ಬೆಳ್ಳುಳ್ಳಿಯ ಘಮಟು ವಾಸನೆಗೆ ಮೂಗು ಮುರಿಯುವವರೇ ಹೆಚ್ಚು. ಆದರೆ ಈ ಗೆಡ್ಡೆಯ ಔಷಧೀಯ ಮಹತ್ವವನ್ನವರು ತಿಳಿದರೆ?
ಬೆಳ್ಳುಳ್ಳಿ ನೆಲದಲ್ಲಿ ಬೆಳೆಯುವಂತಹ ಗಡ್ಡೆ. ಇದು ಬೆಳ್ಳಗೆ ಇದ್ದು, ಆರೋಗ್ಯ ರಕ್ಷಕವೂ, ಔಷಧೀಯ ಗುಣಗಳಿಂದ ಕೂಡಿದ್ದೂ ಆಗಿದೆ. ಇದನ್ನು ಮಸಾಲೆ ಪದಾರ್‍ಥವಾಗಿ ಅಡುಗೆಯಲ್ಲಿ ಉಪಯೋಗಿಸುತ್ತಾರೆ. ಇದರ ಗಿಡ ಲಿಲಿಯೇಸೀ ಎಂಬ ಸಸ್ಯವರ್‍ಗಕ್ಕೆ ಸೇರಿದ್ದು, ಇದನ್ನು “ಆಲಿಯಮ್ ಸಟೈವಮ್” ಎಂದು ಸಸ್ಯಶಾಸ್ತ್ರೀಯವಾಗಿ ಕರೆಯುತ್ತಾರೆ.
ಭಾರತದಲ್ಲಿ ಬೆಳ್ಳುಳ್ಳಿಯನ್ನು ಶೀತವಲಯದ ಬೆಳೆಯನ್ನಾಗಿ ಬೆಳೆಸಲಾಗುತ್ತಿದೆ. ಪ್ರಪಂಚದಲ್ಲಿ ಪ್ರತಿವರ್‍ಷ ೨೦೦ ಕೋಟಿ ಕಿಲೋ ಬೆಳ್ಳುಳ್ಳಿ ಬೆಳೆಯುತ್ತಿದೆ.
ಈರುಳ್ಳಿಯೊಂದಿಗೆ ಹೋಲಿಸಿ ನೋಡಿದಾಗ ಬೆಳ್ಳುಳ್ಳಿಯೇ ಹೆಚ್ಚು ಪುಷ್ಟಿದಾಯಕ.
ಪ್ರಾಚೀನ ಕಾಲದಲ್ಲಿಯೂ ಬೆಳ್ಳುಳ್ಳಿಯ ಮಹತ್ವ ತಿಳಿದಿತ್ತು. ಹಿಪೋಕ್ರೇಟ್ಸ್ ಎಂಬ ಪ್ರಖ್ಯಾತ ಗ್ರೀಕ್ ವೈದ್ಯ ಇದನ್ನು ಹೃದಯಕ್ಕೆ ಸಂಬಂಧಪಟ್ಟ ರೋಗಗಳಿಗೆ ಔಷಧಿಯಾಗಿ ಕೊಡುತ್ತಿದ್ದ. ಪ್ರಾಚೀನ ಈಜಿಪ್ಟ್‌ನ ದೊರೆಗಳೂ (ಫರಾವೋ) ಬೆಳ್ಳುಳ್ಳಿಯನ್ನು ೨೦ಕ್ಕಿಂತಲೂ ಹೆಚ್ಚಿನ ರೋಗ (ಹೃದಯಕ್ಕೆ ಸಂಬಂಧಿಸಿದ ರೋಗಗಳೂ, ತಲೆಶೂಲೆ, ಹುಳುಹುಪ್ಪಡಿ ಕಡಿದಾಗ, ಸುಟ್ಟಾಗ… ಇತ್ಯಾದಿ)ಗಳಿಗೆ ಔಷಧಿಯಾಗಿ ಉಪಯೋಗಿಸುತ್ತಿದ್ದರು. ಭಾರತೀಯರು ಮತ್ತು ಚೀನಿಯರೂ ಕೂಡಾ ಇದನ್ನು ಹೊಟ್ಟೆಯ, ಮತ್ತಿತರ ಬೇನೆಗಳಿಗೆ ಉಪಯೋಗಿಸುತ್ತಿದ್ದರು.
೧೯ನೆಯ ಶತಮಾನದ ಮೊದಲರ್‍ಧ ವರ್‍ಷಗಳಲ್ಲಿ ಬೆಳ್ಳುಳ್ಳಿಯ ಔಷಧೀಯ ಗುಣಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿಯಲಾಯಿತು! ೧೯೪೪ರಲ್ಲಿ ಬೆಳ್ಳುಳ್ಳಿಯಿಂದ ಬಣ್ಣವಿಲ್ಲದ ಒಂದು ಬಗೆಯ ಖನಿಜವನ್ನು ಕಂಡುಹಿಡಿಯಲಾಯಿತು. ಅದೇ ‘ಅಲಿಶಿನ್’. ಬೆಳ್ಳುಳ್ಳಿಯ ಒಂದು ಬಗೆಯ ವಿಶಿಷ್ಟ ವಾಸನೆಗೆ ಇದೇ ಮೂಲ ಕಾರಣ.
೧೯೫೮ರಲ್ಲಿ ಲೂಯಿ ಪ್ಯಾಶ್ಚರ್, ಬೆಳ್ಳುಳ್ಳಿಯಲ್ಲಿರುವ ಶಕ್ತಿಯನ್ನು ಪ್ರದರ್‍ಶಿಸಿದ. ಬೆಳ್ಳುಳ್ಳಿಯ ರಸವು ಅನೇಕ ಬಗೆಯ ಕ್ರಿಮಿಗಳನ್ನು ನಾಶಪಡಿಸುವುದೆಂದು ಅವನು ತೋರಿಸಿಕೊಟ್ಟ. ೧೯೬೯ರಲ್ಲಿ ಇಬ್ಬರು ವಿಜ್ಞಾನಿಗಳು ಬೆಳ್ಳುಳ್ಳಿ ರಸ, ಆಹಾರ ವಿಷಮಾಡುವ ಮತ್ತು ಇನ್ನಿತರ ರೋಗಾಣುಗಳನ್ನು ನಾಶಪಡಿಸುವಲ್ಲಿ ತೀವ್ರ ಪರಿಣಾಮಕಾರಿಯೆಂದು ಪ್ರಯೋಗಗಳ ಸಹಾಯದಿಂದ ತೋರಿಸಿಕೊಟ್ಟರು.
ಔಷಧಿಯಲ್ಲಿ ಬೆಳ್ಳುಳ್ಳಿಯ ಪ್ರಯೋಜನಗಳು ಎರಡು-ಆಂಟಿಬಯೋಟಿಕ್ ಮತ್ತು ಆಂಟಿಸೆಪ್ಟಿಕ್ ಗುಣಗಳು. ಬೆಳ್ಳುಳ್ಳಿ ರಸವು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವಲ್ಲಿ ಬಹಳ ಪರಿಣಾಮಕಾರಿ. ಇದರ ರಸವನ್ನು ಒಮ್ಮೆ ಪ್ರಯೋಗಿಸಿ ನೋಡಿದಾಗ ೬೩೯ ಬಗೆಯ ಬ್ಯಾಕ್ಟೀರಿಯಾಗಳು ಸತ್ತವಂತೆ! ಒಂದು ವೈದ್ಯಕೀಯ ವರದಿಯ ಪ್ರಕಾರ ಬೆಳ್ಳುಳ್ಳಿ ರಸವು ಆಂಟಿಬಯೋಟಿಕ್ಸ್‌ಗಿಂತಲೂ ರೋಗಾಣುವನ್ನು ನಾಶಪಡಿಸುವಲ್ಲಿ ಬಹಳ ಪರಿಣಾಮಕಾರಿ ಎಂದು ತಿಳಿದು ಬಂದಿದೆ.
ಪೆನ್ಸಿಲಿನ್ ನಂತೆ!?
ತಾಜಾ ಬೆಳ್ಳುಳ್ಳಿಯು ಎದೆ, ಗಂಟಲು, ಹೊಟ್ಟೆ ಹಾಗೂ ಚರ್‍ಮದ ವ್ಯಾಧಿಗಳನ್ನು ಗುಣಪಡಿಸುತ್ತದೆ. ಬೆಳ್ಳುಳ್ಳಿಯು ಪೆನ್ಸಿಲಿನ್ ಮತ್ತು ಸಲ್ಫಾ ಔಷಧಿಗಳಂತೆ ಕೆಲಸ ಮಾಡುತ್ತದೆ. ಅದರಲ್ಲಿ ಗಂಧಕದ ಗುಣಗಳೂ ಇವೆ. ರಕ್ತದಲ್ಲಿ ಸಂಚರಿಸುವ ‘ಕೊಲೆಸ್ಟರಾಲ್’ ಪ್ರಮಾಣವನ್ನು ಇದು ನಿಯಂತ್ರಿಸುವುದು. ಬೆಳ್ಳುಳ್ಳಿಯು ರಕ್ತವನ್ನು ಶುದ್ದಿಗೊಳಿಸುತ್ತದೆ. ಅದರಿಂದ ರಕ್ತ ಗಡ್ಡೆಗಟ್ಟುವುದು ನಿಲ್ಲುತ್ತದೆ. ರಕ್ತಸಂಚಾರ ಸರಾಗವಾಗಿ ನಡೆಯಲು ಮತ್ತು ಹೃದಯ ಸರಿಯಾಗಿ ಕೆಲಸ ಮಾಡಲು ಸಹಾಯಮಾಡುವ ಬೆಳ್ಳುಳ್ಳಿರಸ, ಕ್ಯಾನ್ಸರ್‌ಗೂ ರಾಮಬಾಣ. ದೇಹವು ನಿರ್‍ಮಿಸುವ ಕೊಬ್ಬನ್ನು ಅದು ಕರಗಿಸುತ್ತದೆ. ಅಷ್ಟೇ ಅಲ್ಲದೆ ಮಿದುಳಿನಲ್ಲಿಯ ಹುಣ್ಣು (ಬ್ರೈನ್ ಟ್ಯೂಮರ್) ಕಡಿಮೆ ಮಾಡಲೂ ಇದು ಸಿದ್ಧೌಷಧ.
ಬೆಳ್ಳುಳ್ಳಿಯು ಶರ್‍ಮತ್ತುಗಾರರ ಕಾಲಿನ ಬೇನೆ ಹಾಗೂ ಚರ್‍ಮದ ತುರಿಗಳ ಮೇಲೆ ಬಹು ಪರಿಣಾಮಕಾರಿಯೆನಿಸಿದೆ.
ಅಮೆರಿಕೆಯ ನ್ಯೂಜರ್‍ಸಿ ವೈದ್ಯಕೀಯ ವಿಶ್ವವಿದ್ಯಾಲಯದ ಡಾ|| ನೀಲ್ ಕ್ಯಾವೋರಿಸಾ ಮತ್ತು ಅವರ ಸಹೋದ್ಯೋಗಿಗಳು ಬೆಳ್ಳುಳ್ಳಿಯ ರಸವನ್ನು ದಿನಕ್ಕೆರಡು, ಇಲ್ಲವೇ ಮೂರು ಟೀ ಚಮಚೆಯಷ್ಟನ್ನು ಕೊಟ್ಟು, ಜನರ ರಕ್ತವನ್ನು ಪರೀಕ್ಷಿಸಿ, ಅವರಿಗೆ ಸಾಂಕ್ರಾಮಿಕ ರೋಗಗಳು ಬರುವುದಿಲ್ಲವೆಂದು ಕಂಡುಹಿಡಿದಿದ್ದಾರೆ. ಬೆಳ್ಳುಳ್ಳಿಯು ಪ್ರತಿರೋಧಕ ಕ್ರಿಮಿಗಳನ್ನು ನಿರ್‍ಮಿಸುವುದಿಲ್ಲವಾದುದರಿಂದ ಅದು ಅನೇಕ ರೋಗಗಳಿಗೆ ಅನುಪಾನ ಒದಗಿಸುವಲ್ಲಿ ಅತ್ಯುಪಯುಕ್ತವೆನಿಸಿದೆ.
ದಿನಂಪ್ರತಿ ಒಂದು ಬೆಳ್ಳುಳ್ಳಿ ಕಾಳನ್ನು ತಿನ್ನುವವನ ರಕ್ತದ ಮೇಲೆ ಬಹು ಅಪೇಕ್ಷಣೀಯ ಪರಿಣಾಮ ಆಗುತ್ತದೆ. ಎಂತಲೇ ಔಷಧಿ ಉದ್ದಿಮೆಯವರು ಬೆಳ್ಳುಳ್ಳಿಗೆ ಭಾರೀ ಮಹತ್ವ ಕೊಡುತ್ತಾರೆ.
ವಾಹನಗಳು ವಿಸರ್‍ಜಿಸುವ ಪ್ರದೂಷಿತ ಹೊಗೆಯನ್ನು ಉಸಿರಾಟದ ಮೂಲಕ ಸೇವಿಸಿದಾಗ ಉಂಟಾಗುವ ಅಪಾಯವನ್ನು ಬೆಳ್ಳುಳ್ಳಿಯಿಂದ ಹೊಡೆದೋಡಿಸಬಹುದು. ಮುಖದ ಮೇಲೆ ಮೊಡವೆಯಿದ್ದರೆ ಅಪಕ್ವ ಬೆಳ್ಳುಳ್ಳಿಯಿಂದ ತಿಕ್ಕಿದರೆ ಅವು ಬಹುಬೇಗನೆ ನಾಶವಾಗುವುವು.
ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿರುವ ಪೌಷ್ಟಿಕಾಂಶಗಳಲ್ಲಿ ವ್ಯತ್ಯಾಸ
ಪೌಷ್ಟಿಕಾಂಶಗಳು – ಬೆಳ್ಳುಳ್ಳಿ (೧೦೦ ಗ್ರಾಂ) – ಈರುಳ್ಳಿ (೧೦೦ ಗ್ರಾಂ)
ಪ್ರೋಟಿನ್ – ೬.೩ – ೧.೨
ಕೊಬ್ಬು – ೦.೧ – ೦.೧
ಕಾರ್‍ಬೋಹೈಡ್ರೇಟ್ – ೨೯.೦ – ೧೧.೦
ಕ್ಯಾಲರಿ ಪ್ರಮಾಣ – ೧೪೨ – ೪೯
*****