ನೀ ಹುಟ್ಟಿದ್ದು ಇನ್ನೂ ಮೊನ್ನೆ ಎನ್ನುವಂತಿದೆ.
ಪಿಳ ಪಿಳ ಕಣ್ಣು ಬಿಟ್ಟಿದ್ದು
ಬುಳ ಬುಳ ಮೂತ್ರ ಬಿಟ್ಟಿದ್ದು
ತಿಂಗಳು ಮುಂಚೆ ಹುಟ್ಟಿದ್ದೆಂದು ನಿನ್ನನ್ನ
ನಾಲ್ಕು ದಿನ ದಪ್ಪ ಹತ್ತಿಯಲ್ಲಿ ಸುತ್ತಿಟ್ಟಿದ್ದು
ಇನ್ನೂ ಕಣ್ಣಲ್ಲಿದೆ,
ಪುಟ್ಟ ಕಂಠದಿಂದ ಹೊರಟ
ಮರಿ ಬೆಕ್ಕಿನದಂಬಂಥ ದನಿ ಕಿವಿಯಿರಿದರೂ
ಎಷ್ಟು ಮಧುರ ಎಂದು ಕೊಂಡಾಡಿದ್ದು
ಸ್ಮೃತಿಯಲ್ಲಿದೆ!
ಹಣ್ಣಲ್ಲಿದೆ ಹಲ್ಲಿನ ಗುರುತು,
ಮಣ್ಣಲ್ಲಿದೆ ತಟ್ಟರಿಯುತ್ತ ನೀನಿಟ್ಟ ಹಜ್ಜೆಯದು,
ಗೇಟನ್ನು ಕುರಿತು.
* * *
ಏನು ಸಡಗರ ಎಂಥ ಗೆಲವು, ನಿನ್ನ
ಬಿಡುಗಡೆಗೆ ಕೇಕೆ, ಮುಖ ನಗೆಪತಾಕೆ,
ಮಾತೆಲ್ಲ ಬಾನಿನಲಿ ಮೈಲಿಯೆತ್ತರ ಜಿಗಿದು
ಕಿಡಿ ಹೂವ ಚಿಮ್ಮಿ ಮುಗಿಯುವ ಗದ್ದಲ.
ಮಾತು ಮಾತಿಗೆ ಹರಕೆ
ಕೆಂದ ಬಾಳಲಿ ಎಂದು,
ಹೆಜ್ಜೆ ಹೆಜ್ಜೆಗೆ ಹಾಡು ತಾಳ ತಬಲ,
ನೀಲಿ ನೀರಿನ ಗಡಿಗೆ ಬಾನು. ಬದಿಗೆ
ತೇಲಿ ಬಂದನು ಚಂದ್ರ ಚಿಕ್ಕಿ ಜೊತಗೆ;
ಜೂಟಾಟದಲ್ಲಿದ್ದ ತುಂಡುಮೋಡದ ತಂಡ
ಸಿಗದೆ ಓಡುತ್ತಿತ್ತು ಗಾಳಿ ಕೈಗೆ;
ಮನೆಯ ಅಂಗಳದಲ್ಲಿ ಕವನ ಹಾಡುತ್ತಿತ್ತು
ಗಜದಗಲ ಹಬ್ಬಿದ್ದ ಹಸಿರು ದವನ;
ಮುಟ್ಟಿದ್ದೆ ಸಾಕಾಗಿ
ಮೈಯೆಲ್ಲ ಕಂಪಾಗಿ
ಬೀಗಿ ನಡೆಯುತ್ತಿತ್ತು ಮಂದಪವನ.
ನಿತ್ಯಮಲ್ಲಿಗೆಬಳ್ಳಿ ತೃಪ್ತಿಯಿಂದ
ಬಿಳಿಸೆರಗ ಹೊದ್ದಿದ್ದು ಕತ್ತುತುಂಬ.
ಹೆಚ್ಚಿದರೆ ಇನ್ನಿಷ್ಟು ಹುಚ್ಚೆನ್ನಬಹುದಿತ್ತು
ನಮ್ಮ ನಡಿಗೆಯಲಿತ್ತು ಅಷ್ಟು ಜಂಭ.
* * *
ಅದೆಲ್ಲ ನೋಯಿಸುವ ನೆನಪು
ಸದ್ಯದ ಬದುಕು ಉರಿದ ಬತ್ತಿಯ ಕರಕು,
ಸುಳ್ಳೇನಲ್ಲ, ಬೆಟ್ಟದಷ್ಟು ಬಡತನ ನಮಗೆ,
ಆದರೂ ನೀ ಬಿಟ್ಟು ಹೋಗುವಷ್ಟಿತ್ತೆ
ಎಂದು ನೋಯುತ್ತೇನೆ.
ಎಳೆ ಬಾಲನ ಬಾಯಿಗೆ
ಬೇಕಾಗುವ ಹಾಲಿಗೆ
ಸಾಕಾಗುತ್ತಿತ್ತು ಹಾಗೂ ಹೀಗೂ
ಒಪ್ಪೊತ್ತಿನ ಕೂಳಿಗೆ.
ಇಷ್ಟರ ನಡುವೆ ನೀ ಬೆಳೆದೀಯೆಂದು
ದುಃಖ ಕಳೆದೀಯೆಂದು
ಹತ್ತು ಜನರ ನಡುವೆ ಕತ್ತತ್ತಿ ನಿಲ್ಲುವ ದಿನವ
ತಂದೀಯೆಂದು
ಬಯಸಿದ್ದಕ್ಕೆ
ಕಾಲಿಡಲು ಕಲಿತ ಹುಡುಗ
ಎಲ್ಲರ ಕಣ್ಣು ತಪ್ಪಿಸಿ
ಕಾಲಿಟ್ಟೆ ಕಡೆಗೆ
ಮನೆ ಹೊರಗೆ
* * *
ಸುತ್ತಿಕೊಂಡಂತೆ ಕಡೆಗು ನಮ್ಮ ಬದುಕನ್ನ
ಆಕ್ರಂದನ ?
ಇದ್ದಲ್ಲೆ ಬಂಧನ.
ಅತ್ತಿದ್ದೆಷ್ಟೊ
ಅಳಲಿದ್ದೆಷ್ಟೊ
ದೂರು ಸಲ್ಲಿಸಿ ಎಲ್ಲ ಕಡೆಗೆ
ಸುತ್ತಿದ್ದೆಷ್ಟೋ ಬೀದಿ ಬೀದಿ.
ಹೊತ್ತಿ ಉರಿಯುವ ದುಃಖ ಶಮಿಸಲೆಂದು
ನೋಡುತ್ತೇವೆ ಸದಾ ನಿನ್ನ ಚಿತ್ರದ ಕಡೆಗೆ.
ನೀ ಬಂದೇ ಬರುವಿಯೆಂಬ ಭವಿಷ್ಯನಂಬಿ
ಹಾಯುತ್ತೇವೆ ಈ ಹರಾಮೀ ಬದುಕ
ನೀ ಬರುವ ತನಕ
ಕಾಯುತ್ತೇವೆ ತೆಗೆದು ಮನೆ ಬಾಗಿಲ ಚಿಲಕ.
*****