ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು || ಪ ||
ಆರತಿಯನು ಎತ್ತಿರೆ
ಈರತಿಗೆ ರತಿಯಿಟ್ಟು ಸಾಕ್ಷಾತ
ಸಾರುತಿರೆ ಶ್ರುತಿಗಳು ಸದ್ಗುರು
ಚಾರುತರ ಕೀರತಿಯ ಪೋಲ್ವಗೆ || ೧ ||
ಜ್ಯೋತಿತ್ರಯಕೆ ತಳಗಿ ಮೇಲಕೆ ಆತು
ಬತ್ತಿಗಳೈದು ಎಡಬಲ
ಆತುರಿವ ಸುಜ್ಞಾನ ತೈಲವ
ನೀಡಿ ನೀಲಾಂಜನವ ಜಾಚುತ || ೨ ||
ಗಂಧ ಚಂದನ ಧರಿಸಿ ಕರ್ಪುರ
ವಂದೆ ಮನದಲಿ ಸುಟ್ಟು ಶೀಘ್ರದಿ
ವಂದಿಸುತ ನಿಜಬೋಧ ನಿತ್ಯಾ-
ನಂದದೊಳು ನಿರ್ಬೈಲ ಮೂರ್ತಿಗೆ || ೩ ||
ಸಾಲು ದೀವಿಗೆ ಕುಡಿಯ ಮಧ್ಯದಿ
ಲೋಲ ನಡುವಿನ ಆರುಣಕಿರಣದ
ಆಲಯದ ಗದ್ದಿಗೆಯೊಳೊಪ್ಪುವ
ಕಾಲಹರನಿಗೆ ಕೈ ಮುಗಿಯುತ || ೪ ||
ಪಿಡಿದು ನೀಲಾಂಜನ ಪ್ರಕಾಶವ
ತಡೆದು ತವಕದಿ ಸೂರ್ಯಮಂತ್ರವ
ನುಡಿದು ಶಿಶುನಾಳೇಶನಡಿಯೊಳು
ಬಿಡದ ಮನ ಮುಡಪಿಟ್ಟು ಮೌನದಿ || ೫ ||
*****