ಹರಿ ನೀನು ನನ್ನ ಅಮರತ್ವದ ಸಿರಿ
ನಿನ್ನೊಂದಿಗೆ ಜನ್ಮ ಜನ್ಮ ಬಂಧ
ನಿನ್ನ ತೊರೆದು ಇನ್ನೊಂದು ಬಯಸಿದರೆ
ಅದೆಲ್ಲವೂ ಎನ್ನ ಭವದ ಬಂಧ
ನಿನ್ನೊಂದಿಗೆ ಚಲ್ಲಾಟ, ನಿನ್ನೊಂದಿಗೆ ಮೋಜು
ಅದುವೆ ಎನಗಿರಲಿ ದಿನರೋಜು
ಸತ್ಯದತ್ತ ವಾಲಿ ಅಂತರಂಗಕ್ಕೆ ಜಾರಿ
ನಾ ಮರೆಯಲಿ ಈ ಸಂಸಾರದ ಗೋಜು
ಎತ್ತ ನೋಡಿದರೂ ಇಲ್ಲಿ ಜನರ ಹುಡುಕಾಟ
ಅದುವೆ ಗೇಣು ಉದರದ ಮಾಟ
ಅದಕ್ಕಾಗಿ ಹಗಲಿರುಳು ಬರೀ ಹೋರಾಟ
ಮಾನವ ಜನ್ಮದ ಅರ್ಥ ಕಿಂಚಿತ್ತಿಲ್ಲ ನೋಟ
ಇನ್ನೂ ಎನ್ನ ಬಾಳಲಿ ಕಾಡದಿರಲಿ ಆಸೆ
ನಿಂತು ಹೋಗಲಿ ಇಂದ್ರಿಯಗಳ ವ್ಯಾಪಾರ
ನಿನ್ನ ಚಿತ್ತಾರದಲಿ ಎನ್ನ ಬದುಕಾಗಲಿ ಬೆಳಕು
ಮಾಣಿಕ್ಯ ವಿಠಲನಿಗೆ ನಿನ್ನ ಕೃಪೆ ಸಾಕು
*****