ಹಲವು ಹತ್ತು ಕನಸುಗಳ ಗಂಟನ್ನು ಹೊತ್ತುಕೊಂಡು ನನ್ನ ಕ್ರಿಯಾಶೀಲತೆಯಲ್ಲಿಯ ಹವ್ಯಾಸ-ಅಭಿರುಚಿಗಳಿಗೆ ಅವಕಾಶದಿಂದ ದೂರಾಗಿ, ದೂರದಲ್ಲಿ ಮಲೆನಾಡಿನ ಸಿರಿಯಲ್ಲಿ, ಗುಡ್ಡ-ಬೆಟ್ಟಗಳ ನಡುವಲ್ಲಿ, ಭಾಷಾ-ಸಾಮರಸ್ಯದ ಸಂಕೇತವಾಗಿದ್ದ ಅನಕ್ಷರತೆ ಮರಾಠಿ ಬಂಧುಗಳ-ಮಧ್ಯದಲ್ಲಿ ೩ ವರ್ಷದ ಪ್ರಾರಂಭದ ಜೀವನಯಾತ್ರೆಯ ಹಸಿ ಮನಸಿನ ಬದುಕನ್ನು ವೃತ್ತಿ-ಪ್ರವೃತ್ತಿಗಳ ಜತೆಯಲ್ಲಿಯೇ ಬದುಕಿನ ಪಯಣದಲ್ಲಿ ಹೊಸ ಬದುಕಿನ ಎರಡನೆಯ ಅಧ್ಯಾಯದ ರೂಪದಲ್ಲಿ ಬೆಳಗಾವಿಯ ಚ್ಯಾರಿಟಿ ಕಮೀಷನರ ಆಫೀಸಿನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ದಿನಾಂಕ ೭-೩-೧೯೮೮ ರಂದು ಪ್ರಾರಂಭಗೊಂಡಿತು.
೨ನೇ ಅಧ್ಯಾಯ ಪ್ರಾರಂಭದ ದಿನವೇ ನನಗೆ ಹಿರಿಯಣ್ಣನ ಸ್ಥಾನದಲ್ಲಿಯೇ ನನಗೆ ಸಂಬಾಳಿಸಿದ, ಕುಟುಂಬ ಹಿತೈಶಿ, ನನ್ನ ಸಹೋದ್ಯೋಗಿಯು ಆಗಿದ್ದಂತಹ ಶ್ರೀ ಎನ್.ಬಿ. ಅಂಬಿಗ ಅವರೊಂದಿಗೆ ಮೊದಲನೆ ದಿನ ಬಿಜಾಪೂರದಿಂದ ಬಂದ ನನ್ನ ಹಿರಿಯಣ್ಣನ ಪ್ರೀತಿ-ಹಾರೈಕೆಗಳಲ್ಲಿ ಕಳೆದು, ಸಾಯಂಕಾಲ ಬೇಗನೆ, ಹೊಸ ನೌಕರಿಯ ಮೊದಲನೆ ದಿನದ ಕಚೇರಿ ಕೆಲಸ ಮುಗಿಸಿ, ಹೊರಬರುತ್ತಿದ್ದಂತೆ ಎದುರಲ್ಲಿ ತಮ್ಮ ಪ್ರೀತಿಯ, ಸರಳ ವಾಹನ ಲೂನಾದಲ್ಲಿ ಬಂದಿದ್ದವರು…. ಶ್ರೀ ಅಂಬಿಗ ಅವರೊಂದಿಗೆ ಆತ್ಮೀಯ ಪ್ರೀತಿ-ವಿಶ್ವಾಸದಲ್ಲಿ ಮಾತಾಡುತ್ತಿದ್ದಾಗ ಅಂಬಿಗರವರಿಂದ ಪರಿಚಿತಗೊಂಡ ನನಗೆ ಆ ದಿನ ಅವರು ನನಗೆ ತೋರಿಸಿದ ಪ್ರೀತಿ-ವಿಶ್ವಾಸಗಳಲ್ಲಿ ನನ್ನನ್ನು ಪರಿಚಯಿಸಿಕೊಂಡು ಸಂಭೋದಿಸಿದ ರೀತಿ- ಮಾತಾ-ಪಿತೃ ವಾತ್ಸಲ್ಯದ ಛಾಯೆಯ ರೂಪದಂತಿತ್ತು. ಮಾತಾಡಿಸಿ ಆಫೀಸಿಗೆ ಬರಲು ತಿಳಿಸಿ ಆತ್ಮೀಯತೆಯ ಸಂಕೋಲೆಯ ಬಂಧಿಸಿ ಹೋದರು.
ನನ್ನ ಸರ್ಕಾರಿ ವೃತ್ತಿಯ ಅವಧಿಯುದ್ದಕ್ಕೂ ನನ್ನೊಂದಿಗೆ ನಿಕಟವಾದ ಪ್ರೀತಿ-ವಿಶ್ವಾಸದ ಸಂಬಂಧದಲ್ಲಿ ಬೆಸೆದುಕೊಂಡಿದ್ದರು. ೧೯೮೮ರಿಂದ ೨೦೦೪ರ ಅವರು ಕೊನೆಯದಾಗಿ ನಮ್ಮನ್ನೆಲ್ಲಾ ತೊರೆದು ದೂರಾಗುವ ೪೮ ಗಂಟೆಗಳ ಮೊದಲು, ಅಂದರೆ ಆ ದಿನ ಶುಕ್ರವಾರ ಸಾಯಂಕಾಲ ೫.೩೦ ಗಂಟೆಗೆ ಕೊನೆಯದಾಗಿ ಪೋನ್‌ನಲ್ಲಿ ಮಾತಾಡಿದ ಆ ಘಟನೆ ನನ್ನ ಅವರ ೧೬ ವರ್ಷದ ಆ ನಿಕಟ ಸಂಬಂಧದ ಕೊನೆಯ ಸಂಕೋಲೆಯಾಗಿತ್ತು.
ಅವರಾಡಿದ ಮಾತುಗಳನ್ನೆ ನೆನಪಿನಾಳದಿಂದ ಹೊರಬಂದಾಗ, ಆ ನುಡಿಗಳು “ರವಿಯೇರ… ನಾನು ಇರುತನಕ ನಿಮಗ್ಯಾಕ ಚಿಂತಿ, ಮಾಡುನು… ನೀವೇನು ಕಾಳಜಿ ಮಾಡಬ್ಯಾಡರಿ… ನಾ ಅದಿನಲ್ಲ… ಅಂತಾ ಅವರು ನನ್ನನ್ನು ಉದ್ದೇಶಿಸಿ ಮಾತಾಡುವಾಗ ಅವರ ಆ ಹಿರಿತನದ, ಅನುಭವದ ಸಾಕಾರತೆಯಲ್ಲಿ ಸರಳ, ಸೌಜನ್ಯದ ಅಪರೂಪದ ಆ ವ್ಯಕ್ತಿತ್ವದ ಪ್ರೀತಿ-ಪೂರ್ವಕ ಮಾತುಗಳಿಂದ, ನಮಗೆ ಅವರು ಎಂದು ಮರೆಯದ ಪ್ರೀತಿ ವಿಶ್ವಾಸದ ನನ್ನ… ಅಷ್ಟೆ ಅಲ್ಲ. ನಮ್ಮ ಆಫೀಸಿನ ಮತ್ತು ಕೆ.ಎಲ್.ಇ. ಸಂಸ್ಥೆಯ ಮಧ್ಯದ ಬೆಸೆದಕೊಂಡಿಯಾಗಿದ್ದರು.
ನಮ್ಮ ಸಂಪರ್ಕದ ಯಾವುದೇ ಪಿ.ಯು.ಸಿ. ಪದವಿ, ಹೈಸ್ಕೂಲ್ ಹೀಗೆ ಕೆ.ಎಲ್.ಇ. ಶಿಕ್ಷಣ ಸಂಸ್ಥೆಗಳಲ್ಲಿ ಈ ದಿನ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಣ ನೀತಿಯ ಡೊನೇಶನ್ ಭೂತದ ಭಯದಿಂದ ಮತ್ತು ಪ್ರತಿಭಾವಂತವಿದ್ದರೂ ಸರಾಸರಿ ಪ್ರತಿಶತ ಅಂಕಗಳಿಂದಾಗಿ ವಂಚಿತಗೊಂಡ ನಮ್ಮ ಸ್ನೇಹಿತರು, ಆತ್ಮೀಯರು, ನಮ್ಮಲ್ಲಿಗೆ ಬಂದು ಅವರ ಸ್ವಂತ ಮಕ್ಕಳ, ಬಂಧು-ಹಿತೈಷಿ ಮಕ್ಕಳನ್ನು ಕಾಲೇಜಿಗೆ ಸೇರಿಸುವ ಜವಾಬ್ದಾರಿ, ಅವರಿಂದ ನಾನು ಅಥವಾ ನಾವು ಪಡೆದು, ನಮ್ಮೆಲ್ಲರ ಪ್ರೀತಿ-ವಿಶ್ವಾಸದ ಸೆಲೆಯಾಗಿದ್ದ ಶ್ರೀ ಬೋಜ ಅವರಲ್ಲಿಗೆ ಹೋಗಿ ಅಳಕುತ್ತಲೆ ಸಂಕೋಚದಿ ತಿಳಿಸಿದಾಗ, ಅವರು ತೋರಿಸುವ ಆ ಭಾವನೆಯ ಮಾತುಗಳು, ನಮಗೆಲ್ಲ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
“ರವಿ… ನೀವೇನು ಕಾಳಜಿ ಮಾಡಬೇಡಿರಿ, ನೀವೆಲ್ಲ ನಮಗೆ (ಅಂದರೆ ಕೆಎಲ್‌ಇ ಸಂಸ್ಥೆಗೆ) ಅಷ್ಟೊಂದು ಪ್ರೀತಿ-ವಿಶ್ವಾಸದಲ್ಲಿ ಸಹಕರಿಸಿ, ಅನುಕೂಲ ಮಾಡಿಕೊಡುವ ನಿಮಗೆ… ಇದೊಂದು ಕೆಲಸ ತಾನೇ… ಒಂದು ವಾರ ಕಳೆಯಲಿ ಮಾಡಿಸೋಣ”, ಅಂತಾ ಅವರು ಆಡಿದ ಮಾತು ಎಂದೂ ತಪ್ಪದೆ ನಮಗಾಗಿ ಅವರು ಸಂಸ್ಥೆಯ ಮ್ಯಾನೇಜ್‌ಮೆಂಟ್‌ನ ಹಿರಿಯ ಸದಸ್ಯರೊಂದಿಗೆ ಸ್ಪಷ್ಟವಾಗಿ ಮಾತಾಡಿ, ಕೆಲಸ ಮಾಡಿಸುವ ಪರಿ… ವಿಧಾನ… ಬೆರಗುಗೊಳಿಸುವಂತಹದ್ದು.
ಆದರೆ ಆ ಕೆಲಸ ಮಾಡಿಸುವಾಗ ಮತ್ತು ನಾವು ಕೇಳುವಾಗ ಬಹಳ ಸರಳ. ಯಾವದೇ ವಿಧದ ಅಧಿಕಾರ-ಅಂತಸ್ತುಗಳಿರದೆ ಕೇವಲ ಅವಕಾಶ ವಂಚಿತ ಪ್ರತಿಭಾವಂತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ-ಗುರಿ ನಮ್ಮೀರ್‍ವರದೂ ಆಗಿತ್ತು.
ಭೋಜ ಅವರು ಬರೆ ನಮ್ಮಂತಹ ಹಲವು ಹತ್ತು ಕಚೇರಿಗಳಲ್ಲಿನವರಿಗೆ ಆತ್ಮೀಯ ಸಂಬಂಧದಲ್ಲಿ ಸಂಸ್ಥೆಯ, ಸಾರ್ವಜನಿಕ ಸಂಪರ್ಕದ, ಹೃದಯ ಸಿರಿವಂತಿಕೆಯ ಸೌಜನ್ಯದ ಸರಳ ವ್ಯಕ್ತಿಯಾಗಿದ್ದರೂ ಕೆ.ಎಲ್.ಇ. ಸಂಸ್ಥೆಗೆ ಶಕ್ತಿಯಾಗಿದ್ದರು.
ನನ್ನ ಮೂಲಕ ಹಲವು ಸ್ನೇಹಿತ-ಸಹೊದ್ಯೋಗಿಗಳಿಂದ ಸುಮಾರು ೫೦ ರಿಂದ ೧೦೦ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬೇರೆ ಬೇರೆ ಹಂತದಲ್ಲಿ ಅವರ ಶಿಕ್ಷಣಕ್ಕೆ ಒಂದು ಸ್ವರೂಪ ನೀಡಿ, ಅವರ ಬದುಕಿಗೆ ನೆಲೆಯನ್ನು ಒದಗಿಸಿದ ಮಹಾನ್ ವ್ಯಕ್ತಿತ್ವ ಭೋಜ ಸರ್ ಅವರದಾಗಿತ್ತು.
ನಾವೆಲ್ಲ ಕಚೇರಿಯ ಸಹೋದ್ಯೋಗಿಗಳೊಂದಿಗೆ ವಿನೋದವಾಗಿ ಮಾತಾಡುತ್ತಾ, ಸರ್… ನಿಮ್ಮ ಸಂಸ್ಥೆ ಬಹಳ ಬೆಳದಿದೆ, ನೀವಿನ್ನು ಸ್ವಲ್ಪ ನಿವೃತ್ತಿ ನಂತರ ವಿಶ್ರಾಂತಿ ತೆಗೆದುಕೊಳ್ಳಿರಿ, ಸಾಕು. ಈ ಅವಿರತ ಕೆಲಸದಿಂದ ಮುಕ್ತರಾಗಿರಿ, ಎಂದಾಗ ಅವರ ಸ್ವಾಮಿ ನಿಷ್ಠೆ ಮತ್ತು ಸಂಸ್ಥೆಯ ನಿಷ್ಟೆಗೆ ಬೆಲೆಯೇ ಕಟ್ಟಲು ಸಾಧ್ಯವಾಗುವುದಿಲ್ಲ. ಈ ಮಾತು ನಾನು ಹೇಳುವದಿಲ್ಲ, ಸಂಸ್ಥೆಯ ಹಿರಿಯರಿಂದ ಹಿಡಿದು ಕೆಎಲ್‌ಇ ಕೇಂದ್ರಕಚೇರಿಯ ಒಂದೊಂದು ಕಂಬ-ಗೋಡೆ, ಕುರ್ಚಿಗಳು ಹೇಳಬಲ್ಲವು, ಕೇಳುವ ಕಿವಿಗಳಿದ್ದಲ್ಲಿ.
ಗೆಳೆಯರೆಲ್ಲಾ ಮಾತಾಡುತ್ತಾ… ಶ್ರೀ ಕಾಗವಾಡವರು ಮತ್ತು ಬೋಜ ಸರ್‌ರವರು ನಮ್ಮೊಂದಿಗೆ ಕೆಎಲ್‌ಇ ಸಂಸ್ಥೆಯ ಮತ್ತು ನಮ್ಮ ಕಚೇರಿಯ ಕೆಲಸದ ಮಧ್ಯದ ಆತ್ಮೀಯ ಮತ್ತು ವೈಯಕ್ತಿತ ಸ್ನೇಹದ ಪ್ರೀತಿಯ ಕೊಂಡಿಗಳಾಗಿದ್ದರು; ಎನ್ನುತ್ತಲೆ… ಶ್ರೀ ಕಾಗವಾಡರವರು ಸಂಸ್ಥೆಯನ್ನು ಪ್ರತಿನಿಧಿಸುವ ಶಿಸ್ತು ಬದ್ಧ ಎಂ.ಡಿ ಆದರೆ ಶ್ರೀ ಬೋಜಸರ್ ಅವರು ಹಿರಿಯ ಮುತ್ಸದ್ದಿತನದ, ಸರಳತೆಯ ಸಾರ್ವಜನಿಕ ಸಂಪರ್ಕದ (ಪಿ.ಆರ್.ಓ) ಅಧಿಕಾರಿಗಳಾಗಿರುವರು ಎನ್ನುತ್ತಿದ್ದೆವು.
ಹಾಗೆ ಮಾತಾಡುತ್ತ ಸರ್ ನಿಮ್ಮಗಳ ನಂತರ ಮುಂದೆ ಸಂಸ್ಥೆಗೆ ಯಾರು? ಎಂಬ ಪ್ರಶ್ನೆ ಕೇಳುತ್ತಾ… ಇನ್ನೊಬ್ಬ ಭೋಜರನ್ನು ಸಿದ್ಧಗೊಳಿಸಿರಿ… ಇಲ್ಲದಿದ್ದರೆ ಸರ್ಕಾರಿ ಕಚೇರಿ ಮತ್ತು ನಿಮ್ಮ ಕೆಎಲ್‌ಇ ಸಂಸ್ಥೆಗೆ ಸಂಬಂಧದ ಸೇತುವೆ ಯಾರು? ಎಂದಾಗ ಅಷ್ಟೇ ನಗುಮೊಗದಿ-ನೀವೆಲ್ಲ ಇರುತೀರಲ್ಲಾ… ಅದಕ್ಯಾಕ ಚಿಂತಿ, ಅಂತ ಹೇಳುವ ಅವರ ಆತ್ಮೀಯತೆಯಲ್ಲಿಯ ಆ ಮುಗ್ಧತೆಯ ಮುಗುಳು ನಗೆಯಲ್ಲಿ ಮತ್ತೆ ನಮ್ಮನ್ನು ಬೆಸೆದುಕೊಂಡು ಇನ್ನಷ್ಟು ಹತ್ತಿರದವರಾಗುತ್ತಿದ್ದರು.
ಸಂಸ್ಥೆಯ ಕಷ್ಟದ ದಿನಗಳಲ್ಲಿ ಅವರು ಸಂಸ್ಥೆಯ ಬಗ್ಗೆ ಹಾಗೂ ಮಾನ್ಯ ಅಧ್ಯಕ್ಷರ ಬಗ್ಗೆ ಅವರು ಹೊಂದಿದ ನಿಷ್ಟೆ, ಕಾಳಜಿ, ಪ್ರಾಮಾಣಿಕ ಪ್ರಯತ್ನ, ಸಾಧಿಸುವ ಅವರ ಛಲ, ಬೆಲೆ ಕಟ್ಟಲಾಗದ, ನಿಸ್ವಾರ್ಥದಲಿ ಸೇವೆಗೈಯುವ ಮಹಾನ್ ವ್ಯಕ್ತಿತ್ವ ಭೋಜ ಹೊಂದಿದ್ದರು.
ಬಹುಶಃ ಅವರು ಹಲವು ಬಾರಿ ಮಾತಾಡುತ್ತಿದ್ದಾಗ ಹೇಳಿದಂತೆ ಸಂಸ್ಥೆಯು ಕೂಡಾ ಅವರನ್ನು ನಿವೃತ್ತಿ-ವಿಶ್ರಾಂತಿಗೂ ಅವಕಾಶ ನೀಡದೆ, ಅವರ ಒಡನಾಟ, ಅವರ ಮಾರ್ಗದರ್ಶನ ಬಯಸಿದ್ದು, ಅವರು ಸಂಸ್ಥೆಯೊಂದಿಗೆ ಹೊಂದಿದ ನಿಕಟ ಸಂಬಂಧದಲ್ಲಿ ಅವರು ಮತ್ತು ಸಂಸ್ಥೆಗಳು ಬೆಸೆದ ದೇಹದಂತಿದ್ದರು.
ಹಲವು ಬಾರಿ ಅವರು ಈ ಅವಿನಾಭಾವದ ಸಂಬಂಧದಿಂದ ಅಸಹಾಯಕತೆಯ ಛಾಯೆಯಲ್ಲಿ ಬಸವಳಿದು ನೊಂದು ಮಾತಾಡಿದ್ದೂ ಉಂಟು. ಒಟ್ಟಿನಲಿ ಕಿರಿಯವನಾದ ನನಗೆ ಅವರು ತಮ್ಮ ಸುಂದರ-ಸರಳ-ಸಜ್ಜನಿಕೆಯ ಬದುಕಿನ ಕೊನೆಯುಸಿರಿನ ತನಕ ತೋರಿಸಿದ ಪ್ರೀತಿ-ವಿಶ್ವಾಸ, ಅಭಿಮಾನ, ಮಾರ್‍ಗದರ್‍ಶನ, ನನ್ನ ಬದುಕಲಿ ಮರೆಯದ ಹಿರಿಯ ವ್ಯಕ್ತಿತ್ವದ ವ್ಯಕ್ತಿಗಳಾಗಿದ್ದರು ಮತ್ತು ನನ್ನ ಹಿತೈಷಿ, ಮಾರ್‍ಗದರ್‍ಶನದ ಮಹಾನ್ ರೂಪವಾಗಿದ್ದರು.
ನನ್ನ ಸಾಹಿತ್ಯಕ-ರಂಗಚಟುವಟಿಕೆಗಳನ್ನು ಕಂಡು ಸದಾ ಸಂತೋಷ ಪಡುತ್ತಾ ನನ್ನನ್ನು ಪ್ರೋತ್ಸಾಹಿಸುವ ಆ ಸ್ಫೂರ್‍ತಿದಾಯಕದ ಆ ಹಿರಿಯ… ಮೇರು ವ್ಯಕ್ತಿತ್ವದ ಭೋಜ ಅವರನ್ನು ನನಗೆ ಎಂದೂ ಮರೆಯಲಾಗದು.
ಶ್ರೀ ಎಸ್ ಎ ಭೋಜ ಅವರು ತಮ್ಮ ಬದುಕಿನುದ್ದಕ್ಕೂ ಕಾಯಕವೇ ಕೈಲಾಸ ಮತ್ತು ದಯವೇ ಧರ್ಮದ ಮೂಲವಯ್ಯ ಎಂಬ ಜಗಜ್ಯೋತಿ ಅಣ್ಣ ಬಸವಣ್ಣನವರ ಆದರ್‍ಶದ ಮೂರ್ತಿಗಳಾಗಿದ್ದರು. ಮತ್ತು ಅವರು ಸದಾ ಆ ಸ್ವರೂಪದಲ್ಲಿಯೇ ತಮ್ಮ ಬದುಕನ್ನು ಮತ್ತು ಆತ್ಮೀಯರಿಗೆಲ್ಲಾ ಆದರ್ಶದ, ಮಾರ್ಗದರ್ಶನದ ಕೊಂಡಿಯಾಗುತ್ತಲೇ, ನಮ್ಮೆಲ್ಲರಿಂದ ದೂರದಲ್ಲಿ ಶುಭ್ರ ನೀಲಿಯಾಗಸದಲ್ಲಿ ಮಿನುಗುವ ತಾರೆಯಾಗಿ, ನಮಗೆಲ್ಲ ಬೆಳಕು ಚೆಲ್ಲುವ ಮಾನವ್ಯ ವ್ಯಕ್ತಿತ್ವದಲ್ಲಿ ನಮ್ಮೊಂದಿಗೆ ಅಶರೀರ-ಅಗೋಚರದಲ್ಲಿ ನಿಂತ ಮಹಾನ್ ಹಿರಿಯ ಜೀವಿಯಾಗಿದ್ದರು.
*****