ನಿನ್ನ ಎದೆಗೆ ಗುಂಡು ಬಡಿದಾಗ
ಮಣ್ಣು ನಡುಗಿತು ಹಗಲಹೂ ಬಾಡಿತು
ಶಾಂತಿದೂತ ಪಾರಿವಾಳ ಗೂಡು ಸೇರಿತು.
ತಿಳಿವು ತುಂಬಿದ ಕಣ್ಣು ಒಲವು ತುಂಬಿದ ಹೃದಯ
ಛಲವನರಿಯದ ಬದುಕು ಸಾಕು ಇಷ್ಟೇ
ನೆಲವು ನಂದನವಾಗಲಿಕ್ಕೆ
ಮನುಕುಲದ ಇತಿಹಾಸ ರಕ್ತರಂಜಿತ.
ಸರಳತೆ ಸಾಕಾರವಾಯಿತು
ಮಮತೆ ಮೈದೋರಿತು
ಕಾಳಸರ್ಪದ ಹಗೆ ಪಳಗಿಸುವ ಸಲುಗೆ
ಹಾಲಾಹಲ ಕೋಲಾಹಲದ ನಡುವೆ
ಮಂದಹಾಸವು ಬೀರುತ ನಡೆದೆ.
ಬತ್ತಿದ ಮನಗಳಲ್ಲಿ ಅರಿವು ಚಿಮ್ಮುತ್ತ
ಶಾಂತಿ ಸಂದಾನ ಸಮರಸಕೆ ನಾಂದಿ
ಸಂಕೋಲೆಯ ಬಿಡುಗಡೆ ಗಂಟೆ ಮೊಳಗುತ್ತಿತ್ತು.
ನರನ ಮೃಗತ್ವ ಬಾಯಿ ತೆರೆದಿತ್ತು
ನಿನ್ನ ಬಲಿಗೆ ಮಾತೃ ಮನಗಳು ಮರುಗಿದವು
ಕರಳು ಬಳ್ಳಿಗಳು ಕೊರಗಿದವು
ಇದೆಂಥ ಬಲಿ… ಸಾವು… ಹತ್ಯೆ…
ಇನ್ನೆಷ್ಟು??
ಬಾನು… ಭೂಮಿ ಗುಡುಗಿತು.
*****