ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ
ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ
ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ!
ಮುಂದೆ ನೋಡುವಿರ ಹಿಂದೆ ನೋಡುವಿರ
ಮನುಷ್ಯನಿಗಿರುವುದು ಎರಡೇ ಕಣ್ಣುಗಳು
ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ
ಬಂದರೂ ಅವರ ಕೈಕಾಲುಗಳು ಹಾಗೆಯೇ ಇರುತ್ತವೆಯೇ ?
ಉತ್ತರ ಅಯರ್ಲೆಂಡಿನಲ್ಲಿ ಏನಾಗುತ್ತಿದೆ?
ಆರ್ಜೆಂಟೇನಾದಲ್ಲಿ ನಿಕರಾಗುವಾದಲ್ಲಿ
ಇಲ್ಲಿ ಲಂಡನ್ನಲ್ಲಿ! ಜನ ಬದುಕಬೇಕೆ ಬೇಡವೆ?
ಕ್ರಾಂತಿಯನ್ನುವುದೀಗ ಅಂಗಡಿಯಲ್ಲಿ ಸಿಗುವ
ವಸ್ತುವಾಗಿಬಿಟ್ಟಿದೆ! ಸೆಲೋಫೇನ್ ಚೀಲಗಳಲ್ಲಿ
ಯಾರು ಬೇಕಾದರೂ ಕೊಳ್ಳಬಹುದು ಹತ್ತು,
ಪೌಂಡುಗಳಿಗೆ! “ಖಾಲಿ ಚೀಲಗಳನ್ನು ಮಾತ್ರ
ನಾಶಪಡಿಸಿರಿ, ಮಕ್ಕಳ ಕೈಗೆ ದೊರಕುವ ಕಡೆ
ಒಗೆಯಬೇಡಿರಿ!”- ಎನ್ನುತ್ತದೆ ಅದರ ಮೇಲಿನ
ಪ್ರಕಟಣೆ. ಆದರೆ ಚೀಲದೂಳಗಿನ ವಸ್ತು?
ಅದಕ್ಕೆ ಯಾರ ಲಂಗು ಲಗಾಮು ಸ್ವಾಮಿ? ಯಾವ
ಸರಕಾರೀ ನಿಯಂತ್ರಣ? ಅದು ಆಫ್ರಿಕೆಗೂ ಸಿದ್ಧ
ಲ್ಯಾಟಿನ್ ಅಮೇರಿಕೆಗೂ ಸಿದ್ಧ! ಮತ್ತೆ ಹೊಸ
ರೋಗಗಳ ಸೋಂಕು ತಗಲಿಸುತ್ತದೆ ನಮ್ಮ
ನಿಲಯದ ಬುದ್ದಿ ಜೀವಿಗಳಿಗೆ!
ಅವರೋ! ಹಾ! ಅವರ ಬಗ್ಗೆ ಎಷ್ಟು ಹೇಳಿದರೂ
ಕಡಿಮೆಯೆ! ಅವರು ಸಿಗರೇಟಿನ ಬೆಲೆಯಿಂದ
ಹಿಡಿದು ಅಣ್ವಸ್ತ್ರಗಳ ಬೆಲೆಯ ತನಕ ಎಲ್ಲವನ್ನೂ
ತಿಳಿದವರಂತೆ ಮಾತಾಡುತ್ತಾರೆ. ತಮ್ಮ ಪಕ್ಕದಲ್ಲೇ
ಬಾಂಬು ಸಿಡಿದರೂ ಕೇಳಿಸದಂತೆ ಸಾಕ್ರಟೀಸನ
ಶೈಲಿಯಲ್ಲಿ ಚರ್ಚಿಸುತ್ತಾರೆ! ಎಂಥ ಸಮಾಜ!
ನನಗೆ ಹೇಳುವುದಕ್ಕೆ ಬಹಳಷ್ಟಿದೆ-ಆದರೆ
ನೀವು ನಿಮ್ಮ ನಿಮ್ಮ ಮನೆಗಳಿಗೆ ಹೋಗಲು
ಆತುರದಿಂದಿದ್ದೀರಿ. ಸದ್ಯ ನಿಲ್ಲಿಸುವೆ. ನಾಳೆ
ಇಲ್ಲೇ ನಮ್ಮ ಭೇಟಿ. ಆದರೆ ಜಾಗ್ರತೆ!
ನಿಮ್ಮ ಕಾರಿನ ಬಾಗಿಲು ತೆಗೆಯುವ ಮೊದಲು
ಎರಡೆರಡು ಬಾರಿ ನೋಡಿಕೊಳ್ಳಿ!
*****