ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ
ಪಾರಗಾಣಲಿಲ್ಲ ಪಾಪದ ಕುಂಡಾ
ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ
ಸೇರದಾಯಿತು ಈ ಬ್ರಹ್ಮಾಂಡ
ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ
ಅದಕಂತೀರಿ ಬಾಳಿಯ ದಿಂಡಾ
ತೋಳ ತೋಡಿ ನಾಭಿ ಸುಳಿ ಹಾಳುಗುಂಡಿ
ಮೇಲು ಕುಚದುಂಡ ಹೆಂಡಿ ಹೊಲಸಿನ ಕೈಚಂಡಾ
ದೂರದಿಂದ ನೋಡಿದರೆ ವಾರಿಜಾಕ್ಷಿ ಅನ್ನುವದೆಲ್ಲ
ನೀರಗಣ್ಣು ಪಿಚ್ಚ ಹೊಲಸಿನ ರುಂಡಾ
ಧಾರುಣಿಯ ಕವಿಗಳೆಲ್ಲ ಗಾರುಗೊಂಡು
ಹೀರಿಕೊಂಡು ಚಲ್ಲುತದೆ ಬಹುದೂರ ಚಂಡ ಮುಂಡಾ
||ಇಳವು||
ಪರಿಗೂಳಿಸಿ ಪೃಥ್ವಿ ನವಖಂಡಾ
ಅರಿಯದಲೆ ಉಸುರಿದವ ಬಂಡಾ
ಸರಿಯಹುದೆ ಸಮಾಸದಿ ತಂಡಾ
ಅರಿಕಿಲ್ಲದಾಯಿತೆ ಉದ್ಧಂಡಾ
||ಏರು||
ಆರಿಗ್ಹೇಳಿದರೂ ಇದು ತೀರಲಿಲ್ಲ ತಿಳಿಬುದ್ಧಿ
ತೋರಿಕೊಡುವೆನು ವೇದದಿ ಪುಂಡಾ
ದಾರಿಕಾರರ ಮಾತಲ್ಲಾ ದೂರ ತಿಳಿ ಮನದೊಳು
ಮಾರಿರೂಪ ನಾರಿ ನರಕದ ತಂಡಾ || ೧ ||
ನಾಡಿಗಲ್ಲ ಅಧಿಕಾದ ರೂಢಿಯೊಳು ಮಲಹಣ
ನೋಡಿ ನೋಡಿ ಸ್ತ್ರೀಯೊಳು ಮೋಹವಿಟ್ಟು
ಬ್ಯಾಡರಾಕಿ ಸಿಂಗರಿಸಿ ಹಾಡಿಕೊಂಡು ಹಲಬುತ
ಪಾಡಗಾಣಲಿಲ್ಲ ಇದಕವಬ್ರಷ್ಟಾ
ನೋಡಿ ಪರಶಿವ ಅವನ
ಕೇಡು ನುಡಿ ಕೇಳಲಾಗಿ
ರೂಢಿ ತಳಕ್ಕೆ ದೂಡಿ ನೂಕಿಸಿ ಬಿಟ್ಟ
ಆಡಲೇನು ಇಂಥ ಕವಿತ
ಬೇಡವಾಯ್ತಣ್ಣ ಹರಗೆ
ಕಾಡ ಕುಲದೊಳುಹೋಗಿ ಕುಲಗೆಟ್ಟ
||ಇಳವು||
ಹಂಗಸರ ವರ್ಣಿಸುವ ಮೂರ್ಖಾ
ವರ್ಣಶಾಸ್ತ್ರದ ಸಿಂಗರದ ತರ್ಕಾ
ಪದದಲ್ಲಿ ಇವನಿಗೇನರ್ಕಾ
ಯಮರಾಜನ ಕೈಯೊಳಗಿರ್ಕಾ
||ಏರು||
ಹೆಣ್ಣು ಜಾತಿಯ ವಿಸ್ತರಿಸಿ
ಕಣ್ಣು ಕಾಣಲಿಲ್ಲ ಕವಿ
ಬಣ್ಣಗೆಟ್ಟು ಬೊಗಳುವ ಬಲುಭಂಡಾ
ಸಣ್ಣಸಿತು ವೇದಶಾಸ್ತ್ರ ಬಣ್ಣಿಸಲು ಸವನಲ್ಲಾ
ಪುಣ್ಯಗೊಡಲಿಲ್ಲ ಪೂರ್ವದ ಭಂಡಾ ||೨||
ಒಲ್ಲೆನೆಂದ್ರೆ ಮ್ಯಾಲೆಬಿದ್ದು
ಜುಲುಮೆಯಿಂದ ಜೋಲಿಹೊಡೆದು
ಕೆಡವಿಬಿಟ್ಟಳು ಕಟ್ಟಿಚಲ್ಲಿದ್ಹಾಂಗೆ
ಸೋಲದವರ‍್ಯಾರು ಹೆಣ್ಣ
ಜಾಲತನಕಣಿಯುಂಟೆ
ಹೇಳತಾರ ಕಂಡ ಹಿರಿಯರು ನಮಗೆ
ಕೇಳಿಕೊಂಡು ನಿನ್ನ ನಂಬಿ
ಬಾಳಮಂದಿ ಕೆಟ್ಟರ‍್ಹಿಂಗ
ತೋಳತಿರುವುತ ಎದ್ದು ಬರುವಾಗ್ಗೆ
ತಾಳಲಾರದೆ ಯತಿಗಳು ತಪಗೆಟ್ಟು ವೃತಗೆಟ್ಟು
ಆಲ್ಪರಿಯುತ ಬಳಲುವರ‍್ಹಿಂಗ
ಹಲವು ಶಾಸ್ತ್ರ ವೇದ ಮಂತ್ರ ಕಲಿತಂಥ ಕವಿಗಳ
ಜಾಳಮಾಡಿಬಿಟ್ಟಿತು ಜಗದಾಗ
ಜಲಜಾಕ್ಷಿ ಜಪಿಸುತ ಗಾಳದಾಗ ಕಲಹದೊಳು
ಚಾಳದಪ್ಪಿ ಬಿದ್ದ ಮೀನದ ಹಾಂಗೆ
||ಇಳವು||
ಮೂರುಲೋಕ ಕೆಟ್ಟವು ನಿನಗಾಗಿ
ಬೆನ್ನುಹತ್ತಿ ಬರುತಾವೇ ಭವರೋಗಿ
ಮ್ಯಾಳಗೊಂಡು ಮೆರಿತಿ ಮನಸಾಗಿ
ಸೋಲದಾಯ್ತು ವಿಷಯ ಸುಖಭೋಗಿ
||ಏರು||
ಕಾಳಕೂಟಕತ್ತಲೊಳು ಗೋಳಿಟ್ಟು ಕೂಗುತದೆ
ಹೇಳಲಾರೆ ನಾನು ಗಾಣದೆತ್ತಿನ ಹಾಗೆ
ಮೇಲುಗ್ರಾಮ ಶಿಶುನಾಳಧೀಶನನೊಲುಮೆ ಇರಲಿಕ್ಕೆ
ಬೀಳಬಾರದು ಹೆಂಗಸರ ಬಲಿಯೊಳಗೆ || ೩ ||
*****