ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ
ಬೀಸೋಣ ಬರ್ರೆವ್ವ ಹಾಡ್ಯಾಡಿ ||ಪ||
ಹಸ್ತಿನಿ ಚತ್ತಿನಿ ಶಂಖಿನಿ ಪದ್ಮಿನಿ
ಕರಿತಾರೆ ಬರ್ರೆವ್ವ ಕೂಡಿ ||ಅ.ಪ.||
ದೇಹವೆಂಬುವ ಬೀಸುಕಲ್ಲು ಶಿವಪುರದಾಗ
ಉಪ್ಪಾರನ ಕೈಲೆ ಹೊಡಿಸಿ
ಮೇಲೆ ಗಂಟಲು ಮ್ಯಾಗಿನ ಪಾಳಿಗೆ
ನಡುಮಧ್ಯದಿ ಬಾಯಿ ತೆಗಸಿ
ಕೆಳಗಿನ ಪಾಳಿಗೆ ಮಲಮೂತ್ರ ಬಿಡುತಿಹ
ಅಸವಲ್ಲದೊಂದ ತೂತ ತಗಸಿ
ತಕ್ಕಂಥ ಗೂಟವು ಕಾಯ ಮರದ ಮ್ಯಾಗ
ಸಾಗವಾನಿಯ ಕಟಗಿಯ ತರಿಸಿ
ಸವ್ವಾನೂರು ವರ್ಷ ಬಾಳುವ ಗೂಟಕ್ಕೆ
ಮೇಲೊಂದ ಅಣಸನು ಜಡಿಸಿ
ನಾನು ಬೇಕಾಗಿ ಬೀಸೇನೇ ಕಲ್ಲು ತರಿಸಿದ್ದೆನೇ
ಸೂತ್ರ ಎಂಬುವ ಚಿತ್ರ ತೆಗಸಿದ್ದೇನೇ
ವಾಯು ದೇಹವೆಂಬುವ ಪಿರಿಕಿ ಹಾಕಿದ್ದೇನೇ
ಇಂಥಾ ಕಲ್ಲು ಸಮತೋಲು ನಿಜಮನವೆಂಬ ಜಾಗದಾಗ ನಡಸಿದ್ದೆನೇ
ನಾರಿ ಕರಿಯುವನೇ ನಾರೇರು ಎಲ್ಲಾರು ಬರ್ರೆವ್ವ ಭದ್ರ್ಯಾರು ಕೂಡಿ ||೧||
ಅಬ್ಬರೆಂಬುವ ಗೋದಿ ಕಡಲಿಯ ತಂದು
ತನುವೆಂಬಂತಸ್ತದಿ ತೋಯಿಸಿ
ಮನದ ಮೈಲಿಗೆಯೆಂಬ ಮ್ಯಾಗಿನ ತೌಡು
ಅನುವಿಂದ ಒಳ್ಳಾಗ ಕುಟ್ಟಿಸಿ ತೆಗದು
ಸುಜ್ಞಾನವೆಂಬುವ ಧೂಳವ ಕೇರಿಸಿ
ಬುದ್ಧಿಯೆಂಬುವ ಬುಟ್ಟಿಯನು ತುಂಬಿಸಿ
ಧರ್ಮಯೆಂಬುವಂಥಾ ಬಲಗೈಲೆ
ಒಂದೊಂದು ಹಿಡಿ ಹಿಡಿ ಮುಕ್ಕನೆ ನಾ ಹಾಕಿಸಿ
ಕರ್ಮವೆಂಬುವಂಥಾ ಎಡಗೈಲೆ
ತಿರುತಿರುವಿ ಸಣ್ಣಾಗಿ ಮುಕ್ಕನುರಿಸಿ
ತ್ರಿಗುಣೆಂಬ ಹಿಟ್ಟನು ಗೂಡಿಸಿದ್ದೆನೇ
ಒಂಬತ್ತು ತೂತಿನ ಸಾಣಿಗೀಲೆ ಸಾಣಿಸಿದ್ದೆನೇ
ಇಂಥಾ ಹಿಟ್ಟು ಬಚ್ಚಿಟ್ಟು
ಆತ್ಮವೆಂಬುವ ಅಮೃತದ ಗಡಿಗಿ ತುಂಬಿಸಿದ್ದೆನೇ
ತಾಯಿ ಮಾಯಿ ತಾಯವ್ವನ ಕರಕೊಂಡು ನಡಿರೆವ್ವ ಅಡಗೀಯ ಮಾಡೀ ||೨||
ಅನುಭವ ತನುಭವ ಚಿನುಮಯವೆಂಬುವ ಮೂರು ಒಲಿಯ ಗುಂಡು ಹೂಡಿ
ಕಾಮಕ್ರೋಧವೆಂಬ ಕಾಡಕಟ್ಟಿಗಿ ಸುಟ್ಟು ಬೇಗ ಒಲಿಯ ಪುಟಮಾಡಿ
ಪಂಚತತ್ವದಿಂದ ಪಕ್ವಾನ್ನ ಮಾಡಿ
ಗಡಿಗೆ ಇಳುವಿದ್ದೇನ್ರೇ ಪಟ್ಟಿ ತೀಡೀದ್ದೇನ್ರೇ
ಸಪ್ತಭೂತಂಗಳಿಗೆ ಗುಪ್ತ ಅಡಗಿಯ ಮಾಡಿ
ಹೊತ್ತಿದ್ದನ್ನವನು ನೀಡಿ
ಅನ್ನವು ತೀರಿತು ಗಡಿಗೆಯು ಒಡದೀತು
ಒಲಿಗುಂಡು ಬಿತ್ತ್ರೆವ್ವ ಒಂದು ಕಡಿ
ಕಾಳು ಕಡಿಗಾಯಿತು ಕಲ್ಲು ಇಲ್ಲುಳದಿತು
ಇನ್ನೆಲ್ಲಿ ಬಂದೀತು ಭೂಮಿ ಮೂಡಿ ನಾನು
ಕಾಳು ಹೋದಿಂದೆ ಮ್ಯಾಳ ಮುರಿದು ಗೀಳಾದೆ
ಸಾಧು ಸಾಧಕರೊಳು ವ್ಯಾಳಗಳದೆ
ಸುಳ್ಳೇ ಸಂಸಾರದೊಳು ಬಿದ್ದೆ ಪಾಪ ಹೊದ್ದೆ
ಪೊಡವಿಪ ಶಿಶುನಾಳಧೀಶನ ದಯದಿಂದ
ಕಡೆಗೆ ನಾ ಮುಕ್ತಿಯ ಕಂಡೇ ||೩||
*****