ಇಂದ್ರ:
ಹಚ್ಚಿ ಹೊಗೆಬತ್ತಿ ನೋಡುವೆನು ಕಣ್ಣೆತ್ತಿ
ಬಾರಿಬಾರಿಗು ಜೀವದ ಪವಾಡ ಕೋರಿ
ನಿನ್ನೆಯಷ್ಟೇ ಬದುಕು ಮೈತುಂಬಿ ಉದ್ದಕು
ನಿಂತಿದ್ದ ಒಡಲು ಇಂದು ಕೇವಲ ಕಲ್ಲು
ಎಂದರೆ ನಂಬುವೆನೆ ನೊಡುವ ಕಣ್ಣುಗಳನೆ
ಒಬ್ಬಾತನ ಸ್ನೇಹದಲಿ ಇನ್ನೊಬ್ಬನ ಮೋಹ
ಹಿಡಿಯಬಯಸಿದವಳೆ ಎರಡನೊಮ್ಮೆಲೆ
ಎಳಸಿದವಳೆ ಕೇಳು ನನ್ನ ಕರೆ! ಏಳು
ಎದ್ದೇಳು ನಿದ್ದೆಯಿಂದ ಹುಟ್ಟು ಶಿಲೆಯೊಳಗಿಂದ
ನಡೆಯಲಿ ಪಾದ ಕೇಳಿಸಲಿ ಕಂಠದ ನಾದ
ಮರ್ತ್ಯದ ಸಕಲ ಸಾರ ಪಡೆಯೆ ಆಕಾರ
ಎಲೆ ಚೆಲುವೆ ನೀ ಯಾರ ಕಾಯುತಿರುವೆ
ಯಾವ ಯುಗದ ದೈವ ಕೊಡುವುದು ಜೀವ?
ಆಹಲ್ಯೆ:
ಪಾಷಾಣವೆಂಬ ಸ್ಥಿತಿ ಎಷ್ಟೊಂದು ಕಠಿಣ-
ವೆಂಬುದನು ಯಾರಿಗೆ ತಿಳಿಸುವೆನು ಹೇಗೆ!
ಚಲಿಸಲಾರೆನು ಕೈಯ ಸ್ಪಂದಿಸದು ಹೃದಯ
ತಡವಲಾರದ ಬೆರಳು ಸರಿಸಲಾರದ ಕುರುಳು
ಯುಗವೆ ಕಳೆದಿದೆ ಮೈಯ ಹೊರಳಿಸದೆ
ಮಾತು ಮರೆತಿರುವೆ ಇದ್ದರೂ ಇರದಿರುವೆ
ತೆರೆದು ಮಳೆಬಿಸಿಲಿಗೆ ಬಿದ್ದರೂ ಹೀಗೆ
ಮುದುಡುವಂತಿಲ್ಲ ಬಾಡುವಂತಿಲ್ಲ
ಸಕಲ ದಾಹಗಳನೊಮ್ಮೆಲೆ ತಣಿಸಿದಂತಿದೆ ದೇಹ
ಅಹ್! ಇನ್ನೇಕೆ ಮಾತು ದಾಹದ ಕುರಿತು?
ನೆನಪುಗಳಿರದ ಯಾವ ಭಯವೂ ಇರದ
ಎಷ್ಟೊಂದು ಮಾಗಿ ಮೈಮೇಲೆ ಸಾಗಿ
ಇನ್ನೊಂದು ಯುಗದಲ್ಲಿ ಎಷ್ಟೊಂದು ಮನದಲ್ಲಿ
ಏಳಲೇಕೆ ಇಂಥ ಗತಿ ಮತ್ತೆ ಬೇಕೆ?
ಗೌತಮ:
ಇಷ್ಟು ಬೇಗನೆ ಮೂಡಿತೆ ಮುಂಜಾನೆ-
ಯೆಂದು ಬರಿಗಾಲಿನಲಿ ನಿದ್ದೆಗಣ್ಣಿನಲಿ
ನದಿಯ ತೀರಕೆ ಬಂದು ಎಂದಿನಂತೆಯ ಮಿಂದು
ನೋಡಿದರೆ ರಾತ್ರಿ. ಇನ್ನೂ ಮೂರನೆ ಪಹರೆ
ಕೋಳಿ ಕೂಗಿದ ಸದ್ದು ಕಿವಿಯಾರೆ ಕೇಳಿದ್ದು
ಸುಳ್ಳಿರಬಹುದೆ? ಅಹ ಮೋಸ ಹೋದೆ-
ನೆಂದು ಮರಳಿದರೆ ಮನೆಗೆ ಏನದು ಒಳಗೆ
ಯಾಕೆ! ನನ್ನ ನಾನೆ ಕಂಡು ಬೆಚ್ಚೆದೆನೆ
ನಿಂತಿದ್ದ ನಿಚ್ಛಾರೂಪಿ ತದ್ವತ್‌ಸ್ವರೂಪಿ
ಕತ್ತಲಿನ ಮರೆಯಲ್ಲಿ ನನ್ನನಣಕಿಸುವ ರೀತಿಯಲಿ
ಸ್ವಂತ ಬಯಕೆಗಳಭಿವ್ಯಕ್ತಿಯಂತೊಬ್ಬ ವ್ಯಕ್ತಿ!
ಸಿಡಿದೆದ್ದ ಕೋಪವೆ ಕೈಬಿಟ್ಟ ಶಾಪವೆ
ಹಿಂದೆ ಬರುವುದೆಂತು ತುಟಿಮೀರಿದ ಮಾತು
ಕಲ್ಲಾದವನು ನೀನಲ್ಲ ನಾನು!
ಇಂದ್ರ:
ಬೆಳಕು ಮೂಡಿರಲಿಲ್ಲ ಕೋಳಿ ಕೂಗಿರಲಿಲ್ಲ-
ಕೂಗಿದುದು ಕಾಮ ಎಲೆ ಗೌತಮ
ಕೇಳು! ಕಾನನ ತುಂಬ ತುಂಬಿ ಕಡುಮೌನ
ನೆಲವೆಲ್ಲ ಹರಡಿದ್ದ ದಟ್ಟ ಎಲೆಗಳ ಮೆಲ್ಲ
ಸದ್ದಾಗದ ತರದಿ ಮೆಟ್ಟಿ ನಡೆದೆನು ಹಾದಿ
ಮಲಗಿದ್ದ ಮನದನ್ನೆ ಕಂಡ ಕನಸನ್ನೆ
ಹೊಕ್ಕವನು ನಾನು ತನುವಿರದವನು
ನನಗಿಲ್ಲ ನೆರಳು ನಾನು ಕೇವಲ ಮರುಳು
ಉದಯದ ಆಸೆಯಲಿ ಸಂಜೆಯ ನಿರಾಸೆಯಲಿ
ಕರೆದವಳು ಯಾರೀಕೆ ಅಂತರಂಗದ ಸನಿಯಕೆ
ನದಿಯೋ ಭೂಮಿಯೊ ಕೇವಲ ಕಲ್ಪನೆಯೊ
ನಾದವೊ ವರ್ಣವೊ ಸ್ಪರ್ಶದ ಸೆಳವೊ
ತಿಳಿಯಲಿ ಹೇಗೆ ತಿಳಿಯದೆ ಪಡೆಯಲಿ ಹೇಗೆ
ಪಡೆಯಲೆಂದೇ ಬಂದು ಪಡೆದುಕೊಂಡಂದು
ನನ್ನ ಕನಸನೆ ನಾನು ಒಡೆದುಕೊಂಡೆನೆ
ಹೇಳು ಮನವೆ ಇದು ಇನ್ನೊಂದು ದಿನವೆ?
ಕವಿ:
ದೈವವಿರಲಿಲ್ಲ ಯಾವ ದೇವರೂ ಬರಲಿಲ್ಲ
ಬಂದವನೊಬ್ಬ ಮಾನವ ಶಿಲೆಯಿಂದ ಶಿಲ್ಪವ
ತೆಗೆಯ ಬಯಸಿದನು, ಬಿಡಿಸಬಬಯಸಿದನು
ಶಾಪದ ಸರೆಯಿಂದ ಆ ಅಂಥ ಛಂದ
ಕಣ್ಣುಗಳೆಲ್ಲಿ ತುಟಿಗಳೆಲ್ಲಿ ತೋಳುಗಳೆಲ್ಲಿ
ಎಲ್ಲಿ ಮರ್ತ್ಯಕ್ಕೆ ಸ್ವರ್ಗವ ತಂದ ನಿಸರ್ಗ
ಎವೆಯದುರಿತೆ ಮುಟ್ಟಿದ ಕೈ ಕಂಪಿಸಿತೆ
ಉಳಿಯ ಹೊಡೆತವೊ ಅದು ನಾಡಿ ಮಿಡಿತವೊ
ಯಾರೂ ಇರದಲ್ಲಿ ಉತ್ತರಿಸುವವರಾರಿಲ್ಲ
ಅವರವರ ಭಾವಕ್ಕೆ ತಕ್ಕಂತೆ ರೆಕ್ಕೆ
ತೆರೆಯುವ ಮನಸ್ಸು ಹೂಡುವ ಪ್ರತ್ಯೇಕ ತಪಸ್ಸು
ಅದೋ ಅದೋ! ನೋಡಿ ಸಾವಿರ ಕಣ್ಣು ಒಮ್ಮೆಲೆ ಮೂಡಿ
ಆಹ! ಪ್ರತಿಯೊಂದು ಕಲ್ಪಕೂ ಪ್ರತ್ಯೇಕ ಶಿಲ್ಪ
ಪ್ರತಿಯೊಂದು ಅಬ್ದಕೂ ಅದರದೇ ಶಬ್ದ
*****