ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ
ಜನರ ಬುದ್ಧಿ ಭಾವ
ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ
ಶುದ್ಧ ಬುದ್ಧ ಬಸವ || ಪ ||
ಯಜ್ಞಯಾಗಗಳ ಪೂಜೆ ನೇಮಗಳ
ನೆಪದಲಿ ಜನರನು ಸುಲಿವ
ಪುರಾಣ ಶಾಸ್ತ್ರವ ಸುಳ್ಳು ಕಂತೆಗಳ
ಹೇಳುತ ಹೊಟ್ಟೆಯ ಹೊರೆವ || ೧ ||
ಪೂಜಾರಿ ವರ್ಗ ಬದುಕಿನ ಮಾರ್ಗ
ಎಂದು ಹಳಿದು ಅವರ
ಸರಳ ಸಂಬಂಧ ದೇವಭಕ್ತರಿಗೆ
ಕಲ್ಪಿಸಿದೆ ಉಳಿಸಿ ಜನರ || ೨ ||
ದಿನವಾರಗಳನು ಗ್ರಹ ತಾರೆಗಳನು
ಎಣಿಸುವ ಗುಣಿಸುವ ತಂತ್ರ
ಮೋಸವೆಂದೆ ಜ್ಯೋತಿಷ್ಯ ಶಾಸ್ತ್ರ
ಮೈಗಳೃ ಜನರ ಕುತಂತ್ರ || ೩ ||
ಶಿವನ ನೆನೆದು ದಿನ ರಾತ್ರಿ ಕಳೆಯುವಗೆ
ಪ್ರತಿಕ್ಷಣವು ಸುಮುಹೂರ್ತ
ಶಿವನನು ಎಲ್ಲೆಡೆ ಕಾಂಬ ಭಕ್ತರಿಗೆ
ಇಹವೆಲ್ಲ ಕರ್ಮ ಕರ್ತ || ೪ ||
ನೋವು ನಷ್ಟಗಳ ವ್ಯಾಧಿ ಬಾಧೆಗಳ
ಭಯವು ಹೆಚ್ಚಿನದು ಮರಣ
ಭಯವೆ ಮೌಢ್ಯತೆಗೆ ಮೂಲ ಭಕ್ತನಿಗೆ
ಮಹಾನವಮಿ ಆ ಮರಣ || ೫ ||
ಮೌಢ್ಯಶೋಷಣೆಯ ಮುಕ್ತ ಸಮಾಜವ
ನಿರ್ಮಿಸ ಬಯಸಿದೆ ನೀನು
ಮನುಜ ಮಹಿಮೆಯನು ಎತ್ತಿ ಹಿಡಿದ ನೀ
ಯುಗದ ಜಗದ ಭಾನು || ೬ ||
*****