ತ್ರಿಪುರ ದಹನವದಾಯ್ತು ಲಂಕೆಯನು ಸುಟ್ಟಾಯ್ತು
ಎನಿತೆನಿತೊ ರಾಜ್ಯಗಳು ಭಷ್ಮವಾದೊ!
ಚಾರಿತ್ರ್‍ಯ ಲೇಖಕನ ಅಂಕೆಸಂಕೆಗಳೆಲ್ಲ
ತೋರುವುವು ಭಸ್ಮಾಸುರ ಮಹತ್ವವ!!
ಯಾರ ಕಾಣಿಪುದೆಂತು, ಯಾರು ನೋಡುವರೆಂತು
ಬೆಂದ ಹೃದಯದ ತಾಪ-ಶೂಲಭೂತ!
ಜೀವಧಾರಣನಾತ ಭವ್ಯಜೀವಿಯು ನೋಡೆ
ಫಲಿತ ಫಲದೊಳಗಿರುವ ಹುಳದ ರೂಪ.
ಘೋರ ಕಾನನದಲ್ಲಿ ಪ್ರಕೃತಿ ದೇವಿಯ ವಾಸ,
ಸೊಗಸಿನಾಗರ, ಹಸುರು ಬೀಡು ಕಾಡು
ಕಾನನದ ನಡುದಾರಿ ಸರ್ಪಗಳ ಆವಾಸ
ಸೊಗಸು ಬನ ಹೃದಯದಾ ರೀತಿ ಎಂತೊ!
ರಾಜ ಬೀದಿಯು ನೋಡೆ, ಭವ್ಯ ಮಂದಿರ ಸಾಲು
ನಾಗರಿಕರಾಂತಂತ ದಳಿತ ಜನವೊ!
ಆದರೊಂದು ನಡುವಲ್ಲಿ ವಿಟಜನರ ವ್ಯವಹಾರ
ಕಟುಕರಲ್ಲಲ್ಲಿ ನೋಡೆ-ಸುಖವಿದೆಂತೊ!
ಮುಗುಳುನಗೆ ಮುಖದಲ್ಲಿ ಒಯ್ಯಾರ ತನುವಿನಲಿ
ಅಟ್ಟಹಾಸದ ನಡೆಯು, ತೇಜ ಪೂಜ್ಯ-
ತನ್ನೊಂದು ಭಗ್ನತೆಯ ಆತನಲ್ಲದೆ ಯಾರು
ಅಳೆದು ನೋಡಲು ಸಾಧ್ಯ-ತಿಳಿಯೆ ನಿಜವ!
ಎಲ್ಲೆರೆಲ್ಲರ ನೆಚ್ಚಿ ತನ್ನ ತನ್ನವರೆಂದು
ನಿರಾಶೆ ಜಾಲದ ಜಾಡ್ಯದೊಳ ನುಗ್ಗಿ ಬಗ್ಗಿ;
ಭಗ್ನ ಹೃದಯದ ತಾಪ ಬೆಂದ ದೇಹದ ರೂಪ
ಯಾರೊಡನೆ ಪೇಳಲದೊ, ಕೇಳ್ವರಾರೊ?
*****