ಕುಟುಂಬದ ಯಜಮಾನನೊಬ್ಬ ಹರಕೆಯೊಂದನ್ನು ಹೊತ್ತಿದ್ದ. ಬಹಳ ದಿನದ ಹರಕೆಯದು. ಮೆನಯ ಕುಲದೇವರಿಗೆ ಕುರಿಯೊಂದನ್ನು ಅವನು ಬಲಿಕೊಡಬೇಕಾಗಿತ್ತು. ಅದಕ್ಕಾಗಿ ಅವನು ಕುರಿಮರಿಯೊಂದನ್ನು ಸಾಕುತ್ತ ಬಂದಿದ್ದ. ಕುರಿ ಸೊಪ್ಪು ಮೇಯ್ದು ದಷ್ಟಪುಷ್ಟವಾಗಿತ್ತು.
ಕುಲದೇವರು ನೆಲೆಸಿರುವ ಊರಿಗೆ ಹೊರಡುವ ಸಿದ್ಧತೆಯಾಯಿತು. ಮಿನಿ ಟ್ರಕ್ಕು ಬಂದು ಮನೆಯ ಮುಂದೆ ನಿಂತಿತು. ಯಜಮಾನನ ಮನೆಯ ಜನ, ಬಂಧು, ಬಳಗ, ಆಪ್ತವಲಯದವರು ಟ್ರಕ್ಕು ಏರಿದರು. ಅವರ ನಡುವೆ ಹರಕೆಯ ಕುರಿ, ಕುಳಿತವರು ಅದನ್ನು ಭಕ್ತಿಯಿಂದ ಗಮನಿಸುತ್ತಿದ್ದರು.
ಸಂಭ್ರಮದಿಂದ ಚಲಿಸುತ್ತಿತ್ತು ಗಾಡಿ. ಕೆಲವರು ಮಾತಿನ ಲಹರಿಯಲ್ಲಿ ಕಳೆದು ಹೋಗಿದ್ದರು. ಪ್ರಾಯದ ಹುಡುಗ-ಹುಡುಗಿಯರು, ಹಾಡು, ಹಾಸ್ಯ, ಕೇಕೆಯಲ್ಲಿ ತನ್ಮಯರಾಗಿದ್ದರು. ಆಗಾಗ ದೇವರ ಉಘೇ ಉಘೇ ಉದ್ಘೋಷವೂ ಮೊಳಗುತ್ತಿತ್ತು.
ತವಕ ತಲ್ಲಣದಲ್ಲಿ ಹರಕೆಯ ಕುರಿ ದಟ್ಟ ಮೌನ ಧರಿಸಿ ನಿಂತಿತ್ತು. ಜನರ ಉತ್ಸಾಹ ನನ್ನ ಬಲಿಯ ದ್ಯೋತಕವೆಂದು ಕುರಿಗೆ ಮನದಟ್ಟಾಗಿತ್ತು. ಆಗಾಗ ಅದು ಅಸಹಾಯಕವಾಗಿ ನಿಟ್ಟುಸಿರು ಚೆಲ್ಲುತ್ತಿತ್ತು. ತಮ್ಮ ಹಿತಕ್ಕಾಗಿ ದುರ್ಬಲ ಪ್ರಾಣಿಗಳನ್ನು ಬಲಿಕೊಟ್ಟು ದೇವರು, ಧರ್ಮಗಳನ್ನು ದುರುಪಯೋಗ ಪಡಿಸಿಕೊಳ್ಳುವ ಜನರ ಹುನ್ನಾರಗಳಿಗೆ ಕುರಿ ಮೂಕವಾಗಿ ರೋಧಿಸುತೊಡಗಿತ್ತು.
ಗಾಡಿ ರಸ್ತೆಯುದ್ದಕ್ಕೂ ವೇಗವಾಗಿ ಓಡತೊಡಗಿತ್ತು. ಅದರೊಂದಿಗೆ ಸ್ಪರ್ಧೆಗಿಳಿದಂತೆ ಜನರ ಹರ್ಷೋದ್ಗಾರ.
ಒಮ್ಮೆಲೆ ಧಡಲ್ ಎಂಬ ಸದ್ದು!
ಎದುರಿಗೆ ಬಂದ ಭೂತಾಕಾರದ ಟ್ರಕ್ಕೊಂದು ಮಿನಿಲಾರಿಗೆ ಭಯಂಕರವಾಗಿ ಡಿಕ್ಕಿ ಹೊಡೆದು ಪಕ್ಕದ ಕಮರಿಗೆ ನೂಕಿತ್ತು.
ಹಾಹಾಕಾರ, ಚೀತ್ಕಾರ, ನರಳಾಟ, ರಕ್ತದ ಕೋಡಿ.
ಲಾರಿ ಪುಡಿಪುಡಿಯಾಯಿತು, ಅದರೊಳಗಿದ್ದವರು ಒಬ್ಬರೂ ಉಳಿಯಲಿಲ್ಲ.
ದಿಬ್ಬದ ಮೇಲೆ ನಿಂತ ಹರಕೆಯ ಕುರಿ ಮಾತ್ರ ಬ್ಯಾ…. ಬ್ಯಾ…. ಎನ್ನತೊಡಗಿತ್ತು.