ಎಲ್ಲ ಹೇಳುತ್ತಾರೆ ನಾನು
ಹಕ್ಕಿಗಳ ಗಡಿಯಾರ
ನನಗೊ….
ಚಿಲಿಪಿಲಿ ಸದ್ದು
ಕುಲುಕಿ ಎಬ್ಬಿಸಿದಾಗಲೆ
ಎಚ್ಚರ!
ನಾನು ಬಂಗಾರದ ರಥದ
ಒಡೆಯ ಎನ್ನುವುದು
ಕೇವಲ ಉಳ್ಳವರ ಕುಹಕ
ನಾನು ನಿಮ್ಮಂತೆಯೆ
ಬೆಂಕಿಯ ಕಾರ್ಖಾನೆಯಲ್ಲಿ
ಬಡ ಕಾರ್ಮಿಕ
ನಾನು ಅಸ್ಪೃಶ್ಯ
ನನ್ನ ಜೊತೆಗೆ ಎದ್ದು
ಧೂಳು ಗುಡಿಸುವ
ಜಾಡಮಾಲಿಯನ್ನು
ಬೆಚ್ಚಗೆ ಚುಂಬಿಸುತ್ತೇನೆ
ನಂತರ ಮಿಕ್ಕವರನ್ನು
ಸುಡುತ್ತಾ ಹೋಗುತ್ತೇನೆ.
ನಾನು ಹುಟ್ಟು ಬಂಡಾಯಗಾರ
ಜಗತ್ತಿನ ಅನ್ಯಾಯದ
ವಿರುದ್ಧ ಯಾವತ್ತು
ಸಿಡಿದು ನಿಂತಿದ್ದೇನೆ ದೂರ
ನಾನು ಕವಿ
ಹಳ್ಳಗಳು ನನ್ನ
ಹನಿಗವನಗಳು
ನದಿಗಳು ನನ್ನ
ದೀರ್ಘ ಕವನಗಳು
ಸಾಗರಗಳು ನನ್ನ
ಮಹಾಕಾವ್ಯಗಳು.
ನಾನು ಕಲಾವಿದ
ನನ್ನ ಸಂಜೆ
ಇಡಿ ಜಗತ್ತಿನಲ್ಲೆ
ಮಾನ್ಯತೆ ಪಡೆದ
ಉತ್ಕೃಷ್ಟ ಕಲಾಕೃತಿ
ನಾನು ಕಾವಿ ಉಡುತ್ತೇನೆ
ಸಂನ್ಯಾಸಿಯಲ್ಲ
ನಾನು ಬೆಳಕು ಕೊಡುತ್ತೇನೆ
ಜ್ಞಾನಿಯಲ್ಲ
ನಾನು ಸೂರ್ಯ-
ನಾನು ವಸ್ತು
ನಾನು ಚೈತನ್ಯ.
*****