ಶಿವರಾಮರಾಯರು ಹೆಸರಾಂತ ಲಾಯರು,
ವ್ಯವಹಾರ ಭೂಮಿಯಲಿ ಕಾಮಧೇನು;
ಬೆಟ್ಟಗಲ ಜರತಾರಿಯಂಚಿನ ರುಮಾಲೇನು,
ರಟ್ಟೆಯಷ್ಟೇ ಇರುವ ಮೀಸೆಯೇನು!
ಮೇಲ್ಮನೆಯೆ ಮೆಲ್ದನಿಯ ಶಿವರಾಮರಾಯರು.
ಮೈಬಣ್ಣ ಕೆಂಪಿನ ಗುಲಾಬಿಯಂತೆ ;
ಸತ್ಯವಂತರಿಗಿವರು ಸುಲಭದಲಿ ಲಾಯರು
ಇವರಿದ್ದ ಕಡೆ ಗೆಲ್ವು ಸಿದ್ಧವಂತೆ.
ಶಿವರಾಮರಾಯರು ತುಂಬಿರುವ ಸಂಸಾರಿ;
ಹತ್ತೂರ ಮುಂದಾಳು, ಮುತ್ತು ಇವರು.
ಕೈಹಿಡಿದ ಮಡದಿಯೋ ಸಂಕ್ಷಿಪ್ತ ಗಾಂಧಾರಿ.-
ಸಂಸಾರಸಾಗರವ ದಾಟುತಿಹರು.
ಶಿವರಾಮರಾಯರು ಅದೃಷ್ಟಶಾಲಿಗಳೆನ್ನಿ! –
ಆಗರ್ಭ ಶ್ರೀಮಂತರೆನುವ ಬಿರುದು.
ಹತ್ತೂರ ಗೋಜೆಲ್ಲ ಇವರ ಮನೆ ಬಾಗಿಲಲಿ
ಇತ್ಯರ್ಥವಾಗುವುದು, ದಾರಿ ಹೊಳೆದು.
ಶಿವರಾಮರಾಯರು ತುಂಬ ಖಂಡಿತವಾದಿ;
ಮಂದಹಾಸವೆ ಇವರ ಸಿರಿ ಬಾವುಟ.
ನಿರ್ಭಯದಿ ಬಳಸುವರು ‘ಕೋಡು’ಗಳ ಕಾಡಿನಲಿ;
‘ಕೋರ್ಟಿ’ಗೂ ಹಿತವಂತೆ ಇವರಾವುಟ.
ರಜವಿದ್ದ ಸಂಜೆಯಲಿ ಒಳಮುನೆಯ ಬೆಳಕಿನಲಿ
ಪುಸ್ತಕದ ಪಂಕ್ತಿಯಲಿ ವಲ್ಲಿ ಹೊದ್ದು;
ಕನ್ನಡಕದಂಚಿನಲಿ ಜಿಗಿವ ಕಣ್ಮಿಂಚಿನಲಿ
ಮುದ್ದು ಮಗಳೇ ಇಳಿದು ಗುದ್ದು ಕೊಡಲು,
ಪತ್ರ ಓದುತ್ತಲೇ ಚರ್ಚೆ ಮಾಡುತ್ತಲೇ
ಹೆಂಡತಿಯ ಸೂಚನೆಗೆ ಸನ್ನೆಮಾಡಿ,
ಒಂದೆ ನದಿ ಎರಡು ಎತ್ತರಗಳಲಿ ಹರಿವಂತೆ,
ಜೀವನವ ನಡಸುತ್ತ ಗೌರವದಲಿ,
ಗೆದ್ದವರನಾದರಿಸಿ ಸೋತವರ ಸಂತವಿಸಿ
ತಾವು ಎರಡೂ ಕಡೆಗೆ ಬಂಧುವೆನಿಸಿ
ದೇವರಿಗೆ ಕೈಮುಗಿಸಿ ಸ್ನೇಹಗಳ ತಲೆಯುಳಿಸಿ
ಅಲಲ್ಲಿಗಂದಂದೆ ಗಂಟು ಬಿಡಿಸಿ,
ಶಿವರಾಮರಾಯರು, ಹೆಸರಾಂತ ಲಾಯರು
ತಮ್ಮ ಹೊರೆಯೇ ತಮ್ಮ ಬೆನ್ನಿಗಿರಲು,
ಸುಮ್ಮನಿರಲಾರದೆಯೆ ಅವರಿವರ ದುರಿತವನು
ಆಧುನಿಕ ‘ಆಟ್ಲಾಸಿನಂತೆ’ ಹೊತ್ತು-
ಭಗವಂತನಡಿಯಮೇಲಗಣಿತ ವ್ಯೂಹದಲಿ
ಬಣ್ಣ ಬಣ್ಣದ ಬುಗುರಿ ಆಡುತಿರಲು
ಕಂತೆಗಳು, ಚಿಂತೆಗಳು, ಸಂತೆಗಳು ಸುತ್ತಾಡಿ
ಇದ್ದಲ್ಲೆ ಬಿದ್ದಲ್ಲೆ ಬೀಳುತಿರಲು,-
ಹೋರಾಡುತಿರುವರು. ಪಾಪ! ಇವರೊಬ್ಬರು ;
ತಲೆ ಬೆಳ್ಳಗಾಗಿಹುದು ತೊಂದರೆಯಲಿ.
ವಿಧಿನಿಯಮವಿದ್ದಂತೆ, ಹೋದ ಮಳೆ ಬಿದ್ದಂತೆ
ನಡೆವುದೂರಿನ ಬಾಳು ತೋರಿಕೆಯಲಿ.-
ಈ ನಡುನೆ ತಲೆಹಾಕಿ ಕಂಡ ಪಾತಾಳದಲಿ
ಕಾಲಿಟ್ಟು ಬೀಳುವುದು ಒಂದು ತಪ್ಪು.
ಕ್ಷೀರಸಾಗರನೆಂದು ಹಾಡಿರಲಿ ಕವಿತೆಯಲಿ,
ಕಡಲ ನೀರೆಲ್ಲೆಲ್ಲು ತುಂಬ ಉಪ್ಪು.
*****