ಮೌನದಲಿ ಮರ ಕಂಪಿಸಿ
ಒಡಲೊಳು ಜೀವಿಗಳು ಝಲ್ಲನೆ
ಮುಲುಕಾಡಿ ಮರು ಮುಂಜಾನೆ
ಯಾವ ಹಂಗಿಲ್ಲದೇ ಚಿಗಿರಿದ ಹಸಿರು
ಮೌನದಲಿ ಮಾತುಗಳು ಸುಮ್ಮನೆ
ಒಂದಕ್ಕೊಂದು ಡಿಕ್ಕೀ ಹೊಡೆದುಕೊಂಡು
ಮೆಲ್ಲನೆ ಚಲಿಸಿದ ಭಾವ ಒಡಲು
ಗರ್ಭದ ಕತ್ತಲೆ ರಾತ್ರಿ ಕನಸುಗಳರಳಿದವು.
ಮೌನದಲಿ ಹಂಗಿಲ್ಲದೇ ಅಕ್ಷರಗಳು
ಒಂದು ಗೂಡಿದವು ತವಾಗಿ ಸುಮ್ಮನೆ
ಅಲಂಕಾರದ ಕಿಟಕಿಯಲಿ ಚಂದಿರ
ಹರಡಿದ ಬೆಳದಿಂಗಳು ಕವಿತೆಗಳಾದವು.
ಮೌನದಲಿ ಒಲವಿನ ಹಾಡು
ಸುಮ್ಮನೆ ಗುನುಗುಟ್ಟಿದವು.
ಸಂತರ ಪಾಡು ಬಯಲಲಿ ಹರಡಿ
ಗಾಳಿಗಂಧ ಸುಳಿದು ಭಜನೆಗಳಾದವು.
ಮೌನದಲಿ ಆಳ ನಾಭಿಯ
ಭಿತ್ತಿಯಲಿ ಹುಟ್ಟು ಪಟ್ಟು
ಪಾಡಾಗಿ ಒಮ್ಮೆಲೇ ಮುಳುಗಿದ ನಾವೆ
ದಟ್ಟವಾಯ್ತು ಪ್ರತಿಯೊಬ್ಬರ ಸಾವಿರ ವಾಸನೆ.
*****