ಇನ್ನೆಷ್ಟು ದಿನ ಹೀಗೆ?
ಗಾಣಕ್ಕೆ ಕಟ್ಟಿದ ಎತ್ತಿನಂತೆ
ಸುಮ್ಮನಿರುವುದು
ಗೆದ್ದಲು ಕಟ್ಟದ ಹುತ್ತದೊಳಗೆ
ಹಾವೊಂದು
ಬೆಚ್ಚಗೆ ನಿದ್ರಿಸುವುದು
ಕಾಗೆ ಇಟ್ಟ ಮೊಟ್ಟೆಗಳ ನಡುವೆ
ಕೋಗಿಲೆಯೊಂದು
ತಣ್ಣಗೆ ಮರಿಯಾಗುವುದು
ರೊಟ್ಟಿ ಕದ್ದು ಓಡಿಹೋದ ನಾಯಿಯನ್ನು
ತೋಳವೊಂದು
ಸದ್ದಿಲ್ಲದೆ ನುಂಗಿಬಿಡುವುದು
ಇನ್ನೆಷ್ಟು ದಿನ
ಮಿಸುಕಾಡದ ದೇವರುಗಳ ಮುಂದೆ
ಹರಕೆ ಹೊರುವುದು.
ಹೊಲಸು ಹಾದಿಗಳ ಮೇಲೆ
ಚಿಂದಿಯುಟ್ಟು ಉರುಳುವುದು
ತಲೆ ಬೋಳಿಸಿಕೊಳ್ಳುವುದು
ಸತ್ತ ಮೇಲೂ ಸಾಯುವುದು?
ಕಪ್ಪು ದೇಹಗಳ
ಕೆಂಪಾಗಿಸುವ ಕುಲುಮೆಯೊಳಗೆ
ಬಿದ್ದು ಬೇಯಬೇಕು
ಪಡೆಯಬೇಕು
ಹಾರೆ ಗುದ್ದಲಿಗಳ ರೂಪ
ಹರಿತ ಕೊಡಲಿಯ ಚೂಪ
ನಾವೂ ಆಡೋಣ ಒಮ್ಮೆ
ಕಾಲ್ಚೆಂಡಿನಾಟ
ರಕ್ಕಸರ ರುಂಡ ಕಡಿದು
ಮುಳ್ಳು ಬೇಲಿಯ ಕಿತ್ತು
ಕಸಗುಡಿಸಿ
ಹಸನು ಮಾಡಿದ
ಮೈದಾನದೊಳಗೆ
*****