ನಮ್ಮ ಮನೆ ಹೊತ್ತಿಕೊಂಡು ಉರಿಯುತ್ತಿದೆ ನೋಡಿರೊ!
ಆದರೂ ನಮ್ಮದು ಭವ್ಯ ದಿವ್ಯ ಎಂದು ಭ್ರಮಿಸಿದ್ದೀರಿ
ನಮ್ಮ ಜನ ಕ್ಷಯ ರೋಗಿಗಳಾಗಿದ್ದಾರೆ ಕಾಣಿರೋ! ಆದರೂ
ನಾವು ಭೀಮ-ರಾಮಾರ್ಜುನರೆಂದು ನಂಬಿದ್ದೀರಿ
ನಮ್ಮ ಕೋಣೆಗಳು ಕತ್ತಲ ಮಸಿ ಉಗುಳುತ್ತಿವೆಯಲ್ಲರೋ
ನಮ್ಮ ಮನೆಗಳು ಬಂಡೆಗಟ್ಟಿವೆಯಲ್ಲರೋ!
ನಮ್ಮ ತಲೆ ಒಡಕು ಚಿಪ್ಪುಗಳಾಗಿವೆಯಲ್ಲರೋ,
ನಮ್ಮ ದಾರಿಗಳೆಲ್ಲ ಸುಡುಗಾಡ ಕಡೆಗೆ ಮಾತ್ರ ಒಯ್ಯುತ್ತಿವೆಯಲ್ಲರೋ!
ನಮ್ಮ ಅನ್ನವೆಲ್ಲ ನಾಯಿಪಾಲು, ಧಾನ್ಯವೆಲ್ಲ ಇಲಿ ಹೆಗ್ಗಣಪಾಲು
ನಮ್ಮ ಹೂವೆಲ್ಲ ತಿಪ್ಪಿಪಾಲು, ನಮ್ಮ ಯೌವನಗಳೆಲ್ಲ
ಬಚ್ಚಲಪಾಲಾಗುತ್ತಿವೆಯಲ್ಲರೋ!
ಬಂದದ್ದೆಲ್ಲಾ ಬರಲಿ ಶ್ರೀರಂಗನ ದಯೆಯೊಂದಿರಲಿ ಎಂದು
ಅನಾಸಕ್ತಿ ಯೋಗದ ಸೋಗಿನಲ್ಲಿ, ಅದೃಷ್ಟದ ಸಮಾಧಿಯಲ್ಲಿ
ಜೀವಚ್ಛವಗಳಾಗಿ ಸಾಯುತ್ತಿರುವಿರಲ್ಲೋ!
ನೋಡಿರೋ ಬೇರೆ ಮನೆಗಳ ನೋಡಿರೋ
ಬೇರೆ ಜನಗಳ ನೋಡಿರೋ, ಅವರ ತೋಟಪಟ್ಟಿ
ದಾರಿ-ಪರಿ, ಬಾಳು-ಸಾಧನೆಗಳ ನೋಡಿರೋ,
ನೋಡಿ ನಮ್ಮನ್ನ ನೋಡಿಕೊಳ್ಳಿರೋ,
ಕೊಳ್ಳಿರೊ, ಬೆಂಕೀರೋ,
ಮನೆ ಹೊತ್ತಿ ಉರಿಯುತ್ತಿದೆ ನೋಡಿರೋ
*****