ಹಿತ್ತಲ ಬಾಗಿಲು ಬಹು
ದಿನಗಳಿಂದ ಮುಚ್ಚಿಯೇ ಇತ್ತು
ಇಂದು ಅದೇಕೋ ಬಿಸಿಲು
ಹೆಚ್ಚಾಯಿತೆಂದು ತೆಗೆಯಬೇಕಾಯಿತು
ಉಸಿರುಗಟ್ಟಿದಂತಿದ್ದ ಆ
ಕೋಣೆಯೊಳಗೆ ಸ್ವಲ್ಪ ಗಾಳಿ
ಸ್ಚಲ್ಪ ಬೆಳಕು ಸುಳಿದಾಡಿದಂತೆನಿಸಿ
ಜೀವ ನಿರಾಳವಾಯ್ತು
ಕಂಪ್ಯೂಟರ್ ಪರದೆಯನ್ನೇ
ವಿಶ್ವವೆಂಬಂತೆ ದಿಟ್ಟಿಸಿ
ಸೋತ ಕಣ್ಣುಗಳಿಗೆ
ಹೊಸ ಬೆಳಕು ಹೂಳೆದಂತಾಯ್ತು
ಗಂಟು ಹಿಡಿದ ಕಾಲುಗಳಿಗೆ
ನಡಿಗೆಯ ಕಲಿಸುವಂತೆ ಮೆಲ್ಲಗೆ
ಹೆಜ್ಜೆಗಳಿಟ್ಟು ಹೊರನಡೆದು
ಕಿಟಕಿಯೆಡೆಗೆ ಮುಖ ಮಾಡಿದೆ
ಹೊಸತೊಂದು ಲೋಕಕ್ಕೆ ಬಂದವನಂತೆ
ದಿಗಂತವನೊಮ್ಮೆ ದಿಟ್ಟಿಸಿ
ಮರಕೆ ಸುತ್ತಿಕೊಂಡಿದ್ದ ಹಸಿರು
ಬಳ್ಳಿಯನ್ನೊಮ್ಮೆ ಕಣ್ತುಂಬಿಸಿಕೊಂಡೆ
ಕಿಟಕಿ ಸರಳುಗಳಿಗೆ ಕಣಜಿರಿಗೆ
ಹುಳುವೊಂದು ಗೂಡು ಕಟ್ಟುತ್ತಿತ್ತು
ಅದರತ್ತ ನೋಡಿದ್ದೇ ತಪ್ಪಾಯ್ತೆಂಬಂತೆ
ಬಾಲ ನಿಗುರಿಸಿಕೊಂಡು ಹಾರಿ ಹೋಯಿತು
ಅದು ಅಲ್ಲಿಗೆ ತಿರುಗಿ ಬರುವುದೆಂದು
ಗೂಡು ಕಟ್ಟುವುದೆಂದು ಕಾದೆ
ಬಂದದ್ದು ಕಾಣಲಿಲ್ಲ, ಮರುದಿನವೂ
ಬಂತೋ ಬಾರಲಿಲ್ಲವೋ ತಿಳಿಯಲಿಲ್ಲ
ಗಣಕಯಂತ್ರದ ಕೀಲಿ ಮಣೆಯ ಮೇಲೆ
ಬಿಟ್ಟೂ ಬಿಡದೇ ನರ್ತಿಸುವ ಬೆರಳುಗಳು
ಮನವೇಕೋ ಹಾರಿ ಹೋದ
ಕಣಜಿರಿಗೆ ಹುಳುವನ್ನೇ ನೆನೆಯುತ್ತಿದೆ
*****