ಮೊನ್ನೆಯಷ್ಟೇ ಮುಗಿದ ಆರವತ್ತೊಂಬತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಯು. ಆರ್. ಅನಂತಮೂರ್ತಿಯವರು ತಮ್ಮ ನಲವತ್ತು ಪುಟಗಳ ಅಧ್ಯಕ್ಷ ಭಾಷಣದಲ್ಲಿ ಕರ್ನಾಟಕ, ಕನ್ನಡದ ಸಮಸ್ಯೆ, ಕನ್ನಡ ಸಾಹಿತ್ಯ ಪರಂಪರೆಯ ಕುರಿತು ಹೇಳಿರುವ ಮಾತುಗಳು ನಿಜಕ್ಕೂ ಅನನ್ಯವೂ ಮಹತ್ವಪೂರ್ಣವೂ ಆಗಿದೆ. ತಮ್ಮ ವಿಭಿನ್ನ ಕಾಲಘಟ್ಟದಲ್ಲಾದ ಸಾಹಿತ್ಯದ ಪ್ರಭಾವಗಳು, ತಮ್ಮ ಮೇಲೆ ಪ್ರಭಾವ ಬೀರಿದ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ ಎಲ್ಲಾ ಪ್ರಮುಖ ಸಾಹಿತಿಗಳ ಹೆಸರನ್ನೂ ಅವರು ತಮ್ಮ ಭಾಷಣದಲ್ಲಿ ದಾಖಲಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ ಆ ನಲವತ್ತು ಪುಟಗಳ ಧೀರ್ಘ ಭಾಷಣದಲ್ಲಿ ಇಡೀ ಕನ್ನಡ ಸಾಹಿತ್ಯದ ವಿಶೇಷತೆಗಳನ್ನು ಎತ್ತಿ ಹಿಡಿದಿರುವ ಆ ವಿಶಿಷ್ಟ ಭಾಷಣದಲ್ಲಿ ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸಿದ ಒಬ್ಬಳೇ ಒಬ್ಬಳು ಲೇಖಕಿಯ ಹೆಸರೂ ಇಲ್ಲದಿರುವುದು.
ಮಾರ್ಚಿ ೮ರ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಣ್ಣ ಉದಾಹರಣೆಯನ್ನು ನೀಡುತ್ತಿರುವುದರ ವಿಶೇಷವೆಂದರೆ ಸಾಹಿತ್ಯ ಕ್ಷೇತ್ರವೆಂಬುದು ಬುದ್ಧಿವಂತರ, ವಿವೇಚನಾಶೀಲರ, ವೈಚಾರಿಕಾ ಪ್ರಜ್ಞೆಯುಳ್ಳವರ, ಸೂಕ್ಷ್ಮ ಸಂವೇದನಾಶೀಲರ ಕ್ಷೇತ್ರವೆಂದೇ ಜನಜನಿತವಾಗಿರುವಾಗ್ಯೂ ಇಂತಹ ನಿರ್ಲಕ್ಷ್ಯವನ್ನು ಪ್ರಜ್ಞಾವಂತ ಲೇಖಕ, ಜವಾಬ್ದಾರಿಯುತ ಸ್ಥಾನವೊಂದರಿಂದ ಮಾತನಾಡುವಾಗ ತೋರಿದ್ದಾರೆಂದಾದರೆ ಬೇರೆ ಕ್ಷೇತ್ರಗಳ ಪಾಡೇನು? ಜೊತೆಗೆ ಈ ಭಾರಿಯ ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಟಿಗಳಲ್ಲಿ ೧೧೦ಕ್ಕೂ ಹೆಚ್ಚು ಲೇಖಕರು ಭಾಗಿಗಳಾಗಿದ್ದರೆ, ಕೇವಲ ೧೭ ಮಂದಿ ಲೇಖಕಿಯರಿಗೆ ವಿವಿಧ ಗೋಷ್ಠಿಗಳಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಇದನ್ನು ಕಂಡಾಗ ಈ ತಾರತಮ್ಯಕ್ಕೆ ಕಾರಣವೇನು ಎಂದು ಪ್ರಜ್ಞಾವಂತರು ಯೋಚಿಸದೆ ಇರುವುದಿಲ್ಲ.
ಈ ಎಲ್ಲಾ ನಿರ್ಲಕ್ಷಿತ ಮಹಿಳೆಯರ ಪರವಾಗಿ ಸಮ್ಮೇಳನಾಧ್ಯಕ್ಷರೊಂದಗಿನ ಸಂವಾದ ಗೋಷ್ಠಿಯಲ್ಲಿ ಖ್ಯಾತ ಬರಹಗಾರ್ತಿ ವೈದೇಹಿಯವರು (ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿದ್ದ ಏಕೈಕ ಲೇಖಿಕಿ.) ಈ ವಿಷಯವನ್ನು ಪ್ರಸ್ತಾಪಿಸಿ ಮಹಿಳೆಯರ ಮೇಲಿನ ಸೆನ್ಸಾರ್ ನೀತಿ ನಿಮಗರಿವಿಲ್ಲದೇ ನಿಮ್ಮೊಳಗಿದೆ. ಯಾಕೆ ಆ ಒಂದು ಭಾಗವನ್ನು ಮೌನಕ್ಕೆ ಒಪ್ಪಿಸಿ ಬಿಟ್ಟಿದ್ದೀರಿ. ನಿಮ್ಮ ಸಾಹಿತ್ಯ ಬದುಕಿನಲ್ಲಿ ಒಬ್ಬಳೇ ಒಬ್ಬ ಮಹಿಳೆಗೂ ಸ್ಥಾನವಿಲ್ಲವೇ ಇದು ಬೇಕೆಂದೇ ಮಹಿಳೆಯನ್ನು ನಿರ್ಲಲಕ್ಷಿಸುತ್ತಿರುವ ವಿಧಾನವೇ ಎಂದು ಗಟ್ಟಿಯಾಗಿ ಕೇಳಿದಾಗ ತುಂಬಿದ ಸಭೆಯಲ್ಲಿ ಜೋರಾದ ಕರತಾಡನ ಮೊಳಗಿತು.
ಆದರೆ ನಿಜಕ್ಕೂ ಇದು ಚಪ್ಪಾಳೆ ತಟ್ಟುವ ವಿಷಯವಾಗಿರಲಿಲ್ಲ. ನಿಮ್ಮ ಬದುಕಿನಲ್ಲಿ ಒಬ್ಬ ಮಹಿಳೆಯ ಸ್ಥಾನವೇನು ಎಂದು ಇಪ್ಪತ್ತೊಂದನೇ ಶತಮಾನದ ನವನಾಗರೀಕ ಸಮಾಜದ ಒಂದು ತುಂಬಿದ ಸಭೆಯಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ, ಅತ್ಯಂತ ಸಂವೇದನಾಶೀಲ ಸಾಹಿತಿಯೊಬ್ಬರನ್ನು ಸಾಮಾನ್ಯ ಮಹಿಳೆಯ ನೆಲೆಯಿಂದ ವೈದೇಹಿಯಂತಹ ಸೂಕ್ಷ್ಮ ಮನಸ್ಸಿನ ಬರಹಗಾರ್ತಿಯೊಬ್ಬರು ಪ್ರಶ್ನಿಸಿದ್ದು, ನಿಜಕ್ಕೂ ಇಡೀ ಮಾನವ ಜನಾಂಗವೇ ತಲೆ ತಗ್ಗಿಸುವಂತಹ ವಿಷಯ. ಹಾಗೇ ಪುರುಷ ಮಹಿಳೆಯರಿಬ್ಬರಿಗೂ ಅತ್ಯಂತ ಅವಮಾನಕರ ಹಾಗೂ ನೋವಿನ ಸಂಗತಿಯೂ ಆಗಿದೆ. ಮಹಿಳೆ ತನ್ನ ಹಕ್ಕುಗಳಿಗಾಗಿ ಬಾಯ್ಬಿಟ್ಟು ಕೇಳಿದಾಗ ಇದೇ ನಾಗರಿಕ ಸಮಾಜ ಅದನ್ನು ಬರಿಯ ಕಿರುಚಾಟ, ಹಾರಾಟ, ಅರೆಪ್ರಜ್ಞಾವಂತ ನಿಲುವು ಎಂದು ಆಕ್ಷೇಪಿಸುತ್ತದೆ. ತನ್ನ ಸ್ಥಾನವನ್ನು ಗುರುತಿಸಿದಾಗಲೇ ಅದನ್ನು ಒಪ್ಪಿಕೊಂಡರಾಯ್ತು ಎಂದು ಮೌನವಾಗಿ ಕಾಯುತ್ತಾ ಕುಳಿತರೆ, ಅವಳ ಬೆಳವಣಿಗೆಯನ್ನು ಗಮನಿಸಿಯೇ ಇಲ್ಲವೆಂಬಂತೆ ದಿವ್ಯ ನಿರ್ಲಕ್ಷ್ಯ ತೋರಿ ಮುನ್ನಡೆಯುತ್ತದೆ. ಹೀಗಿರುವಾಗ ಅವಳು ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಿರುವುದೆಲ್ಲಿ? ನಿಜಕ್ಕೂ ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಅವಳಿಗೊಂದು ನಿರ್ದಿಷ್ಟ ಸ್ಥಾನವೆಂಬುದಿದೆಯೇ ಅಥವಾ ಆ ಸ್ಥಾನ ಇಂದಲ್ಲ ನಾಳೆ ಸಿಕ್ಕೀತೆಂಬ ಭರವಸೆಯಾದರೂ ಉಳಿದಿದೆಯೇ ಸಧ್ಯಕ್ಕೆ ಸಮಾನತೆಯ ಮಾತಿರಲಿ, ಅವಳ ಅಸ್ತಿತ್ವವನ್ನು ಗುರುತಿಸಲು ಬಳಸುತ್ತಿರುವ ಮಾನದಂಡವಾದರೂ ಎಂತಹದು? ಅವಳ ಬೆಳವಣಿಗೆಗಳು ಸಾಧನೆಗಳು ಇತಿಹಾಸದಲ್ಲಿ ದಾಖಲಾಗುವುದನ್ನೇ ದಾಖಲಿಸುವ ಅಥವಾ ಅದು ಸಾಧನೆಯೇ ಅಲ್ಲವೆಂದು ನಿರ್ಲಕ್ಷಿಸುವ ಜಾಣ ಕುರುಡರು ತಮ್ಮ ಒಳಗಣ್ಣು ತೆರೆಯುವುದು ಯಾವಾಗ ? ಈ ಎಲ್ಲಾ ನಿರ್ಲಕ್ಷ್ಯದ ನಡುವೆಯೂ ತಾನೇ ತಾನಾಗಿ ಹೊರಹೊಮ್ಮಿ ತನ್ನ ಸ್ಥಾನವನ್ನು ತಾನೇ ಗುರುತಿಸಿಕೊಂಡು ಪ್ರತಿಷ್ಠಾಪಿತಳಾಗುವ ದಿಟ್ಟತನ ಇಂದಿನ ಮಹಿಳೆಗಿದೆಯೇ?
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶ್ನೆಗಳು ಮತ್ತೆ ಮತ್ತೆ ಕಾಡುತ್ತಲೇ ಉಳಿದುಬಿಡುತ್ತದೆ. ಸಖಿ, ಈ ಪ್ರಶ್ನೆಗಳಿಗೆ ಎಂದಾದರೊಂದು ದಿನ ಮಹಿಳೆ ತಾನೇ ಉತ್ತರಗಳನ್ನು ಕಂಡುಕೊಂಡು ಇತಿಹಾಸಕ್ಕೆ ದಾಖಿಲಾಗಲಿ ಎಂಬುದೇ ನಮ್ಮ ಹಾರೈಕೆ ತಾನೇ?
*****