ಕಲ್ಯಾಣನಗರದಲಿ ಎಲ್ಲಾ ಗಣಂಗಳು
ಅಲ್ಲಮ ಪ್ರಭುವಿನ ಕಾಣುತಲಿ
ಸೊಲ್ಲು ಸೊಲ್ಲಿಗೆ ಶಿವನ ಪ್ರಮಾಣದಲಿ
ಅಲ್ಲಿಗಲ್ಲಿಗೆ ನಿಲ್ಲುವಂಥ ತಾಣದಲಿ
ಕಲ್ಲಿನೊಳಗೆ ಕರುಣದಿ ಮೆರದೀತೋ
ಬಲ್ಲವರ‍್ಹೇಳರಿ ಸ್ಥಾನದಲಿ ಪ್ರಸ್ಥಾನದಲಿ ||ಪ||
ಬಲ್ಲಿದ ಬಸವನ ಮಹಿಮೆಯ ಹೇಳತೇನಿ
ಎಲ್ಲರು ಕೇಳಿರಿ ಸಭೆಯಲ್ಲೀ ಬಹು
ಬಲ್ಲಂಥವರೀ ವಿಭವದಲ್ಲಿ
ನಿಮ್ಮಲ್ಲಿ ಬಸವ ನಾಮದ ಲೀಲಿ
ಅಲ್ಲಿ ಇಲ್ಲಿ ಎಂದೆನಬ್ಯಾಡಿರಿ ಜನ ಜೀನಸು ಕೇಳಿರಿ
ನಮ್ಮಲ್ಲಿ ನಿಜಧ್ಯಾನದಲಿ
ಚಲ್ವಗಣ ದಾಸೋಹ ಮೆರಿದನು ಶೂನ್ಯಸಿಂಹಾಸನ ಪೀಠದಲಿ
ಬಹುಮನ್ನಿಸಿ ಪ್ರಭುವಿನ ಸ್ಥಾನದಲಿ
ಕೂಡಿಸಿದನು ತಾರಕ ಕೂಟದಲಿ
ಮೇಲ್ವರಿದುಕ್ಕುತ ಕಲ್ವಿಗದೊಳು ಬಹು
ಇಲ್ಲೆನಿಸಿತು ಈ ಲೋಕದಲೀ ಶಿವನಾಕದಲಿ
ತಲ್ಲಕ್ಷಣದಿಂದ ಸುವರ್ಣದಲಿ ಮಹಾ
ಬಲ್ಲಿದ ಶಾಸ್ತ್ರದ ಪಕ್ಷದಲಿ
ಎಲ್ಲರೊಳಗೆ ಅಧಿಕಾರ ಪ್ರಧಾನಿಗೆ
ಬಲ್ಲವಿಸಿದ ಮಹಾಗರ್ವಿನಲಿ ಆತೂರ್ವಿನಲಿ
||ಚಾಲ||
ಬಿಜ್ಜಳನು ಕರೆದು ಹೇಳಲಾಗಿ
ಸಜ್ಜನರಿಗೆ ಸರ್ವರು ಕೂಗಿ
ಪ್ರಜ್ವಲಿಸಿತು ಪಾಪದ ಭೋಗಿ
ಮಜ್ಜನಕೆ ಮಹಿಮರಿಲ್ಲದಾಗಿ
ಕಜ್ಜಲದಿ ಕರ್ಮಿಕರು ನೀಗಿ
ಜಜ್ಜೆನಿಸಿತು ಜರೆ ಮರಣಾಗಿ
||ಇಳವು||
ಈ ಪರಿಯೊಳು ಇರಲು ಇದು ಹೀಗೆ ಸ್ಥಾಪಿಸಿತು
ಶಿವನ ಮನಿಗಾಗೆ ಕೂಪದಲಿ ಜಲವು ಮೂಡಿದ್ಹಾಂಗ
ಲೋಕದೊಳಗೆ ಇದು ವಿಪರೀತವಾದೀತು
ಭೂಕಾಂತೆಯು ತಾ ತಲೆದೂಗಿ
ತನ್ನೊಳಗಿಳಿದು ಆತ್ಮದ ರಾಗ
ಚೆನ್ನಾಗಿ ಪೇಳುವೆ ಇದು ಕೇಳರಿ ಜನ
ಮನ್ನಿಸಿ ಹವಣದಲೀ ಮಹಾ ಪವಳದಲಿ ||೧||
ಎತ್ತ ನೋಡಿದರೆ ಹತ್ತು ರತ್ನ ಕಿಡಿ
ಜತ್ತಿನೊಲವು ಜಗದೊಳು ಮೇಲು ಅದ-
ರೊತ್ತಿನೊಳಗೆ ಪುಭುವಿನ ಕೀಲು ನದ-
ರಿತ್ತು ತ್ರಿಪುರಾಂತಕ ಸಾಲು
ಪೃಥ್ವಿಮಕಾರ ವಿಚಾರ ಕಳೆದು ಮಹಾ
ಕತ್ತಲೊಳಗೆ ರತ್ನದ ಮಾಲು ಪೃಥ್ವಿಗೆ ಓಲು
ಸುತ್ತ ಸಪ್ತ ಪಾತಾಳ ಗಗನದಲಿ
ಎತ್ತಿ ಮೆರಿದ ಚಿತ್ರದ ರೂಲು ತಾ
ಮುತ್ತಿಕೊಂಡ ನವರತ್ನದಲೂ ಕಿಡಿ
ಕಿತ್ತು ರಜದ ಶಿಶು ರವಿಗಿಕ್ಕಲು
ಕತ್ತಲಳಿದು ಸುರಲೋಕದಲ್ಲೇ
ಅತ್ತಿತ್ತ ಆದೀತು ಪೃಥ್ವಿಗೆ ನೆರಳು ಗೊತ್ತಿಲ್ಲಿರಲು
ಗೊತ್ತಿಲ್ಲದ ಭವಿಗಳಿಗೆ ಸಿಲ್ಕದು
ಸತ್ಯ ಶರಣರಾಳುವ ಕಪಲು ಮಹಿ-
ಮೋತ್ತಮವಾದ ದರ್ಪಣವೊಲು ನಿಜ
ನಿತ್ಯ ನಿಲವು ಬಸವನ ಶೀಲು
ತತ್ತರಿಸಿತು ಶಿವಭಕ್ತರೆಲ್ಲರಿಗೆ
ಕತ್ತರಿಯೊಳು ಕಮಲದ ಕಾಲು ಅದು
ಸತ್ಯದಲೂ ತಾಪತ್ರಯ ಅಲ್ಲಿ ಬೆಂದಿರಲೂ
ಸುಷುಪ್ತಿ ನಾಡಿಕೂಡಿರಲೂ ಆಪತ್ತಿನೊಳಗೆ ಪರಮಿರಲು
||ಏರು||
ಮತ್ತೂ ಹೇಳುವೆ ಕೇಳಿ ಬಸವನ ಮಹಿಮೆಯೊಳು
ಸುತ್ತೇಳು ಜನ್ಮದಲಿ ಹೊತ್ತಿತು ಅದು ತಾಳು
ಗತ್ತಿನೊಳು ಗಮಕಾಗಿ ಗರ್ವ ಮನಸನು ಕೀಳು
ಅತ್ತ ಆ ಕಲ್ಯಾಣದ ಮಹತ್ವದರಾಳು
ಜಗಜ್ಯೋತಿಯೆನಿಸಿ ಈ ಜಗತ್ತಿನೊಳು
ಖಗವಾಹನ ಬಂದಲ್ಲಿ ಕುಳಿತಿರಲು
ಆಗ ರಂಜಿಸುತಿಹ ಗಾನದ ಮ್ಯಾಳು
ಭೋಗವಂತರಾಲಿಪುದು ಪರಿಣತರು
ಈಗ ಇದು ಮುಕ್ತಿಯ ಸೋಗ ಭವ-
ರೋಗ ಅಳಿದು ಹೋಗುವದ್ಹೀಂಗ
ಕೂಗಿ ಸಾರತೇನಿ ಸಭೆಯೊಳು ಜನಸುಖ
ಸಾಗರದೊಳು ಜಪ ಮುಳುಗೆ ಜಂಜಲನೀಗ ||೨||
ಈ ಕ್ಷಿತಿಯೊಳು ಆತಿ ಚೋದ್ಯವಾದಿತು
ಸಾಕ್ಷಾತ್ ಬಸವನ ಪಕ್ಷದೊಳು
ಲಕ್ಷದ ಮೇಲೆ ತೊಂಭತ್ತಿರಲು
ಅಪೇಕ್ಷಿಸಿ ಅದರೊಳು ಕಡಿಮಿರಲು
ಸೂಕ್ಷ್ಮದಿಂದಲಿ ಆರು ಸಾವಿರದ
ಮೋಕ್ಷದ ಗಣರಿದು ತಂದಿರಲೂ ಆ ಮಂದಿರದಲು
ರಕ್ಷಿತ ಲೋಕ ಜಗತ್ಕರ್ತ
ತನ್ನಕ್ಷಿಯಿಂದ ನಜರಿಟ್ಟಿರಲು
ಭವಕುಕ್ಷಿ ಪ್ರಮಥರಿಗೆ ನಟ್ಟಿರಲು
ಭಿಕ್ಷುಕರ ಪ್ರಭುವಿಗ ತಟ್ಟಿರಲು
ತತ್‍ಕ್ಷಣದಲಿ ಅನ್ನ ಪ್ರಯೋಜನ ಭಕ್ಷಿಸಬೇಕೆಂದಿರಲು
ಅಪೇಕ್ಷದಲೂ ಪಕ್ಷಿವಾಹನನ ಸುದ್ದಿ ಹತ್ತಿತೋ
ದಕ್ಷನ್ಹೋಗಿ ಎಚ್ಚರಿಸಿರಲೂ ಬಹು-
ರೀಕ್ಷಿತ ದೀಕ್ಷಿತ ಮುನ್ನಿರಲು
ತಲ್ಲಿಕ್ಷಣ ಕಾರಣ ಸಲ್ಲಿರಲು
ಕುಕ್ಷಿವಳಗ ಹದಿನಾಲ್ಕು ಲೋಕಕ
ಶಿಕ್ಷಿತ ಶರಣರ ತಕ್ಷಣದೊಳು ಆ ಲಕ್ಷದೊಳು
||ಚಾಲ|
ಮೋಕ್ಷವನು ಕಾಣಬೇಕೆನುತಾ ಪ್ರಭು
ಭಿಕ್ಷಿಸಿ ಬಿಟ್ಟದುಣುತಾ
ನಿಕ್ಷೇಪ ಎಡಿಗೆ ಸಮನಿಸುತಾ
ತಿಕ್ಷದ ಪ್ರಸಾದ ಕಮನಿತಾ
ಆ ಕ್ಷಣದಿ ಶಿವಗ ಶಿವ ಪ್ರಣೀತಾ
ಮೋಕ್ಷೆನ್ನ ಮೋಹನದ ಗಣೀತಾ
|| ಏರು||
ಭಕ್ತವತ್ಸಲನೆಂಬೋ ಬಿರುದು ಸಾರುತ್ತಿರಲು
ಪ್ಪಥ್ವಿಯೊಳು ಅಧಿಕಾಗಿ ದಾಸೋಹಾ ಸಮವಿರಲು
ಅತ್ಯಂತ ಹರುಷದಿ ಆತ್ಮದೊಳಿರಲೂ
ಇದು ಕಲ್ಯಾಣನಗರದ ವಿಸ್ತರವು
ಮಹಾಬಲ್ಲಿದರೆಲ್ಲರೂ ಸೂಳ್ದೆರವೂ
ಆಲ್ಲಿಗಲ್ಲಿಗೆ ತೋರ್ಪ ಲಿಂಗದ ಕುರುಹು
ಚಿತ್ರಪಾಯ ವಿಲಕ್ಷಣ ಭೂಮಿಗೆ
ಹೆಪ್ಪುಗಟ್ಟೆನೆಂದೆನುತಿರಲು
ಸಾಲೋಕ್ಯ ಪದವು ಅಲ್ಲಿ ದೊರಕಿರಲು
ಕಾಲ ಕರ್ಮ ಸಂಹಾರ ದಯಾನಿಧಿ
ಆಲೋಪ್ಯದಿ ಸಾಯುಜ್ಜಿರಲೂ ಶಿವಸಾಂಬನೊಲು ||೩||
ಒಪ್ಪುತಿಹುದು ಒಳಹೊರಗೆ ಕಲ್ಯಾಣದ
ತಪ್ಪರೊಳಗ ಬಿಜ್ಜಳ ರಾಜ್ಯ ಅವ-
ನೊಪ್ಪುತಿಹನೋ ಲೋಕ ಸಾಜಾ
ಆರೋಪ್ಯದೊಳಗ ಕೊಂಡಿಹ ರೋಜಾ
ನಪ್ಪ ಹಿಡಿದು ಒಂದು ಕಟಗಿವಳಗ ಗೊಂದಿ
ಇಬ್ಬಿರಿಸಿತು ಕಪಟದ ಕಾಜಾ
ಮುಪ್ಪರಕ ಮೋಹನಾದನೋ ರಾಜಾ
ಸಪ್ತೇಳು ಶರಧಿ ತೈವದ ಬೀಜಾ
ಗುಪ್ತದಿಂದ ನಿಜಭಕ್ತಿಯ ಮಾಡಲು
ಸತ್ಯಶರಣ ಸರ್ವರ ಭೋಜಾ
ಮಹಾ ಮಹಾ ತೇಜಾ ಆಪ್ತವಿಷಯ
ಆ ಮರುಳ ಶಂಕರ ತೃಪ್ತ ಪ್ರಸಾದ ಪರಮಾತ್ಮ ವೃಜಾ
ತತ್ಪರದಿ ಪ್ರಣಮದೊಳು ಸತ್ಯ ನಿಜಾ
ಬಹು ತೃಪ್ತಿ ಪಡಿಸುತಿಹಾ ಭಕ್ತಿ ಕುಜಾ
ಎಪ್ಪತ್ತೈದರ ಮೇಲೆ ಅಮರ ಗಣದೆ
ಆಪತ್ತಿನ ಅರುಣದ ಪ್ರಜಾ ಪರಮಾತ್ಮ ನಿಜಾ
||ಚಾಲ||
ಸಜ್ಜನರಿಗೆ ಶುಭದೋರಿತ್ತು
ಬಿಜ್ಜಳಗುರಿಯ ಕಾರಿತ್ತು
ತಜ್ಜ್ಯಲದೊಳು ಮಹಿದೋರಿತ್ತು
ಪ್ರಜ್ಜ್ವಲಿಸಿದ ಪ್ರಣಮದ ಗೊತ್ತು
ಜಜ್ಜ್ಯನಿಸಿದ ಜನ ಹೀಂಗಿತ್ತು ಕಲ್ಯಾಣಕ ಪ್ರಭು ಸಂಗಾತು
||ಏರು||
ಸಲ್ಲಲಿತ ಗೊಲ್ಲ ವನಿತೆಯರೆಲ್ಲರೂ ಹೊರಬಿದ್ದು
ಚಲ್ವ ಹಾಲ್ಮೊಸರೂ ಮಜ್ಜಿಗಿಯ ಮಾರುತಿರೆ
ಕಾಲ್ಕೆಸರೊಳು ಕಾಲ್‍ಜಾರಿ ಬೀಳಲೈತಂದು
ಬಲ್ಲಿದ ಬಸವನೇ ಸಲಹು ಇಂತೆಂದು
ಕೈವಿಡಿದು ಮೇಲಕೆತ್ತಿ ನಿಲ್ಲಿಸಿದಾಗ
ಮೈತುಂಬಾ ರೋಮಗಳುಕ್ಕಿ ಹರುಷವಾಗ
ಸೈ ಸೈ ಯೆನುತಾ ಶಿವಸಾಂಬ ಕ್ಯೂಗಾರು
ಇಳೆಯೊಳು ಎಳಹೂಟಿ ಕಟ್ಟಿಯೆಳಸಿದ ತೇರು
ಬಳಿರೆ ಶಿಶುನಾಳೇಶನಿಗೆ ಮಹಾಮತ
ಹೀಂಗಿರುತ ಕಪ್ಪಡಿಸಂಗನೊಳಗೆ ಬೆರೆತನೋ
ಬ್ಯಾಗ ಮಹಿಮವು ಹೀಂಗ ||೪||
*****