ವಿರಕ್ತ ಲೋಕದ ಅಸಂಬದ್ಧ ಉಲಿತ
ಉಳಿಯಿಂದ ತೂತು ಕೊರೆದಂತೆ
ಖಾಲಿಯಾದ ನೇತ್ರದ್ವಯಗಳು
ಪರಾಂಬರಿಸಿ ದೃಷ್ಟಿಯಿಟ್ಟರಷ್ಟೇ ದೃಶ್ಯ.
ಸೀಳುನೋಟ ಬೀರುತ್ತಿದ್ದಾಳೆ ಆಕೆ
ಬಾಗಿದ ಬೆನ್ನು ಸಹಕರಿಸುತ್ತಿಲ್ಲ,
ಒಮ್ಮೆಲೆ ತಡಕಾಡುತ್ತಾಳೆ,
ಜಾರಿದ ಚಾಳೀಸು ಜಾಗಕ್ಕೇರಿಸಲು:
ನಿರ್ಜೀವ ಬಿಳಿಕೂದಲುಗಳು
ಎತ್ತಿ ಕಟ್ಟಲಾಗದು
ನೆರಿಗೆಗಟ್ಟಿದ ಹಸ್ತದ ಬೆರಳುಗಳಿಗೆ:
ಮೈಗಂಟಿದ ಮಾಸಲು ಸೀರೆ
ಕೂಡ ಈಗೀಗ ಆಕೆಗೆ ಭಾರ
ಸಿಡುಕುತ್ತಾಳೆ- ಹೊರೆಗೆ
ಡೊಂಕು ಕಾಲುಗಳ ಜೋಡಿಸಲು
ಜರೂರು ಇಲ್ಲದಾಗಲು ಮತ್ತೆ
ಮಡಚುತ್ತಾಳೆ-ಮುಲುಗುತ್ತ,
ದಿಗಂತದಲ್ಲಿ ಅಸ್ತಂಗತನಾಗುತ್ತ ಭಾನು
ಭಾರವಾಗಿ ಕೊನೆಯ ಬಾಣಬಿಟ್ಟಂತೆ
ಹೊರಟು ನಿಂತಿದ್ದಾನೆ-
ಏಕಾಂಗಿತನದ ಉಯಿಲನ್ನು ಆಕೆಯ ಹೆಸರಿಗಿಟ್ಟು
ಧಗಧಗನೆ ಉರಿದು
ಬೆಳಕು ಚೆಲ್ಲಿದ ಕಾಲ
ಈಗ ಬರಿಯ ಮೆಲಕು ಮಾತ್ರ.
*****