿಸುವುದು? ಈ ಅವಮಾನಕ್ಕೆ ತಾಯಿಯ ಕ್ಷಮೆ ಕೂಡಾ ಸಿಗಲಾರದು. ಈ ಮೂರೂ ಪಾಪಕೃತ್ಯಗಳಿಗೆ ಪ್ರೇರಣೆ ದಾಮುವೇ ಆಗಿದ್ದರೂ, ನಾನು ಮತ್ತೆ ಅವನ ಜತೆಯಲ್ಲೆ ಊರು ಬಿಡಲು ಮನಸ್ಸು ಮಾಡಿದೆನಲ್ಲ! ಈ ವಿಪರ್ಯಾಸಕ್ಕೆ ಏನು ಹೇಳಲಿ? ಶಾಲೆಯ ಸಮೀಪದ ಗೇರು ಮರದಲ್ಲಿ ಕುಳಿತುಕೊಂಡೇ ನಾವು ಈ ಪಲಾಯನದ ಯೋಜನೆಯನ್ನು ಹಾಕಿದುದು.”ನಾವು ಊರನ್ನು ಬಿಡುವುದಲ್ಲ, ಊರೇ ನಮ್ಮನ್ನು ಬಿಡುವುದು” ಎಂಬುದಾಗಿ ದಾಮು ನಮ್ಮ ಕಾರ್ಯಕ್ರಮಕ್ಕೆ ತಾತ್ವಿಕ ನೆಲೆಗಟ್ಟನ್ನು ಹಾಕಿದ. ಗೆಳೆಯರಿಗೆ, ಅಧ್ಯಾಪಕರಿಗೆ, ತಂದೆತಾಯಿಯರಿಗೆ, ಇಡಿಯ ಊರಿಗೇ ಬೇಡವಾದ ಮೇಲೆ ನಾವಿನ್ನು ಇಲ್ಲಿದ್ದು ಏನು ಮಾಡಬೇಕಾಗಿದೆ. ಯಾವ ಪುರುಷಾರ್ಥ ಸಾಧಿಸಬೇಕಾಗಿದೆ ಎಂದು ಮರುಗಿದೆವು. ಆ ವರ್ಷ ನಮಗೆ ಪಬ್ಲಿಕ್ ಪರೀಕ್ಷೆ. ಇದನ್ನು ಅಧ್ಯಾಪಕರು ನಮಗೆ ನೆನಪು ಮಾಡದ ಹೀರಿಯಡುಗಳೇ ಇಲ್ಲವೆಂದರೂ ಸರಿ. ನಮ್ಮ ಪಲಾಯನ ಇವೆಲ್ಲ ಸಮಸ್ಯೆಗಳಿಗೂ ಒಂದು ಸಮರ್ಪಕವಾದ ಉತ್ತರದಂತೆ ಅನಿಸಿತು. ಯಕ್ಷಗಾನ ಪಟುವಾದ ದಾಮು ಕೇವಲ ತನ್ನ ಶಬ್ದ ಸಾಮರ್ಥ್ಯದಿಂದ ಒಂದು ಅದ್ಭುತ ಪ್ರಪಂಚವನ್ನು ನನ್ನ ಮುಂದೆ ನಿರ್ಮಿಸಬಿಟ್ಟಿದ್ದ. ನಾವು ಸಂಚರಿಸುವ ಜಾಗದಲ್ಲಿ ಅಲ್ಲಲ್ಲಿ ಹಸಿರು ಬಯಲುಗಳು, ಬೆಟ್ಟಗುಡ್ಡಗಳು, ಮುಂದೆ ವಿಂಧ್ಯಾಟವಿ, ತೊರೆಗಳು, ಝರಿಗಳು, ಸುಂದರವಾದ ತಂಗುದಾಣಗಳು, ಅಡುಗೂಲಜ್ಜಿಯ ಮನೆಗಳು, ಅದೇರೀತಿ ಅತ್ಯಾಧುನಿಕ ನಗರಗಳು, ವಾಹನಗಳು, ಜಗಜಗಿಸುವ ದೀಪಗಳು, ರುಚಿಕರವಾದ ತಿಂಡಿಗಳು, ಸುಂದರಿ ಹೆಣ್ಣುಗಳು ಇತ್ಯಾದಿ ಇತ್ಯಾದಿ. ಈ ಜಗತ್ತಿನಲ್ಲಿ ಇತಿಹಾಸವೂ ವರ್ತಮಾನವೂ ಒಂದನ್ನೊಂದು ಪ್ರೀತಿಯ ಆಲಿಂಗನದಲ್ಲಿ ಹೊಸೆದುಕೊಂಡಿದ್ದುವು. ಇಂಥ ಜಗತ್ತಿನ ಕಳ್ಳಕಾಕರು, ತಲೆಹಿಡುಕರು, ದರೋಡಕೋರರು, ಎಲ್ಲರೂ ಮೆಚ್ಚಬಹುದಾದ ಅದ್ಭುತರಮ್ಯ ವ್ಯಕ್ತಿಗಳು. ಹಸಿವಾದಲ್ಲಿ ಹಿಡುಗೂಳಿನ ಮನೆಗಳು, ಸುಸ್ತಾದಲ್ಲಿ ಸತ್ರಗಳು, ಬಿಸಿಲಾದಲ್ಲಿ ಮರಗಳು, ಹಣ್ಣುಗಳು, ಬಾವಿಗಳು, ತೋಳಿಗೆ ಬಂದು ಬೀಳುವ ಹೆಣ್ಣುಗಳು! ಆಹಾ! ಕಲ್ಪನೆಯೆ!
ಯಕ್ಷಗಾನ ಬಯಲಾಟಗಳಲ್ಲಿ ನಾನು ನೋಡಿದ್ದ ಪಾಂಡವರ ಮಹಾಪ್ರಸ್ಥಾನದ ಪ್ರಸಂಗ ನನಗೆ ನೆನಪಾಯಿತು. ಈ ಪ್ರಸಂಗದಲ್ಲಿ ಮೊದಲು ದ್ರೌಪದಿ, ನಂತರ ಸಹದೇವ, ನಂತರ ನಕುಲ ಒಬ್ಬೊಬ್ಬರಾಗಿಯೆ ನಡೆಯಲಾರದೆ ದಾರಿಯಲ್ಲಿ ಬಿದ್ದು ಸಾಯುತ್ತಾರೆ. ಕೊನೆಗೆ ಉಳಿಯುವವನು ಧರ್ಮರಾಯನೊಬ್ಬನೆ. ಹಾಗೂ ಅವನ ಜತೆಯಲ್ಲೊಂದು ನಾಯಿ. ನಮ್ಮ ಸದ್ಯದ ಪ್ರಸ್ಥಾನದಲ್ಲಿ ಧರ್ಮರಾಯನಂತೆ ಉಳಿಯುವವನು ದಾಮುವೆಂಬುದರಲ್ಲಿ ನನಗೆ ಸಂದೇಹವಿರಲಿಲ್ಲ. ಅಸತ್ಯವಂತನಾದ ಕುಂಜರೋಡಿ ದಾಮೋದರನಿಗೂ ಸತ್ಯವಂತನಾದ ಧರ್ಮರಾಯನಿಗೂ ಅಪೂರ್ವ ವಾದ ಹೋಲಿಕೆಯೊಂದನ್ನು ನಾನು ಕಂಡುದು ಹೀಗೆ! ಆದರೆ ನಾನು ದಾರಿಯಲ್ಲಿ ಬಿದ್ದು ಸಾಯುವ ಗುಂಪಿನವನೋ ಅಥವಾ ಧರ್ಮರಾಯನನ್ನು ಸ್ವರ್ಗದ ತನಕ ಹಿಂಬಾಲಿಸುವ ನಾಯಿಯೋ ಎಂಬುದು ನನಗೆ ಸ್ಪಷ್ಟವಾಗಿರಲಿಲ್ಲ. ಇಂಥ ಚಿಂತೆಗೆಳು ಯಕ್ಷಗಾನವನ್ನು ಅತಿಯಾಗಿ ನೋಡುವುದರಿಂದ ಹುಟ್ಟುತ್ತವೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ.
ಈಗ ನಾವು ಸಮುದ್ರಕ್ಕೆ ಸಮಾನಾಂತರವಾಗಿ ಹೋಗುತ್ತಿದ್ದೆವು. ಸಂಜೆಯ ಸೂರ್ಯಗೋಲ ಸಮುದ್ರದ ನೀರಿನಲ್ಲಿ ಮುಳುಗುವ ಅದ್ಭುತವಾದ ದೃಶ್ಯ ನಮ್ಮ ಕಣ್ಣಿಗೆ ಬಿತ್ತು. ಇದು ಕವಿ, ಕಲಾವಿದ, ತತ್ತ್ವಜ್ಞಾನಿ ಹಾಗೂ ಸಾಹಸಿ ಎಲ್ಲವೂ ಆಗಿರುವ ದಾಮುವಿನ ಸ್ಫೂರ್ತಿಯನ್ನು ಕೆರಳಿಸದಿರುತ್ತದೆಯ? “ಈ ಸಂಜೆ ಎಷ್ಟು ದಿವ್ಯವಾಗಿದೆ ಅಲ್ಲವಾ? ಆ ಹಾಳೂರಲ್ಲಿ ಕುಳಿತಿರುತ್ತಿದ್ದರೆ ಇಂಥ ದೃಶ್ಯವನ್ನು ಎಂದಾದರೂ ಕಾಣುವ ಭಾಗ್ಯ ನಿನಗೆ ಬರುತ್ತಿತ್ತೆ ಡೆಂಬಣ್ಣ? “ಎಂದು ಅವನು ಮತ್ತೆ ಮಾತಿಗಾರಂಭಿಸಿದ. ನನಗೆ ಕಾಲು ನೋಯುತ್ತಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. ಈ ಗುರಿಯಿಲ್ಲದ ಪ್ರಯಾಣ ಒಮ್ಮೆ ಮುಗಿದರೆ ಸಾಕು ಎನಿಸುತ್ತಿತ್ತು. “ನಾವು ಊಟ ಮಾಡುವುದೆಲ್ಲಿ? ರಾತ್ರಿ ಮಲಗುವುದೆಲ್ಲಿ?” ಎಂದು ಕೊನೆಗೂ ಧೈರ್ಯಮಾಡಿ ದಾಮುವನ್ನು ಕೇಳಿಯೇಬಿಟ್ಟೆ. “ನೀನೇನೂ ಹೆದರಬೇಡ. ಎಲ್ಲ ನಾನು ನೋಡಿಕೊಳ್ಳುತ್ತೇನೆ. ಸಂಜೆಯಲ್ಲಿ ನಡೆಯೋದು ಕಷ್ಟವಲ್ಲ. ಆದಷ್ಟು ನಡೆದೇ ಬಿಡೋಣ” ಎಂದ. ಏನು ಇವನ ಕಾಲುಗಳು ಕಬ್ಬಿಣದಿಂದ ಮಾಡಿದುವೆ? ಹಸಿವೆ, ಬಾಯಾರಿಕೆ ಎಂಬುದು ಇವನನ್ನು ಕಾಡುವುದಿಲ್ಲವೆ? ಎಂಬ ಪ್ರಶ್ನೆಗಳೆದ್ದುವು ನನ್ನ ಮನಸ್ಸಿನಲ್ಲಿ. ನನ್ನೆದುರಿಗೆ ಹುಸಿ ಧೈರ್ಯ ಸಾಹಸಗಳನ್ನೀತ ತೋರುತ್ತಿದ್ದಾನೆ ಎನಿಸದಿರಲಿಲ್ಲ. ದಾಮು ಎಷ್ಟಾದರೂ ನಟ. ಯಕ್ಷಗಾನ ತಾಳಮದ್ದಳೆಗಳ ಅನುಭವವಿದ್ದವನು ಕೊಂದೇನೆಂದರೂ ನಾನಿನ್ನು ಸತ್ತಿಲ್ಲ ಎಂದು ಕೂಗಾಡುವ ಹಟದವನು. ಬಾಲ್ಯದಿಂದಲೆ ಅವನ ದೇಹ ಬೆಳೆಯುತ್ತಿತ್ತಲ್ಲದೆ ಬುದ್ಧಿ ಬೆಳೆಯುತ್ತಿರಲಿಲ್ಲ ಎಂದು ಮೇಷ್ಟ್ರುಗಳ ಅಭಿಪ್ರಾಯ. ಬುದ್ಧಿ ಮತ್ತು ದೇಹಕ್ಕೆ ವಿಲೋಮ ಅನುಪಾತವೆ? ನನಗೆ ತಿಳಿಯದು. ಸಣ್ಣ ದೇಹದ ನನಗೆ ಹೆಚ್ಚಿನ ಬುದ್ಧಿಯಿತ್ತೆಂದು ನಾನೇನೂ ಅಂದುಕೊಂಡಿರಲಿಲ್ಲ.
ಸೂರ್ಯಾಸ್ತಮಾನವಾಗಿ ತುಸು ಹೊತ್ತು ಪಸರಿಸಿದ್ದ ಇಳಿ ಬೆಳಕೂ ನೋಡ ನೋಡುತ್ತಿದ್ದಂತೆ ಕತ್ತಲಲ್ಲಿ ಕರಗಿತು. ದಾರಿ ಬದಿಯ ಅಂಗಡಿಗಳ ಮಿಣುಕು ದೀಪಗಳು ಕಾಣಿಸಿದುವು. ಇನ್ನು ಕಾದರೆ ನಮಗೆ ಏನೂ ದೊರಕಲಾರದೆಂಬ ಗಾಬರಿಯಿಂದ ಒಂದು ಅಂಗಡಿಗೆ ಹೋಗಿ ಸೋಡಾ ಕುಡಿದು ಎರಡು ಪಾದ ಬಾಳೇಹಣ್ಣುಗಳನ್ನುಕೊಂಡೆವು. ಇಲ್ಲೆಲ್ಲಾದರೂ ಊಟದ ಹೊಟೆಲು ಇದೆಯೇ ಎಂದು ವಿಚಾರಿಸಿದೆವು. ಎರಡು ಮೈಲಿ ಮುಂದೆ ಇದೆಯೆಂದು ಗೊತ್ತಾಯಿತು. ಆದರೆ ನಾವು ನಡೆದು ತಲುಪಿದಾಗ ಹೋಟೆಲು ತೆರೆದಿರುತ್ತದೆಯೆಂಬ ಭರವಸೆಯೇನೂ ಇರಲಿಲ್ಲ. ಈ ಕಡೆಯಿಂದ ಹೋಗುವ ಒಂದು ಬಸ್ಸಿದೆ. ಸ್ವಲ್ಪ ಹೊತ್ತಿನಲ್ಲಿ ಎಂದು ಅಂಗಡಿಯವನೆಂದ. ಬಸ್ಸಿನಲ್ಲಿ ಹೋಗುವ ಕಾರ್ಯಕ್ರಮ ನಮ್ಮದಾಗಿರಲಿಲ್ಲ. ಸಾಕಷ್ಟು ಹಣವನ್ನು ಎತ್ತಿಕೊಂಡು ಬರುವಂತೆ ದಾಮು ನನ್ನನ್ನು ಪ್ರೇರೇಪಿಸಿದ್ದರೂ ಹತ್ತು ಹನ್ನೆರಡು ರೂಪಾಯಿಗಳಿಗಿಂತ ಹೆಚ್ಚು ಹಣ ನನ್ನ ಕೈ ಸೇರಲಿಲ್ಲ. ಇದರಿಂದಾಗಿ ದಾಮು ನನ್ನ ಮೇಲೆ ಕೋಪಿಸಿಕೊಂಡಿದ್ದಾನೆಂಬುದು ನನಗೆ ಗೊತ್ತಿತ್ತು. ಆದರೆ ನನ್ನ ಕಳವಿನ ಪ್ರಕರಣ ಬೆಳಕಿಗೆ ಬೆಂದಮೇಲೆ ತಂದೆ ಅತ್ಯಂತ ಜಾಗರೂಕರಾಗಿದ್ದರು. ಏನೇ ಇದ್ದರೂ ನಾವು ನಡೆದೇ ದಾರಿ ಸಾಗುವುದು ಎಂಬ ತೀರ್ಮಾನಕ್ಕೆ ಬಂದೆವು. ಈಗ ನಾವು ನಡೆಯುತ್ತಿದ್ದುದು ದೊಡ್ಡ ಮರಗಳ ನಡುವಿನ ಹಾದಿ. ನಕ್ಷತ್ರಗಳ ಬೆಳಕು ಕೂಡ ಬೀಳದಂಥ ಕತ್ತಲು. ದಾಮುವಿನ ಮಾತಿಗೆ ಹಾಂ ಹೂಂ ಎನ್ನುವ ಶಕ್ತಿ ಕೂಡ ನನ್ನಲ್ಲಿ ಇರಲಿಲ್ಲ.
ಎಷ್ಟು ನಡೆದರೂ ನಾವು ಹುಡುಕುತ್ತಿದ್ದ ಹೋಟೆಲು ನಮಗೆ ಸಿಗಲಿಲ್ಲ. ಕೊನೆಗೆ ಒಂದು ಅಂಗಡಿಯ ಚಾವಡಿಯನ್ನು ರಾತ್ರಿ ಮಲಗಿಕೊಳ್ಳುವುದಕ್ಕೆ ಆರಿಸಿಕೊಂಡೆವು. ನನಗೆ ವಿಪರೀತವಾದ ದಾಹ. ಹಸಿವು, ಆಯಾಸ, ಜೊಂಪು. ದಾಮು ಹೇಳುತ್ತಿದ್ದ: “ಡೆಂಬಣ್ಣ ! ಬಾಳೆಹಣ್ಣಿನ ನಿಜವಾದ ರುಚಿ ಹತ್ತುವುದು ಈಗ ನೋಡು. ಈ ಪೇಟೆಯ ಹಣ್ಣಿನ ರುಚಿ ಹಳ್ಳಿಯ ಹಣ್ಣಿಗೆ ಎಲ್ಲಿಂದ ಬರಬೇಕು? ಎಲ್ಲಿ ತೆಗೆ ನೋಡೋಣ.” ಸಾಕಷ್ಟು ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡೆವು. ನೀರು? ನೀರಿನ ಪ್ರಶ್ನೆಯೇ ಇರಲಿಲ್ಲ. ಅಡುಗೊಲಜ್ಜಿಯ ಮನೆಗಳೆಲ್ಲಿ? ಸಿಹಿನೀರಿನ ಬಾವಿಗಳೆಲ್ಲಿ? ಮೆತ್ತಗಿನ ಹಾಸಿಗೆಗಳೆಲ್ಲಿ? ನಾವಿದ್ದ ಜಾಗ ಮಾರ್ಗದ ಧೂಳಿನಿಂದ, ಅಂಗಡಿಯ ಕಸದಿಂದ ತುಂಬಿಕೊಂಡಿತ್ತು. ಅಲ್ಲೇ ಕಾಲು ಚಾಚಿದೆವು. ಇಲ್ಲಿಯ ತನಕ ದಾಮುವಿನ ಚೀಲವನ್ನೂ ನಾನೇ ಹೊತ್ತು ತಂದಿದ್ದೆ. ಈಗ ಅದನ್ನು ತೆಗೆದು ತಲೆದಿಂಬಾಗಿ ಅವನು ಮಾಡಿಕೊಂಡ. ಅವನ ಶಿಷ್ಯನಂತೆ ನಾನೂ ನನ್ನ ಚೀಲವನ್ನು ತಲೆಯ ಕೆಳಗೆ ಮಡಗಿಕೊಂಡೆ.
ನಾವು ಮಲಗಿದ ಒಂದೆರಡು ನಿಮಿಷಗಳಲ್ಲೆ ದೊಡ್ಡ ದೊಡ್ಡ ಸೊಳ್ಳೆಗಳು ಸದ್ದು ಮಾಡುತ್ತ ನಮ್ಮನ್ನು ಆಕ್ರಮಿಸತೊಡಗಿದುವು. ಚೀಲದಿಂದ ಬಟ್ಟೆಗಳನ್ನು ತೆಗೆದು ಹೊದದು ಕೊಂಡೆವಾದರೂ ಉಪಯೊಗವಾಗಲಿಲ್ಲ. ಆದರೆ ನನ್ನನ್ನು ಮುತ್ತುವಷ್ಟು ಸೊಳ್ಳೆಗಳು ದಾಮುವನ್ನು ಮುತ್ತುವಂತೆ ಅನಿಸಲಿಲ್ಲ. ಇವನ ಬೆವರಲ್ಲಿ ಸೊಳ್ಳೆ ನಿರೋಧಕ ರಾಸಾಯನಿಕವೇನಾದರೂ ಇದ್ದಿರಬಹುದೆ? ಎಲ್ಲ ರೀತಿಯಿಂದಲೂ ನಿಸರ್ಗವು ದಾಮುವಿನ ಪರವೂ ನನ್ನ ವಿರೋಧವೂ ಆಗಿ ವರ್ತಿಸುವಂತೆ ನನಗೆ ತೋರಿತು. ಇನ್ನು ಈ ರಾತ್ರಿ ನಿದ್ದೆಯಂತೂ ಇಲ್ಲವೆಂದುಕೊಂಡ. ಆದರೆ ಇಷ್ಟು ಸುಸ್ತಾದ ಮೇಲೆ ನಿದ್ರಿಸದೆ ಇರುವುದಾದರೂ ಹೇಗೆ? ಮತ್ತೆ ಮರುದಿನದ ಪ್ರಯಾಣ ಇದ್ದೇ ಇದೆಯಲ್ಲ! ಈ ಚಿಂತೆಗಳಿಂದ ನನ್ನ ಮನಸ್ಸನ್ನು ಬಿಡಿಸಿ ಕೊಳ್ಳಲು ನಾನು ಬೇರೆ ವಿಚಾರಗಳನ್ನು ಬಲವಂತವಾಗಿ ತರಲು ಪ್ರಯತ್ನಿಸಿದೆ. ನಾವು ಆಶ್ರಯ ಕೋರಿ ಬಂದಿದ್ದ ಅಂಗಡಿಯ ಬಗ್ಗೆ ಮನಸ್ಸನ್ನು ಹರಿಯಿಸಿದ. ಅದೊಂಡು ಜೀನಸಿನ ಅಂಗಡಿಯೆಂಬುದು ಅಲ್ಲಿನವಾಸನೆಯಿಂದಲೆ ಗೊತ್ತಾಗುತ್ತಿತ್ತು. ಅದರ ಮಾಲಿಕನಿಗೆ ಬಕ್ಕತಲೆ. ಸುಮಾರು ನಲವತ್ತು ವಯಸ್ಸಿನವನು, ಬಹಳ ಪುಕ್ಕಲು ಸ್ವಭಾವದ ಆತನನ್ನು ಹೆದರಿಸಿ ಜನ ಸಾಮಾನುಗಳನ್ನು ಕಡ ತೆಗೆದುಕೊಂಡು ಹೋಗುತ್ತಾರೆ. ಅದನ್ನು ಕೇಳಿ ವಾಪಸು ಪಡೆಯುವ ಧೈರ್ಯ ಅವನಿಗಿಲ್ಲ. ಅದ್ದರಿಂದಲೆ ಅಂಗಡಿ ಇಷ್ಟು ಜೀರ್ಣಾವಸ್ಥೆಯಲ್ಲಿದೆ, ಇತ್ಯಾದಿಇತ್ಯಾದಿ. ನನ್ನ ಮನಸ್ಥಿತಿಯನ್ನು ಅರ್ಥಮಾಡಿಕೊಂಡವನಂತೆ ದಾಮು, ಈ ಜಾಗದ ಬಗ್ಗೆ ಚಿಂತಿಸಿ ಏನು ಉಪಯೋಗ, ಡೆಂಬಣ್ಣ, ಇದೇನು ನಮ್ಮ ಖಾಯಂ ವಾಸಸ್ಥಳವೆ, ಮನೆಯ, ಮಠವೆ? ನಾಳೆ ನಸುಕಿನಲ್ಲಿ ಎದ್ದು ಹೊರಡುವವರು ನಾವು. ಈ ಗೋಡೆಗಳ ಬಣ್ಣ ಕೊಡ ತಿಳಿಯುವವರಲ್ಲ. ನಾಳೇ ಸಂಜೆ ಹೊತ್ತಿಗೆ ಯಾವುದಾದರೂ ಪೇಟೆ ಸೇರುತ್ತೇವೆ. ಆಗ ಸುಖವಾಗಿ ಸ್ನಾನ, ಊಟ ಮುಗಿಸಿ ನಿದ್ದೆ ಮಾಡಬಹುದು. ಇಲ್ಲಿ ಇಷ್ಟು ಸೊಳ್ಳೆಗಳು ಯಾಕೆ ಗೊತ್ತೆ? ಹತ್ತಿರವೇ ಎಲ್ಲೊ ಗೊಬ್ಬರದ ಗುಂಡಿಯಿದೆ” ಎಂದು ಹೇಳಿ ನಂತರ ತಟ್ಟನೆ, “ಈಗ ಸೇವಂತಿ ಏನು ಮಾಡುತ್ತಿರಬಹುದು ಅಂತೀಯಾ?” ಎಂದು ಕೇಳಿದ. ಈ ವಿಷಯಾಂತರಕ್ಕೆ ನಾನು ತುಸುದಂಗಾಗಿ, “ನನಗೇನು ಗೊತ್ತು ಸೇವಂತಿ ಏನು ಮಾಡುತ್ತಾಳೇ ಅಂತ? ನಮ್ಮ ಹಾಗೆ ಧೂಳಿನಲ್ಲಿ ಹೊರಳುವುದಿಲ್ಲ ಖಂಡಿತ” ಎಂದು ತುಸು ನಿಷ್ಠುರವಾಗಿ ಹೇಳಿದೆ. “ಊಹಿಸು ನೋಡೋಣ” ಎಂದು ದಾಮು ಸವಾಲೆಸೆದ. “ಊಹಿಸಲಾರೆ, ಅವಳೇನು ಮಾಡುತ್ತಿದ್ದರೆ ನಮಗೇನು?” ಎಂದೆ. ಅದಕ್ಕವನು, ಅಯ್ಯೋ ನನ್ಮೇಲೆ ಯಾಕೆ ಸಿಟ್ಟಾಗ್ತೀಯಾ? ನಿನಗೆ ಗೊತ್ತೆ? ಕಾಸೆಸೆದವರಿಗೆ ಕಾಲೆತ್ತುವ ಜಾತಿ ಅದು. ಅದಕ್ಕೆ ನನ್ನಪ್ಪನೂ ಒಂದೇ ನಿನ್ನಪ್ಪನೂ ಒಂದೇ. ಈ ಹೊತ್ತಿಗೆ ಅವಳು ಯಾರಿಗಾದರೂ ಕಾಲೆತ್ತಿಯೇ ಎತ್ತಿರುತ್ತಾಳೇ. ಇಲ್ಲದಿದ್ದರೆ ಅಷ್ಟಕ್ಕೆ ನಿನ್ನಪ್ಪ ಯಾಕೆ ಮನೆ ಬಿಟ್ಟು ಹೋಗು ಎಂದು ದನ ಬಡಿದ ಹಾಗೆ ನಿನ್ನನ್ನ ಬಡಿಯಬೇಕು ಹೇಳು? ಕುಂಬಳೇ ಜಾತ್ರೆಯಲ್ಲಿ ನಾನವಳ ಪ್ರತಾಪ ನೋಡಿದ್ದೆ ಕಣೋ, ರಂಭೆ ಕುಣಿಯುವ ಹಾಗೆ ಕುಣೀತಿದ್ದಳು. ಮುಖ್ಯ ನಾವೇನೂ ಅವಳ ಬಲೆಯಲ್ಲಿ ಬೀಳಲಿಲ್ಲವಲ್ಲ! ಅದು ದೊಡ್ಡ ಸಂಗತಿ. ಇಲ್ಲದಿದ್ದರೆ ನಮ್ಮ ಮಾನ ಮೂರಾಬಟ್ಟೆ ಯಾಗಿ ಬಿಡ್ತಿತ್ತು” ಎಂದು ಈಗ ಹಾಗೇನೂ ಆಗಿಲ್ಲವೆಂಬಂತೆ ಮಾತಾಡಿದ. ಅವನ ಕರ್ಕಶ ಧ್ವನಿ ಈಗ ನನ್ನ ಕಿವಿಯ ಅತಿ ಸಮೀಪದಲ್ಲೆ ಉಂಟಾಗುತ್ತಿತ್ತು. ಒಂದೆಡೆ ಸೊಳ್ಳೆಗಳ ಆಕ್ರಮಣ. ಇನ್ನೊಂದೆಡೆ ದಾಮುವಿನ ಮಾತಿನ ಹಿಂಸೆ – ಇವೆರಡರ ಮಧ್ಯೆ ನಾನು ವಿಲವಿಲನೆ ಒದ್ದಾಡಿದೆ. ಒಲೆಗೆ ಹಾಕಿದ ಜೀವಂತ ಮೀನಿನ ಹಾಗೆ! ಸೇವಂತಿಯನ್ನು ಅಷ್ಟೊಂದು ದ್ವೇಷಿಸುವ ಮನುಷ್ಯ ಅವಳ ಉಡುಪನ್ನು ಬಣ್ಣಿಸತೊಡಗಿದ. ನಡೆಯನ್ನು ಬಣ್ಣಿಸತೊಡಗಿದ. ಅಂಗಾಂಗಳನ್ನು ಬಣ್ಣಿಸತೊಡಗಿದ. ಅವನ ಮಾತು ಕೇಳಿದರೆ ಯಕ್ಷಗಾನದ ಚಿಕ್ಕಪ್ರಾಯದ ಬಾಲೆ ಚದುರೆ ಎಂಬ ಹಾಡಿನ ನೆನಪಾಗುತ್ತಿತ್ತು. ಏನೇ ಹೇಳಿದರೂ ಸೇವಂತಿ ನಮ್ಮ ಊರಿನ ಒಬ್ಬಳೇ ಒಬ್ಬ ಚೆಲುವೆ ಯೆಂಬುದರಲ್ಲಿ ಸಂದೇಹವಿರಲಿಲ್ಲ. ಆಕೆ ಮೀಯುತ್ತಿರುವಾಗ ಕದ್ದು ನೋಡಿದ್ದರ ಬಗ್ಗೆ ನನಗೆ ಎಳ್ಳಷ್ಟೂ ಪಶ್ಚಾತ್ತಾಪವಿರಲಿಲ್ಲ. ಆದರೆ ಹಾಗೆ ನೋಡುತ್ತಿರುವಾಗ ಸಿಕ್ಕಿಬಿದ್ದುದರ ಬಗ್ಗೆ ಪಶ್ಚಾತ್ತಾಪವಿತ್ತು. ಅಲ್ಲೇ ನನ್ನ ಸಮಾಧಿಯಾಗುತ್ತಿದ್ದರೂ ನನಗೆ ಬೇಸರವಿರುತ್ತಿರಲಿಲ್ಲ. ಅದಕ್ಕೆ ಬದಲು ಈ ಸಂಗತಿ ಊರಲ್ಲಿ, ಶಾಲೆಯಲ್ಲಿ, ಎಲ್ಲರ ಮಧ್ಯೆ ಸಾಕಷ್ಟು ಪ್ರಚಾರವಾಗಿ ತಲೆಯೆತ್ತಿ ಓಡಾಡುವುದೇ ಅಸಾಧ್ಯ ಎಂಬಂತೆ ಆಗಿತ್ತು. ಇದನ್ನೂ ಕೂಡ ನಾನು ಸಹಿಸಿಕೊಳ್ಳುತ್ತಿದ್ದೆ. ಆದರೆ ನಾನು ಒಳಗಿಂದೊಳಗೇ ಇಷ್ಟಪಡಲು ಸುರು ಮಾಡಿದ್ದ ಸೇವಂತಿ ನನ್ನ ಬಗ್ಗೆ ಎಷ್ಟು ಹಗುರವಾಗಿ ತಿಳಿದುಕೊಂಡಿರಬಹುದು ಎಂದು ನೆನೆಯುತ್ತ ಸಂಕಟಪಟ್ಟೆ. ಆಕೆಯ ನಗ್ನತೆ ಯನ್ನು ನೋಡಲು ನನಗೆ ಅನುವು ಮಾಡಿಕೊಟ್ಟ ದಾಮುವನ್ನು ಆದರಿಸಬೇಕೆ ಶಪಿಸ ಬೇಕೆ ಎಂದು ತಿಳಿಯದ ಗೊಂದಲಕ್ಕೆ ಒಳಗಾಗಿದ್ದೆ.
ದಾಮು ಹೇಳುತ್ತಿದ್ದ : “ಈ ಲೋಕದಲ್ಲಿ ದುಡ್ಡು ಮುಖ್ಯ ಕಣೋ, ದುಡ್ಡೇ ದೊಡ್ಡಪ್ಪ ಎಂಬ ಮಾತು ಕೇಳಿಲ್ಲವೇ? ನೀನು? ದುಡ್ಡೂಂದು ಇದ್ದರೆ ಎಂಥ ಹೆಣ್ಣೂ ನಿನ್ನ ಹಿಂದೆ ಬರುತ್ತದೆ. ನಾವು ಹೊರಟಿರುವುದು ಈಗ ಅದಕ್ಕೇ ಎಂದು ತಿಳಕ್ಕೊ – ದುಡ್ಡು ಮಾಡುವುದಕ್ಕೆ ಮುಂಬಯಿ ಯಂಥ ಊರುಗಳಲ್ಲಿ ಕಾರು ತೊಳೆದರೆ ಸಾಕು. ದಿನಕ್ಕೆ ನೂರಿನ್ನೂರು ರೂಪಾಯಿ ಮಾಡಬಹುದು, ಕಾರು ತೊಳೆದು ಕಾರು ಕೊಂಡವರನ್ನು ನಾನು ನೋಡಿದ್ದೇನೆ. ಪಾನುಶಾಪು ನಡೆಸಿ ಲಕ್ಷಾಧೀಶರಾದವರನ್ನ ನೋಡಿದ್ದೇನೆ. ಇಲ್ಲದಿದ್ದರೆ ಎಲ್ಲರೂ ಊರು ಬಿಟ್ಟು ಮುಂಬಯಿಗೆ ಯಾಕೆ ಹೋಗುತ್ತಾರೆ? ನಿನ್ನಪ್ಪನಿಗೆ ಅಂಗಡಿಯಲ್ಲಿ ದಿನವೊಂದಕ್ಕೆ ಹೆಚ್ಚಾದರೆ ಎಷ್ಟು ವ್ಯಾಪಾರ ಆಗುತ್ತದೆ ಹೇಳು? ಐವತ್ತಾಗಬಹುದು, ಅರವತ್ತಾಗಬಹುದು. ಅದೂ ಉದ್ರಿ ಕೊಂಡು ಹೋಗುವವರೆ ಹೆಚ್ಚು. ಹೊಲ ಮನೆ ಸ್ವಲ್ಪ ಇದ್ದುದರಿಂದ ಪರವಾಯಿಲ್ಲ. ನನ್ನಪ್ಪ ಕೂಲಿಗೆ ಹೋಗಿ ಹತ್ತೋ ಹದಿನೈದೋ ತರುತ್ತಾನೆ. ತಾಯಿ ತಂಗಿ ಬೀಡಿ ಕಟ್ಟಿ, ಬೇರೆ ಮನೆಯವರ ಪಾತ್ರೆ ತೊಳೆದು ಕೊಯ್ಲಿನ ಸಮಯದಲ್ಲಿ ಕೆಲಸಕ್ಕೆ ಹೋಗಿ ಹೇಗೋ ಜೀವನ ಹೋಗ್ತದೆ- ಆಯಿತೆ ಇಷ್ಟಾದರೆ? ಊರು ಬಿಟ್ಟು ಹೋದವರು ಹತ್ತು ವರ್ಷಗಳಲ್ಲಿ ಹತ್ತು ಲಕ್ಷ ಮಾಡ್ತಾರೆ. ಊರಿಗೆ ಬಂದು ಜಮೀನು ಕೊಂಡು ಕೂಲಿಯವರಿಂದ ಕೃಷಿ ಮಾಡಿಸ್ತಾರೆ. ಪೇಟೆಯಲ್ಲಿ ಮಹಾರಾಜರ ಹಾಗೆ ಬಾಳ್ತಾರೆ. ಆದರೆ ಡೆಂಬಣ್ಣ ಬದುಕಿನಲ್ಲಿ ಹಣವೊಂದೇ ಮುಖ್ಯ ಅಂತ ತಿಳಕೊಳ್ಳಬೇಡ. ಅನುಭವ ಮುಖ್ಯ ನಾಲ್ಕೂರು ಸುತ್ತಬೇಕು. ವಿಂಧ್ಯಹಿಮಾಲಯ ದಾಟಬೇಕು, ದಾರಿ ಏರಬೇಕು, ಇಳಿಯಬೇಕು. ನೋಡು ನಾವೀಗ ಮಲಗಿದ್ದೇವಲ್ಲ, ಇಂಥ ಸ್ಥಳಗಳಲ್ಲಿ ಮಲಗಬೇಕು, ನಾಳಿನ ಚಿಂತೆ ಇರಬಾರದು. ಇದು ದೊಡ್ಡ ಲೋಕ ಎಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೋ. ಇಂಥ ಲೋಕದಲ್ಲಿ ಸಣ್ಣವನಂತೆ ಎಂದಿಗೂ ವರ್ತಿಸಬಾರದು. ಇಗೋ ಒಂದು ಸಿಗರೇಟು ಸೇದು!”
ನನಗೆ ಯಾವಾಗ ನಿದ್ದೆ ಹತ್ತಿತೋ ತಿಳಿಯದು. ದಾಮುವಿನ ನಿರರ್ಗಳ ಮಾತುಗಳೇ ನನ್ನನ್ನು ಭಾರವಾದ ಜೊಂಪಿಗೆ ತಳ್ಳಿದ್ದರೂ ಇರಬಹುದು. ಕನಸು ಯಾವುದು, ನನಸು ಯಾವುದು ಎಂಬುದು ತಿಳಿಯದ ಸ್ಥಿತಿಯಲ್ಲಿ ಯಾವಾಗಲೋ ನನಗೆ ಸುತ್ತಮುತ್ತಲು ಹಸಿರಾಗಿ ಹೊಳೆಯುವ ಹಲವು ಜತೆ ಕಣ್ಣುಗಳು ಗೋಚರಿಸಿ ಭಯದಿಂದ ದಿಗ್ಗನೆ ಎದ್ದು ಕುಳಿತೆ. ಈ ಕಣ್ಣುಗಳು ಯಾರವು? ಮನುಷ್ಯರದ್ದೆ? ಭೂತಗಳದ್ದೆ? ನನಗೆ ಇದು ತನಕ ಗೊತ್ತಿರದ ಅತಿಮಾನುಷ ಶಕ್ತಿಗಳದ್ದೆ? ಈ ಸುತ್ತಮುತ್ತಲ ಪ್ರದೇಶ, ಈ ರಾತ್ರಿ, ಈ ಸಮಯ ಇಂಥ ಶಕ್ತಿಗಳ ಅಡಳಿತಕ್ಕೆ ಒಳಪಟ್ಟವೆ? ರೇಡಿಯಂ ವಾಚುಗಳಂಥ ಫಳಫಳನೆ ಕಣ್ಣುಗಳ ಬೆಳಕು ನನ್ನನ್ನ ತಿವಿಯುತ್ತಿದ್ದುವು. ಅವುಗಳ ಜತೆ ಭುಸ್ ಭುಸ್ ಎಂಬ ಸದ್ದು. ಇದು ಕೇವಲ ಕನಸಾಗಿರಲಿ ಎಂದು ಬಯಸಿ ಎರಡು ನಿಮಿಷ ಕಣ್ಣು ಮುಚ್ಚಿ ಮತ್ತೆ ತೆರೆದೆ. ಕಣ್ಣುಗಳೇನೊ ಮಾಯವಾಗಿರಲಿಲ್ಲ. ಅವು ಏರಿ ಇಳಿಯುತ್ತಿದ್ದುವು. ಎಡಕ್ಕೆ ಬಲಕ್ಕೆ ಚಲಿಸುತ್ತಿದ್ದುವು. ಈ ದೃಶ್ಯವೇನೂ ಕನಸಾಗಿರಲಿಲ್ಲ, ನನ್ನ ಮೈ ಜುಮ್ಮೆಂದಿತು; ಬೆವರಿತು. ಆದರೆ ಸ್ಪಷ್ಟವಾಗಿ ನೋಡಿದಾಗ ಈ ಆಗಂತುಕರು ಮನುಷ್ಯರೂ ಅಲ್ಲ, ಭೂತಗಳೂ ಅಲ್ಲ, ಒಂದು ಹಿಂಡು ದನಗಳು ಎಂದು ಗೊತ್ತಾಯಿತು. ಹಟ್ಟಿಗೆ ಮರಳದ ಉಂಡಾಡಿ ದನಗಳು. ಬಹುಶಃ ಈ ಚಾವಡಿ ಅವು ಮಲಗುವ ತಾಣವಾಗಿರಬಹುದು; ಇಲ್ಲಿ ಇಬ್ಬರು ಮನುಷ್ಯ ವ್ಯಕ್ತಿಗಳು ಬಂದು ಸ್ಥಳವನ್ನು ಆಕ್ರಮಿಸಿಕೊಂಡುದರಿಂದ ಏನು ಮಾಡುವುದೆಂದು ತಿಳಿಯದೆ ಅಚ್ಚರಿಯಿಂದ ನಿಂತುಕೊಂಡಿದ್ದುವು. ದಾಮು ಇದಾವುದರ ಪರಿವೆಯೂ ಇಲ್ಲದೆ ಸಣ್ಣಕೆ ಉಸಿರು ಸದ್ದು ಮಾಡುತ್ತ ಗಾಢ ನಿದ್ದೆಯಲ್ಲಿದ್ದ ಹಾಗೆ ತೋರಿತು. ತಟ್ಟನೆ ನನ್ನ ಮನಸ್ಸಿನಲ್ಲಿ ಅಗ್ನಿ ಪರ್ವತದಂತೆ ಎದ್ದ ವಿಚಾರವೆಂದರೆ ಯಾಕೆ ಈ ಕೂಡಲೆ ಊರಿಗೆ ಮರಳಬಾರದು ಎಂದು. ವಿಚಾರ ಬಂದುದೇ ತಡ ಎದ್ದೆ, ಮಾರ್ಗಕ್ಕಿಳಿದೆ. ಬೀಸುಗಾಲಿನಿಂದ ನಡೆಯತೊಡಗಿದೆ. ನನ್ನ ಎದೆ ಡವಗುಟ್ಟುತ್ತಿತ್ತು, ಉಸಿರು ಬಿಗಿ ಹಿಡುದು ತುಸುವೂ ಸದ್ದಾಗದಂತೆ, ಜೀವನದ ಮಹಾನಿರ್ಧಾರವನ್ನು ಕೈಗೊಂಡು ಪಲಾಯನ ಮಾಡಿದ ಸಿದ್ದಾರ್ಥನಂತೆ – ಮಧ್ಯರಾತ್ರೆಯೋ, ಮುಂಜಾವವೋ ಯಾರಿಗೆ ಗೊತ್ತು? ಜೀವ ಮಿಡುಕಾಡದ ನೀರವ ಕ್ಷಣಗಳು ಅವು. ದಾಮುವಿಗೆ ಎಚ್ಚರಾಗುವಾಗ ನಾನು ಅವನ ಕೈಗೆ ಎಟುಕದಿರಬೇಕೆಂಬ ಒಂದೇ ಒಂದು ಇರಾದೆಯಿಂದ ನಡೆದೆ, ಓಡಿದೆ, ಎರಡೂ ಸ್ಥಿತಿಯ ಮಧ್ಯದಲ್ಲಿ ಸಾಗಿದೆ.
ತುಸು ಹೊತ್ತಿನಲ್ಲೆ ಒಂದು ಸಂದೇಹ ನನ್ನನ್ನು ಕಾಡಲಾರಂಭಿಸಿತು – ನಾನು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇನೆಯೆ, ಇಲ್ಲವೆ? ಊರಿಗೆ ಹೋಗಲು ನಾನು ದಕ್ಷಿಣ ದಿಕ್ಕನ್ನು ಹಿಡಿಯಬೇಕು; ಒಂದು ವೇಳೆ ನಾನೀಗ ಹೋಗುತ್ತಿರುವುದು ಉತ್ತರ ದಿಕ್ಕಾಗದೆ? ದಾಮುವಿನಿಂದ ತಪ್ಪಿಸಿಕೊಳ್ಳುವ ಉದ್ವೇಗದಲ್ಲಿ, ನಾನು ದಿಕ್ಕು ತಪ್ಪಿದ್ದೆ! ತಟ್ಟನೆ ನನಗನಿಸಿತು – ನಾನು ಸಾಗುತ್ತಿರುವುದು ಸರಿಯಾದ ದಿಕ್ಕಿನಲ್ಲಾದರೆ ಸಮುದ್ರ ನನ್ನ ಬಲಕ್ಕಿರಬೇಕು. ನಡೆಯುವುದನ್ನು ನಿಲ್ಲಿಸಿ ಸಮುದ್ರದ ಸದ್ದನ್ನು ಕೇಳಲು ಯತ್ನಿಸಿದೆ. ಆದರೆ ಅದು ಇಳಿತದ ಸಮಯವಾಗಿರಬೇಕು. ಸಮುದ್ರದ ಸದ್ದು ಕೇಳಿಸಲಿಲ್ಲ. ಸುಯ್ಯನ ಬೀಸುವ ಗಾಳಿ ಯಾವ ದಿಕ್ಕಿನಿಂದ ಬರುತ್ತಿದೆ ಎಂದು ಸ್ಪಷ್ಟವಾಗುತ್ತಿರಲಿಲ್ಲ. ಅದು ಒಟ್ಟಾರೆ ನನ್ನನ್ನು ಎಲ್ಲ ದಿಕ್ಕುಗಳಿಂದಲೂ ಮುತ್ತಿ ಹೆಡೆಮುರಿ ಕಟ್ಟಿ ದಾಮುವಿನ ಬಳಿ ಕರೆದೊಯ್ಯಲು ಮನಸ್ಸು ಮಾಡಿದಂತಿತ್ತು. ಕೂಡಲೆ ನನಗೆ ರೈಲು ಮಾರ್ಗದ ನೆನಪಾಯಿತು. ರೈಲು ಮಾರ್ಗ ಕೂಡ ನನ್ನ ಬಲದಿಕ್ಕಿಗೆ ಇರಬೇಕು-ಹೋಗಿ ನೋಡದೆ ಅದನ್ನು ಗೊತ್ತು ಹಚ್ಚುವಂತಿಲ್ಲ. ದಾಮುವಿನಿಂದ ತಪ್ಪಿಸಿಕೊಳ್ಳುವ ತುರ್ತು ಊರು ಸೇರುವ ಆಸೆಗಿಂತಲೂ ಬಲವಾಗಿ ಕೆಲಸ ಮಾಡುತ್ತಿದ್ದುದರಿಂದ ಬಲಗಡೆಗೆ ಸಾಗಿ ರೈಲುಮಾರ್ಗವನ್ನು ಹುಡುಕಲು ನಿರ್ಧರಿಸಿದೆ. ರೈಲು ಮಾರ್ಗ ನನಗೆ ಸಿಗದ ಪಕ್ಷದಲ್ಲಿ ನಾನು ಹಿಡಿದ ದಾರಿ ತಪ್ಪೆನ್ನುವುದು ಖಂಡಿತ. ಕಣ್ಣು ಕಕ್ಕುವ ಆ ಕತ್ತಲಲ್ಲಿ ಮಾರ್ಗಬಿಟ್ಟು ಗಿಡಪೊದೆಗಳು, ಒಣ ಹುಲ್ಲು, ಕಲ್ಲುಮುಳ್ಳು ತುಂಬಿದ ಗುಡ್ಡ ಸೇರಿದೆ. ಓಡುವ ತುರಾತುರಿಯಲ್ಲಿ ನನ್ನ ಚೀಲವನ್ನೂ ಚಪ್ಪಲಿಗಳನ್ನೂ ಚಾವಡಿಯಲ್ಲಿ ಬಿಟ್ಟುಬಂದಿದ್ದೆ. ಚೀಲ ಬಿಟ್ಟು ಬಂದ ಬಗ್ಗೆ ನನಗೆ ಅಷ್ಟೇನೂ ಬೇಸರವಾಗಲಿಲ್ಲ. ಆದರೆ ಚಪ್ಪಲಿಗಳು! ಅವು ಇಲ್ಲದೆ ಪಾದಗಳು ನೋಯತೊಡಗಿದವು. ಯಾವ ಕ್ಷಣದಲ್ಲಿ ಕಲ್ಲು ಎಡವುತ್ತದೆ,ಮುಳ್ಳು ಚುಚ್ಚುತ್ತದೆ ಎನ್ನುವಂತಿರಲಿಲ್ಲ. ಸಿದ್ದಾರ್ಥ ಮನೆ ಬಿಟ್ಟು ಓಡಿಹೋಗುವಾಗ ಚಪ್ಪಲಿಗಳನ್ನು ಮರೆತಿದ್ದನೆ? ನಾನು ಕೇಳಿದ ಕತೆಗಳಲ್ಲಿ ಈ ಉಲ್ಲೇಖ ಇದ್ದಿರಲಿಲ್ಲ. ಆದರೆ ಚಪ್ಪಲಿಗಳನ್ನು ಮರೆತಿದ್ದರೆ ಅವನ ಮನೆಯವರು ಅವನನ್ನು ಹಿಂಬಾಲಿಸಿ ಸುಲಭವಾಗಿ ಹಿಡಿಯಬಹುದಿತ್ತು! ಇರಲಿ, ಹೇಗೂ ಎಡರುತ್ತ ತಡರುತ್ತ ನಡೆದು ನೋಡುತ್ತೇನೆ – ಹಾ! ರೈಲು ದಾರಿ ಉದ್ದಕ್ಕೆ ಮಲಗಿದೆ. ದೇವರ ಪ್ರತಿಮೆಯನ್ನು ತಡವುವ ಭಕ್ತನಂತೆ ರೈಲು ಹಳಿಗಳನ್ನು ತಡವಿ ಖಚಿತಪಡಿಸಿಕೊಂಡೆ. ರಾತ್ರಿಯ ಮಂಜಿಗೆ ತಣ್ಣಗೆ ಹಾವಿನಂತೆ ಬಿದ್ದ ಹಳಿಗಳು! ಸದ್ಯ ಇವುಗಳ ಮೇಲೆ ಯಾವ ಗಾಡಿಯೂ ಹಾದು ಹೋಗಿಲ್ಲ ಎನ್ನುವಂತಿದ್ದುವು. ಸರಿ, ನಾನು ಹಿಡಿದ ದಿಕ್ಕು ನನ್ನನ್ನು ಊರಿಗೆ ಒಯ್ಯುವುದು ಎಂದಾಯಿತು. ಇನ್ನು ಮತ್ತೆ ಮಣ್ಣಿನ ಮಾರ್ಗ ಸೇರುವ ಮನಸ್ಸಾಗಿರಲಿಲ್ಲ. ರೈಲು ಹಳಿಗಳ ಮೇಲೇ ನಡೆದರೆ ಹೇಗೆ? ಕುಂಬಳೆ ನಿಲ್ದಾಣ ತಲುಪಿದರಾಯಿತು. ಅಲ್ಲಿಂದ ಮತ್ತೆ ಊರಹಾದಿ ಚಿರಪರಿಚಿತ. ಹೇಗಿದ್ದರೂ ಇಂಥ ರಾತ್ರಿಯಲ್ಲಿ ಹೊಳೆ ದಾಟಲು ದೋಣಿಸಿಗುವುದಿಲ್ಲ. ಎರಡೆರಡು ಸಂಕಗಳನ್ನೂ ನಾನು ನಡೆದೇ ದಾಟಬೇಕು. ಅಲ್ಲದೆ ರೈಲು ದಾರಿಯಲ್ಲಿ ದಾಮು ನನ್ನ ಬೆನ್ನು ಹತ್ತುವ ಸಂಭವ ಕಡಿಮೆ. ಆತ ನನ್ನನ್ನು ಹುಡುಕುವುದಾದರೆ ನೆಲಮಾರ್ಗದಲ್ಲಿ. ಚೀಲವನ್ನೂ ಚಪ್ಪಲಿಗಳನ್ನೂ ಅಲ್ಲೇ ಬಿಟ್ಟು ಬಂದುದು ಕೂಡ ಒಂದು ರೀತಿಯಿಂದ ಒಳ್ಳೆಯದೇ ಆಯಿತು – ಅವುಗಳನ್ನು ಕಂಡು ದಾಮು ಡೆಂಬಣ್ಣ ಒಂದಕ್ಕೋ ಎರಡಕ್ಕೋ ಇಲ್ಲೆಲ್ಲೋ ಹೋಗಿದ್ದಾನೆ. ಈಗ ಬರುತ್ತಾನೆ ಎಂದುಕೊಂಡು ನಿದ್ದೆಯನ್ನು ಮುಂದುವರಿಸಬಹುದು. ನಾವು ಮಾಡುವ ತಪ್ಪುಗಳು ಕೂಡ ಒಮ್ಮೊಮ್ಮೆ ನಮ್ಮ ಅನುಕೂಲಗಳೇ ಆಗುತ್ತವೆ! ಆದದ್ದೆಲ್ಲಾ ಒಳಿತೇ ಆಯಿತು ಎಂದು ದಾಸರು ಹೇಳಿದ ಹಾಗೆ! ರಾತ್ರಿ ಮಲಗಲು ಹೋಟೆಲೋ ಛತ್ರವೋ ದೊರಕದೆ ಇದ್ದುದು ಕೂಡ ಒಳ್ಳೆಯದೇ ಆಯಿತು. ಅಂಥ ಕಡೆಯಿಂದಾಗಿದ್ದರೆ ದಾಮುವಿನ ಕಣ್ಣು ತಪ್ಪಿಸಿ ಹೊರಡುವುದು ಸುಲಭವಾಗುತ್ತಿರಲಿಲ್ಲ. ಅದೇ ರೀತಿ ಈ ರೈಲು ದಾರಿ ಕೂಡ! ಇದನ್ನು ನನಗೆಂದೇ ಯಾರೂ ಹಾಕದಿದ್ದರೂ ಇದರಿಂದಾಗಿ ಸದ್ಯ ಎಷ್ಟು ಅನುಕೂಲವಾಯಿತು ಎನಿಸಿ ನನ್ನ ವಿಚಾರಗಳಿಗೆ ನನಗೇ ನಗು ಬಂತು. ಆದರೆ ನಗಲಾರದ ಸ್ಥಿತಿಯಲ್ಲಿ ನೀನೀಗ ಇದ್ದೀಯಾ ಎಂದು ವಿವೇಕ ನನ್ನನ್ನು ಎಚ್ಚರಿಸಿತು. ಒಂದು ವೇಳೆ ದಾಮು ನನ್ನನ್ನು ಹಿಂಬಾಲಿಸುತ್ತಿದ್ದರೆ! ಅವನು ನಿದ್ದೆ ಮಾಡುತ್ತಿದ್ದುದು ಬರಿ ನಟನೆಯಾಗಿದ್ದರೆ! ಅವನನ್ನೆದುರಿಸಿ, ನೀನು ಏನು ಬೇಕಾದರೂ ಮಾಡು. ಆದರೆ ನಾನು ಮಾತ್ರ ಊರಿಗೆ ಮರಳಲು ನಿರ್ಧರಿಸಿದ್ದೇನೆ ಎಂದು ಹೇಳುವ ಧೈರ್ಯ ನನಗಿದೆಯೆ? ಅವನನ್ನು ಕಂಡು ತತ್ತರ ನಡುಗಿ ಮರುಮಾತಾಡದೆ ಮತ್ತೆ ಅವನ ಹಿಂದೆ ನಾನು ಹೊರಡುವುದಿಲ್ಲ ಎಂಬ ನಂಬಿಕೆಯೇನು? ಈ ವಿಚಾರ ಬಂದದೇ ನಾನು ರೈಲು ಹಳಿಗಳ ಮಧ್ಯೆ ಒಂದೇ ಸವನೆ ಓಡತೊಡಗಿದೆ. ಎಡವಿದೆ. ಬಿದ್ದೆ. ಕಾಲ ಉಂಗುಟಿಯಿಂದ ಉಗುರು ಕಿತ್ತು ನೆತ್ತರು ಚಿಮ್ಮಿದ ಹಾಗಾಯಿತು. ಯಾವುದನ್ನೂ ಲೆಕ್ಕಿಸದೆ ಮುಂದರಿದೆ.
ಮತ್ತೆ ನಾನು ನಿಂತುದು ರೈಲು ಸಂಕ ತಲುಪಿದಾಗ; ನಾನು ದಾಟಬೇಕಾಗಿದ್ದ ಎರಡು ಸಂಕಗಳಲ್ಲಿ ಮೊದಲ ಸಂಕ ಅದು. ಅತ್ಯಂತ ಅಪಾಯಕಾರಿಯೆಂದು ದಾಮು ನನ್ನನ್ನು ಹೆದರಿಸಿದ್ದು ಅದನ್ನೆ. ನಿಂತು ಯೋಚಿಸಿದೆ – ದಾಟುವ ಧೈರ್ಯ ಮಾಡಲೆ, ಅಥವಾ ಇಲ್ಲೆಲ್ಲಾದರೂ ಅಡಗಿದ್ದು ಬೆಳಗ್ಗೆ ಕಡವಿಗೆ ಹೋಗಿ, ದೋಣಿಯವನ ಕಾಲಿಗೆ ಬಿದ್ದು ದಾಟಿಸಪ್ಪಾ ಎಂದು ಕೋರಲೆ? ಅಷ್ಟರಲ್ಲಿ ದಾಮು ಕೂಡ ಅಲ್ಲಿ ಬಂದು ಸೇರಿದ್ದರೇನು ಗತಿ? ದಾಟಿಯೇ ಬಿಡುವುದು ಅಂದುಕೊಂಡೆ. ಆಕಾಶದಲ್ಲೆಲ್ಲೊ ಚಂದ್ರ ಕಾಣಿಸಿತು. ಸಂಕದ ಕೆಳಗೆ ನೀರು ಹೊಳೆಯುತ್ತಿತ್ತು. ಟ್ರೇನು ಬರುವ ಅಪಾಯವಿದೆಯೊ ಎಂದು ಗಮನಿಸಿದೆ. ರೈಲು ಹಳಿಗೆ ಕಿವಿಯಿಟ್ಟು ಕೇಳಿದೆ. ಏನೊಂದೂ ಗೊತ್ತಾಗಲಿಲ್ಲ. ಹಳೆ ಮಾದರಿಯ ಸಂಕ ಅದು. ದಾಟುವಾತನಿಗೆ ಯಾವ ರಕ್ಷಣೆಯೂ ಇರಲಿಲ್ಲ. ನೀರು ನೋಡಿದರೆ ತಲೆತಿರುಕ ಬರುವಂತಿತ್ತು. ಆದರೆ ನೋಡದಿರುವುದಾದರೂ ಹೇಗೆ? ನಡೆಯುವುದು ಕಷ್ಟವಾಯಿತು. ಚತುಷ್ಪಾದಿಯಾದೆ; ಕಪ್ಪೆಯಂತೆ ಕುಪ್ಪಳಿಸತೊಡಗಿದೆ; ಕ್ರಿಮಿಯಂತೆ, ಹುಳದಂತೆ ಹರೆದ! ದೇವರೇ ಒಂದು ದಿನದಲ್ಲೆ ಎಷ್ಟೊಂದು ಅವತಾರ!ದೇಹವನ್ನು ಯಾಕೆ ಕೊಟ್ಟೆ? ಆ ದೇಹದಲ್ಲಿ ಜೀವವನ್ನು ಯಾಕೆ ಇಟ್ಟೆ? ಜೀವಕ್ಕೆ ಯಾಕೆ ಭಯವೆಂಬ ಉರುಳನ್ನು ಬಿಗಿದೆ? ಒಬ್ಬ ಸಾಮಾನ್ಯ ಅಂಗಡಿಯಾತನ ಮಗನಾಗಿ ನನ್ನನ್ನು ಹುಟ್ಟಿಸುವುದಕ್ಕಿಂತ ಸರ್ಕಸ್ಸಿನವನ ಮಗನಾಗಿ ಹುಟ್ಟಿಸಬಾರದಿತ್ತೆ – ಹುಟ್ಟಿಸಲೇಬೇಕೆಂಬ ಛಲವಿದ್ದರೆ? ಆಗ ನಾನು ಜೋಕಾಲಿಯಿಂದ ಜೋಕಾಲಿಗೆ ಜಿಗಿಯುವುದನ್ನೂ, ಕಂಬಿಯ ಮೇಲೆ ನಡೆಯುವುದನ್ನೂ ಕತ್ತಿಯ ಎದರು ನಿಲ್ಲುವುದನ್ನೂ, ಸಿಂಹದ ಬಾಯಿ ಯೊಳಗೆ ತಲೆ ಯಿರಿಸುವುದನ್ನೂ ಕಲಿಯುತ್ತಿದ್ದೆ. ಹೀಗೆ ಭಯದ ಗುಲಾಮನಾಗಿರುತ್ತಿರಲಿಲ್ಲ. ಆದರೆ ನಿಜಕ್ಕೂ ನನಗೆ ಈ ಸಂಕವನ್ನು ದಾಟುವುದಕ್ಕಿಂತಲೂ ಊರಲ್ಲಿ ತಂದೆ ತಾಯಿಯರನ್ನು ಹೇಗೆ ಎದುರಿಸಲಿ ಎಂಬ ಭಯವೇ ಹೆಚ್ಚಾಗಿತ್ತು.
ಅಂತೂ ನಾನು ಹೇಗೆ ಊರು ಸೇರಿದೆ, ಮನೆಯನ್ನು ಪ್ರವೇಶಿಸಿದೆ, ತಂದೆಯ ಎದುರು ನಿಂತೆ. ತಾಯಿಯ ಮುಖ ನೋಡಿದೆ. ಎಂಬಿತ್ಯಾದಿ ವಿವರಗಳನ್ನೆಲ್ಲ ಇಲ್ಲಿ ಕೊಡಲಾರೆ. ಈ ಘಟನೆಗಳೆಲ್ಲ ಕಳೆದು ಈಗ ಹಲವಾರು ವರ್ಷಗಳೇ ಸಂದಿವೆ. ನನ್ನನ್ನು ಮುದ್ದಿನಿಂದ ಕರೆಯುತ್ತಿದ್ದ ತಾಯಿ ಈಗ ಇಲ್ಲ. ತಂದೆಗೆ ವಯಸ್ಸಾಗಿದೆ. ಅವರು ಬದಲಾಗಿದ್ದಾರೆ. ಇಡಿಯ ಲೋಕವೇ ಬದಲಾಗಿದೆ. ಮಣ್ಣಿನ ಮಾರ್ಗಗಳಿಗೆ ಪಕ್ಕಾ ದಾಮರು ಬಂದಿದೆ. ಹೊಳೆಗಳ ಮೇಲೆ ಸಾಗಲು ಹೊಸ ಸೇತುವೆಗಳ ನಿರ್ಮಾಣವಾಗಿದೆ. ಹದಿನೈದು ನಿಮಿಷಗಳಿಗೊಂದರಂತೆ ಬಸ್ಸು ಕಾರುಗಳು ಓಡಾಡುತ್ತಿರುವುದರಿಂದ ಯಾರೂ ನಡೆದು ಹೋಗುವ ಅಗತ್ಯವೇ ಇಲ್ಲ. ದಾರಿಯುದ್ದಕ್ಕೂ ವಿದ್ಯುದ್ದೀಪಗಳು. ಅಂಗಡಿಗಳು. ಹೊಟೆಲುಗಳು ಇರುವುದರಿಂದ ನಡೆದಾಡುವುದಕ್ಕೂ ಭಯವಿಲ್ಲ.ಮಂಗಳೂರು ಕುಂಬಳೇ ಕಾಸರಗೋಡುಗಳತ್ತ ನಡೆದು ಬಂದಿದೆಯೊ ಅಥವಾ ಕುಂಬಳೆ ಕಾಸರಗೋಡುಗಳು ಮಂಗಳೂರಿನತ್ತ ನಡೆದು ಹೋದವೋ ಎಂಬ ರೀತಿಯಲ್ಲಿ ಹಳ್ಳಿ-ಪೇಟೆ ಒಂದಾಗಿ ಬಿಟ್ಟುದರಿಂದ ಯಾರಿಗೂ ಪೇಟೆಯ ಮೋಹವಿಲ್ಲ. ಕೆಲಸ ಮಾಡುವುದಿದ್ದರೆ ಊರಲ್ಲೇ ಸಾಕಷ್ಟು ಬೇಡಿಕೆಗಳಿವೆ – ಕೂಲಿಯೂ ಅಷ್ಟೇನೂ ಕಡಿಮೆಯಲ್ಲ. ನಾನು ಮನೆಗೆ ಮರಳಿದವನು ತಂದೆ ತಾಯಿಯರನ್ನು ಹೇಗೆ ಎದುರಿಸಿದೆ ಎಂಬ ವಿವರಗಳನ್ನು ಓದುಗರ ಕಲ್ಪನೆಗೆ ಬಿಡುವೆ. ಅವರವರ ಸಾಮರ್ಥ್ಯದಂತೆ ಅವರವರು ಊಹಿಸಿಕೊಳ್ಳಲಿ. ಆದರೆ ಒಂದು ವಿಷಯ – ನಾನು ನಿರೀಕ್ಷಿಸಿದ್ದು ನಡೆಯಲೇ ಇಲ್ಲ. ಎಂದರೆ ತಂದೆ ನನಗೆ ಹೊಡೆದು ಬಡಿದು ಮಾಡಲಿಲ್ಲ. ಅವರ ಮನಸ್ಸು ಬರ್ಫಿಯಂತೆ ಗಟ್ಟಿ ಕಟ್ಟಿತ್ತು. ಅದು ಒಡೆಯಲೂ ಇಲ್ಲ, ಕರಗಲೂ ಇಲ್ಲ. ಅನ್ನ ನೀರು ಬಿಟ್ಟು ಕೂತ ತಾಯಿಯನ್ನು ಕಂಡು ಅತ್ತು ಕರೆದು ಮಾಡಿದವನು ನಾನೇ.
ಅದು ಸಂಜೆ, ಅಥವಾ ಮರುದಿನ, ಅಥವಾ ಒಂದು ವಾರದಲ್ಲಿ ದಾಮುವೂ ಊರಿಗೆ ಮರಳಬಹುದೆಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ ದಾಮು ಮಾತ್ರ ಅಂದು ಸಂಜೆಯೂ ಮರಳಲಿಲ್ಲ. ಮರುದಿನವೂ ಬರಲಿಲ್ಲ. ದಿನ, ವಾರ, ನಕ್ಷತ್ರಗಳು ಉರುಳಿದರೂ ದಾಮುವಿನ ಸುದ್ದಿಯಿಲ್ಲ. ಎಲ್ಲಿಗೆ ಹೋಗಿದ್ದಾನೆ. ಏನು ಮಾಡುತ್ತಿದ್ದಾನೆ ಯಾರಿಗೂ ತಿಳಿಯದಂತೆ ನಮ್ಮೆಲ್ಲರ ನೆನಪಿನಿಂದ ಮರೆಯಾಗಿಬಿಟ್ಟ. ಎಂದಿನ ತನಕವೆಂದರೆ ಅನೇಕ ವರ್ಷಗಳು ಕಳೆದು ಒಂದು ದಿನ ಯಾರೋ ಕುಂಜರೋಡಿ ದಾಮೋದರ ಬಂದ ಎಂದು ಸುದ್ದಿ ಹಬ್ಬಿಸುವ ತನಕ. ಛೀ ಅದು ಅವನಲ್ಲವೇ ಅಲ್ಲ ಎಂದರು ಕೆಲವರು. ಆದರೆ ಒಂದು ದಿನ ದಾಮು ಊರಲ್ಲಿ ನಡೆದು ಹೋಗುವುದನ್ನು ನಾನು ಕಣ್ಣಾರೆ ನೋಡಿದೆ! ಅದೂ ಎಂಥಾ ದೃಶ್ಯ! ಅವನ ಒಂದು ಕಾಲು ಮೊಣಕಾಲಿನಿಂದ ತುಂಡಾಗಿ ಹೋಗಿತ್ತು. ಅವನು ತೊಟ್ಟ ಖಾಕಿ ಪ್ಯಾಂಟು ಅಲ್ಲಿ ಖಾಲಿಯಾಗಿ ಜೋತಾಡುತ್ತಿತ್ತು. ರಟ್ಟೆಗಳ ಕೆಳಗೆ ಅನುಗೋಲು ಇರಿಸಿ ಜಿಗಿಯುತ್ತ ಹೋಗುತ್ತಿದ್ದ – ಅವನೇ! ಸಂದೇಹವಿರಲಿಲ್ಲ! ಒಂದು ದಿನ ಅಂಗಡಿಗೂ ಬಂದ. ನಮ್ಮ ದೃಷ್ಟಿಗಳು ಒಂದಾದುವು. ದಾಮುವಿನ ಮುಖವೋ! ಒಂದು ಸಾವಿರ ವರ್ಷಗಳನ್ನು ಒಮ್ಮೆಲೆ ಬದುಕಿದವನ ಮುಖದಂತೆ ಇತ್ತು. ಅವನು ಕಣ್ಣುಗಳಲ್ಲೆ ನಕ್ಕ. ನಾನೂ ನಕ್ಕೆ. ಒಂದು ಪ್ಯಾಕು ಸಿಗರೇಟು ಕೇಳಿದ. ಕೊಟ್ಟೆ. ದುಡ್ಡಿಗೆಂದು ಜೇಬನ್ನು ತಡವರಿಸಿದ. ನಾನವನನ್ನು ತಡೆದೆ.
ಆಮೇಲೆ ಒಂದು ದಿನ ಅವನು ನಾನೊಬ್ಬನೆ ಅಂಗಡಿಯಲ್ಲಿರುವಾಗ ಬಂದ. ಜತೆಯಲ್ಲಿ ಒಂದು ಚೀಲವನ್ನೂ ತಂದಿದ್ದ. ಅದನ್ನು ನನಗಿತ್ತ. ಚೀಲದೊಳಗೆ ಒಂದು ಜತೆ ಅತಿಹಳೆಯ ಚಪ್ಪಲಿಗಳು! “ಡೆಂಬಣ್ಣ, ಅವು ನಿನ್ನವು”ಎಂದ ದಾಮು. ನನಗೆ ಕಣ್ಣುಗಳು ಮಂಜಾದುವು. ಯಾವುದೋ ನೆಪದಿಂದ ಮುಖವನ್ನು ಬೇರೆಡೆಗೆ ತಿರುಗಿಸಿದೆ. “ಇಷ್ಟು ವರ್ಷಗಳೂ ನೀನು ನನ್ನ ಚಪ್ಪಲಿಗಳನ್ನು ಹೊತ್ತುಕೊಂಡು ತಿರುಗುತ್ತಿದ್ದೆಯಾ? ಯಾಕೆ, ಯಾಕೆ ದಾಮು, ಏನು ಇದೆಲ್ಲ?” ಎಂದು ಕೇಳಬೇಕೆಂದೆನಿಸಿತು. ಅದರೆ ಕೇಳಲಿಲ್ಲ. ದಾಮುವೂ ಅಂಗಡಿಯಿಳಿದು ಜಿಗಿಯುತ್ತ ಹೊರಟುಹೋದ. ನಾನು ಒಂದೂ ಅರ್ಥವಾಗದೆ ಬಹಳ ಹೊತ್ತು ಹಾಗೆಯೇ ನಿಂತಿದ್ದೆ. ಅವನನ್ನು ಕೇಳುವುದು ತುಂಬಾ ಇತ್ತು – ಎಲ್ಲಿ ಹೋದೆ, ಏನು ಮಾಡಿದೆ? ಇಷ್ಟು ವರ್ಷ ಯಾಕೆ ಊರಿಗೆ ಹಿಂತಿರುಗಲಿಲ್ಲ ನೀನು? ಕಾಲು ಹೇಗೆ ಕಳಕೊಂಡೆ? ಈಗ ಬಂದುದು ಯಾಕೆ? ಇತ್ಯಾದಿ, ಇತ್ಯಾದಿ. ನಾನಾಗಿ ಅವನನ್ನು ಕೇಳಲಿಲ್ಲ. ಅವನಾಗಿ ಎಂದೂ ಹೇಳಲೂ ಇಲ್ಲ. ಒಂದು ವೇಳೆ ಅವನು ಹೇಳಿದರೂ ಅದರಲ್ಲಿ ಸತ್ಯವೆಷ್ಟು, ಅವನ ಕಲ್ಪನೆಯೆಷ್ಟು ಎಂದು ತಿಳಿಯುವುದು ಹೇಗೆ? ಗರಾಜಿನಲ್ಲಿ, ಟ್ರೇನಿನ ಅಡಿಯಲ್ಲಿ, ದರೋಡೆಕೋರರೊಂದಿಗೆ ಜಗಳದಲ್ಲಿ, ಹಿಮಾಲಯದ ಮಂಜುಗಡ್ಡೆಗಳಲ್ಲಿ, ಅವನು ತನ್ನ ಕಾಲನ್ನು ಕಳೆದುಕೊಂಡಿರಬಹುದು – ನನಗದು ಎಂದಿಗೂ ಗೊತ್ತಾಗುವಂತಿಲ್ಲ.
*****