ತಂತಿಯಲಿ ತೇಲಿ ಬಂದ ಅವರ
ಧ್ವನಿ ಕಂಪನಗಳು ನೇರವಾಗಿ
ನನ್ನೆದೆಯೊಳಗೆ ಇಳಿದಾಗ ಆಗಸದಲ್ಲಿ
ಸೂರ್ಯ ಕ್ರಮಿಸಲು ಶುರುವಿಟ್ಟುಕೊಂಡಿದ್ದಾನೆ.
ದಿನದ ಉಲ್ಲಾಸಗಳೆಲ್ಲಾ ಸಾಂದ್ರವಾಗಿ
ಕೆನೆಗಟ್ಟದ ಹಾಲು, ನಡೆದಾಡುವ, ಇತಿಹಾಸಕ್ಕೆ ಸಾಕ್ಷಿ.
ಸೆರಗ ತುಂಬಾ ಕೆಂಡ ಕಟ್ಟಿಕೊಂಡ ದ್ರೌಪದಿ.
ಬಯಲಾಟ ವೇಷಗಳಿಗೆ ಕಾಮನ ಬಿಲ್ಲಿನ
ರಂಗಗಳು ತುಂಬ ವೇಷಕಟ್ಟು ವರ ನಿಜದಲಿ
ನಿನ್ನ ನೆನಪಿನ ಹಣತೆಗಳ ಹಚ್ಚಿ ದೀಪಾವಳಿ
ಬೆಂಕಿಯಂತೆ ಸುಡುವ ರಾತ್ರಿ ಜೂಜಾಟದಲಿ
ಪಗಡೆಯಾಡಿ ಸೋತ ವೀರ್ಯವಂತರ ಸೇನೆ
ದಾಳಗಳ ದಾಳಿಗೆ ದೃಷ್ಟಿ ಕಳೆದುಕೊಂಡ ಗಾಂಧಾರಿ.
ಎಲ್ಲಿಯೂ ಕೊಡಲಿಲ್ಲ ಸೂತಕದ ನೆರಳು
ಪುನಕರಗಿ ದ್ರವವಾದ ಸುಯೋಧನ
ಕಣ್ಣ ತುಂಬ ಹೆಪ್ಪುಗಟ್ಟದ ವೈಶಾಂಪಾಯನ
ಬಿಕ್ಷಾಪಾತ್ರೆಯಲಿ ತುಂಬಿ ತೇಲಿದ ಅಪರಾಧ
ತಿಳಿದ ದಾರಿಯ ತುಳಿಯ ಹೊರಟ ಪಾಂಚಾಲಿ.
ಭಾರತದಲಿ ಮಹಾಭಾರತ ಯಾವುದು
ಎತಕ್ಕೆ ಎಂಬುದು ತಿಳಿಯದೇ ಹರಿಹಾಯ್ದ
ಮಂಡೆ ಕಾಯಿಸಿಕೊಂಡ ಎಣ್ಣೆ ದೀಪ ಉರಿಸಿದ
ವ್ಯಾಸ ಹೀಗೆ ದಣಿಯುತ್ತ ನಡೆಯುವ ದೇಹ
ಕೈಗೆ ಸಿಕ್ಕಿ ಬೀಜಗಳ ಉದುರಿಸಿ ಗಿಡ, ಮರ
ಬಳ್ಳಿಗಳ ಹಬ್ಬಿಸಿ ಕಳೆದ ಜನ್ಮಾಂತರ
ಲೋಕದ ಏಕಾಂತವೆಲ್ಲಾ ಬಣ್ಣದಲ್ಲಿ ಅದ್ದಿದ್ದ.
*****