ಕಟುಕರಾಗದಿರಿ ನೀವು|
ಕನ್ನಡ ತಿಳಿದೂ
ಕನ್ನಡದವರೆದುರು
ಕನ್ನಡ ಮಾತನಾಡದೆ||
ಕನ್ನಡ ತಿಳಿದು ಮಾತನಾಡದವರನು
ಕಠಿಣ ಹೃದಯಿಗಳೆಂದರೆ ತಪ್ಪೇಕೆ?
ಇಂಥವರನು ಹುಡುಕಲು ಕನ್ನಡಿ ಬೇಕೇಕೆ?
ಇವರ ಮೆಚ್ಚಿಸಲು, ಹೊಗಳಲು ನಾ
ಮುನ್ನುಡಿ ಬರಿಯ ಬೇಕೆ?||
ಇರುವುದು ಕನ್ನಡ ನೆಲ
ಕುಡಿಯುವದು ಕನ್ನಡ ಜಲ|
ಬರುವುದು ಭಾಷೆ ಕನ್ನಡ
ನುಡಿಯಲೇಕೆ ಮನಸು ಬಾರದು|
ಜ್ಞಾನಾರ್ಜನೆಗೆ ಕಲಿಯಲಿ ಹತ್ತಾರು ಭಾಷೆ
ಈ ನೆಲದ ಋಣಭಾರಕಾದರೂ
ನಿತ್ಯ ಕನ್ನಡ ಮಾತನಾಡಲೇಕೆ ಚೌಕಾಸಿ||
ಸಲ್ಲದೀ ಬಿಗುಮಾನ
ಸಡಿಲದಿದ್ದರೆ ಅವಮಾನ|
ಇರಲಿ ಸ್ವಾಭಿಮಾನ
ಸ್ವಲ್ಪವಾದರೂ ಅಭಿಮಾನ|
ತಿನ್ನುತಿರುವುದು ಕನ್ನಡದ ಅನ್ನ
ಬಾಯಿದ್ದು ಸ್ಥಳಿಯರೊಡನೆ
ಅನ್ಯಭಾಷೆಯಲಿ ಮತನಾಡಿದರೆ
ಈ ನೆಲಕೆ ನೀ ಕೃತಘ್ನ ||
*****