ನೆನಪುಗಳು ಮಾಸುವುದಿಲ್ಲ
ಹಸಿರಾಗೇ ಉಳಿಯುತ್ತವೆ
ಘೋರ ತಪವನು ಗೈದ
ವಿಶ್ವಾಮಿತ್ರನ ಮೇನಕೆ
ತನ್ನತ್ತ ಸೆಳೆದ ಹಾಗೆ ||
ಕಲೆಗಾರನ ಕುಂಚದಲ್ಲಿ
ನವರಸ ಲಾಸ್ಯವಾಡಿ
ಕವಿದ ಮೋಡಗಳು
ಚಂದ್ರನ ಮರೆಮಾಡಿ
ಗುಡುಗು, ಸಿಡಿಲು, ಮಿಂಚಾದ ಹಾಗೆ ||
ಮುಂಗಾರಿನ ಅನುರಣೀಯ
ಶೃಂಗಾರಗೀತ ರಂಭೆ, ಊರ್ವಶಿ
ತಿಲೋತ್ತಮೆ ನಾಟ್ಯವಾಡಿ
ಬಣ ಗುಟ್ಟಿದ ಧರೆಯು ತಂಪಾಗಿ
ಘಮ್ಮನೆ ಬಿರಿದ ಹಾಗೆ ||
ಹಸಿರಾದ ಬನ ಸಿರಿಯ
ಹೂ ಮನಗಳಲಿ ದುಂಬಿಗಳ
ಝೇಂಕಾರ ಉನ್ಮತ್ತದಿಂ ಒಲಿದ
ಕತ್ತಲು ಬೆಳಕಿನ ಸಿಂಚನ
ದೊಲುಮೆಯಲಿ ನಲಿದ ಹಾಗೆ ||
ವರುಷ ಹರುಷ ಕಲೆತ
ಸಾಮ್ಯತೆಯ ಗೀಳಿನ
ಹಕ್ಕಿಯ ಮಾನವತೆಯ
ಬಯಕೆಗಳ ಸಾಕಾರಕೆ
ಇಳೆಗೆ ಇಳಿದು ಉಲಿದ ಹಾಗೆ ||
ಸೆರೆ ಸಿಕ್ಕ ಪಂಜರದ ಹಕ್ಕಿ
ಸ್ವತಂತ್ರಕ್ಕಾಗಿ ಹಪಹಪಿಸಿ
ಎಂದೋ ಕಳೆದು ಹೋದ
ಇನಿಯನ ಮನವ ಹೊಕ್ಕು
ಪ್ರೀತಿಯ ಹುಡುಕುವ ಹಾಗೆ ||
ಕಲೆಗಾರರು ಬಿಡಿಸಿದ
ಚಿತ್ರ ಸ್ಪಂದನದಲಿ
ವಿಶ್ವಾಮಿತ್ರನ ಮೋಹಪಾಶದಲಿ
ಬಂಧಿಸಿ ಬಡಿದೆಬ್ಬಿಸಿದ ಮೇನಕೆ ಹಾಗೆ ||
*****