ಏನಪರಾಧ ಮಾಡಿದೆನೆಂದು?
ನನಗೀಗತಿಯನು
ನೀ ದಯಪಾಲಿಸಿದೆ|
ನನ್ನಯ ಸತ್ಯದೀಕ್ಷೆಗೇಕಿಂತ
ಪರೀಕ್ಷೆಯ ವಿಧಿಸಿದೆ ವಿಧಿಯೆ|
ಕಾಪಾಡು ಕರುಣಾಳು
ಕಾಶಿಪುರ ಪೋಷಿಪನೆ
ಶಂಕರ ಶಶಿಧರನೆ||
ಸೂರ್ಯವಂಶದರಸನಾಗಿ ಎಲ್ಲರನು
ಸಮಾನತೆಯಿಂದ ನೋಡುತಲಿದ್ದೆ|
ದಾನ ಪುಣ್ಯಾದಿ ಸತ್ಕಾರ್ಯಾಗಳ
ಧರ್ಮ ಬುದ್ಧಿಗನುಸಾರವಾಗಿ ಯೋಚಿಸಿ
ಯತೋಚಿತವಾಗಿ ನಿರ್ವಹಿಸಿದೆ|
ವಯೋವೃದ್ದರು ಬಾಲಕರು ಸ್ತ್ರೀಯರ
ಆದರಿಸಿ ಪ್ರೀತಿಸಿ ಗೌರವಿಸಿದೆ||
ರಾಜಧರ್ಮ ಸತ್ಯಮಾರ್ಗ
ಕರುಣಾ ನೀತಿ ನಿಯಮ
ಅನುಸರಿಸಿಯೇ ನಡೆದೆ|
ಹಿಂದೆ ಮಾಡಿದ ಕರ್ಮಫಲವು
ಮುಂದೆ ಪುಣ್ಯ ನೀಡಲು ಪರೀಕ್ಷೆಯೊ?
ಏನೊಂದನೂ ಅರಿಯೆ|
ಮಡದಿ ಮಗನನು ಜೀತಕ್ಕಿರಿಸಿ
ಋಣಮಕ್ತನಾಗೆ ಸ್ಮಶಾನ ಸೇವೆ ಗೈಯುತಿರುವೆ||
ಕ್ಷಾತ್ರಧರ್ಮಕ್ಕನುಸಾರವಾಗಿ
ದಾನ ಸ್ವೀಕರಿಸುವಂತಿಲ್ಲ|
ಕೈತುಂಬಾ ಮುತ್ತು ರತ್ನಗಳ
ದಾನ ನೀಡುತ್ತಿದ್ದ ಕೈಗಳೀಗ
ನಿರ್ಜೀವ ದೇಹ ಅಸ್ತಿಗಳನು
ಅಗ್ನಿಗೆ ಅರ್ಪಿಸುತಲಿಹವು|
ಸ್ಮಶಾನ ಸುಂಕದೊಂದು ಭಾಗವ
ಸ್ವೀಕರಿಸಿ ಹೊಟ್ಟೆಹೊರೆಯುತಿರುವೆ|
ಮಡದಿ ಮಕ್ಕಳೆಲ್ಲೊ?
ಗಂಡ ಹೆಂಡತಿ ಮಗ ಒಂದೆಡೆಸೇರಿ|
ಸಾಮಾನ್ಯ ಜನರ ಜೀವನ ನಡೆಸೆ
ಭಾಗ್ಯವ ಕರುಣಿಸು, ಸತ್ಯವ ಜಯಿಸು
ನನ್ನೀ ಸತ್ಯ ವ್ರತವನು ಪೂರ್ಣಗೂಳಿಸು||
*****