ನಾನು ನಾನೆಂಬ ಹಮ್ಮಿನಲಿ ಬೀಗಿ
ಸುಮ್ಮನೇ ನವೆದೆ ಅಜ್ಞಾನಿಯಾಗಿ
ಎಲ್ಲೆಲ್ಲು ನೀನೆ, ನಿನ್ನೊಲುಮೆ ಭಾನೇ
ಲೋಕಕಾಸರೆ ಎಂದು ತಿಳಿಯದಾಗಿ
ನನ್ನ ಕಣ್ಣೇ ಎಲ್ಲ ನೋಟಗಳಿಗೂ ಮೂಲ
ಎಂಬ ಸೊಕ್ಕಿನೊಳಿದ್ದೆ ಇಲ್ಲಿವರೆಗೂ
ಕಣ್ಣಿದ್ದರೂ ಏನು, ಕತ್ತಲಲಿ ಕುರುಡನೇ,
ನಿನ್ನ ಬೆಳಕೇ ಕಾಣ್ಕೆ ತಿಳಿದೆ ಕಡೆಗೂ
ಬಾವಿತೋಟದ ನೀರ ಹೀರಿ ಚಿಮ್ಮಿದ ಪಯಿರ
ತನ್ನ ಸಾಧನೆ ಎಂದು ತಿಳಿದ ಮೂಢ,
ಮಳೆಯೆ ಬಾರದ ಬಾವಿ ತಳ ಆರಿ ಅಣಕಿಸಲು
ಬಾನಕೃಪೆ ಏನೆಂದು ತಿಳಿದೆ ಈಗ!
ನನ್ನ ಅವಿವೇಕಗಳ ಸಾಕಿ ನಗುವುದು ಯಾಕೆ?
ತಿಳಿವ ನೀಡದೆ ಹೀಗೆ ತುಳಿದೆ ಏಕೆ?
ನೀ ಕೊಡದೆ ಯಾವುದಿದೆ ಜ್ಞಾನವೇ ಮಾನವೇ ?
ಗಾನವಿಲ್ಲದ ತಾಳ ಇಡಿಯ ಬದುಕೇ.
*****