ನೀ ಮನಸುಮಾಡಿದರೆ ಮಹದೇನು?
ನಿನ್ನೀ ಜಗದಿ ಅಸಾಧ್ಯ ಇಹುದೇನು||
ನೀ ಮನಸುಮಾಡಿದರೆ
ಮೂಗನು ಹಾಡುವನು|
ನೀ ಮನಸು ಮಾಡಿದರೆ
ಹೆಳವನು ಓಡುವನು|
ನೀ ಮನಸು ಮಾಡಿದರೆ
ಕುರುಡನೀಜಗವ ನೋಡಿ
ಸಂಭ್ರಮಿಸುವನು||
ನೀ ಮನಸು ಮಾಡಿದರೆ
ಕೊರಡು ಕೊನರುವುದು|
ನೀ ಮನಸುಮಾಡಿದರೆ
ವಿಷವು ಅಮೃತವಾಗುವುದು|
ನೀ ಮನಸುಮಾಡಿದರೆ
ಕಗ್ಗಲ್ಲು ಸ್ಫಟಿಕವಾಗುವುದು||
ನೀ ಮನಸು ಮಾಡಿದರೆ
ಮಣ್ಣು ಹೊನ್ನಾಗುವುದು|
ನೀ ಮನಸು ಮಾಡಿದರೆ
ಮೊಗ್ಗು ಹೂವಾಗಿ, ಹೂವು ಕಾಯಾಗಿ,
ಕಾಯಿ ಹಣ್ಣಾಗಿ ಸವಿಯಕೊಡುವುದು|
ನೀ ಮನಸು ಮಾಡದಿರೆ!
ಹೂವಾಗಲಿ, ಕಾಯಾಗಲಿ, ಹಣ್ಣಾಗಲಿ
ರೋಗ ರುಜನದಿಗಳಿಂದ
ಆಕಾಲದಲ್ಲಿ ಕಮರಿಹೋಗುವುದು||
*****