ಗೊಂಚಲಲಿ ಹೂವೊಂದು ನಸುನಗುತಲಿತ್ತು
ಹಂತದಲ್ಲಿ ಸ್ಮಿತವನ್ನು ಇಡಲು ಬಯಸಿತ್ತು.
ಆ ಹೂವ ಹೊಂಬಣ್ಣ
ಆ ಹೂವ ಕಂಪನ್ನ –
ನೋಡಿತೈ ಬೆಡಗದರ ದೂರಿದ್ದ ಭ್ರಮರ,
ಕಾಡಿತ್ಯೆ ಬಳಿ ಬರಲು ಅತಿ ಆಶೆ ಅದರ.
ನಸುನಗುವ ವದನವನು
ತುಸು ಬಿರಿದ ಅಧರವನು
ನಯವಾದ ಗಲ್ಲವನು
ನಯಕಾಂತ ನಾಯನವನು
ರಸ ಭರಿತ ಸವಿಯನ್ನು
ಬೆಸಗೊಂಡ ಭಾವವನು
ಹೀರಳೆಳಸಿತು ತುಂಬಿ,
ಕ್ಷುದ್ರವಾಗಿಹ ಆಶೆದುಂಬಿ;
ಮೋಹಗೊಂಡಿತು ಬವರ
ಲೋಹ ಹೊಂದಿತು ಹೃದಯದರ
ಅತಿ ಮಧುರ, ಅತಿ ಕೋಮಲ ಹೂವ ಬಳಿ
ಅತಿ ಚಂಚಲ ತುಂಬಿಯಾಶೆಯ ಸುಳಿ…..
ಯವ್ವನದ ವೇಳೆಯದು,
ಜವ್ವನೆಯು ಆಶೆ ವಧು
ಝಂಕರನ ಇನಿದನಿಯು
ಇಂಪಾಗಿ ಕೇಳಿದುದು
ಪ್ರಕೃತಿಯ ನಿಜ ಬಯಕೆ
ಸುಕೃತಿಯ ಪ್ರಣಯದಕೆ
ಅನುಭವಿಸಬೇಕೆಂಬ
ತನುವಾಶೆಯುಂಟಾದುದು
ಅದರವನ್ನಾಶಿಸುವಗೆ
ಸಾಧರವನ್ನೀಯೆ ಮಿಗೆ –
ಪ್ರಣಯದುಯ್ಯಾಲೆಯಲಿ ತೂಗಿದುವು
ಕ್ಷಣ ಮಾತ್ರ, ಮರುಚಣವೆ ಮರುಗಿದುವು….
ಬಳಿಯಿದ್ದ ಹೂವೊಂದು ‘ಖುಳ್ಳೆಂ’ ದಿತು!
ಸುಳಿವನ್ನು ತಿಳಿದಾಗ ಹೂವು ನೊಂದಿತು
ರಸಹೀನ ಬಾಳೆಂದು ಬೇಸತ್ತು, ವಿ-
ರಸಗೊಂಡು, ಅದು ಅಲ್ಲೆ ಮುದುಡಿತು.
*****