ನಾವು ಬಡಜೀವಿಗಳು ನೀವು ಮಾತಪಸ್ವಿಗಳು
ದೃಷ್ಟವನ್ನು ತೋರಿರಯ್ಯ ;
ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ
ಒಂದನ್ನು ತೋರಿರಯ್ಯ.
ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು
ಡಂಬದಲಿ ಮೆರೆವರುಂಟು;
ಉಪವಾಸ ನಿಯಮದಲಿ ಜಗವ ಜಯಿಸುವರುಂಟು
ಒಳಬೆಳಗ ಕಾಣ್ಬರುಂಟು.
ಗುಹೆಯಲ್ಲಿ ಅಡಗಿರ್ದು ವರ್ಷಗಳ ಕಳೆದಾಯ್ತು
ಹಿರಿಯ ರಿಸಿ ಎಂಬುದಾಯ್ತು;
ದಿಕ್ಕು ದಿಕ್ಕುಗಳಿಂದ ನೋಡಹೋಗುವರಾಯ್ತು
ಜಗವೆಲ್ಲ ಕೀರ್ತಿಯಾಯ್ತು.
ಏನು ಫಲವಾಯ್ತೆಂದು ಪಾಮರರು ಕೇಳುವೆವು
ತಿಳಿವನ್ನು ನೀಡಿರಯ್ಯ;
ಜ್ಞಾನ ಭಕ್ತಿಯುಮಿಲ್ಲ, ಮೂಢ ಭಕ್ತಿಯುಮಿಲ್ಲ
ಕಳವಳಕೆ ಸಿಕ್ಕೆವಯ್ಯ,
ಕವಿಯ ಸೋಲು ಭಕ್ತಿಯಿಂ ಸಾಧಿಸಿದ ಪೊಸ ಬಗೆಯ ಶಕ್ತಿಯಿಂ
ನಂಬುಗೆಯ ನೀಡಿರಯ್ಯ;
ಯೋಗದಿಂ ಗಳಿಸಿರುವ ದಿವ್ಯತರ ಶಕ್ತಿಯಂ
ಮೆರೆದೆಮ್ಮ ಸಲಹಿರಯ್ಯ.
ಕೌಶಿಕನ ಶಸ್ತ್ರಾಸ್ತ್ರಜಾಲಮಂ ವಾಸಿಷ್ಠ
ದಂಡವದು ನುಂಗಿತೆಂದು
ಹಿಂದಾದ ದೃಷ್ಟಗಳ ನಾವೆಲ್ಲ ಕೇಳಿಹೆವು
ಇಂದೇನು ಕಾಣೆನಯ್ಯ,
ಆಕಾಶಯಾನವಂ ಸುಟ್ಟು ಬಟ್ಟಿಡಬಹುದು
ಜಹಜುಗಳನದ್ದಬಹುದು
ಘೀಳಿಡುವ ಅಶನಿಗಳ ಬಾಯಿಮುಚ್ಚಿಸಬಹುದು
ಕತ್ತಿಗಳ ಮುರಿಸಬಹುದು.
ಕಲ್ಲನ್ನು ಜನರಾಗಿ ಜನರನ್ನು ಕಲ್ಲಾಗಿ
ಮಾರ್ಪಡಿಸಿ ತೋರಬಹುದು
ಏಕ ಕಾಲದಿ ನೀವು ಹಲವು ಕಡೆ ಕಾಣುತ್ತ
ಭೀತಿಯಂ ಬೀರಬಹುದು.
ಸತ್ತವರನೆಬ್ಬಿಸಲು ಬದುಕುವರ ಸಾಯಿಸಲು
ನೋಡಿ ನಂಬುವೆವಯ್ಯ,
ಮೂಢ ಮತಿಗಳು ನಾವು,
ಬಡ ಜೀವಿಗಳು ನಾವು
ನಂಬುಗೆಯು ಸಾಲದಯ್ಯ,
ನಮ್ಮಂತೆ ನೀವಿರಲು ನಿಸ್ಸತ್ವರಾಗಿರಲು
ಸೆರೆಯಲ್ಲಿ ಕೊಳೆಯುತಿರಲು
ನ್ಯಾಯದಲಿ ಧರ್ಮದಲಿ ದೈವದಲಿ ಯೋಗದಲಿ
ನಂಬುಗೆಯು ಬಾರದಯ್ಯ.
ಶುಷ್ಕ ವೇದಾಂತಕ್ಕೆ ಮಾತಿನಾ ಜಗಳಕ್ಕೆ
ಜೀವಗಳ ತೆತ್ತರೇಕೊ ?
ಯುಗಪುರುಷರವತಾರ ಬರಿಹೊಟ್ಟೆ ನಾಡಿನಲಿ
ಅಡಿಗಡಿಗೆ ಮಾಡಲೇಕೊ?
ರಾಮಕೃಷ್ಣರು ಬೇಡ ಘೋಷ ಗೀಷರು ಬೇಡ
ಬಂದ ಫಲ ಕಂಡೆವಯ್ಯ
ಇಂದ್ರಜಾಲಿಗನೊಬ್ಬ ನಮಗಿಂದು ಬೇಕಯ್ಯ
ಅವನೆನಗೆ ದೇವರಯ್ಯ
*****