ಪಳ್ಪಟ್ಟನಾಯ್ಕ

ಪಳ್ಪಟ್ಟನಾಯ್ಕ

ಉಡುಪಿಯ ಅನಂತೇಶ್ವರ ದೇವಸ್ಥಾನದ ಪೌಳಿಯಲ್ಲಿ ಜನರದೊಂದು ಗುಂಪು. ಗಂಡಸು ಹೆಂಗಸರೆಂದು ಸುಮಾರು ಐವತ್ತು ಮಂದಿ ಗಂಟುಮೂಟೆಗಳನ್ನು ಕಟ್ಟಿ ಕೊಂಡು ಕುಳಿತಿರುವರು. ಅವರ ಬಳಿಯಲ್ಲಿ ಅವರ ಬಂಧುಬಾಂಧವರಿಷ್ಟಮಿತ್ರರ ವರ್ಗಕ್ಕೆ ಸೇರಿದವರನೇಕರು ಕುಳಿತು ಮಾತಾಡುತ್ತಿರುವರು. ಅಲ್ಲಿ ನಡೆಯುತ್ತಿರುವ ಮಾತುಕತೆಗಳನ್ನು ಕೇಳಿದರೆ ಅವರಲ್ಲನೇಕರು ಯಾತ್ರಾರ್ಥಿಗಳಾಗಿ ಹೊರಟವರೆಂದೂ ಮತ್ತುಳಿದವರು ಅವರನ್ನು ಕಳುಹಿಸಿಕೊಡಲು ಬಂದವರೆಂದೂ ತಿಳಿದು ಬರುವುದು. ಸರಿ, ನಿಶ್ಚಿತ ಮುಹೂರ್ತವು ಒದಗಿತು. ‘ತಿರುಪತಿವಾಸ! ಶ್ರೀನಿವಾಸ, ಶ್ರೀಮದ್ರಮಾರಮಣಗೋವಿಂದಾ ಗೋವಿಂದ!’ ಎಂದು ಹೇಳುತ್ತ ಎಲ್ಲರೂ ಎದ್ದು ನಿಂತರು. ಯಾತ್ರಿಕರಾಗಿ ಹೊರಟವರು ತಮ್ಮ ತಮ್ಮ ಗಂಟು ಮೂಟೆಗಳನ್ನು ಹೊತ್ತುಕೊಂಡು, ‘ಶ್ರೀಮದ್ರಮಾರಮಣ ಗೋವಿಂದಾ ಗೋವಿಂದ’ ಎಂಬ ನಾಮಸಂಕೀರ್ತನೆಯನ್ನು ಒಟ್ಟಾಗಿ ಹೇಳುತ್ತ ಹೇಳುತ್ತ ಕಿನ್ನಿಮೂಲ್ಕಿಯತ್ತ ಕಡೆಯ ದಾರಿಹಿಡಿದರು. ಅವರಲ್ಲೊಬ್ಬನು ಅತಿ ದೊಡ್ಡದೊಂದು ಮೂಟೆಯನ್ನು ಹೊತ್ತಿದ್ದನು. ಅದನ್ನು ಪರೀಕ್ಷಿಸಿ ನೋಡಿದರೆ ಅದು ನಾಲ್ಕಾರು ಗಂಟುಗಳನ್ನು ಒಟ್ಟು ಮಾಡಿ ಕಟ್ಟಿದ್ದ ದೊಡ್ಡ ಮೂಟೆಯೆಂದು ಭಾಸವಾಗುತಿತು. ಆತನಾದರೋ ಹರುಕು ಪಂಚೆಗಳನ್ನು ಸೊಂಟಕ್ಕೆ ಸುತ್ತಿಕೊಂಡಿದ್ದನು. ಮತ್ತೊಂದೆರಡು ಪಂಚೆಯ ಸಣ್ಣದೊಂದು ಗಂಟನ್ನು ಪ್ರತ್ಯೇಕವಾಗಿ ಬಗಲಿಂದ ತೂಗಹಾಕಿದ್ದನ್ನು. ಇದು ಮಾತ್ರ ಅವನದು. ಹಾಗಾದರೆ ತಲೆಯ ಮೇಲಿನ ಆ ದೊಡ್ಡ ಮೂಟೆ? ಬೇರೆ ಯಾತ್ರಿಕರ ಗಂಟು ಮೂಟೆಗಳನ್ನು ಹೊತ್ತಾದರೂ ಶ್ರೀನಿವಾಸನ ದರ್ಶನ ಮಾಡಬೇಕೆಂದು ಇವನೇನು ಹೊರಟಿರುವನೆ? ಅಷ್ಟೊಂದು ಭಕ್ತಿ ಇವನಲ್ಲಿರುವುದೆ? ಏಕಿರಬಾರದು! ಆಲಿಸಿರಿ, ಬೇರೆ ಯಾತ್ರಿಕರು ‘ಶ್ರೀಮದ್ರಮಾರಮಣ ಗೋವಿಂದಾ’ ಎನ್ನುವಷ್ಟರಲ್ಲಿ ಈತನ ಬಾಯಿಯಿಂದ ಅತ್ಯುತ್ಸಾಹ ಪೂರ್ವಕವಾಗಿ ಹೊರಡುವ ‘ಗೋ….ವಿಂದ’ ಎಂಬುದು ಆತನ ಹೃದಯದ ಎಷ್ಟೊಂದು ಆಳದಿಂದ ಹೊರಟೇಳುತ್ತಿದೆ! ಇಷ್ಟೊಂದು ಪರ್ಯಂತ ತಡೆಗಟ್ಟಿ ಹೃದಯದೊಳಗೆ ಒತ್ತೊತ್ತಿಟ್ಟಿದ್ದ ಆ ಭಕ್ತಿಯು ಇಂದು ಏರಿಮುರಿದು ಹೊರಹರಿಯುವ ನದಿಯ ಪ್ರವಾಹದಂತ ಹೊರ ಹೊಮ್ಮುತ್ತಿದೆಯೆಂದು ವ್ಯಕ್ತವಾಗುವುದಿಲ್ಲವೆ! ಆ ಗೋವಿಂದ ಎಂಬ ನಾಮೋಚ್ಛಾರಣೆಯನ್ನು ಮಾಡುವಾಗ ಆತನಿಗೆ ತನ್ನ ತಲೆಯ ಮೇಲಿನ ಆ ದೊಡ್ಡ ಹೇರಿನ ಭಾರವಾಗಲಿ ಮಾರ್ಗಾಯಾಸವಾಗಲಿ ತಿಳಿಯುತ್ತಿದ್ದಿಲ್ಲ. ಬದಲಾಗಿ ಹೊಸತೊಂದು ಬಗೆಯ ಶಕ್ತಿಯು ಅವನ ನರನಾಡಿಗಳಲ್ಲಿ ತುಂಬುತ್ತಿತ್ತು; ಅವನು ಕುಣಿಕುಣಿದು ಓಡುವಂತೋಡಿ ಮುಂದಾದವರನ್ನು ಹಿಂದಿಕ್ಕಿ ಆ ಯಾತ್ರಿಕರನ್ನೆಲ್ಲ ಬೆರಗುಗೊಳಿಸುತ್ತಿದ್ದನು.

ಕಾಲು ನಡೆಯ ತಿರುಪತಿ ಯಾತ್ರೆ! ಹಾದಿಯುದ್ದಕ್ಕೂ ‘ಶ್ರೀಮದ್ರಮಾರಮಣ ಗೋವಿಂದಾ ಗೋವಿಂದ’ ಎಂದು ಕೂಗುತ್ತ ಹೋಗುವುದು! ಹೀಗೆಲ್ಲಾದರೂ ಇದೆಯೆ? ಯಾತ್ರಿಕರು ‘ಮೋಟಾರ್ ಸ್ಟೇಶನಿ’ಗೆ ಹೋದರಾಯಿತು, ಬೇಕಾದರೆ ಮೊಟಾರ್ ಬಂಡಿಯೇ ಯಾತ್ರಿಕರು ಹೊರಡುವಲ್ಲಿಗೆ ಬಂದೇ ಬಿಡುವುದು, ಇಂತಿರಲು ಇದೇನು ೨ಂನೆಯ ಶತಮಾತದಲ್ಲಿ ನಡೆದುದೊ? ೧ಂನೆಯ ಶತಮಾನದಲ್ಲಿ ಆದುದೋ ಎಂದು ಕೇಳುವಿರಾ? ನಮ್ಮ ಈ ಯಾತ್ರಿಕರು ‘ಶ್ರೀಮುದ್ರಮಾರಮಣ ಗೋವಿಂದಾ ಗೋವಿಂದ’ ಎಂದು ಹೇಳುತ್ತ ಹೋಗಲು ನಾಚುವಷ್ಟು ಶಿಥಿಲ ಭಕ್ತಿಯ ಸುಖಪ್ರವಾಸಾಪೇಕ್ಷೆಯ ೨ಂನೆಯ ಶತಮಾನದ ಯಾತ್ರಿಕರಲ್ಲ. ನಮ್ಮ ಕಥೆಯು ಸುಮಾರು ಒಂದು ಸಾವಿರ ವರ್ಷಗಳ ಹಿಂದಿನದು.

ಆಗ ಉಡುಪಿಯ ವಾಯವ್ಯ ಬದಿಯ ಬನ್ನಿಂಜೆಯಲ್ಲಿ ಕಡು ಬಡವನೊಬ್ಬನಿದ್ದನು. ಬರೇ ಗರೀಬನೆಂದೋ ಏನೋ ಆತನನ್ನು ಉಡುಪಿಯವರೆಲ್ಲ ‘ಪಳ್ಪಟ್ ನಾಯ್ಕ’ ಎಂದು ಕರೆಯುತ್ತಿದ್ದರು. ಲೌಕಿಕ ಸ್ಥಿತಿಗತಿಯಲ್ಲಿ ತುಲನೆ ಮಾಡಿದರೆ ಅವನು ಬಡವರಲ್ಲಿ ಬಡವನೆಂಬುದಕ್ಕೇನೂ ಸಂಶಯವಿಲ್ಲ. ಗುಡ್ಡೆಯ ಬದಿ ಯಾರೂ ಬೇಡವೆಂದು ಬಿಟ್ಟಿದ್ದ ಅದೊಂದು ಸ್ಥಳದಲ್ಲಿ ಅವನ ಮನೆ, ಮನೆಯೆಂದರೆ ಮುಳಿ ಹಳೆ ಮಾಡಿನ ಎರಡನೆಯ ಚಿಕ್ಕದೊಂದು ಗುಡಿಸಲು; ಅದಕ್ಕೆ ಹರುಕು ಮುರುಕಾದ ಮಡಲುತಟ್ಟಿಯ ಗೋಡೆ ಬೇಸಿಗೆಯಲ್ಲಿ ಸೂರ್ಯ ಕಿರಣಗಳೂ ಮಳೆಗಾಲದಲ್ಲಿ ನೀರೂ ಒಳಗೆ ಪ್ರವೇಶಿಸುವುದಕ್ಕೆ ಅಡ್ಡಿ ಯೇನೂ ಇದ್ದಿಲ್ಲ. ಆದರೆ ಎದುರಲ್ಲಿದ್ದ ದನಕರುಗಳ ಕೊಟ್ಟಿಗೆಗೆ, ಮಾತ್ರ ಕಬ್ಬಿನ ಸೋಗೆಗಳನ್ನು ಎಲ್ಲಿಂದಾದರೂ ಬೇಡಿ ತಂದು ಹೊರ ತಾಳಿಯ ಮಡಲುಗಳಿಂದ ತಟ್ಟಿ ಕಟ್ಟಿ ಅದನ್ನು ಆದಷ್ಟು ಬೆಚ್ಚಗೆ ಚೊಕ್ಕಟವಾಗಿ ಇಟ್ಟಿದ್ದನು. ‘ಅಯ್ಯೋ, ಪಾಪ! ಮೂಕ ಪ್ರಾಣಿಗಳು. ಅವುಗಳಿಗೆಂದೂ ಪೀಡೆಯಾಗಬಾರದು’ ಎಂಬುದು ಪಳ್ಪಟನ ಸೊಲ್ಲು. ಬಡ ಪಲ್ಪಟನಿಗೆ ಆ ನಡೆಗಳೆಲ್ಲಿಂದ? ಒಂದೊಮ್ಮೆ ಉಡುಪಿಯ ಆಚಾರ್ಯ ರೊಬ್ಬರ ದನವನ್ನು ಸಾಕಿ ಕರು ಹಾಕಿಸಿ ಕೊಟ್ಟಿದ್ದನು. ಅದಕ್ಕವರು ಆ ಹೆಂಗರುವನ್ನು ಇವನಿಗೆ ಉಚಿತವಾಗಿ ಕೊಟ್ಟಿದ್ದರು ಅದು ದನವಾಯಿತು. ಅದಕ್ಕೆ ಕರುಗಳಾದವು; ಕರುಗಳಿಗೆ ಕರುಗಳಾದ ಈ ನಡೆಗಳೇ ಇವನ ಲೌಕಿಕ ಸೊತ್ತುಗಳು.

ಬಡ ಪಳ್ಟನಾಯ್ಕನು ಬಡವರ ಗೆಳೆಯ. ನೆರೆಹೊರೆಯ ಬಡವರ್‍ಯಾರೇ ಆಗಲಿ ಅಸ್ವಸ್ಥದಲ್ಲಿದ್ದರೆ ಅಲ್ಲಿಗಾತನು ದಿನಾಲೂ ಹೊಗಿ ವಿಚಾರಿಸದೆ ಇರುತ್ತಿದ್ದಿಲ್ಲ. ‘ಅಣ್ಣಾ, ಅಕ್ಕಾ, ಮದ್ದಿಗೋ ಅನುಪಾನಕೋ ಹಾಲು ಬೆಣ್ಣೆ ತುಪ್ಪಗಳೇನಾದರೂ ಬೇಕಾದರೆ ತಂದು ಕೊಡುತ್ತೇನೆ. ಹೇಗಾದರೂ ದೇವರು ಒಮ್ಮೆಗೆ ನಿನಗೆ ಸೌಖ್ಯವನ್ನು ದಯಪಾಲಿಸಲಿ ಎಂಬುದು ರೋಗಿಯ ಹಾಸಿಗೆಯ ಬಳಿಯಲ್ಲಿ ಪಳ್ಪಟನ ಪ್ರಾರ್ಥನೆ. ಆ ತಾಯಿಯ ನರಳುವ ಮಗುವಿಗೆ ಹಾಲು ಬೇಕಾಗಿದ್ದರೆ ಅವಳು ಪಳ್ಪಟ ನಾಯ್ಕನಲ್ಲಿಗೇ ಹೋಗಬೇಕು. ಬಡಕೂಲಿಗೆ ಒಂದಿಷ್ಟು ಮಜ್ಜಿಗೆ-ನೀರು ಕುಡಿಯಬೇಕೆಂದಾಶೆ ಹುಟ್ಟಿದರೆ ಅದರ ಸಾರ್ಥಕ್ಯವೂ ಪಳ್ಪಟನಾಯ್ಕನಲ್ಲಿಯೆ! ಕುರುಡರು ಕುಂಟರು ಹಸಿವಿಂದ ಕಂಗೆಟ್ಟ ಬಡಪಾಯಿಗಯಿ ಇವರ್‍ಯಾರೇ ಬರಲಿ, ತನ್ನ ಊಟವನ್ನಾದರೂ ಅವರಿಗೆ ಬಡಿಸಿ ತಾನೊಂದಿಷ್ಟು ಮಜ್ಜಿಗೆ ಕುಡಿದು ತೃಪ್ತಿ ಪಡುತ್ತಿದ್ದನು. ಆಗ ಪಳ್ಪಟ ನಾಯ್ಕನಿಗಾಗುವ ಆನಂದವು ಹೊಟ್ಟೆ ತುಂಬ ಉಂಡ ದಿನವೂ ಆಗುತ್ತಿದ್ದಿಲ್ಲ.

ಪಳ್ಪಟನಿಗೂ ಚಿಕ್ಕದೊಂದು ಸಂಸಾರವಿತ್ತು. ಆತನ ಹೆಂಡತಿ, ಎರಡು ಮೂರು ಮಕ್ಕಳು, ಇಷ್ಟೆ. ಎಲ್ಲರಂತೆ ಆತನಿಗೂ ಸಂಸಾರದಲ್ಲಿ ಸಂಕಷ್ಟಗಳು ಬಾರದೆ ಇರುತ್ತಿದ್ದಿಲ್ಲ. ಮುದ್ದು ಮುದ್ದಾಗಿದ್ದ ಎರಡು ಮಕ್ಕಳು ತೀರಿಕೊಂಡಿದ್ದರು. ಹಟ್ಟಿಯಲ್ಲಿ ದನವೊ ಕರುವೋ ಸಾಯುತ್ತಿತ್ತು, ಆದರೆ ಅದಕ್ಕಾಗಿ ಅವನು ಅತ್ತು ರಂಬಾಟ ಮಾಡುತ್ತಿದ್ದಿಲ್ಲ. ಅದನ್ನೆ ಹಂಬಲಿಸುತ್ತ ಅನ್ನ ನೀರು ಬಿಟ್ಟು ಕಣ್ಣೀರಿಡುತ್ತಿದ್ದಿಲ್ಲ. ‘ಅವನೇ ಕೊಟ್ಟುದು; ಅವನೆ ಕೊಂಡುಹೋದುದು; ಎಲ್ಲವೂ ಅವನ ಇಚ್ಛೆ! ನನ್ನಿಂದೇನಾಗುವುದು?’ ಎನ್ನುತ್ತಿದ್ದನಲ್ಲದೆ ಮರುಗುತ್ತಿದ್ದಿಲ್ಲ. ಬಡತನ ದಿಂದ ನರಳುತ್ತಿದ್ದವರನ್ನು ಕಂಡರೆ ಮಾತ್ರ ಅವನ ಎದೆ ಕರಗಿ ನೀರಾಗುತ್ತಿತ್ತು. ಆಗ ಅವನು, ‘ಅಯ್ಯೋ, ನನ್ನೊಡೆಯಾ! ನನ್ನ ಕೈಯನ್ನೇಕೆ ಗಿಡ್ಡು ಮಾಡಿದೆ?’ ಎಂದು ಉದ್ಗಾರವೆತ್ತುತ್ತಿದ್ದನು. ಪಳ್ಪಟನಿಗಿದ್ದುದು ಎರಡೇ ಎರಡು ಆಶೆಗಳು-ನನ್ನೊಡೆಯಾ! ತಿರುಪತಿ ವೆಂಕಟೇಶಾ, ಬಡವರ ಕಡೆಗೆ ಕೈನೀಡುವಂತೆ ಮಾಡು! ಸಾಯುವ ಮೊದಲೊಮ್ಮೆ ನಿನ್ನ ದರ್ಶನವಾಗುವಂತೆ ದಾರಿ ಕಾಣಿಸು’ ಇವೇ ಆತನ ಜನ್ಮದ ಬಯಕೆಗಳು. ಶ್ರಾವಣ ಮಾಸದ ಶನಿವಾರಗಳಲ್ಲಿ ಮನೆ ಮನೆ ಬೇಡಿ ಶ್ರೀನಿವಾಸನ ಕಾಣಿಕೆಯ ಮುಡಿಪನ್ನು ಮಾಡಿದ್ದನು. ಪ್ರತಿ ವರ್ಷವೂ ಶ್ರಾವಣ ಮಾಸದ ಕೊನೆಯ ಶನಿವಾರ ಮುಡಿಪನ್ನು ಕಟ್ಟುವಾಗ ‘ಸ್ವಾಮಿ, ಬೆಟ್ಟದೊಡೆಯಾ, ಇದನ್ನು ನಾನೇ ನನ್ನ ಕೈಯಿಂದ ನಿನಗೆ ಅರ್ಪಿಸುವಂತಾಗಲಿ,’ ಎಂದು ಅದಕ್ಕೆ ಅನನ್ಯ ಭಕ್ತಿಭಾವದಿಂದ ನಮಸ್ಕರಿಸುತ್ತಿದ್ದನು.

ಕೆಲವು ವರ್ಷಗಳ ಮೇಲಾದರೂ ಶ್ರೀನಿವಾಸನು ಪಳ್ಪಟನ ಕಡೆಗೆ ಕೃಪಾದೃಷ್ಟಿಯನ್ನು ಬೀರಿದಂತಾಯಿತು. ಉಡುಪಿಯಲ್ಲನೇಕರು ತಿರುಪತಿ ಯಾತ್ರೆಗೆ ಹೊರಡುವರೆಂಬ ಸುದ್ದಿಯು ಪಳ್ಪಟನಿಗೆ ಮುಟ್ಟಿತು. ಅವನು ಅವರಲ್ಲಿ ಕೆಲವರ ಬಳಿಗೆ ಹೋಗಿ, ‘ಸ್ವಾಮಿ, ತಮ್ಮ ಗಂಟು ಮೂಟೆಗಳನ್ನು ಹೊರುತ್ತೇನೆ. ತಮ್ಮ ಕಾಲೊತ್ತುತ್ತೇನೆ. ಬಿದ್ದ ಯಾವ ಕೆಲಸಕ್ಕೂ ಸಿದ್ಧನಿದ್ದೇನೆ ದಯಮಾಡಿ ನನಗೊಮ್ಮೆ ಬೆಟ್ಟ ದೊಡೆಯನ ದರ್ಶನ ಮಾಡಿಸಿರಿ, ನಿಮ್ಮ ಕಾಲಿಗೆ ಅಡ್ಡ ಬಿದ್ದೆ, ದಮ್ಮಯ್ಯ!’ ಎಂದು ಅಂಗಲಾಚಿ ಬೇಡಿಕೊಂಡನು. ಆ ಕಾಲದಲ್ಲಿ ಯಾತ್ರಾರ್ಥಿಗಳಿಗೆ ಪಳ್ಪಟನಂತಹ ಜನರು ತಮ್ಮೊಡನಿದ್ದರೆ ಬಹಳ ಪ್ರಯೋಜನ ಎಂದ ಮೇಲೆ ಪಳ್ಪಟನನ್ನು ಕರೆದುಕೊಂಡು ಹೋಗಲು ಆ ಯಾತ್ರಿಕರು ಸಂತೋಷದಿಂದ ಒಪ್ಪಿಕೊಂಡರು. ಆಗ ಆತನಿಗಾದ ಆ ಮಹದಾನಂದ! ಅಂತಹ ಹೃದಯಕ್ಕೇ ಗೊತ್ತು!

ಉಡುಪಿಯಿಂದ ಹೊರಟ ಆ ಯಾತ್ರಿಕರ ಗುಂಪಿನಲ್ಲಿ ಅತ್ಯುತ್ಸಾಹ ದಿಂದ ‘ಗೋವಿಂದ’ ಎನ್ನುತ್ತ ದೊಡ್ಡ ಮೂಟೆಯನ್ನು ಹೊತ್ತು ಕೊಂಡು ಮುನ್ನಡೆಯುತ್ತಿದ್ದವನ್ಯಾರೆಂದು ಈಗ ತಿಳಿಯಿತೇ? ಅವನೇ ನಮ್ಮ ಪಳ್ಪಟನಾಯ್ಕ! ಅವನ ಬಗಲಲ್ಲಿ ತೂಗಾಡುತ್ತಿರುವುದೇ ಶ್ರೀನಿವಾಸನ ಮುಡಿಪು!

ಸುಮಾರು ಮೂರು ತಿಂಗಳ ಪಯಣದ ಮೇಲೆ ಯಾತ್ರಿಕರು ತಿರುಪತಿಯನ್ನು ಸೇರಿದರು. ಅವರೊಡನೆ ಪಳ್ಪಟನಿಗೂ ಬೆಟ್ಟ ದೊಡೆಯನ ದರ್‍ಶನವಾಯಿತು. ಯಾತ್ರಿಕರಲ್ಲಿ ಒಬ್ಬೊಬ್ಬರು ಒಂದೊಂದು ಬಯಕೆ ಯನ್ನು ಬೇಡಿ ಹರಕೆಯನ್ನು ಹೊತ್ತರು: ಕೆಲವರು ಸಂತಾನ ಕೇಳಿದರು, ಕೆಲವರು ಐಶ್ವರ್‍ಯ ಕೊಡೆಂದರು, ಇನ್ನು ಕೆಲವರು ತಮ್ಮ ರೋಗ ನಿವಾರಿಸೆಂದರು. ನಮ್ಮ ಪಳ್ಪಟನು ತನ್ನ ಕೈಯಿಂದಲೇ ಬೆಟ್ಟದೊಡೆಯನಿಗೆ ಮುಡಿಪನ್ನು ಸಮರ್‍ಪಿಸಿ ‘ನನ್ನೊಡೆಯಾ! ಇಂದಿಗೆ ನನ್ನ ಒಂದಾಶೆಯನ್ನು ನೀನು ತೀರಿಸಿದೆ! ನಿನ್ನ ಇಚ್ಚೆಯಿದ್ದರೆ ನನ್ನ ಮತ್ತೊಂದು ಬಯಕೆ ಯನ್ನೂ ತೀರಿಸಲಾಪೆ! ನಿನ್ನ ಮನ ಬಂದಂತಾಗಲಿ!’ ಎಂದು ಹೇಳಿ ಕಣ್ದಣಿಯೆ ಶ್ರೀನಿವಾಸನ ದಿವ್ಯ ಮೂರ್‍ತಿಯನ್ನು ನೋಡಿ ಹೊರಗೆ ಬಂದು ಮರದ ಕೆಳಗೆ ಕುಳಿತುಕೊಂಡನು.

ಪಳ್ಪಟನು ಅಲ್ಲಿ ಕುಳಿತು ಯೋಚನಾಪರನಾದ, ಶ್ರೀನಿವಾಸನ ದರ್ಶನದಿಂದ ನನ್ನ ಸರ್ವ ಪಾಪವು ದೂರವಾಯಿತು. ಇನ್ನು ಊರಿಗೆ ಹೋದೆನೆಂದರೆ ತಿಳಿದೋ ತಿಳಿಯದೆಯೋ ಪಾಪ ಸಂಘಟನೆಯು ಆಗಿಯೇ ಆಗುವದು. ಇದಲ್ಲದೆ ಇನ್ನು ಜೀವಿಸಿಯಾದರೂ ಮಾಡತಕ್ಕುದೇನಿದೆ? ಯಾವುದಕ್ಕಾಗಿ ಬಾಳಬೇಕು? ಸಂಸಾರ? ಅವನೇ ಕೊಟ್ಟುದು! ಅವನೇ ನೋಡಿಕೊಳ್ಳುವನು! ಅದೆಲ್ಲಾ ಗೊಂದಲ ಹಚ್ಚಿ ಕೊಳ್ಳಲು ನಾನ್ಯಾರು? ನಾನೆಷ್ಟರವನು? ಎಷ್ಟರ ತನಕ ಬಂದೇನು? ಬಡವರ ಸಂಕಷ್ಟ ನಿವಾರಣೆ ಮಾಡುವ ಶಕ್ತಿಯು ನನ್ನಲ್ಲಿದ್ದರೆ ನಾನಿನ್ನು ಬದುಕಿ ಮಾಡುವ ಮಹತ್ಕಾರ್‍ಯಗಳಿವೆಯೆಂದಾದರೂ ಹೇಳಬಹುದಿತ್ತು. ಆದರೆ ನನ್ನ ಕೈ ಗಿಡ್ಡಾಗಿರುವುದು-ಎಂದಮೇಲೆ ನನಗೆ ಈ ಪುಣ್ಯ ಕ್ಷೇತ್ರದಲ್ಲಿ ಮರಣವುಂಟಾದರೆ ನಾನೆಂತಹ ಧನ್ಯನು’ ಎಂದು ಮುಂತಾದ ಯೋಚನೆಯಲ್ಲಿ ಪಳ್ಪಟನು ಮಗ್ನನಾಗಿರಲು ಮೇಲಿನಿಂದ ಆತನ ಮೈ ಮೇಲೆ ಗೋಲಿಯ ಗಾತ್ರದ ಕಲ್ಲೊಂದು ಬಿತ್ತು! ಮೇಲೆ ನೋಡಲು ಮರದ ರೆಂಬೆಯ ಮೇಲೆ ತಿಮ್ಮಣ್ಣನೊಬ್ಬನು ಕುಳಿತು ಆತನನ್ನೇ ನೋಡುತ್ತಿದ್ದನು! ಆಗ ಪಳ್ಪಟನು ಆ ಮಂಗನಿಗೆ ಹೊಡೆಯದೆ ನಗುತ್ತ, ‘ತಿಮ್ಮಣ್ಣಾ, ಬಡವನೆಂದರೆ ನಿನಗೂ ಅಷ್ಟೊಂದು ತಾತ್ಸಾರವೆ?’ ಎಂದು ಆ ಕಲ್ಲನ್ನು ತೆಗೆದು ದೂರ ಬಿಸುಟು ತನ್ನ ವೀಳೆಯದ ಸಂಚಿಯನ್ನು ಬಿಚ್ಚಿ ಎಲೆಯಡಕೆಯನ್ನು ಹಾಕಿ ಜಗಿಯುತ್ತ ಕುಳಿತುಕೊಂಡನು. ಒಂದು ಚೂರು ಅಡಕೆಯು ಬೇಕೆಂದು ತೋರಿತು. ಚೀಲದಿಂದೊಂದು ಅಡಕೆಯನ್ನು ತೆಗೆದು ಅದನ್ನು ಚೂರಿಯಿಂದ ತುಂಡು ಮಾಡುವಷ್ಟರಲ್ಲಿ ಚೂರಿಯ ಮೇಲೆ ‘ಕಟ್’ ಎಂದು ಅದೆ ಕಲ್ಲು ಮತ್ತೊಮ್ಮೆ ಮೇಲಿಂದ ಬಿತ್ತು! ಮೇಲೆ ನೋಡಲು ಅದೇ ತಿಮ್ಮನು ಅದೇ ರೆಂಬೆಯ ಮೇಲೆ ಕುಳಿತು ಪಳ್ಪಳಟನನ್ನೇ ದಿಟ್ಟಿಸಿ ನೋಡುತ್ತಿದ್ದನು! ಆ ತಿಮ್ಮನ ಮುಖದಲ್ಲಿ ಪಳ್ಪಟನಿಗೇನು ಕಾಂತಿ ತೋರಿತೊ! ಮತ್ತೇನನ್ನು ಕಂಡನೋ ಅವನಿಗೇ ಗೊತ್ತು. ಚೂರಿಯು ಕೈಯಲ್ಲಿದ್ದಂತೆಯೇ ಕೈಗಳನ್ನು ಮುಗಿಯಲು ಮೇಲಕ್ಕೆತ್ತಿದನು. ಆಗ ನೋಡುವುದೇನು? ಕಬ್ಬಿಣದ ಚೂರಿಯು ಬಂಗಾರದ್ದಾಗಿತ್ತು! ದೇವಾ! ಬೆಟ್ಟದೊಡೆಯಾ, ಪಳ್ಪಟನ ಜನ್ಮವನ್ನಿಂದಿಗೆ ಸಾರ್ಥಕ ಗೈದೆ!’ ಎನ್ನುತ್ತ ಪಳ್ಪಟನು ಅನನ್ಯ ಭಕ್ತಿಭಾವದಿಂದ ಮೇಲಕ್ಕೆ ನೋಡಿದನು. ಆದರೆ ರೆಂಬೆಯ ಮೇಲಿನ ಮಂಗನೆಲ್ಲಿ? ಎಲ್ಲಿಯೂ ಇಲ್ಲ!! ಪಳ್ಪಟನು ‘ಶ್ರೀ ಮದ್ರ ಮಾರಮಣ ಗೋವಿಂದಾ, ಗೋವಿಂದ’ ಎನ್ನುತ್ತ ಆ ಕಲ್ಲನ್ನು ತೆಗೆದು ತಾನು ತಂದಿದ್ದ ಮುಡುಪಿನ ಬುಟ್ಟಿಯಲ್ಲಿ ಚೂರಿಯೊಡನಿಟ್ಟು ಬಗಲ ಗಂಟಿನಲ್ಲಿ ಕಟ್ಟಿ ಕೊಂಡನು.

ಯಾತ್ರಿಕರು ತಿರುಪತಿಯಿಂದ ಹೊರಟರು, ಪಳ್ಪಟನೂ ಅವರೊಡ ನಿದ್ದ, ಅವರಲ್ಲಿ ಶ್ರೀ ಮದ್ಘಾಂಭೀರ್‍ಯವುಳ್ಳ ಕೆಲವರು ಪಳ್ಪಟನನ್ನು ಕುರಿತು, ಏನೋ ಪಳ್ಪಟ, ನಿನಗೆ ಶ್ರೀನಿವಾಸನ ದರ್ಶನ ಮಾಡಿಸಿದೆವಲ್ಲವೇನೋ?’ ಎಂದರು. ಪಳ್ಪಟನು, ‘ಹೌದೊಡೆಯಾ ತಮ್ಮಿಂದಾಯಿತು. ಬಡವನ ಮೇಲೆ ಬೆಟ್ಟದೊಡೆಯನ ಕೃಪಾಕಟಾಕ್ಷವು ಬಿತ್ತು’ ಎಂದು ಸವಿ ನಯದಿಂದ ನುಡಿದನು. ಅದಕ್ಕವರು ಗೊಳ್ಳನೆ ನಕ್ಕು ‘ಏನೋ, ನೂರಾರು ರೂಪಾಯಿಗಳನ್ನು ನೀರಿನಂತೆ ಚೆಲ್ಲಿ ಶ್ರೀನಿವಾಸನಿಗೆ ತರತರದ ಸೇವೆಗಳನ್ನು ಮಾಡಿಸಿದ ನಮಗೆ ಆತನು ಒಲಿದುದೋ? ದೇವರ ಮುಂದೆ ಬರಿಗೈ ಬೀಸಿ ಬಂದ ನಿನಗೋ? ಬಲು ಸೊಗಸಾದ ಮಾತು!’ ಎಂದು ಪರಿಹಾಸ್ಯಗೈದರು. ಪಳ್ಪಟನು, ಒಡೆಯರೆ, ತಮ್ಮಂತಹರಿಗೆ ದೇವರೊಲಿಯದೆ ಇದ್ದಾನೆಯೆ? ಆದರೆ ಬೆಟ್ಟದೊಡೆಯನಿಗೆ ಬಡ ಪಳ್ಪಟನ ಮೇಲೂ ಅನುಗ್ರಹವಿದೆ’ ಎಂದನು. ಹಾದಿಯುದ್ದಕ್ಕೂ ಯಾತ್ರಿಕರಲ್ಲಿ ಒಬ್ಬರಲ್ಲದಿದ್ದರಿನ್ನೊಬ್ಬರು- ‘ಪಳ್ಪಟನಿಗೆ ದೇವರೊಲಿದಿರುವರು, ಇನ್ನು ಪಳ್ಪಟನು ಶ್ರೀಮಂತನಾಗುವನು- ದೊಡ್ಡ ಮನೆ ಕಟ್ಟಿಸುವನು! ಏನೋ, ಪಳ್ಪಟ, ನೀನು ಕಟ್ಟಿಸುವ ಮನೆ ಮೂರು ಅಂತಸ್ತಿನ, ನಾಲ್ಕರದೊ? ನಿನಗಿನ್ನು ಪಳ್ಪಟ ಸುದಾಮನೆಂದು ಹೆಸರಿಡೋಣವೆ? ಅಥವಾ ಸುದಾಮಪಳ್ಪಟನೆಂದು ಕರೆಯೋಣವೇ?’ ಎಂದು ಗೇಲಿಮಾಡುತ್ತ ಬಂದರು. ಪಳ್ಪಟನು ಶಾಂತ ಚಿತ್ತದಿಂದ ನಗುತ್ತ, ‘ಸ್ವಾಮಿ, ಬೆಟ್ಟದೊಡೆಯನು ನನ್ನ ಕೈಯಿಂದ ದೊಡ್ಡದೊಂದು ಮನೆ ಕಟ್ಟಿಸಲಿಕ್ಕಿರುವನು! ಆದರೆ ಆ ಮನೆಯು ನನ್ನದೋ ಅವನದೋ, ಈ ಲೋಕದಲ್ಲೋ ಮತ್ತೆಲ್ಲೋ, ಹೇಳಲಿಕ್ಕೆ ಬಾರದು’ ಎನ್ನುತ್ತಿದ್ದನು. ಅದನ್ನು ಕೇಳಿ ಎಲ್ಲರೂ ಗೊಳ್ಳೆಂದು ನಗುತ್ತಿದ್ದರು. ಆಗ ಪಳ್ಪಟನು ‘ಶ್ರೀಮದ್ರಮಾರಮಣ ಗೋವಿಂದಾ’ ಎನ್ನುತ್ತ ಅವರೆಲ್ಲರಿಂದಲೂ ‘ಗೋವಿಂದ’ ಎನ್ನಿಸುತ್ತಿದ್ದನು. ಇಂತಹ ವಿನೋದ ದಿಂದ ಹಾದಿಯು ಸುಗಮವಾಗಿ ಸಾಗಲು ಯಾತ್ರಿಕರು ಉಡುಪಿಗೆ ಬಂದು ಸೇರಿದರು.

ಅನೇಕ ಶ್ರೀಮಂತ ಯಾತ್ರಿಕರಲ್ಲಿ ‘ತಿರುಪತಿಸಮಾರಾಧನೆ’ ಬಹು ವಿಜೃಂಭಣೆಯಿಂದ ನೆರವೇರಿತು. ದೊಡ್ಡ ದೊಡ್ಡವರಿಗೆ ಭಾರೀ ಊಟ. ಭಾರೀ ಸನ್ಮಾನ! ಆದರೆ ಅವರ ಮನೆಬಾಗಲಲ್ಲಿ ಎಷ್ಟೋ ಬಡಜನರು ದೇವರ ಪ್ರಸಾದವೆಂದು ಅಮಟೆಯ ಗೊರಟೊಂದಾದರೂ ನೆಕ್ಕಲಿಕ್ಕೆ ಸಿಕ್ಕಿದರೆ ಸಾಕೆಂದು ಸಾಯಂಕಾಲದ ತನಕ ಕಾದುಕೂತು ಕೂತುಕಾದ್ದು ಹತಾಶರಾಗಿ ಹಿಂತೆರಳಬೇಕಾಗಿತ್ತು.

ಕೆಲವು ದಿವಸಗಳಾದ ಮೇಲೆ ಪಳ್ಪಟನೂ ತಿರುಪತಿಸಮಾರಾಧನೆ ಮಾಡಿದನು. ಆದರೆ ಅದು ದೊಡ್ಡವರ ಆಡಂಬರದ ಸಮಾರಾಧನೆಯಲ್ಲ. ಗೌಜಿಯ ಪೂಜೆಯಲ್ಲ. ಶ್ರೀಮಂತ ಅತಿಥಿಗಳ ಆಗಮನದ ನಿರೀಕ್ಷಣೆ, ಆತಿಥ್ಯ ಸತ್ಕಾರಾದಿಗಳ ವೈಭವ, ಅವರನ್ನು ಬೀಳ್ಕೊಳ್ಳುವ ಸಂಭ್ರಮ, ಇವೇನೂ ಇದ್ದಿಲ್ಲ. ಪಳ್ಪಟನ ಸಮಾರಾಧನೆಯು ‘ಉಂಬವರಿಗೆ ಉಣಿಸಬೇಕು ತಿಂಬವರಿಗೆ ತಿನಿಸಬೇಕು’ ಎಂಬಂತೆ ಬಡ ಜನರ ಸಂತರ್‍ಪಣೆ- ಅಮಟೆಯ ಗೊರಟಗಾಗಿ ಕಾದುಕೂತು ಹಿಂದೆ ಬಂದಿದ್ದ ಆ ಮಂದಿಗಿಂದು ಮುಂದಾಗಿ ಊಟ! ಅದೂ ದೊಡ್ಡ ಔತಣದ ಊಟ!

ಅಂದಿನಿಂದ ಪಳ್ಪಟನ ದಾನಧರ್‍ಮಗಳು ಹೆಚ್ಚುತ್ತಾ ಹೋದುವು. ಅವನ ಮನೆಯು ಬಡಜನರ ಆಶ್ರಯಸ್ಥಾನವಾಗಹತ್ತಿತು. ಅದಕ್ಕಾಗಿ ಆದನ್ನು ಸ್ವಲ್ಪ ದೊಡ್ಡದು ಮಾಡಿ ಕಟಿದ ತಟ್ಟಿಯ ಗೋಡೆಯ ಬದಲು ಮಣ್ಣಿನ ಗೋಡೆಯಾಯಿತು, ಒಳಗೆ ಗೋಡೆಯಲ್ಲೊಂದು ಕಂಡಿ; ಅದರಲ್ಲಿ ತಾನು ತಿರುಪತಿಯಿಂದ ತಂದಿದ್ದ ಶ್ರೀನಿವಾಸನ ಪಠವನ್ನೂ ಅದರ ಹಿಂದೆ ಒಂದು ಬುಟ್ಟಿಯನ್ನೂ ಇಟ್ಟು ದಿನಾಲೂ ಪೂಜಿಸುತ್ತಿದ್ದ. ‘ಬುಟ್ಟಿಯಲ್ಲಿ ಬೆಟ್ಟದೊಡೆಯನ ಪ್ರಸಾದವಿದೆ’ ಎಂಬುವ ಅವನ ಮಾತಿಗೆ ಯಾರೂ ವಿಶೇಷ ಅರ್ಥಕಲ್ಪಿಸಲಿಲ್ಲ. ತನ್ನ ಮನೆಯ ಎದುರಲ್ಲಿದ್ದ ಭೂಮಿಗಳನ್ನು ಸ್ವಲ್ಪ ಸ್ವಲ್ಪವಾಗಿ ಕೊಂಡುಕೊಂಡು ಬಡಬಗ್ಗರಿಗೆ ದಾನಮಾಡುತ್ತ ಬಂದ. ಅಲ್ಲಿಯ ತಿರುಕರು ಸಿರಿವಂತರಾದರು. ಅವರ ತಿರಿಬೀಡು ಸಿರಿಬೀಡಾಯಿತು! ಬೆಟ್ಟದೊಡೆಯನು ತಿಮ್ಮನ ರೂಪದಿಂದ ತನಗೆ ಮೈದೋರಿ ಅನುಗ್ರಹಿಸಿದನೆಂಬುದರ ಸ್ಮಾರಕವಾಗಿ ಶಿಲೆಯಲ್ಲಿ ತಿಮ್ಮನ ರೂಪವನ್ನು ಕೆತ್ತಿಸಿ ತಾನು ಧರ್ಮಮಾಡಿದ ಭೂಮಿಯ ನೆತ್ತಿಯಲ್ಲಿ ನೆಡಿಸುತ್ತಿದ್ದ.

ಪಳ್ಪಟನ ಈ ರೀತಿಯ ಧರ್ಮದ ಕೈಯನ್ನು ಕಂಡು ಉಡುಪಿಯ ಕೆಲವು ಪುಂಡುಗಾರರು ಆತನಿಗೆ ಬರಮಗುಡ್ಡೆಯ ಬಳಿಯಲ್ಲೆಲ್ಲೊ ನಿಧಿಯ ಕೊಪ್ಪರಿಗೆ ಸಿಕ್ಕಿರಬೇಕೆಂದು ಒಂದು ದಿನ ರಾತ್ರಿ, ಅವನ ಮನೆಯನ್ನು ನುಗ್ಗಿ ಹುಡುಕಿನೋಡಿದರು-ಅವನ ಮುರುಕು ಪೆಟ್ಟಿಗೆಯೊಳಗೆ ಒಂದೆರಡು ಕಬ್ಬಿಣದ ತುಂಡುಗಳೂ ಒಂದಿಷ್ಟು ಪುಡಿಕಾಸೂ ಅಲ್ಲದೆ ಮತ್ತೇನೂ ಇದ್ದಿಲ್ಲ. ಬೆಟ್ಟದೊಡೆಯನ ಮುಡುಪಿನ ಗಂಟಿನಿಂದ ಇಂದು ಕೋಳಿಯ ಪಡೆಗೋ ಜುಗಾರಾಟಕ್ಕೋ ಹಣವು ಹಾರಿಹೋಗುತ್ತಿರುವುದಾದರೂ ಅಂದಿನ ಆ ಪುಂಡುಗಾರರಿಗೆ ಕಂಡಿಯಲ್ಲಿದ್ದ ಬುಟ್ಟಿಗೆ ಕೈ ಹಾಕುವಷ್ಟು ಎದೆಗಟ್ಟಿ ಇರಲಿಲ್ಲ. ಒಂದು ವೇಳೆ ಕೈಹಾಕಿದ್ದರೂ ಅದರಲ್ಲಿ ದುಡ್ಡು ಕಾಸೇನೂ ಸಿಗುತ್ತಿರಲಿಲ್ಲ ಅಲ್ಲಿದ್ದುದು ಬರೇ ಗೋಲಿಯಾಕಾರದ ಕಲ್ಲು ! ಅದನ್ನು ಕೊಂಡುಹೋಗಲು ಅವರೇನು ಆಡುವ ಮಕ್ಕಳೆ? ಮರುದಿವಸ ಇದನ್ನು ತಿಳಿದು ಪಳ್ಪಟನು, ಅಯ್ಯೋ! ತಿಳಿಗೇಡಿಗಳೆ, ಸುಮ್ಮನೆ ನನ್ನ ಗುಡಿಯನ್ನು ಹೊಕ್ಕು ಹುಡುಕಿ ಶ್ರಮೆಗೊಂಡಿರಿ! ಅವನೇ ಪ್ರೇರೇಪಿಸಬೇಕು, ಅವನೇ ಕೊಡಬೇಕು, ಹಾಗೆ ಕೊಟ್ಟರೆ ಉಂಟು; ಇಲ್ಲದಿದ್ದರಿಲ್ಲ!’ ಎಂದೊಂದು ನಿಟ್ಟುಸಿರು ಬಿಟ್ಟ.

ಪಳ್ಪಟನಿಗೆ ಮತ್ತೊಮ್ಮೆ ಬೆಟ್ಟದೊಡೆಯನ ದರ್ಶನವನ್ನು ಮಾಡ ಬೇಕೆಂದು ತೋರಿತು. ಅಲ್ಲಿಗೆ ಹೋಗಿ ಅಲ್ಲಿಯೂ ಗದ್ದೆ ತೋಟಗಳನ್ನು ಕೊಂಡುಕೊಂಡು ಬಡವರಿಗೆ ಹಂಚಿಕೊಟ್ಟ. ಅಲ್ಲಿಂದ ಒಂದೊಂದಾಗಿ ಎಲ್ಲ ಪುಣ್ಯಕ್ಷೇತ್ರಗಳ ಬಳಿಯ ಗ್ರಾಮಗಳಲ್ಲಿ ಹೊಲಗದ್ದೆಗಳನ್ನು ಕ್ರಯಕ್ಕೆ ಪಡೆದು ನಿರ್ಗತಿಕರಿಗೆ ದಾನಮಾಡುವುದೂ ಅವುಗಳ ನೆತ್ತಿಕಟ್ಟಿ ನಲ್ಲಿ ಹನುಮಂತನ ಮೂರ್ತಿಯು ಕೆತ್ತಲ್ಪಟ್ಟ ಕಲ್ಲನ್ನು ನೆಡುವುದೂ ಅವನ ಕಟ್ಟಳೆ. ಪಳ್ಪಟನಾಯ್ಕನ ಕಾಲವು ಮುಗಿದು ಸುಮಾರು ಒಂದು ಸಾವಿರ ವರಷಗಳಾಗಿರಬಹುದು. ಆದರೂ ಅವನು ನೆಡಿಸಿದ ಕಲ್ಲುಗಳಲ್ಲಿ ಕೆಲವು ಇನ್ನೂ ಹೊಲಗದ್ದೆಗಳ ಬಳಿಯಲ್ಲಿ ನಿಂತಿವೆ. ಅಲ್ಲಿಯ ಮುದಿಯಜ್ಜಂದಿರನ್ನು ಕುರಿತು, ‘ಇದೇನು ಕಲ್ಲು?’ ಎಂದು ಕೇಳಿದರೆ, ‘ಅದು ಪಳ್ಪಟನಾಯ್ಕನ ಧರ್‍ಮ’ ಎನ್ನುವರು ಅವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೩
Next post ಕನ್ನಡ ಸತ್ವ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…