ನವಿರಾದ ಭಾವದಲೆಗಳ
ಸೀಳುತ್ತಾ ಮುನ್ನುಗ್ಗುತ್ತಿತ್ತು
ನವ್ಯದ ಹಡಗು
ಆಹಾ! ಏನು ಬಿಂಕ, ಬೆಡಗು, ಬಿನ್ನಾಣ
ಕೋಡುಗಲ್ಲಿನ ಮೇಲೆ
ಕಡಲ ಹಕ್ಕಿಗಳಂತೆ ಕೂತು ನೋಡಿದೆವು.
ಕಾರಿರುಳು-
‘ಕರಿಯ ನಭದ ಕಣ್ಗಳಂತೆ
ಅಭಯದೊಂದು ರೂಹಿನಂತೆ
ತೇಲಿಬಿಟ್ಟ ದೀಪದಂತೆ’
ನೂರು ತಾರೆ ಬೆಳಕ ಬೀರಲು
ಪುಟ್ಟ ದೋಣಿಯಲಿ ಕೂತು
ರಾತ್ರಿ-ಹಗಲು ರಾಕ್ಷಸ ಅಲೆಗಳನ್ನು ತಳ್ಳುತ್ತಾ
ಹರಸಾಹಸದಿಂದ ದಡ ಸೇರಿದೆವು.
ಮುಸ್ಸಂಜೆ-
ಆಗಸದಲ್ಲಿ ಬೆಳ್ಳಕ್ಕಿಗಳ ಸಾಲು
‘ದೇವರ ರುಜು’
ಪರವಶತೆಯಿಂದ ನೋಡಿದೆವು.
ಕಣಿವೆಯ ಮುದುಕ
ಕೈ ಮರವಾದ; ಮುನ್ನಡೆದೆವು.
‘ಮೂಡಲ ಮನೆಯಲ್ಲಿ ಮುತ್ತಿನ ನೀರು
ಗಿಡಗಂಟೆಗಳ ಕೊರಳಲ್ಲಿ ಹಕ್ಕಿಗಳ ಹಾಡು’
ತಲೆದೂಗಿದೆವು.
ಶಾನುಭೋಗರ ಮಗಳು
ಕಾಲಿಗೆ ನೀರಿತ್ತು ಕೈತುತ್ತು ನೀಡಿದಳು;
‘ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ’ ತಲೆಬಾಗಿದೆವು.
ಹಾದಿಯ ತುಂಬಾ
ನಗುತ್ತಿತ್ತು ಏಳುಸುತ್ತಿನ ಮಲ್ಲಿಗೆ
‘ಹಚ್ಚನೆ ಹಸುರ ಗಿಡದಿಂದೆಂತು
ಮೂಡಿತ್ತೋ ಬೆಳ್ಳಗೆ’
-ಅನತಿ ದೂರದಲ್ಲೇ ಕಲ್ಲು ಬಂಡೆಯನ್ನೇರಿ
ಅದಾರೋ… ಯಾರವರು, ಯಾರು?
ಎದೆತುಂಬಿ ಹಾಡುತ್ತಿದ್ದರು.
ಹಮ್ಮು-ಬಿಮ್ಮು ಸೋಕದ ಹಾಡು
ನೊಂದ ಜೀವರಿಗೆ ತಂಪನೀಯುವ ಹಾಡು
ಪ್ರೀತಿ-ಸ್ನೇಹಗಳ ಪಸರಿಸುವ ಹಾಡು
ಎಲ್ಲೋ ಅಳುವ ಮಗುವನೂ ಸಂತೈಸುವ ಹಾಡು
ನವ-ನವೀನ ಭಾವದ ಹಾಡು.
ಹಾಡಿನ ಹಾಡಿಯಲ್ಲಿ ಬೀಡುಬಿಟ್ಟು
ಹಾಡಿಗೆ ನಮ್ಮನ್ನೇ ನಾವು ಕೊಟ್ಟು ಕೊಂಡೆವು
ನೂರು ಭಾವದ ಬಾವಿ ಮೊಗೆ ಮೊಗದು
ಸಿಹಿನೀರ ಕುಡಿದೆವು
ಕಡಲನೀಜುವೆನೆಂಬ ಮರುಳ ಹಡಗು
ತನಗೆ ತಾ ಹೊರೆಯಾಗಿ ತಾನೆ ಮುಳುಗುತ್ತಿತ್ತು…
ಅಲೆಯ ಮೇಲೊಂದು ತಾವರೆಯ ಎಲೆ
ಎಲೆಯ ಮೇಲೊಂದು ಪುಟ್ಟ ಹಣತೆ
ತೇಲುತ್ತಿತ್ತು ತನ್ನ ಪಾಡಿಗೆ ತಾನೇ
ನೀಲ ಮೌನದಲ್ಲಿ…
*****