ಏನದು ಪ್ರೇಮ…
ಅಪೂರ್ವವಾದ ವಸ್ತುವೆ
ಅಪರಿಮಿತವಾದ ಚೈತನ್ಯವೆ
ಅಸದೃಶ ಅನುಭೂತಿಯೆ?
ಏನದು ಪ್ರೇಮ…
ಜಾಜ್ವಲ್ಯಮಾನ ಬೆಳಕೆ
ಪರಮ ಪರಿಮಳದ ಹೂವೆ?
ಪ್ರೇಮಕ್ಕೆ ಸಪ್ತವರ್ಣವಂತೆ
ಮಕರಂದಕಿಂತಲೂ ಸಿಹಿಯಂತೆ
ನಿಜವೇನು?
ಪ್ರೇಮಕ್ಕೆ ನಕ್ಷತ್ರ ಖಚಿತ ಕಣ್ಣಂತೆ
ಮುತ್ತು ರತ್ನ ಹವಳದೊಡಲು
ವಿಸ್ಮಯದ ಕಡಲಂತೆ ನಿಜವೇನು?
ಪ್ರೇಮ ಕಲ್ಲಿನಷ್ಟೇ ಗಟ್ಟಿಯಂತೆ
ನೀರಿನಷ್ಟೇ ತಿಳಿಯಂತೆ
ಬೆಳದಿಂಗಳಿನಷ್ಟೇ ತಂಪಂತೆ ನಿಜವೇನು ?
ಪ್ರೇಮ ನಿನ್ನೆ ಇತ್ತು
ಇಂದು ಇದೆ
ನಾಳೆ ಇರುವುದು
ಅಳಿಯದೆ ಉಳಿವುದು
ಎನುವರು ನಿಜವೇನು?
ಇರಬಹುದು…
ಪ್ರೇಮ ಸೂರ್ಯನಂತಹ ಕುಲುಮೆ
ಪುಷ್ಪಗಳು ಅರಳುವವು ಅದುವೆ ಒಲುಮೆ
ಅವ್ವ ನೀಡಿದ ಕೈ ತುತ್ತು
ಅಪ್ಪ ಬಾರಿಸಿದ ಛಡಿಯೇಟು
ಕೆನ್ನೆಗೆ ನೀಡಿದ ಹೂಮುತ್ತು
ಕುಲ-ಗೋತ್ರ-ಜಾತಿ-ಮತ
ದಾಟುವ ಹಿಮ್ಮತ್ತು
ಎಲ್ಲವೂ ಪ್ರೇಮವೇ…
ಭಿಕ್ಕುವಿಗೆ ಬುದ್ಧನೇ ಪ್ರೇಮ ಸ್ವರೂಪ
ಅಕ್ಕನಿಗೆ ಕದಳಿಯೇ ಕೈಮರ
ದೇವರಿಗೆ ಬೆಳಗುವ ದೀಪ
ಭವಸಾಗರದಲ್ಲಿ ಮುಳುಗುವ ಶಾಪ
ಎಲ್ಲವೇ ಪ್ರೇಮವೇ…
ಪ್ರೇಮ ಎಂಬ ಪುಳಕ
ಅಣುರೇಣುವಿನಷ್ಟು ಸೂಕ್ಷ್ಮ
ಶಿವ ಶಿವೆಗಿತ್ತ ಭಸ್ಮ
ಪ್ರೇಮ ಪ್ರಕೃತಿ
ಅದು ಹೂವಾಗುತ್ತದೆ
ಅದು ಹಣ್ಣಾಗುತ್ತದೆ
ಮತ್ತೆ ಬೀಜವಾಗುತ್ತದೆ.
ಪ್ರೇಮ ಏನಲ್ಲ?
ಎನೂ ಅಲ್ಲ…ಎರಡಕ್ಕರ!
ಪ್ರೇಮ ಇಡೀ ಜಗವ ಆವರಿಸಿದೆ
ನಿನ್ನಲ್ಲಿ…ನನ್ನಲ್ಲಿ…ಪ್ರತಿಫಲಿಸಿದೆ.
*****