ಚಿತ್ರದುರ್ಗದ ವಸುಂಧರೆ ಎಂದೂ ಬಡವಿಯಲ್ಲ. ಅದೇನು ಈ ನೆಲದ ಪುಣ್ಯ ವಿಶೇಷವೋ ಯಾವುದೇ ಕ್ಷೇತ್ರದಲ್ಲಿ ದುರ್ಗ ನೀಡಿದ ಕೊಡುಗೆ ಅನನ್ಯ ಧಾರ್ಮಿಕ ಕ್ಷೇತ್ರದಲ್ಲಿ ಸಿರಿಗೆರೆ ಮತ್ತು ಚಿತ್ರದುರ್ಗದ ಬೃಹನ್ಮಠ, ರಾಜಕೀಯದಲ್ಲಿ ರಾಷ್ಟ್ರ ನಾಯಕ ನಿಜಲಿಂಗಪ್ಪ, ಸಾಹಿತ್ಯದಲ್ಲಿ ತಳುಕಿನ ಮನೆತನದ ವೆಂಕಣ್ಣಯ್ಯ, ತ.ಸು. ಶಾಮರಾಯ, ತ.ರಾ.ಸು ನಾಟಕ ರಂಗದಲ್ಲಿ ಬಿ. ಓಬಲೇಶ್ವರ್ ಮತ್ತು ಸಿ.ಜೆ.ಕೆ., ಚಿತ್ರಕಲೆಯಲ್ಲಿ ಪಿ.ಆರ್. ತಿಪ್ಪೆಸ್ವಾಮಿ, ಛಾಯಾಚಿತ್ರದಲ್ಲಿ ಎಸ್. ತಿಪ್ಪೇಸ್ವಾಮಿ, ಸಂಶೋಧನಾ ಕ್ಷೇತ್ರದಲ್ಲಿ ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸಲು, ಪ್ರೊ. ಲಕ್ಷ್ಮಣ ತೆಲಗಾವಿ ಇತ್ಯಾದಿ ಇತ್ಯಾದಿ ಕೋಟೆ ಸಾಲಿನಂತೆ ಬೆಳೆಯುತಾ ಹೋಗುತ್ತದೆ.
೧೯೯೯ ರಲ್ಲಿ ತಿಪ್ಪೇಸ್ವಾಮಿಯವರನ್ನು ಚಿತ್ರದುರ್ಗ ಜಿಲ್ಲೆಯ ೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನಾಗಿ ಆಯ್ಕೆ ಮಾಡಿ ದುರ್ಗದ ಜನತೆ ಋಣಸಂದಾಯ ಮಾಡಿದ್ದು ಇಂದು ಸ್ಮರಣಾರ್ಹ. ಹೊಸದುರ್ಗದಲ್ಲಿ ನಡೆದ ಅದ್ದೂರಿ ಸಮ್ಮೇಳನದ ಅಧ್ಯಕ್ಷರ ಬಗ್ಗೆಯೂ ಕೆಲ ಒಡಕು ಮನಸ್ಸಿನ ಜನ ಆಡಿಕೊಂಡಿದ್ದುಂಟು. ಇವರು ಯಾರು ? ಇವರೇನು ಸಾಹಿತಿಯೆ ಎಂದು ಪಿಸು ಪಿಸು ಮಾಡಿದ್ದುಂಟು. ಕಾರಣ ಪಿ.ಆರ್.ತಿಪ್ಪೆಸಾಮಿ ಪ್ರಚಾರ ಪ್ರಿಯರಲ್ಲ ಗೊತ್ತಿದ್ದವರಿಗೆ ಗೊತ್ತೆ ಇತ್ತು – ಯಾವ ಸಾಹಿತಿಗಿಂತಲೂ ಅವರು ಕನ್ನಡನಾಡು ನುಡಿಗೆ ಸಲ್ಲಿಸಿದ ಸೇವೆ ಹೆಚ್ಚಿನದು. ಕಲೆ, ಸಾಹಿತ್ಯ, ಚಿತ್ರ ಜಾನಪದ, ವಿಮರ್ಶೆ ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ದುಡಿದ ಬಹುಮುಖ ಪ್ರತಿಭಾ ಸಂಪನ್ನರು ಪಿ.ಆರ್.ಟಿ. ಹಿರಿಯರೊಂದಿಗೆ ಒಡನಾಟ, ಕಿರಿಯರೊಮದಿಗೆ ಸ್ನೇಹ ಎರಡನ್ನು ಸಂಪಾದಿಸಿದ ಅಜಾತಶತ್ರು, ದೇ.ಜ.ಗೌ., ಹಾ.ಮಾ.ನಾ., ಕಲಾವಿದ ಹೆಬಾರ್, ಸುತ್ತೂರು ಮಠದ ಶ್ರೀಗಳು, ಧರ್ಮಸ್ಥಳದ ಹೆಗಡೆ, ಮಾಸ್ತಿ, ಕುವೆಂಪು, ಬೇಂದ್ರೆ, ಪು.ತಿ.ನ ಇವರೆಲ್ಲರ ಪ್ರೀತಿ ವಾತ್ಸಲ್ಯವನ್ನು ಸವಿದ ಕಲಾರತ್ನ. ಹಾಗಂತ ಎಲ್ಲದಕ್ಕೂ ಎಲ್ಲರನ್ನು ಓಲೈಸಿದವರಲ್ಲ, ‘ವಜ್ರಾದಪಿ ಕಠೋರಾಣಿ ಕುಸುಮಾದಪಿ ಮೃದುನೀ ಮಾತಿಗೆ ಸಾಕ್ಷಿ ಎಂಬಂತೆ ಬದುಕಿದವರು. ಕೆಂಪೇಗೌಡರ ಪ್ರತಿಮೆ ಕತ್ತಿಗುರಾಣಿ ಹಿಡಿದ ಸೇವಕನ ಪ್ರತಿಮೆಯಂತಿದೆ ಎಂದು ಪ್ರತಿಭಟಿಸಿದ ಸರ್ಕಾರದ ಗಮನ ಸೆಳೆದ ನಿಷ್ಠೂರವಾದಿ, ದಾವಣಗೆರೆಗೆ ಕಲಾಶಾಲೆಯನ್ನು ಕೊಟ್ಟಾಗ ಯಾವ ನೈಸರ್ಗಿಕ ಹಿನ್ನೆಲೆಯೂ ಇಲ್ಲದ ವ್ಯಾಪಾರಿ ಕೇಂದ್ರವೊಂದರಲ್ಲಿ ಇದರ ಸ್ಥಾಪನೆ ಅಗತ್ಯವೇನಿತ್ತೆಂದು ಪ್ರಶ್ನಿಸಿದ್ದುಂಟು. ಅನ್ಯಾಯದ ವಿರುದ್ಧ ಸೊಲ್ಲೆತ್ತಲು ಹಿಂಜರಿಯದ ಪಿಆರ್‌ಟಿ ಸಂಘಟನಾ ಚತುರರು, ಕಲಾವಿದರ ನೆರವಿಗಾಗಿ ಅವರ ಪರ ನಿಂತು ಅನೇಕ ಸಲ ಸರ್ಕಾರದ ವಿರೋಧ ಕಟ್ಟಿಕೊಂಡರೂ ಕಲಾವಿದರಿಗೆ ನೆರವು ದೊರಕಿಸಿಕೊಟ್ಟ ಕಲಾ ಪ್ರೇಮಿ. ಹಲವೊಮ್ಮೆ ಕಠೋರವಾಗಿ ಕಂಡ ಪಿ.ಆರ್.ಟಿ. ಕಿರಿಯರ ಕಲಾವಿದ ಸಾಹಿತಿ ಶಿಲ್ಪಿ ಸಂಗೀತಗಾರರ ವಿಷಯಕ್ಕೆ ಬಂದರೆ ಅಷ್ಟೇ ಮೃದುವಾಗಬಲ್ಲ ಮಾರ್ಗದರ್ಶಕರಾಗಬಲ್ಲ ಸಹೃದಯಿ. ಕಾರಣ ಅವರಿಗೆ ಬಡತನದ ಬೇಗೆಯ ಅರಿವಿತ್ತು.
೧೯೨೨ರಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಹುಟ್ಟಿದ ತಿಪ್ಪೆಸ್ವಾಮಿಯ ಬಗ್ಗೆ ತಂದೆ ರುದ್ರಪ್ಪನವರಿಗೆ ಅಪಾರ ಪ್ರೇಮ. ಸಮಾಜ ಸೇವಕರಾಗಿ ಗ್ರಾಮದಲ್ಲಿ ನ್ಯಾಯ ತೀರ್ಮಾನಗಳನ್ನು ಮಾಡುತ್ತ ಹಳ್ಳಿಯ ಒಗ್ಗಟ್ಟಿಗಾಗಿ ಶ್ರಮಿಸುತ್ತಿದ್ದ ಅವರಿಗೆ ತಮ್ಮ ಮಗ ನಾಯವಾದಿಯಾಗಬೇಕು, ಬಡ ಶ್ರಮಿಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂಬ ಹಿರಿಯಾಸೆ. ಆದರೆ ತುಂಟ ಪಿ.ಆರ್.ಟಿ ಪುಸ್ತಕ ಹಿಡಿದಿದ್ದಕ್ಕಿಂತ ಕುಂಚ ಹಿಡಿದಿದ್ದೇ ಹೆಚ್ಚು. ಗ್ರಾಮೀಣ ಪರಿಸರವೇ ಅವರ ಚಿತ್ರಕಲೆಗೆ ಇಂಬು ಕೊಟ್ಟಿತು. ಒಮ್ಮೆ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಬಾಲಕನ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡದಷ್ಟೇ ಅಲ್ಲ ಆ ದೂರದರ್ಶಿ ಪಿ.ಆರ್.ಟಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಕಲಾಶಾಲೆಗೆ ಕಳುಹಿಸಿದರು. ‘ನನ್ನ ಜಿಲ್ಲೆಯ’ ಹುಡುಗನಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕೆಂದು ಸಂಬಂಧಪಟ್ಟವರಿಗೆ ತಾಕೀತು ಮಾಡಿದರು. ಅದರ ಫಲವೆಂಬಂತೆ ಬಾಲಕ ಪಿ.ಆರ್.ಟಿ ಕಲಾಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ನಿಂತದ್ದು ಇಂದು ಇತಿಹಾಸ. ಎಲ್ಲಿ ತಮ್ಮ ಅಭ್ಯಾಸಕ್ಕೆ ಅಡಚಣೆಯಾದೀತೋ ಎಂದಂಜಿ ಅವಿವಾಹಿತರಾಗಿಯೂ ಉಳಿದು ಕಲೆಗಾಗಿ ಜಾನಪದಕ್ಕಾಗಿ ಸಾಹಿತ್ಯಕ್ಕಾಗಿ ಅವಿರತ ದುಡಿದ ಛಲವಾದಿ. ಕಾಡಿನ ಬಿಭತ್ಸತೆಯನ್ನು ನಮಗೆ ತೋರಲು ಇಡೀ ರಾತ್ರಿಯೆಲ್ಲಾ ದಟ್ಟಕಾನನದಲ್ಲಿ ಕುಂಚ ಹಿಡಿದು ಏಕಾಂಗಿಯಾಗಿ ಕುಳಿತ ಕಲಾತಪಸ್ವಿ.
ಹಾಳು ಬಿದ್ದ ಐತಿಹಾಸಿಕ ದೇಗುಲಗಳ ಸೊಬಗನ್ನು ನಮ್ಮ ಕಣ್ಣಿಗೆ ಉಣಬಯಸಲು, ಹತ್ತಾರು ಮೈಲಿ ನಡೆದು, ಪಾಳು ದೇಗುಲದಲ್ಲೇ ರಾತ್ರಿ ಪಾಳಿ ಮಾಡಿ ಬಣ್ಣಗಳ ಸೂರಾಡಿ ಪ್ರಾಚೀನ ದೇಗುಲವನ್ನೇ ತಮ್ಮ ಕಾನ್ವಾಸ್ ನಲ್ಲಿ ತುಂಬಿ ತಂದ ಸಾಹಸಿ. ಧುಮ್ಮಿಕ್ಕುವ ಜಲಪಾತದ ಜಾಡು ಹಿಡಿದು, ವನಸಿರಿಯ ಮಧ್ಯೆ ಹಾದು, ಜಲಪಾತವನ್ನು ಕಂಡೊಡನೆ ಚಳಿಗಾಳಿ ಜಿಗಣೆಗಳ ಹಾವಳಿಯನ್ನೂ ಲೆಕ್ಕಿಸದೆ ಗಂಟೆಗಟ್ಟಲೆ ಸರಸಮಾಧಿಯಲ್ಲಿ ಕೂತು, ಜಲದೃಶ್ಯವನ್ನು ವರ್ಣದಲ್ಲಿ ಸೆರೆ ಹಿಡಿದ ಕಾಲಯೋಗಿ, ಶ್ರೀಯುತರು ಹಳ್ಳಿ ದಿಳ್ಳಿ ಎಲ್ಲೇ ಇರಲಿ, ಕೋಟೆ ಕೊತ್ತಲ ಗುಡಿಗುಂಡಾರಗಳ ಮಧ್ಯವೇ ಇರಲಿ, ಎಲ್ಲಿದ್ದರಲ್ಲಿ ಒಂದು ಪುಟ್ಟ ಫೋಟೋ ಸ್ಟುಡಿಯೋ ರೂಪುಗೊಳ್ಳುತ್ತಿತ್ತು. ಬಗಲ ಚೀಲದಿಂದ ಬಣ್ಣಬಣ್ಣದ ಕುಂಚಗಳೆದ್ದು ಪ್ರಕೃತಿಯ ಸೆರೆ ಹಿಡಿಯಲು ನರ್ತನಗೈಯುತ್ತಿದ್ದದೇ ಒಂದು ವಿಶೇಷ ಸಂಭ್ರಮ. ತಿಪ್ಪೇಸ್ವಾಮಿ ನಿಸರ್ಗ ರಚನೆಗಾಗಿ ಊರೂರು ಅಲೆವ ಪರಿವ್ರಾಜಕ. ವಯಸ್ಸೆಂದೂ ಅವರಿಗೆ ಅಡ್ಡ ಬಂದುದಿಲ್ಲ. ಮನಸ್ಸು ಕಲಾ ಸಾಧನೆಯಿಂದ ಮಾಗಿದರೂ ದೇಹ ಬಾಗಿದ್ದಿಲ್ಲ. ಇವರ ಕಲಾ ನೈಪುಣ್ಯಕ್ಕೆ ದ್ಯೋತಕವಾಗಿ ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇರುವ ಇವರು ನಿರ್ಮಿಸಿದ ವಸ್ತುಸಂಗ್ರಹಾಲಯ ತಲೆ ಎತ್ತಿ ನಿಂತಿದೆ. ನಾಡಿನ ಮೂಲೆ ಮೂಲೆಯನ್ನೂ ಬಿಡದೆ ಸುತ್ತಿದ ಈ ಕಲಾ ಜಂಗಮ, ಹಲವಾರು ಮನೆಗಳಲ್ಲಿ ಹಾಗೂ ಮಠ ಮಂದಿರ ಗುಡಿಗುಂಡಾರಗಳಲ್ಲಿ ಇದ್ದ ಅಮೂಲ್ಯ ಅಪೂರ್ವ ಜಾನಪದ ಕಲಾಕೃತಿಗಳನ್ನು, ಪ್ರಾಚೀನರು ಬಳಸುವ ಪಾತ್ರೆ ಪಡಗ ಮರಮುಟ್ಟು ಹಲವು ಬಗೆಯ ಉಡುಪು ಹಾಡುಹಸೆ ವಾದ್ಯ ಪರಿಕರಗಳನ್ನು ಸಂಗ್ರಹಿಸಿ ತಂದು ವಸ್ತು ಸಂಗ್ರಹಾಲಯವನ್ನು ಶೃಂಗರಿಸಿದ ಜಾನಪದ ಜೇನು. ಧರ್ಮಸ್ಥಳದ ಮಂಜೂಷ ವಸ್ತು ಸಂಗ್ರಹಾಲಯ, ಸುತ್ತೂರಿನಲ್ಲಿನ ಜೆಎಸ್‌ಎಸ್ ಮಠದ ವಸ್ತು ಸಂಗ್ರಹಾಲಯದ ವೈಶಿಷ್ಟ ಅವುಗಳ ರಂಗು ತಾಜಾತನ ಕ್ರಮಬದ್ಧ ಸಿಂಗಾರ, ಪಿಆರ್‌ಟಿಯ ಪರಿಶ್ರಮದ ಫಲ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಲಾಕಾರ ಜಾನಪದ ಸಂಗ್ರಹಣೆಯಲ್ಲಿಯೂ ನಿಷ್ಣಾತ ಚಿತ್ರಕಲೆ ಮತ್ತು ಜಾನಪದ ಇವರ ಹೊಕ್ಕುಳ ಬಳ್ಳಿಯಿಂದಲೇ ಕವಲೊಡೆದ ಬಾಡದ ಪುಷ್ಟಗಳೆಂದರೆ ಅತಿಶಯೋಕ್ತಿಯಾಗಲಾರದು. ದೇಶ ವಿದೇಶಗಳಲ್ಲಿ ಚಿತ್ರಕಲೆ ಜಾನಪದ ಕಲೆಯಲ್ಲಿನ ಭಾರತೀಯ ವೈಶಿಷ್ಟವನ್ನು ಭಿತ್ತಿ ಬಂದ ಕಲಾಯಾತ್ರಿ, ಕನ್ನಡ ನಾಡಿನ ಪ್ರಸಿದ್ದ ನೆಲೆಗಳಾದ ಹಂಪೆ ಬಿಜಾಪುರ ಬಾದಾಮಿ ಪಟ್ಟದಕಲು ಐತಿಹಾಸಿಕ ಚಿತ್ರದುರ್ಗ, ಬೀದರ್, ಕಾರವಾರ, ತಲಕಾಡು, ಆದಿಚುಂಚನಗಿರಿ, ಶೃಂಗೇರಿ, ಕುಪ್ಪಳ್ಳಿ, ಮಲೆನಾಡಿನ ಕಗ್ಗಾಡು ತೀರ್ಥಹಳ್ಳಿ ಆಗುಂಬೆ, ರಾಮತೀರ್ಥ, ಧರ್ಮಸ್ಥಳ, ಮೇಲುಕೋಟೆ, ಮೈಸೂರು ಯಾವುದೂ ಇವರ ಕುಂಚದಿಂದ ತಪ್ಪಿಸಿಕೊಂಡಿಲ್ಲ. ದೆಹಲಿ ಆಗ್ರಾದಿಂದ ದಕ್ಷಿಣದ ತುತ್ತತುದಿ ಕನಾಕುಮಾರಿಯವರೆಗೂ ಕುಂಚ ಆಡಿಸಿ, ಅಖಂಡ ಭಾರತ ಇತಿಹಾಸ ಸಂಸ್ಕೃತಿ ನಿಸರ್ಗ ಸಂಪತ್ತಿನ ಅಧ್ಯಯನವನ್ನು ಇಷ್ಟೊಂದು ವ್ಯಾಪಕವಾಗಿ ನಡೆಸಿದ ಕುಂಚಬ್ರಹ್ಮ ಮತ್ತೊಬ್ಬನಿರಲಾರ.
ಸಾಹಿತಿಗಳ ಸಹವಾಸದಿಂದಾಗಿ ಪಿಆರ್‌ಟಿ ಸಾಹಿತ್ಯ ರಚನೆಯಲ್ಲೂ ತಮ್ಮದೇ ಆದ ವಿಶೇಷತೆ ತೋರಿದ್ದರು. ಶ್ರೀಯುತರು ಬರೆದ ಕೃತಿಗಳಲ್ಲಿ ಭಾರತೀಯ ಚಿತ್ರಕಲೆ ಕಲೋಪಾಸಕರು ಶಿಲ್ಪಿಸಂಕುಲ ಹೋರಾಟಗಾರ ಕೆಂಚಪ್ಪ ಡಿ.ಎಸ್. ನಂಜುಂಡಸ್ವಾಮಿ ಅವರುಗಳ ವ್ಯಕ್ತಿ ಚಿತ್ರಣ, ಕಲಾವಿದ ಕಂಡ ಫ್ರಾನ್ಸ್ ಪ್ರಮುಖವಾದವುಗಳು. ಉಡುಪಿಯಿಂದ ನವದೆಹಲಿವರೆಗೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸಾಮೂಹಿಕ ಕಲಾ ಪ್ರದರ್ಶನಗಳು ನಡೆದು ರಸಿಕರ ಮೇಲೆ ತನ್ನದೇ ಆದ ಪ್ರಭಾವ ಗಳಿಸಿದ್ದುಂಟು. ಶ್ರೀಯುತರ ಚಿತ್ರಕಲಾ ಕೌಶಲ್ಯದ ಬಗ್ಗೆ ಹೆಚ್ಚು ಬಣ್ಣನೆಗಿಂತ ಈ ಒಂದು ಮಾತು ಸಾಕೇನೋ, ಪಿಆರ್‌ಟಿ ಚಿತ್ರಿಸಿದ ‘ಕುಪ್ಪಳ್ಳಿ ನಿಸರ್ಗ’ ಎಂಬ ಕಲಾಕೃತಿಯನ್ನು ಕಂಡು ನಿಬ್ಬೆರಗಾದ ರಾಷ್ಟ್ರಕವಿ ಕುವೆಂಪು ಅವರ ಅದರ ಬಗ್ಗೆ ಕವನ ಒಂದನ್ನು ರಚಿಸಿ ಬಿಟ್ಟರೆಂದ ಮೇಲೆ ಮತ್ತಿನ್ನಾವ ಪ್ರಶಸ್ತಿ ಪ್ರಶಂಸೆಯ ಅಗತ್ಯವಿದೆ. ಆದರೂ ಪ್ರಶಸ್ತಿಗಳು ಇವರನ್ನರಸಿ ಬಂದದ್ದುಂಟು. ರಾಜ್ಯ ಪ್ರಶಸ್ತಿ, ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಎಂಟಿವಿ ಆಚಾರ್ಯ ಪ್ರಶಸ್ತಿ, ಮಠಮಾನ್ಯಗಳ ಬಿರುದು ಬಾವಲಿಗಳಿಗೆ ಲೆಕ್ಕವಿಲ್ಲ. ಇವರ ಬತ್ತಳಿಕೆಯಲ್ಲಿ ಮತ್ತೊಂದು ಹೆಮ್ಮೆ ಪಡುವಂತಹ ಅಸ್ತ್ರವಿದೆ. ಪಿಆರ್‌ಟಿ ಸ್ವಾತಂತ್ರ್ಯ ಹೋರಾಟಗಾರರೂ ಸಹ. ಹದಿಹರಯದಲ್ಲೇ ಜೇಲು ಅನುಭವಿಸಿ ಬಂದ ದೇಶಪ್ರೇಮಿ.
ಬಡತನದಲ್ಲಿ ಹುಟ್ಟಿ ಬೆಳೆದು ಕಲಾ ಶ್ರೀಮಂತರಾದ ಪಿ.ಆರ್.ತಿಪ್ಪೇಸ್ವಾಮಿ ಹಣದ ದುರಾಸೆಗಿಳಿದು ರಾಜಮಹಾರಾಜರ, ಸಿರಿವಂತರ, ಸಿನೆಮಾ ನಟನಟಿಯರ ಚಿತ್ರಗಳನ್ನು ಮೂಡಿಸಿದವರಲ್ಲವೆಂಬುದೂ ಉಲ್ಲೇಖನೀಯ. ಅಂತೆಯೇ ಪ್ರತಿಭಾನ್ವಿತ ಸಾಹಿತಿ, ಕಲಾವಿದ ನಾಟಾಚಾರ್ಯರ ಚಿತ್ರಗಳನ್ನು ಎಗ್ಗಿಲ್ಲದೆ ಚಿತ್ರಿಸಿ ಹೆಮ್ಮೆ ಪಟ್ಟ ದುರ್ಗದ ಕಲ್ಲು ಹೂವು. ಚಿತ್ರದುರ್ಗ ಬೃಹನ್ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳವರು ಸಹ ಮಠದಲ್ಲೊಂದು ವ್ಯವಸ್ಥಿತವಾದ ಸಂಗ್ರಹಾಲಯವನ್ನು ಸೃಷ್ಟಿಸಲು ಪಿಆರ್‌ಟಿ ಅವರಿಗೆ ಜವಾಬ್ದಾರಿ ವಹಿಸಿದ್ದುಂಟು. ಪಿಆರ್‌ಟಿ ಆ ಕಾರ್ಯದಲ್ಲಿ ತನ್ಮಯರಾದಾಗಲೇ ಕಾಲನ ಕರೆ ಬಂದದ್ದು ದುರ್ಗದ ದೌರ್ಭಾಗ್ಯ.
ತಾಳ್ಮೆ ಜಾಣ್ಮೆ ಸಹನೆ ಸಾಧನೆ ಚಿಂತನೆ ಎಲ್ಲದರ ಪರಿಪಾಕದಂತಿದ್ದ ತಿಪ್ಪೆಸ್ವಾಮಿ ಸರಳ ಸಜ್ಜನಿಕೆಯ ಸಂಗಮದಂತಿದ್ದವರು. ದೇಶವಿದೇಶ ಸುತ್ತಿದರೂ ನಗರದಲ್ಲೇ ನೆಲೆ ನಿಂತರೂ ಕಡೆಗೆ ದುರ್ಗದ ಹರ್ತಿಕೋಟೆಯ ಮಣ್ಣಲ್ಲಿ ಮಣಾದ ಕಲಾಕಾರ ದುರ್ಗದ ಪ್ರಾತಃಸ್ಮರಣೀಯರಲೊಬ್ಬರು ಎಂಬುದು ಅಷ್ಟೇ ಹೆಗ್ಗಳಿಕೆಯ ವಿಷಯ.
*****