ಕಾಂಟೆಸಾದಲ್ಲಿ ಕೂತಾಗ ಕಾವ್ಯವಾಗದಿದ್ದರೆ
ಕುಂಟುನೆಪದ ಭವ್ಯತೆಯಲ್ಲಿ ಬತ್ತಿ ಹೋಗುತ್ತೇನೆ.
ಉರಳುವ ಚಕ್ರದಲ್ಲಿ ನರಳುವ ಕರುಳು-
ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ;
ವಂದಿ ಮಾಗಧರು ನಂದಿ ಹೋದ ಹಾದಿಯಲ್ಲಿ
ಬರಿತಲೆಯ ಬರಿಗಾಲ ನಿಜ ಮಾನವ!
ಮತ್ತೊಬ್ಬ ಹತ್ತುತ್ತಿದ್ದಾನೆ ವೃಷಭಾಚಲಕ್ಕೆ
ಜಗತ್ತನ್ನು ಗೆದ್ದ ದೊಡ್ಡಸ್ತಿಕೆಯ ಶಿಖರಕ್ಕೆ
ಗೆದ್ದವರು ಎಷ್ಟೋ ಜನ! ಎಲ್ಲಿ ಬರೆಸಲಿ ಶಾಸನ?
ನಿರಸನಗೊಂಡದ್ದೇ ನಿಜವಾದ ಕವನ.
ಮೃತ್ಯುವೇ ಮೈವೆತ್ತ ಮುತ್ತುರತ್ನದ ಕಿರೀಟ
ಇಲ್ಲಿ ಆಸ್ಥಾನದಲ್ಲಿ ನೀಲಾಂಜನೆಯ ನೃತ್ಯ!
ಬಿಟ್ಟ ಕಣ್ಣುಗಳಲ್ಲಿ ಭ್ರಮೆಯ ಬೆಟ್ಟಗಳು
ಕುಸಿದು ಕುಪ್ಪೆಯಾಗುವುದರಲ್ಲಿ ಎಂಥ ಸತ್ಯ!
ಒಳಗೆ ತತ್ತಿಯೊಡೆದು ಹುಟ್ಟಿದೆ ಕತ್ತಿಕಾಳಗ
ತುಂಬಿ ಬರುತ್ತಿದೆ ನೆನಪಿನ ಕೊಳಗ;
ಬದುವಿನ ಮೇಲೆ ಚಿಟ್ಟೆ ಹಿಡಿಯುವಾಗ
ಹಾವು ಹೆಡೆ ಬಿಚ್ಚಿದ್ದು;
ಬುಸುಗುಡುವ ಬೆವರಲ್ಲಿ ಬಿಸಿಲ ಕುಡಿದು
ಕಣ್ಣುಗಳಲ್ಲಿ ಬಣ್ಣದ ಚಿತ್ತಾರ ಬಿಡಿಸಿದ್ದು;
ಬಸ್ಸಿಗೆ ಕಾಸಿಲ್ಲದೆ ಕಾಲಲ್ಲಿ ಕಾವ್ಯ ಬರೆದದ್ದು;
ಹಸಿದ ಹೊಟ್ಟೆಯ ಒಳಗೆ ಕನಸುಗಳು ಕಚ್ಚಿದ್ದು-
ಕತ್ತಲೆಯ ಕಟ್ಟುಗಳನ್ನು ಬಿಚ್ಚಿಕೊಳ್ಳುತ್ತದೆ
ಬುದ್ಧ ಬೆಳಕಿನ ಬುತ್ತಿ:
ಕಾವ್ಯ ತುಂಬಿಕೊಳ್ಳಬೇಕು ಕಾಂಟೆಸಾದ ಒಳಗೆ
ನೆನಪಾಗುತ್ತಲೇ ಇರಬೇಕು ಬರಿಗಾಲ ನಡಿಗೆ.
*****