ಕೈಲಾಸ ಮರ್ತ್ಯಲೋಕವೆಂಬರು.
ಕೈಲಾಸವೆಂದರೇನೋ? ಮರ್ತ್ಯವೆಂದರೇನೋ?
ಅಲ್ಲಿಯು ನಡೆಯು ಒಂದೆ, ಇಲ್ಲಿಯು ನಡೆಯು ಒಂದೆ.
ಅಲ್ಲಿಯ ನುಡಿಯು ಒಂದೆ, ಇಲ್ಲಿಯ ನುಡಿಯು ಒಂದೆ
ಕಾಣಿರಯ್ಯ ಎಂಬರು.
ಕೈಲಾಸದವರೆ ದೇವರ್ಕಳೆಂಬರು.
ಮರ್ತ್ಯಲೋಕದವರೆ ಮಹಾಗಣಂಗಳೆಂಬರು.
ಸುರಲೋಕದೊಳಗೆ ಸಾಸಿರ ಕಾಲಕ್ಕಲ್ಲದೆ, ಅಳಿವಿಲ್ಲವೆಂಬರು.
ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು.
ಇದಕಂಡು ನಮ್ಮ ಶಿವಶರಣರು ಸುರಲೋಕವನು
ತೃಣವೆಂದು ಭಾವಿಸಿ, ಭವವ ದಾಂಟಿ,
ತಮ್ಮ ಹುಟ್ಟನರಿದು, ಮಹಾ ಬೆಳಗನೆ ಕೂಡಿ,
ಬೆಳಗಿನಲ್ಲಿ ಬಯಲಾದರಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ