ರೊಕ್ಕದ ಲೀಲೆಯು ದೊಡ್ಡದೋ ಜಗದಿ
ರೊಕ್ಕದ ಮಹಿಮೆಯು ದೊಡ್ಡದೋ
ಕಾಮದ ದಾಹಾ ಕರುಳಿನ ದಾಹ
ಹಸಿವು ನೀರಡಿಕೆಗಳ ದಾಹವುಂಟು
ನೋಡುವ ಮೂಸುವ ತಿನ್ನುವ ಸವಿಯುವ
ಕೇಳುವ ದಾಹಾ ದೇಹಕ್ಕುಂಟು
ಪ್ರೀತಿಯ ದಾಹಾ ಸ್ನೇಹದ ಮೋಹಾ
ನಾನೂ ನೀನೂ ಜೀವಕೆ ಜೀವ
ಎಲ್ಲ ದಾಹಗಳು ಹಣದ ದಾಹದಲಿ
ಬಿಸಿಲಿಗೆ ಮಂಜಾಗಿ ಕರಗುತಾವ
ಸತ್ಯ ಸಾದಾಸೀದ ಸಾಚಾಗುಣವೆಲ್ಲ
ನರಸತ್ತು ನಾರಾಗಿ ಬೀಳುತಾವೆ
ರೊಕ್ಕವೊಂದಿದ್ದರೆ ಒಳ್ಳೆಗುಣಗಳೆಲ್ಲ
ತಾವಾಗಿ ಕಾಲ್ಕೆಳಗೆ ಜಾರುತಾವೆ
ಎಲ್ಲ ಅಂದ ಚೆಂದ ಬಣ್ಣ ಬೆಡಗುಗಳೆಲ್ಲ
ಹಣವಿಲ್ಲದಿದ್ದರೆ ಅಡಗುತಾವೆ
ಸಾಹಿತ್ಯ ಸಂಗೀತ ಚಿತ್ರ ಶಿಲ್ಪಗಳೆಲ್ಲ
ಹಣದೆದುರು ಬಾಲವಲ್ಲಾಡುತಾವೆ
ಎಲ್ಲಿಯ ತಾಯ್ತಂದೆ ಎಲ್ಲಿಯ ಮಕ್ಕಳೋ
ಅಣ್ಣ ತಮ್ಮ ಅಕ್ಕ ತಂಗಿ ಯಾರೊ
ಬಂಧು ಬಾಂಧವರೆಲ್ಲ ರೊಕ್ಕಬೆಲ್ಲದ ಸುತ್ತ
ಮುತ್ತುವ ನೊಣ ಇರುವೆ ಯಾರಿಗ್ಯಾರೊ
ರೊಕ್ಕವೊಂದಿದ್ದರೆ ಸೃಷ್ಟಿಯಾಗುವರೆಲ್ಲ
ದೇವಾನುದೇವ್ತೆಗಳು ಪೂಜೆ ಮಂತ್ರ
ಮಠಗಳು ಗುರುಗಳು ಸ್ವಾಮಿವರೇಣ್ಯರು
ರೊಕ್ಕದ ಗದ್ದುಗೆ ಮೇಲೆ ಮಾತ್ರ
*****